ಮೋದಿ 2.0 ಸರ್ಕಾರಕ್ಕೆ ಇಂದಿಗೆ 1 ವರ್ಷ, ದೇಶವಾಸಿಗಳಿಗೆ ಪತ್ರ ಬರೆದ ಪ್ರಧಾನಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 30-ಭಾರೀ ಸಾವು-ನೋವು ಹಾಗೂ ಅಪಾರ ಹಾನಿ-ಸಂಕಷ್ಟಕ್ಕೆ ಕಾರಣವಾಗಿರುವ ವಿನಾಶಕಾರಿ ಕೊರೊನಾ ವೈರಸ್ ವಿರುದ್ಧ ನಡೆಯುತ್ತಿರುವ ಸುದೀರ್ಘ ಸಂಗ್ರಾಮದಲ್ಲಿ ಭಾರತ ಗೆಲುವಿನ ಹಾದಿಯಲ್ಲಿದೆ ಈ ಪಿಡುಗಿನ ವಿರುದ್ಧ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶ್ವಾಸಭರಿತ ಮಾತುಗಳಲ್ಲಿ ಹೇಳಿದ್ದಾರೆ.

ದೇಶಾದ್ಯಂತ ಕೋವಿಡ್-19 ಭಾರೀ ಗಂಡಾಂತರ ಮತ್ತು ಸಂಕಷ್ಟ ಸೃಷ್ಟಿಸಿದ್ದರೂ ಅದರ ವಿರುದ್ಧ ಸಂಘಟಿತ ಹೋರಾಟ ನಡೆಸುತ್ತಿರುವ ಭಾರತದ ಜನತೆಯನ್ನು ಪ್ರಧಾನಿ ಶ್ಲಾಘಿಸಿದ್ದಾರೆ.

ಕೇಂದ್ರದಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಇಂದು ಪ್ರಥಮ ವರ್ಷಾಚರಣೆ. ಈ ಸಂದರ್ಭದಲ್ಲಿ ಭಾರತೀಯರಿಗೆ ಬಹಿರಂಗ ಪತ್ರ ಬರೆದಿರುವ ಅವರು ಒಂದು ವರ್ಷದ ಅವಯಲ್ಲಿ ಎನ್‍ಡಿಎ ಸರ್ಕಾರ ಮಾಡಿದ ಸಾಧನೆಗಳು ಮತ್ತು ಎದುರಿಸಿದ ದೊಡ್ಡ ಸವಾಲುಗಳ ಪಟ್ಟಿ ಮಾಡಿದ್ದಾರೆ.

ಕೊರೊನಾ ವೈರಸ್‍ನಿಂದಾಗಿ ವಲಸೆ ಕಾರ್ಮಿಕರು ಮತ್ತು ದೇಶದ ಜನತೆ ಅನುಭವಿಸುತ್ತಿರುವ ಕಷ್ಟ ಕಾರ್ಪಣ್ಯಗಳು ತಮ್ಮ ಮನಸ್ಸಿಗೆ ತುಂಬಾ ಯಾತನೆ ಉಂಟು ಮಾಡಿದೆ ಎಂದು ಮೋದಿ ಮಮ್ಮಲ ಮರುಗಿದ್ದಾರೆ.

ಕೋವಿಡ್-19 ವಿರುದ್ಧ ಇಡೀ ದೇಶವೇ ಒಗ್ಗೂಡಿ ಸಂಘಟಿತ ಹೋರಾಟ ನಡೆಸುತ್ತಿದೆ. ಈ ಪಿಡುಗಿನ ವಿರುದ್ಧದ ಮಹಾ ಸಂಗ್ರಾಮದಲ್ಲಿ ನಾವು ಜಯದ ಹಾದಿಯಲ್ಲಿದ್ದೇವೆ ಎಂದು ಮೋದಿ ಆತ್ಮವಿಶ್ವಾಸದಿಂದ ಪುನರುಚ್ಚರಿಸಿದ್ದಾರೆ. ನಾನು ಹಗಲು ರಾತ್ರಿ ನಿರಂತರವಾಗಿ ಶ್ರಮಿಸುತ್ತಿದ್ದೇನೆ. ನಮ್ಮಲ್ಲಿ ಕೆಲವು ಅಭಾವಗಳು ಇರಬಹುದು. ಆದರೆ ನಮ್ಮ ದೇಶ ದುರ್ಬಲವಾಗುವುದಕ್ಕೆ ನಾನು ಬಿಡುವುದಿಲ್ಲ ಎಂದು ಪ್ರಧಾನಿ ಸಾರಿದ್ದಾರೆ. ನನಗಿಂತ ನನಗೆ ನಿಮ್ಮ ಮೇಲೆ, ನಿಮ್ಮ ಶಕ್ತಿ-ಸಾಮಥ್ರ್ಯದ ಮೇಲೆ ಬಲವಾದ ನಂಬಿಕೆ ಇದೆ.

ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತದ ಸಂಘಟಿತ ದೃಢ ಹೋರಾಟವನ್ನು ಇಡೀ ಜಗತ್ತೇ ಮೆಚ್ಚಿಕೊಂಡಿದೆ. ಹಾಗೆಯೇ ಆರ್ಥಿಕ ಪುನಃಶ್ಚೇತನಕ್ಕೆ ನಾವು ಕೈಗೊಂಡಿರುವ ಕ್ರಮಗಳೂ ಕೂಡ ಆದರ್ಶಪ್ರಾಯವಾಗಿದೆ ಎಂದು ಮೋದಿ ಹೆಮ್ಮೆಯಿಂದ ಪತ್ರದಲ್ಲಿ ಹೇಳಿಕೊಂಡಿದ್ದಾರೆ.

ಈ ಪಿಡುಗಿನಿಂದಾಗಿ ದೇಶದ ಜನರು ಊಹೆಗೂ ನಿಲುಕದ ರೀತಿಯಲ್ಲಿ ಭಾರೀ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ನಮ್ಮ ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರು, ಸಣ್ಣ ಕೈಗಾರಿಕೆಗಳ ನೌಕರರು, ಕರಕುಶಲ ಕಾರ್ಮಿಕರು, ಬೀದಿ ವ್ಯಾಪಾರಿಗಳು, ಸಣ್ಣ ವರ್ತಕರು ಮೊದಲಾದವರು ಅತ್ಯಂತ ಯಾತನಾಮಯ ರೀತಿಯಲ್ಲಿ ನೋವು ಅನುಭವಿಸುತ್ತಿದ್ದಾರೆ. ಅವರ ಕಷ್ಟ-ಕಾರ್ಪಣ್ಯಗಳು ಮತ್ತು ನೋವು-ಯಾತನೆಗಳನ್ನು ನಿರ್ಮೂಲನೆ ಮಾಡಲು ನಾವು ಸಂಘಟಿತವಾಗಿ ಮತ್ತು ದೃಢನಿಶ್ಚಯದಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂಧು ಪ್ರಧಾನಿ ಹೇಳಿದ್ದಾರೆ.

ಈ ಸಂಕಷ್ಟ ಸಂದರ್ಭದಲ್ಲಿ ಯಾರೂ ಧೃತಿಗೆಡಬಾರದು. ಆತ್ಮವಿಶ್ವಾಸ ಮತ್ತು ಧೈರ್ಯದಿಂದ ಈ ಬಿಕ್ಕಟ್ಟು ಎದುರಿಸಬೇಕು. ಸರ್ಕಾರ ಜಾರಿಗೊಳಿಸಿರುವ ನೀತಿ ನಿಯಮಗಳನ್ನು ಪಾಲಿಸಬೇಕು ಎಂದು ಎಲ್ಲಾ ಭಾರತೀಯರಿಗೆ ಮೋದಿ ಬಹಿರಂಗ ಪತ್ರದಲ್ಲಿ ಕರೆ ನೀಡಿದ್ಧಾರೆ.

ದೇಶವನ್ನು ಸಂಕಷ್ಟದಿಂದ ಪಾರು ಮಾಡಲು ಕೇಂದ್ರ ಸರ್ಕಾರ ಆತ್ಮನಿರ್ಭರ ಯೋಜನೆ ಅಡಿ 20 ಲಕ್ಷ ಕೋಟಿ ರೂ.ಗಳ ವಿಶೇಷ ಆರ್ಥಿಕ ಪ್ಯಾಕೇಜ್ ಅನುಷ್ಠಾನಗೊಳಿಸಿದೆ ಎಂದು ಮೋದಿ ತಿಳಿಸಿದ್ದಾರೆ.

ಒಂದು ವರ್ಷದ ಅವಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅನೇಕ ಎಡರುತೊಡರುಗಳ ನಡುವೆ ಐತಿಹಾಸಿಕ ಸಾಧನೆಗಳನ್ನು ಮಾಡಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಭಾರತೀಯ ಸಂವಿಧಾನದಲ್ಲಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿ ಕಾಶ್ಮೀರಿ ಜನರಿಗೆ ದೊಡ್ಡ ಪ್ರಯೋಜನ ನೀಡಲಾಗಿದೆ.

ಅಯೋಧ್ಯೆ ವಿವಾದ ಅತ್ಯಂತ ಸೌಹಾರ್ದಯುತವಾಗಿ ಇತ್ಯರ್ಥಗೊಂಡಿದೆ ಎಂದು ಮೋದಿ ಸರ್ಕಾರದ ಅನೇಕ ಸಾಧನೆಗಳನ್ನು ಪಟ್ಟಿ ಮಾಡಿದ್ದಾರೆ. ದೇಶದ ಬಡವರು, ರೈತರು, ಕಾರ್ಮಿಕರು, ಮಹಿಳೆಯರು ಮತ್ತು ಯುವಜನತೆಗೆ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಅವರನ್ನು ಸಬಲೀಕರಣಗೊಳಿಸಿದೆ ಎಂದು ಮೋದಿ ತಮ್ಮ ಸುದೀರ್ಘ ಪತ್ರದಲ್ಲಿ ವಿವರಿಸಿದ್ದಾರೆ.

ಬಿಜೆಪಿ ನೇತೃತ್ವದ ಸರ್ಕಾರ ಕೈಗೊಂಡ ಪ್ರಮುಖ ನಿರ್ಧಾರಗಳು, ಅನುಷ್ಠಾನಗೊಳಿಸಿದ ಯೋಜನೆಗಳು ಮತ್ತು ಕಾರ್ಯಕ್ರಮಗಳು, ಸಂಸತ್ತಿನಲ್ಲಿ ಅನುಮೋದನೆಯಾದ ಮಹತ್ವದ ಕಾಯ್ದೆಗಳು ಮತ್ತು ವಿಧೇಯಕಗಳನ್ನು ಸಹ ಪ್ರಸ್ತಾಪಿಸಿದ್ದಾರೆ.

ಕಳೆದ ವರ್ಷ ಇದೇ ದಿನ ಭಾರತದ ರಾಜಕೀಯ ಮತ್ತು ಪ್ರಜಾಪ್ರಭುತ್ವ ಇತಿಹಾಸದಲ್ಲಿ ಸುವರ್ಣ ಅಧ್ಯಾಯ ಆರಂಭವಾಯಿತು. ಹಲವು ದಶಕಗಳ ನಂತರ ನಮ್ಮ ಜನರು ಸಂಪೂರ್ಣ ಬಹುಮತದೊಂದಿಗೆ ಸದೃಢ ಸರ್ಕಾರವನ್ನು ಅಕಾರಕ್ಕೆ ತಂದರು ಎಂದು ಮೋದಿ ತಿಳಿಸಿದ್ದಾರೆ.

ನಮ್ಮ ರಾಷ್ಟ್ರದ ಪ್ರಜಾಪ್ರಭುತ್ವವನ್ನು ಕಾಪಾಡಲು ಜನರು ನಮಗೆ ಬೆಂಬಲ ನೀಡಿದ್ದಕ್ಕಾಗಿ ಈ ಸಂದರ್ಭದಲ್ಲಿ 130 ಕೋಟಿ ಭಾರತೀಯರಿಗೆ ನಾನು ತುಂಬಾ ಆಭಾರಿಯಾಗಿದ್ದೇನೆ. ಸಾಮಾನ್ಯ ದಿನಗಳಾಗಿದ್ದರೆ ಇಂದು ನಾನು ನಿಮ್ಮ ಮಧ್ಯೆ ಸಡಗರ-ಸಂಭ್ರಮದಿಂದ ವರ್ಷಾಚರಣೆ ಆಚರಿಸಿಕೊಳುತ್ತಿದ್ದೆ. ಆದರೆ ಕೊರೊನಾ ಪಿಡುಗಿನಿಂದ ಪರಿಸ್ಥಿತಿ ಭಿನ್ನವಾಗಿದೆ. ಈ ಕಾರಣಕ್ಕಾಗಿ ನಿಮ್ಮೆಲ್ಲರನ್ನು ಉದ್ದೇಶಿಸಿ ಪತ್ರ ಬರೆಯುತ್ತಿದ್ದೇನೆ ಎಂದು ಮೋದಿ ತಿಳಿಸಿದ್ದಾರೆ.

ನಮ್ಮದು ಏಕ ಭಾರತ, ಶ್ರೇಷ್ಠ ಭಾರತ ಎಂದು ವ್ಯಾಖ್ಯಾನಿಸಿದ ಅವರು, ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ಹಾರೈಕೆ, ಸಹಕಾರ-ಬೆಂಬಲ ನಮಗೆ ನವ ಶಕ್ತಿ, ಹೊಸ ಸೂರ್ತಿ ಮತ್ತು ಉತ್ಸಾಹ ನೀಡುತ್ತದೆ. ಜನತಂತ್ರದ ಸಮಗ್ರ ಶಕ್ತಿಯನ್ನು ನೀವು ಪ್ರದರ್ಶಿಸುತ್ತಿರುವುದು ಇಡೀ ವಿಶ್ವಕ್ಕೆ ಭರವಸೆಯ ಹೊಸ ಬೆಳಕಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.

Facebook Comments

Sri Raghav

Admin