ಚಿನ್ನದ ವ್ಯಾಪಾರಿಯನ್ನು ಬೆದರಿಸಿ 2 ಲಕ್ಷ ಹಣ, 10 ಗ್ರಾಂ ಸರ ದರೋಡೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.2- ವ್ಯಾಪಾರ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಜ್ಯುವೆಲರಿ ಅಂಗಡಿ ಮಾಲೀಕನ ಕಾರನ್ನು ಹಿಂಬಾಲಿಸಿಕೊಂಡು ಬೈಕ್‍ಗಳಲ್ಲಿ ಬಂದ ದರೋಡೆಕೋರರು ಅಡ್ಡಹಾಕಿ ಬೆದರಿಸಿ 2 ಲಕ್ಷ ಹಣವಿದ್ದ ಬ್ಯಾಗ್ ಹಾಗೂ 10 ಗ್ರಾಂ ಸರ ದರೋಡೆ ಮಾಡಿಕೊಂಡು ಪರಾರಿಯಾಗಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.

ವಿಜಯನಗರದ ಆರ್‍ಪಿಸಿ ಲೇಔಟ್ ನಿವಾಸಿ ಪ್ರಮೋದ್ ಹಣ ಕಳೆದುಕೊಂಡಿರುವ ಜ್ಯುವೆಲರಿ ಅಂಗಡಿ ಮಾಲೀಕ ಹಾಗೂ ಅವರ ಚಿಕ್ಕಪ್ಪ ನೇಮಿನಾಥ್ 10 ಗ್ರಾಂ ಸರ ಕಳೆದುಕೊಂಡವರು. ಪೀಣ್ಯ 2ನೆ ಹಂತ, ಹೆಗ್ಗನಹಳ್ಳಿ ಮುಖ್ಯರಸ್ತೆಯಲ್ಲಿ ಪ್ರಮೋದ್ ಅವರಿಗೆ ಸೇರಿದ ಜ್ಯುವೆಲರಿ ಅಂಗಡಿ ಇದೆ. ನಿನ್ನೆ ಎಂದಿನಂತೆ ಪ್ರಮೋದ್ ಅವರು ಬೆಳಗ್ಗೆಯಿಂದ ರಾತ್ರಿವರೆಗೆ ಚಿನ್ನಾಭರಣ ವ್ಯಾಪಾರ ಮಾಡಿದ್ದಾರೆ.

ವ್ಯಾಪಾರದಿಂದ ಸಂಗ್ರಹವಾಗಿದ್ದ 2 ಲಕ್ಷ ಹಣವನ್ನು ಊಟದ ಬ್ಯಾಗ್‍ನಲ್ಲಿಟ್ಟುಕೊಂಡು ರಾತ್ರಿ 9.30ರ ಸುಮಾರಿನಲ್ಲಿ ಅಂಗಡಿಗೆ ಬೀಗ ಹಾಕಿ ಚಿಕ್ಕಪ್ಪನಿಗೆ ಬೈಕ್‍ನಲ್ಲಿ ಬರುವಂತೆ ಹೇಳಿ, ಕಾರಿನ ಹಿಂಬದಿ ಸೀಟಿನಲ್ಲಿ ಊಟದ ಬ್ಯಾಗ್ ಇಟ್ಟುಕೊಂಡು ಕಾರು ಚಾಲನೆ ಮಾಡಿಕೊಂಡು ಮನೆಗೆ ಹೋಗುತ್ತಿದ್ದರು.

ಅದರಂತೆ ಇವರ ಚಿಕ್ಕಪ್ಪ ನೇಮಿನಾಥ್ ಅವರು ಬೈಕ್‍ನಲ್ಲಿ ಕಾರಿನ ಹಿಂದೆ ಬರುತ್ತಿದ್ದರು. ಇವರ ಚಲನವಲನ ಗಮನಿಸಿದ ಮೂವರು ದರೋಡೆಕೋರರು ಎರಡು ಬೈಕ್‍ಗಳಲ್ಲಿ ಕಾರನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಕಾರು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಸುಂಕದಕಟ್ಟೆಯ ಮದ್ದೂರಮ್ಮ ಲೇಔಟ್, 7ನೆ ಕ್ರಾಸ್ ಬಳಿ ಬರುತ್ತಿದ್ದಂತೆ ಏಕಾಏಕಿ ಕಾರಿನ ಮುಂದೆ ಬೈಕ್‍ಗಳನ್ನು ನಿಲ್ಲಿಸಿ ಕಾರನ್ನು ಅಡ್ಡಗಟ್ಟಿ ಏಕೆ ಹೀಗೆ ಗಾಡಿ ಓಡಿಸುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

ನಾನು ಸರಿಯಾಗಿಯೇ ಕಾರು ಚಲಾಯಿಸುತ್ತಿದ್ದೇನೆ ಎಂದು ಪ್ರಮೋದ್ ಹೇಳಿದರೂ ವಿನಾಕಾರಣ ಜಗಳ ತೆಗೆದಿದ್ದಾರೆ. ನಂತರ ಕಾರಿನ ಹಿಂಬದಿ ಗಾಜು ಒಡೆದು 2 ಲಕ್ಷ ಹಣವಿದ್ದ ಊಟದ ಬ್ಯಾಗ್ ತೆಗೆದುಕೊಂಡಿದ್ದಾರೆ. ಅಷ್ಟರಲ್ಲಿ ಹಿಂದೆ ಬರುತ್ತಿದ್ದ ನೇಮಿನಾಥ್ ಅವರು ಏಕೆ ಕಾರನ್ನು ಅಡ್ಡಗಟ್ಟಿದ್ದೀರಾ ಎಂದು ಪ್ರಶ್ನಿಸುತ್ತಿದ್ದಂತೆ ಅವರನ್ನು ಮಚ್ಚಿನಿಂದ ಬೆದರಿಸಿ 10 ಗ್ರಾಂ ಸರ ಕಿತ್ತುಕೊಂಡು ದರೋಡೆಕೋರರು ಪರಾರಿಯಾಗಿದ್ದಾರೆ.
ಘಟನೆ ಬಗ್ಗೆ ಪ್ರಮೋದ್ ಅವರು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ದರೋಡೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಜ್ಯುವೆಲರಿ ಅಂಗಡಿ ಮಾರ್ಗದಲ್ಲಿನ ಸಿಸಿಟಿವಿ ಹಾಗೂ ಕಾರು ಬಂದ ಸ್ಥಳದಲ್ಲಿರುವ ಸಿಸಿಟಿವಿ ಫುಟೇಜ್‍ಗಳನ್ನು ಪರಿಶೀಲಿಸಿ ದರೋಡೆಕೋರರ ಪತ್ತೆಗೆ ಬಲೆ ಬೀಸಿದ್ದಾರೆ.

Facebook Comments