ರಾಜ್ಯದಲ್ಲಿ ಎಲ್​ಕೆಜಿ-ಯುಕೆಜಿ ಸೇರಿದಂತೆ 1ರಿಂದ 5ನೇ ತರಗತಿವರೆಗೆ ಆನ್​ಲೈನ್​ ಶಿಕ್ಷಣ​ ರದ್ದು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಪೋಷಕರು ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎಲ್​ಕೆಜಿ-ಯುಕೆಜಿ ಸೇರಿದಂತೆ 1ರಿಂದ 5ನೇ ತರಗತಿವರೆಗೆ ಆನ್​ಲೈನ್​ ಶಿಕ್ಷಣ​ ರದ್ದುಗೊಳಿಸುವ ಮಹತ್ವದ ನಿರ್ಧಾರವನ್ನು
ಸರ್ಕಾರ ತೆಗೆದುಕೊಂಡಿದೆ.

ಈ ಸಂಬಂಧ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಅಧಿಕಾರಿಗಳು ಹಾಗೂ ಶಿಕ್ಷಣ ತಜ್ಞರೊಂದಿಗೆ ಹಲವು ಸುತ್ತಿನ ಚರ್ಚೆ ನಡೆಸಿದ ನಂತರ ಆನ್ ಲೈನ್ ಶಿಕ್ಷಣ ರದ್ದುಗೊಳಿಸುವ ನಿರ್ಧಾರ ಪ್ರಕಟಿಸಿದ್ದಾರೆ.

ಆನ್‍ಲೈನ್ ಶಿಕ್ಷಣದ ಒತ್ತಡದಿಂದ ಮಕ್ಕಳ ಮೆದುಳಿನ ಮೇಲೂ ಅಡ್ಡ ಪರಿಣಾಮವಾಗಲಿದೆ ಎಂದಿದ್ದಾರೆ.ಆನ್​ಲೈನ್ ಶಿಕ್ಷಣದ ಹೆಸರಿನಲ್ಲಿ ಹಣ ವಸೂಲಿ ಮಾಡಲಾಗುತ್ತಿದ್ದು, ಅದಕ್ಕೆ ಕಡಿವಾಣ ಹಾಕಲಾಗಿದೆ. ಉಳಿದಂತೆ ಎಲ್ಲಾ ತರಗತಿಗಳಿಗೆ ಆನ್​ಲೈನ್​ ಶಿಕ್ಷಣ ಮುಂದುವರಿಯಲಿದೆ ಎಂದಿದ್ದಾರೆ. ಯಾವುದೇ ಕಾರಣಕ್ಕೂ ಶುಲ್ಕ ಪಾವತಿಗೆ ಒತ್ತಾಯಿಸಬಾರದು.

ಈಗಾಗಲೇ ನಮಗೆ ದೂರು ಬಂದಿದ್ದು, ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.ತಕ್ಷಣವೇ ಆನ್​ಲೈನ್​ ಶಿಕ್ಷಣ ನಿಲ್ಲಿಸುವಂತೆ ಆದೇಶ ಹೊರಡಿಸಿರುವ ಸುರೇಶ್​ ಕುಮಾರ್​, ಮಕ್ಕಳಿಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚಾಗಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ.

ಆನ್‍ಲೈನ್ ತರಗತಿ ಬಗ್ಗೆ ಚರ್ಚೆ ಆಗುತ್ತಿದೆ. ಈ ವಿಚಾರಕ್ಕೆ ಸಾಕಷ್ಟು ದೂರುಗಳು ಬಂದಿದ್ದು, ಮಕ್ಕಳಿಗೆ ವಿವೇಚನ ರಹಿತವಾಗಿ ತರಗತಿ ಮಾಡಲಾಗುತ್ತಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಜೂನ್ 2ರಂದು ಈ ಕುರಿತು ಸಭೆ ಮಾಡಿದ್ವಿ. ಆದರೆ ಸಭೆ ಅಪೂರ್ಣವಾಗಿತ್ತು. ಇವತ್ತು ಕೂಡ ಸಭೆ ಮಾಡಿದ್ದೇವೆ ಎಂದು ತಿಳಿಸಿದರು.

ಎಲ್ಲಾ ಶಾಲೆಗಳು ಎಲ್‌ಕೆಜಿ, ಯುಕೆಜಿ ಹಾಗೂ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿಗಳನ್ನು ನಿಲ್ಲಿಸಬೇಕು. ಆನ್‌ಲೈನ್‌ ತರಗತಿ ಹೆಸರಿನಲ್ಲಿ ತೆಗೆದುಕೊಳ್ಳುತ್ತಿರುವ ಶುಲ್ಕವನ್ನು ಕೂಡ ಕೂಡಲೇ ನಿಲ್ಲಿಸಬೇಕು.

ಕೊರೋನಾ ವೈರಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಈ ವರ್ಷ ಯಾವುದೇ ಶಾಲೆಗಳು ಶುಲ್ಕ ಹೆಚ್ಚಳ ಮಾಡುವಂತಿಲ್ಲ. ಆದರೆ, ಶುಲ್ಕವನ್ನು ಕಡಿತಗೊಳಿಸಲು ಅವಕಾಶವಿದೆ ಎಂದು ಹೇಳಿದರು. ಇದೇ ವೇಳೆ ಶುಲ್ಕಕ್ಕಾಗಿ ಪೋಷಕರನ್ನು ಒತ್ತಾಯಿಸುವ ಶಾಲೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಸಚಿವರು ಎಚ್ಚರಿಕೆ ನೀಡಿದರು.
ನಿಗಧಿತಿಯಂತೆ ಪರೀಕ್ಷೆ

ಎಸ್‍ಎಸ್‍ಎಲ್‍ಸಿ ಜೂನ್ 25ರಿಂದ ಪರೀಕ್ಷೆಗಳು ನಡೆಯುತ್ತವೆ. ವಿಶೇಷ ಸನಿವೇಶದಲ್ಲಿ ಪರೀಕ್ಷೆ ನಡೆಸಬೇಕಿದ್ದು, ರಾಜ್ಯದ ಪ್ರಮುಖರ ಅಭಿಪ್ರಾಯ ಪಡೆದಿದ್ದೇನೆ. ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಿಗೆ ತೆರಳಿ ಸಭೆ ಮಾಡಿದ್ದೇನೆ ಎಂದು ತಿಳಿಸಿದರು.

ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸುವ ಸಂಬಂಧ ಚರ್ಚೆಗಾಗಿ ಸುಮಾರು 4 ಸಾವಿರ ಕಿ.ಮೀ ಸಂಚಾರ ಮಾಡಿದ್ದೇನೆ. ಮೈಕ್ರೋ ಲೆವಲ್ ಪ್ಲಾನಿಂಗ್ ಮಾಡಿದ್ದೇವೆ. ಸಾರಿಗೆ, ಆರೋಗ್ಯ, ಗೃಹ ಇಲಾಖೆ ಕೈಜೋಡಿಸುತ್ತಿದೆ.

ರಾಜ್ಯದ ಎಲ್ಲಾ ಶಾಸಕರು, ಜಿಲ್ಲಾ ಪಂಚಾಯತ ಸದಸ್ಯರು ಪರೀಕ್ಷೆ ನಡೆಯಬೇಕು ಅಂತ ಸಹಕಾರ ನೀಡಿದ್ದಾರೆ. ಪ್ರತಿಯೊಬ್ಬರಿಗೆ 2-3 ಮಾಸ್ಕ್ ನಂತೆ 8.5 ಲಕ್ಷ ಮಕ್ಕಳಿಗೆ ಮಾಸ್ಕ್ ಕೊಡುತ್ತೇವೆ. ಇದಕ್ಕೆ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಮಾಸ್ಕ್ ಸಹಕಾರ ನೀಡಿದೆ ಎಂದು ಮಾಹಿತಿ ನೀಡಿದರು.

ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಅನಾರೋಗ್ಯ ಕಂಡು ಬಂದರೆ ಅವರನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಿ ಪರೀಕ್ಷೆ ಬರೆಸುತ್ತೇವೆ. ಸಾರಿಗೆ ವ್ಯವಸ್ಥೆಗೆ ಅಗತ್ಯ ಕ್ರಮ ವಹಿಸಿದ್ದೇವೆ. ಖಾಸಗಿ ಶಾಲೆಗಳ ವಾಹನಗಳನ್ನ ಬಳಸಿಕೊಳ್ಳಲಾಗುತ್ತದೆ. ಎಲ್ಲರೂ ಪರೀಕ್ಷೆ ನಡೆಸಲು ಸಹಕಾರ ಮಾಡಬೇಕು ಎಂದು ಮನವಿ ಮಾಡಿಕೊಂಡರು.

ಸಭೆಯಲ್ಲಿ ಜ್ಞಾನ ಆಯೋಗದ ಸದಸ್ಯರಾದ ಪ್ರೊ.ಶ್ರೀಧರ್, ಶಿಕ್ಷಣ ತಜ್ಞರು, ಚಿಂತಕ ಗುರುರಾಜ ಕರ್ಜಗಿ, ಶಿಕ್ಷಣ ತಜ್ಞ ನಿರಂಜನ ಆರಾಧ್ಯ, ಅಜೀಂ ಪ್ರೇಮ್ ಜೀ ವಿಶ್ವವಿದ್ಯಾಲಯದ ಹೃಷಿಕೇಶ್, ನಿಮ್ಹಾನ್ಸ್ ನ ಪ್ರೊ. ಡಾ.ಜಾನ್ ವಿಜಯ್ ಸಾಗರ್, ಅರ್ಲಿ ಚೈಲ್ ಹುಡ್ ಅಸೋಸಿಯೇಷನ್ ಪ್ರತಿನಿಧಿ ಸೇರಿ ಹಲವರು ಇದ್ದರು.

Facebook Comments

Sri Raghav

Admin