10ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಕಾಲೇಜುಗಳಿಗೆ ಶಾಶ್ವತವಾಗಿ ಬೀಗ ಬೀಳಲಿದೆ

ಈ ಸುದ್ದಿಯನ್ನು ಶೇರ್ ಮಾಡಿ

Colafge-01

ಬೆಂಗಳೂರು, ಅ.8-ಇನ್ನು ಮುಂದೆ 10ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದರೆ ಅಂತಹ ಸರ್ಕಾರಿ ಪದವಿಪೂರ್ವ ಕಾಲೇಜುಗಳಿಗೆ ಶಾಶ್ವತ ಬೀಗ ಬೀಳಲಿದೆ.  ಈಗಾಗಲೇ ಕಡಿಮೆ ಹಾಜರಾತಿ ಇರುವ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಲು ಸರ್ಕಾರ ತೀರ್ಮಾನ ಕೈಗೊಂಡಿತ್ತು. ಇದರ ಬೆನ್ನಲ್ಲೇ ಇದೀಗ ಪದವಿಪೂರ್ವ ಕಾಲೇಜುಗಳಿಗೂ ಇದೇ ನಿಯಮವನ್ನು ಅಳವಡಿಸಲು ಸರ್ಕಾರ ಚಿಂತನೆ ನಡೆಸಿದೆ.  ಮುಂದಿನ ಶೈಕ್ಷಣಿಕ ವರ್ಷದಿಂದ 10ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಕಾಲೇಜುಗಳಿಗೆ ಬೀಗ ಹಾಕಿ ಬೇರೊಂದು ಅಂದರೆ ಹತ್ತಿರುವ ಕಾಲೇಜುಗಳಿಗೆ ವಿಲೀನಗೊಳಿಸುವ ಪ್ರಕ್ರಿಯೆಗೆ ಈಗಾಗಲೆ ಚಾಲನೆ ದೊರೆತಿದೆ.  ಈಗಾಗಲೇ ಶೈಕ್ಷಣಿಕ ವರ್ಷದ ಅವಧಿ ಮುಗಿದಿರುವುದರಿಂದ ಬರುವ ಶೈಕ್ಷಣಿಕ ವರ್ಷದಿಂದ ಇದು ಜಾರಿಗೆ ಬರಲಿದೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ.

ರಾಜ್ಯದಲ್ಲಿ ಒಟ್ಟು ಒಂದೂವರೆ ಸಾವಿರಕ್ಕೂ ಅಧಿಕ ಸರ್ಕಾರಿ ಪದವಿಪೂರ್ವ ಕಾಲೇಜುಗಳಿವೆ. ಇದರಲ್ಲಿ ಸುಮಾರು 150ಕ್ಕೂ ಹೆಚ್ಚು ಕಾಲೇಜುಗಳಲ್ಲಿ 10ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಾರೆ. ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಬಳ್ಳಾರಿ, ಯಾದಗಿರಿ, ಕಲಬುರಗಿ, ಬೆಳಗಾವಿ, ಉತ್ತರ ಕನ್ನಡ, ತುಮಕೂರು ಸೇರಿದಂತೆ ಮತ್ತಿತರ ಕಡೆ ವಿದ್ಯಾರ್ಥಿಗಳ ಸಂಖ್ಯೆ ತೀರಾ ವಿರಳವಾಗಿದೆ.

ಕಾರಣವೇನು:

ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಖಾಸಗಿ ಶಾಲೆಗಳಿಗೆ ಪೈಪೋಟಿ ಒಡ್ಡುವಂತಹ ಮೂಲಭೂತ ಸೌಕರ್ಯಗಳಿಲ್ಲ. ಉಪನ್ಯಾಸಕರ ಕೊರತೆ, ಪ್ರಯೋಗಾಲಯ, ಆಟದ ಮೈದಾನ, ಶೌಚಾಲಯ, ಕುಡಿಯುವ ನೀರು, ಗ್ರಂಥಾಲಯ ಹೀಗೆ ನಾನಾ ರೀತಿಯ ಸೌಲಭ್ಯಗಳಿಂದ ಬಳಲುತ್ತಿವೆ.  ಹೀಗಾಗಿ ಯಾವುದೇ ವಿದ್ಯಾರ್ಥಿಗಳು ಇಂತಹ ಕಾಲೇಜುಗಳತ್ತ ಮುಖ ಮಾಡುವುದಿಲ್ಲ. ವಿದ್ಯಾರ್ಥಿಗಳಿರಲಿ ಬಿಡಲಿ ಆದರೆ ಉಪನ್ಯಾಸಕರಿಗೆ ಮಾತ್ರ ಸಂಬಳಕ್ಕೇನು ಕೊರತೆ ಇಲ್ಲ. ಪಾಠ ಮಾಡಲಿ ಬಿಡಲಿ ತಿಂಗಳ ವೇತನ ಮಾತ್ರ ಅವರ ಖಾತೆಗೆ ಜಮೆಯಾಗುತ್ತದೆ.  ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಸರ್ಕಾರ ಎಲ್ಲೆಲ್ಲಿ 10ಕ್ಕಿಂತ ವಿದ್ಯಾರ್ಥಿಗಳು ಕಡಿಮೆ ಇರುವ ಕಾಲೇಜುಗಳಿಗೆ ಬೀಗ ಜಡಿದು ಬೇರೊಂದು ಕಾಲೇಜಿನಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಿದೆ. ಈ ಹಿಂದೆ ಇದೇ ರೀತಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ಸರ್ಕಾರಿ ಶಾಲೆಗಳನ್ನು ಸಹ ವಿಲೀನಗೊಳಿಸಲು ಸರ್ಕಾರ ತೀರ್ಮಾನಿಸಿತ್ತು.  ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕಾಗಿ ಇದನ್ನು ಮುಂದಿನ ವರ್ಷದಿಂದ ಪ್ರಾರಂಭಿಸಲಿದೆ.

► Follow us on –  Facebook / Twitter  / Google+

Facebook Comments

Sri Raghav

Admin