ತಾಲಿಬಾನ್ ಸರ್ಕಾರಕ್ಕೆ ಮಾನ್ಯತೆ ನೀಡಲು ಹಿಂದೇಟು, ಆಫ್ಘನ್ ಪ್ರಜೆಗಳಿಗಾಗಿ ಆರ್ಥಿಕ ಪ್ಯಾಕೇಜ್ ಘೋಷಣೆ..!

ಈ ಸುದ್ದಿಯನ್ನು ಶೇರ್ ಮಾಡಿ

ರೋಮ್, ಅ.13- ಆಫ್ಘಾನಿಸ್ಥಾನ ವಶ ಪಡಿಸಿಕೊಂಡ ತಾಲಿಬಾನಿಗಳಿಗೆ ರಾಜಕೀಯ ಮಾನ್ಯತೆ ನೀಡಲು ಹಿಂದೇಟು ಹಾಕಿತ್ತಿರುವ ಜಿ-20 ರಾಷ್ಟ್ರಗಳ ಒಕ್ಕೂಟ, ಆಫ್ಘಾನಿಸ್ತಾನದ ಜನರ ತುರ್ತು ನೆರವಿಗೆ 1.15 ಬಿಲಿಯನ್ ಡಾಲರ್ ಆರ್ಥಿಕ ನೆರವು ಘೋಷಣೆ ಮಾಡಿದೆ.  ರಷ್ಯಾ, ಚೀನಾ, ಅಮೆರಿಕಾ, ಭಾರತ, ಟರ್ಕಿ ಸೇರಿದಂತೆ 20 ರಾಷ್ಟ್ರಗಳ ಶೃಂಗಸಭೆಯ ಬಳಿಕ ಅಲ್ಲಿನ ನಿರ್ಣಯಗಳನ್ನು ಅತಿಥೇಯ ಇಟಲಿ ಸರ್ಕಾರದ ಪ್ರಿಮಿಯರ್ ಮಾರಿಯೋ ಡ್ರಾಘಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು.

ಆಫ್ಘಾನಿಸ್ತಾನದ ಆರ್ಥಿಕತೆ ಕುಸಿದಿದೆ. ತಾಲಿಬಾನಿಗಳು ರಾಜ್ಯಾಡಳಿತವನ್ನು ವಶಕ್ಕೆ ತೆಗೆದುಕೊಂಡ ಬಳಿಕ ಹಲವಾರು ದೇಶಗಳು ತಾವು ನೀಡುತ್ತಿದ್ದ ನೆರವನ್ನು ಸ್ಥಗಿತಗೊಳಿಸಿವೆ. ಇದರಿಂದ ಅಲ್ಲಿ ಭಾರೀ ಸಮಸ್ಯೆಗಳು ಸೃಷ್ಟಿಯಾಗಿವೆ. ಶೇ.80ರಷ್ಟು ಆರ್ಥಿಕ ಪ್ರಮಾಣವನ್ನು ಆಫ್ಘಾನಿಸ್ತಾನ ವಿದೇಶಿ ನೆರವುಗಳ ಮೇಲೆ ಅವಲಂಭಿತವಾಗಿತ್ತು.

ಈ ಕುರಿತು ಶೃಂಗಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಈ ಮೊದಲು ನೀಡಿದ್ದ ವಾಗ್ಧಾನದಂತೆ 300 ಮಿಲಿಯನ್ ಡಾಲರ್ ಸೇರಿದಂತೆ ಒಟ್ಟು 1.15 ಬಿಲಿಯನ್ ಡಾಲರ್ ನೆರವಿನ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಆದರೆ ತಾಲಿಬಾನಿಗಳ ಆಡಳಿತಕ್ಕೆ ಮನ್ನಣೆ ನೀಡಲು ಕಾದು ನೋಡುವ ತಂತ್ರ ಅನುಸರಿಸಲಾಗುತ್ತಿದೆ. ತಾಲಿಬಾನಿಗಳ ಸರ್ಕಾರದಲ್ಲಿ ಎಲ್ಲರನ್ನು ಒಳ್ಳಲಾಗುತ್ತದೆಯೇ, ಮುಂದೆ ಆವರು ಏನು ಮಾಡುತ್ತಾರೆ ಎಂಬುದನ್ನು ಅಂತರಾಷ್ಟ್ರೀಯ ಸಮುದಾಯ ವಿಮರ್ಶಿಸುತ್ತದೆ ಎಂದು ಮಾರಿಯೋ ಹೇಳಿದ್ದಾರೆ.

ಅಲ್ಲಿನ ಸರ್ಕಾರಕ್ಕೆ ಮಾನ್ಯತೆ ನೀಡದೆ ಯಾವುದೇ ನೆರವು ನೀಡುವುದು ಅರ್ಥ ಹೀನವಾಗುತ್ತದೆ. ಆದರೆ ಸದ್ಯಕ್ಕೆ ಮಾನವೀಯತೆ ಆಧಾರದ ಮೇಲೆ ಪ್ಯಾಕೇಜ್ ಘೋಷಿಸಲಾಗಿದೆ. ಅದಕ್ಕೆ ಪೂರಕವಾಗಿ ವಿಶ್ವಸಂಸ್ಥೆ ಮತ್ತು ರಾಜತಾಂತ್ರಿಕ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ರಕ್ಷಣೆ ನೀಡಬೇಕು. ದೇಶದ ಗಡಿಗಳನ್ನು ಹಾಗೂ ವಿಮಾನ ನಿಲ್ದಾಣಗಳನ್ನು ವಿಶ್ವಸಂಸ್ಥೆಗೆ ಮುಕ್ತವಾಗಿ ತೆರೆದಿಡಬೇಕು. ಮಹಿಳೆಯರ ಹಕ್ಕುಗಳನ್ನು ಗೌರವಿಸಬೇಕು ಎಂಬ ಷರತ್ತು ವಿಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Facebook Comments