BIG NEWS : ಶೇ 10 ರಷ್ಟು ಮೀಸಲಾತಿ ತಿದ್ದುಪಡಿ ವಿಧೇಯಕ ಲೋಕಸಭೆಯಲ್ಲಿ ಅಂಗೀಕಾರ

ಈ ಸುದ್ದಿಯನ್ನು ಶೇರ್ ಮಾಡಿ

Loksabha--01

ನವದೆಹಲಿ.ಜ. 8 : ಪ್ರತಿಪಕ್ಷಗಳ ತೀವ್ರ ಗದ್ದಲ, ಮತ್ತು ವಿರೋಧದ ನಡುವೆಯೂ ಲೋಕಸಭೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಶೇ 10 ರಷ್ಟು ಮೀಸಲಾತಿ ತಿದ್ದುಪಡಿ ವಿಧೇಯಕ ಅಂಗೀಕಾರವಾಗಿದೆ.

ಲೋಕಸಭಾ ಕಲಾಪದಲ್ಲಿ ಈ ವಿಧೇಯಕವನ್ನ ಮಂಡನೆ ಮಾಡಲಾಗಿತ್ತು. ಸುಮಾರು ಒಂದೂವರೆ ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆದ ಬಳಿಕ ಮತದಾನ ಪ್ರಕ್ರಿಯೆ ನಡೆಯಿತು.

ಮಸೂದೆ ಪರ 323 ಮತಗಳು ಬೀಳುವ ಮೂಲಕ ಲೋಕಸಭೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯವರಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಶೇ.10 ರಷ್ಟು ಮೀಸಲಾತಿ ನೀಡುವ ಮಸೂದೆ ಅಂಗೀಕಾರವಾಗಿದೆ.

ಮಸೂದೆ ಕುರಿತಾಗಿ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳು ಭಾರಿ ಚರ್ಚೆ ನಡೆಸಿದವು. ಭಾರಿ ಚರ್ಚೆ ನಂತರ ಅಂತಿಮವಾಗಿ ಲೋಕಸಭೆಯಲ್ಲಿ ಮಸೂದೆಗೆ ಸಮ್ಮತಿ ದೊರೆಯಿತು.
ಈ ತಿದ್ದುಪಡಿ ಕ್ರಮದಿಂದ ಮೀಸಲು ಪ್ರಮಾಣ ಶೇ.50 ಮೀರಬಾರದು ಎನ್ನುವ ಸುಪ್ರೀಂ ಕೋರ್ಟ್‌ ತೀರ್ಪಿಗೆ ಧಕ್ಕೆಯಾಗುತ್ತದೆ ಎನ್ನುವ ಪ್ರತಿಪಕ್ಷಗಳ ಆತಂಕವನ್ನು ಜೇಟ್ಲಿ ಸ್ಪಷ್ಟವಾಗಿ ಅಲ್ಲಗಳೆದರು.

ಕೋರ್ಟ್‌ ಆದೇಶ ಇರುವುದು ಜಾತಿ ಆಧಾರಿತ ಮೀಸಲು ಮಿತಿಯ ಕುರಿತು, ನಾವೀಗ ಅನುಷ್ಠಾನಗೊಳಿಸಲು ಹೊರಟಿರುವುದು ಆರ್ಥಿಕ ಮಾನದಂಡ ಆಧರಿಸಿದ ಮೀಸಲು ನೀತಿಯನ್ನು ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.

ಬುಧವಾರ ಇದೇ ಮಸೂದೆಯೂ ರಾಜ್ಯಸಭೆಯಲ್ಲಿ ಮಂಡನೆಯಾಗಲಿದೆ.ಆದರೆ, ಬಿಜೆಪಿ ನೇತೃತ್ವದ ಎನ್‌ಡಿಎ ಇಲ್ಲಿ ಬಹುಮತ ಹೊಂದಿಲ್ಲ. ಪ್ರತಿಪಕ್ಷಗಳು ಮಸೂದೆಗೆ ಬೆಂಬಲ ಸೂಚಿಸಿದರೆ ಮಾತ್ರ ಅಂಗೀಕಾರವಾಗಲಿದೆ.

ಹೀಗಾಗಿ ನಾಳೆ ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರವಾಗಲಿದಿಯೇ ಎಂಬ ಪ್ರಶ್ನೆ ಎದುರಾಗಿದೆ.
ಅಚ್ಚರಿ ಎಂದರೆ ಕಾಂಗ್ರೆಸ್‌ ಕೂಡ ವಿಧೇಯಕ ಪರವಾಗಿ ಮತ ಚಲಾಯಿಸಿದೆ. ಇದಕ್ಕೂ ಮುನ್ನ ನಡೆದ ಚರ್ಚೆಯಲ್ಲಿ ಹಲವಾರು ಮಂದಿ ಭಾಗವಹಿಸಿದ್ದರು.

ಕಾಂಗ್ರೆಸ್‌ ಸೇರಿದಂತೆ ಬಹುತೇಕ ಎಲ್ಲ ಪಕ್ಷಗಳು ಆರ್ಥಿಕ ದುರ್ಬಲರಿಗೆ ಮೀಸಲು ನೀಡುವ ಇಂಗಿತ ವ್ಯಕ್ತಪಡಿಸುತ್ತ ಬಂದಿವೆ. ಈ ಹಿಂದೆ ಕೇಂದ್ರ ಮತ್ತು ರಾಜ್ಯಗಳಲ್ಲಿ ಇಂತಹ ಮೀಸಲು ನೀತಿ ಅನುಷ್ಠಾನ ಯತ್ನಗಳು ನಡೆದಿದ್ದವು. ಆದರೆ ಅವು ಸಂವಿಧಾನ ತಿದ್ದುಪಡಿ ಹೊರತು ಪಡಿಸಿ, ಸಾಮಾನ್ಯ ಶಾಸನಬದ್ಧ ನಿಬಂಧನೆಗಳು ಅಥವಾ ಅಧಿಸೂಚನೆಗಳ ಮಟ್ಟಕ್ಕೆ ಸೀಮಿತಗೊಂಡಿದ್ದರಿಂದ ಉದ್ದೇಶ ಸಾಧನೆಯಲ್ಲಿ ಸೋತವು ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ.

ಇದುವರೆಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಶೇಕಡಾ 50 ರಷ್ಟು ಜಾತಿ ಆಧರಿತ ಮೀಸಲಾತಿ ಇತ್ತು. ಆದರೆ ಇದೀಗ ಉದ್ಯೋಗ ಹಾಗೂ ಶಿಕ್ಷಣದ ಮೇಲಿನ ಮೀಸಲಾತಿಯನ್ನ ಶೇ. 60ಕ್ಕೆ ಹೆಚ್ಚಿಸಿ ಅದರಲ್ಲಿನ ಶೇ.10 ರಷ್ಟು ಮೀಸಲಾತಿಯನ್ನ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಮೀಸಲಿಡುವ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಇದು ವಾರ್ಷಿಕ ಆದಾಯ 8 ಲಕ್ಷಕ್ಕಿಂತ ಕಡಿಮೆ ಇರುವವರಿಗೆ ಇದರ ಲಾಙ ಸಿಗಲಿದೆ.

ಇನ್ನು ಈಗ ಸಾಂವಿಧಾನಿಕವಾಗಿ ಶೇ.50 ರಷ್ಟು ಮಾತ್ರ ಮೀಸಲಾತಿಯನ್ನು ಹೊಂದಲು ಅವಕಾಶವಿತ್ತು (ತಮಿಳುನಾಡು ಹೊರತು ಪಡಿಸಿ). ಹೀಗಾಗಿ ಈಗ ಸಂವಿಧಾನ ಪರಿಚ್ಛೇದ 15 ಮತ್ತು 16ಕ್ಕೆ ತಿದ್ದು ಪಡಿ ತರಲು ಮೋದಿ ಸರ್ಕಾರ ನಿರ್ಧರಿಸಿದ್ದು, ಮೀಸಲಾತಿ ಮಿತಿಯನ್ನು ಶೇ.60 ರಷ್ಟು ಏರಿಸಲು ನಿರ್ಧರಿಸಿದೆ.

ಇದಕ್ಕೂ ಮುನ್ನ ಮಂಗಳವಾರ ಮಧ್ಯಾಹ್ನದ ವೇಳೆ ಕೇಂದ್ರ ಸರ್ಕಾರ ಮಸೂದೆಯನ್ನು ಲೋಕಸಭೆಯ ಮುಂದಿರಿಸಿತ್ತು. ಮುಸ್ಲಿಮೇತರ ವಲಸೆಗಾರರಿಗಾಗಿ ಭಾರತೀಯ ಪೌರತ್ವ ಮಸೂದೆಯ ಚರ್ಚೆಯ ನಂತರ ಮೀಸಲಾತಿ ಮಸೂದೆ ಚರ್ಚೆ ಪ್ರಾರಂಭವಾಯ್ತು. ಮಸೂದೆಯ ವಿರುದ್ಧವಾಗಿ ಸಂಸತ್ನಲ್ಲಿ ಕೇವಲ ಮೂವರು ಸಂಸದರು ಮಾತ್ರ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಮೊದಲಿಗೆ ಕೇಂದ್ರದ ಪರವಾಗಿ ಮಸೂದೆ ಮಂಡನೆ ಆರಂಭಿಸಿದ ಕೇಂದ್ರ ಸಮಾಜ ಕಲ್ಯಾಣ ಸಚಿವ ತಾವರ್ ಚಾಂದ್ ಗೆಹ್ಲೊಟ್, ಈ ಮಸೂದೆಯಿಂದ ಕೇಂದ್ರ ಸರ್ಕಾರ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಮಾತನ್ನು ಪೂರ್ಣಗೊಳಿಸಲಿದೆ ಎಂದರು.
ಮಸೂದೆ ಮಂಡನೆ ಮಾಡಿದ ಗೆಹ್ಲೊಟ್, ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿ ಮೀಸಲಾತಿ ಮಸೂದೆಯಿಂದ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಎಲ್ಲಾ ಸ್ಥರಗಳ ಜನರಿಗೂ ಸಹಾಯವಾಗಲಿದೆ ಎಂದರು.

“ಈ ಬಿಲ್ನಿಂದ ಬ್ರಾಹ್ಮಣ, ಜಾಟ್, ಬನಿಯಾ, ಆರ್ಥಿಕವಾಗಿ ಹಿಂದುಳಿದ ಮತ್ತು ಮುಸಲ್ಮಾನ ಮೀಸಲಾತಿಯಲ್ಲಿ ಸ್ಥಾನ ಪಡೆಯದ ಮುಸಲ್ಮಾನರು, ಕ್ರಿಶ್ಚಿಯನ್ನರು ಸೇರಿದಂತೆ ಹಲವು ಸಮುದಾಯಗಳು ಲಾಭ ಪಡೆಯಲಿದೆ. ಇದು ಎಲ್ಲರ ವಿಕಾಸಕ್ಕಾಗಿ ಕೇಂದ್ರ ತಳೆದ ನಿರ್ಣಯ. ಕೇವಲ ಯಾವುದೋ ಜಾತಿಯೊಂದಕ್ಕೆ ಸೀಮಿತವಾಗಿರುವ ಮಸೂದೆ ಇದಲ್ಲ,” ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಸದ ಕೆ.ವಿ. ಥಾಮಸ್, ಮೀಸಲಾತಿ ಮಸೂದೆಯನ್ನು ಸ್ವಾಗತಿಸುವುದಾಗಿ ಹೇಳಿದರು. “ಆದರೆ ಇಲ್ಲಿ ಉದ್ಭವವಾಗುತ್ತಿರುವ ಪ್ರಶ್ನೆಯೆಂದರೆ ಕೇಂದ್ರ ಈ ಮಸೂದೆಯನ್ನು ಜಾರಿಗೆ ತರುವಲ್ಲಿ ಮಾಡಿದ ವಿಳಂಬನೀತಿ ಮತ್ತು ಮಂಡನೆ ಮಾಡಲು ಹೊರಟಿರುವ ಸಮಯ. ಈ ಕಾರಣಕ್ಕಾಗಿ ನಮಗೆ ಕೇಂದ್ರದ ನಿರ್ಧಾರದ ಮೇಲೆ ಸಂಶಯವಿದೆ. ಮೊದಲು ಈ ಮಸೂದೆ ಜಂಟಿ ಸಂಸದೀಯ ಸಮಿತಿಯ ಮುಂದೆ ತನ್ನಿ, ನಂತರ ನಿರ್ಧರಿಸೋಣ,” ಎಂದು ಥಾಮಸ್ ಅಭಿಪ್ರಾಯ ವ್ಯಕ್ತಪಡಿಸಿದರು.

ಮುಂದುವರೆದ ಅವರು, ಈ ಬಿಲ್ನಲ್ಲಿ ಅನುದಾನ ರಹಿತ ಅಥವಾ ಅನುದಾನಿತ ವರ್ಗದವರು ಆರ್ಥಿಕವಾಗಿ ಹಿಂದುಳಿದಿದ್ದರೆ ಮೀಸಲಾತಿ ಪಡೆಯಬಹುದು ಎನ್ನಲಾಗಿದೆ. ಆದರೆ ಪರಿಶಿಷ್ಟ ವರ್ಗ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಮೀಸಲಾತಿ ಇರುವುದು ಕೇವಲ ಅನುದಾನಿತ ವರ್ಗಗಳಲ್ಲಿ ಮಾತ್ರ. ಯಾಕೆ ಎಸ್ಸಿ, ಎಸ್ಟಿ ಮತ್ತು ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡುತ್ತಿದ್ದೀರಿ ಎಂದು ಥಾಮಸ್ ಪ್ರಶ್ನಿಸಿದರು.

ಜೇಟ್ಲಿ ವಾದ : ಮಸೂದೆಯ ವಿಚಾರವಾಗಿ ಚರ್ಚೆ ಆರಂಭಿಸಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಮೇಲ್ವರ್ಗದ ಬಡವರಿಗೆ ಶೇ.10ರಷ್ಟು ಮೀಸಲಾತಿಯನ್ನು ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲೂ ಈ ಬಿಲ್ ಒದಗಿಸಲಿದೆ ಎಂದರು. ಶೇ. ದೇಶದ ಪ್ರತಿ ನಾಗರಿಕನಿಗೂ ಸರ್ಕಾರಿ ಸೇವೆ ಸಿಗಬೇಕು ಎಂದ ಅವರು, ವಿಧೇಯಕವನ್ನು ಬೆಂಬಲಿಸುವಂತೆ ವಿರೋಧ ಪಕ್ಷಗಳಿಗೆ ಮನವಿ ಮಾಡಿದರು. ಈ ವಿಧೇಯಕದ ಮೂಲಕ ಸಮಾಜದ ಸಾರ್ವತೋಮುಖ ಅಭಿವೃದ್ಧಿಯಾಗಲಿದೆ.

2014ರಲ್ಲಿ ಈ ಬಗ್ಗೆ ಕಾಂಗ್ರೆಸ್ ಭರವಸೆ ನೀಡಿತ್ತು ಎಂದು ಕಾಂಗ್ರೆಸ್ ಪ್ರಣಾಳಿಕೆಯವನ್ನು ಜೇಟ್ಲಿ ನೆನೆಸಿಕೊಂಡರು. ಜತೆಗೆ ಸಂಸತ್ತಿನಲ್ಲಿ ಅದನ್ನು ಓದಿದರು. ಮುಂದುವರೆದ ಅರುಣ್ ಜೇಟ್ಲಿ, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಶೇಕಡ 50ರಷ್ಟು ಮೀಸಲಾತಿಯನ್ನು ಮೀರುವುದಿಲ್ಲ ಎಂದರು.

ಜೇಟ್ಲಿಗೆ ತಿರುಗೇಟು : ಅಣ್ಣಾ ಅಖಿಲ ಭಾರತ ದ್ರಾವಿಡ ಮುನ್ನೇತ್ರ ಕರಗಂ (ಎಐಎಡಿಎಂಕೆ) ಪಕ್ಷದ ಸಂಸದ ತಂಬಿ ದೊರೈ ಅರುಣ್ ಜೇಟ್ಲಿಗೆ ಸೆಡ್ಡು ಹೊಡೆದರು. ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಅಗತ್ಯವಿಲ್ಲ, ಜಾತಿ ಆಧಾರದಲ್ಲಿ ತುಳಿತಕ್ಕೆ ಒಳಗಾದವರನ್ನು ಮೇಲೆತ್ತಲು ಇರುವ ಅಸ್ತ್ರ ಮೀಸಲಾತಿ.

ಆರ್ಥಿಕವಾಗಿ ಮೇಲೆತ್ತಲು ಅನೇಕ ಯೋಜನೆಗಳಿವೆ, ಆರ್ಥಿಕ ಹಿಂದುಳಿದಿರುವಿಕೆಗೆ ಮೀಸಲಾತಿ ಪರಿಹಾರವಲ್ಲ. ಆರ್ಥಿಕ ಹಿಂದುಳಿದ ಸಮುದಾಯಕ್ಕೆ ಸರಕಾರದ ಯೋಜನೆಗಳು ಅಗತ್ಯ, ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಮೀಸಲಾತಿ ಅಸ್ತ್ರಕ್ಕೆ ವ್ಯಂಗ್ಯ ಮಾಡಿದ ತಂಬಿದೊರೈ ಚುನಾವಣೆಗೂ ಮುನ್ನ 15 ಲಕ್ಷ ನೀಡೋದಾಗಿ ಮೋದಿ ಹೇಳಿದ್ದರು. ಪ್ರತಿಯೊಬ್ಬರ ಅಕೌಂಟ್ಗೆ ರೂ. 15 ಲಕ್ಷ ಹಾಕಿದ್ದರೆ ಬಡವರೇ ಇರುತ್ತಿರಲಿಲ್ಲ ಮೀಸಲಾತಿ ಅಗತ್ಯವೂ ಇರುತ್ತಿರಲಿಲ್ಲ, ಎಂದು ಮೂದಲಿಸಿದರು.

ವಿಧೇಯಕ ಅಂಗೀಕಾರವಾದ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ, 8 ಲಕ್ಷದೊಳಗಿನ ವಾರ್ಷಿಕ ಆದಾಯ ಹೊಂದಿರುವ ಜನರಿಗೆ ಇದು ಸಾಕಷ್ಟು ಅನುಕೂಲಕಾರಿ. ಕೋಟ್ಯಂತರ ಯುವಕರು ಈ ನಿರ್ಧಾರದಿಂದ ಲಾಭ ಪಡೆಯಲಿದ್ದಾರೆ. ಎಸ್ಸಿ, ಎಸ್ಟಿ ಹಾಗೂ ಒಬಿಸಿಗಳಿಗೆ ನೀಡಲಾಗಿರುವ ಶೇ. 50 ರಷ್ಟು ಮೀಸಲಾತಿಗೆ ಇದರಿಂದ ಯಾವುದೇ ಅಡ್ಡಿ-ಆತಂಕಗಳಿಲ್ಲ ಎಂದರು.

ಕೊನೆ ಕ್ಷಣದ ಜಾದೂ :
ಆರ್ಥಿಕ ದುರ್ಬಲರಿಗೆ 10 ಪರ್ಸೆಂಟ್‌ ಮೀಸಲು ಕೋಟಾ ಕುರಿತ ವಿಷಯ ಸಂಪುಟ ಸಭೆಯಲ್ಲಿ ಚರ್ಚೆಗೆ ಬರುತ್ತದೆ ಎನ್ನುವುದು ಬಹುತೇಕ ಸಚಿವರಿಗೆ ಗೊತ್ತಿರಲಿಲ್ಲ. ಗೌಪ್ಯತೆ ಕಾಪಾಡಿಕೊಳ್ಳುವ ಸಲುವಾಗಿ ಸೋಮವಾರ ನಡೆದ ಸಚಿವ ಸಂಪುಟ ಸಭೆ ಆರಂಭವಾಗುವ ಕೊನೆ ಕ್ಷಣದವರೆಗೂ ಈ ವಿಷಯವನ್ನು ರಹಸ್ಯವಾಗಿ ಇಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸೋಮವಾರ ನಡೆದ ಸಂಪುಟ ಸಭೆಯಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ ಮೇಲ್ವರ್ಗದವರಿಗೂ ಮೀಸಲಾತಿ ನೀಡುವ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಶೇ.10ರ ಈ ಹೆಚ್ಚುವರಿ ಮೀಸಲಾತಿ ತುಂಬಲು ಈಗಿರುವ ಮೀಸಲು ಪ್ರಮಾಣ ತಗ್ಗಿಸದೆಯೇ ಸಂವಿಧಾನ ತಿದ್ದುಪಡಿ ಮೂಲಕ ಮೀಸಲು ಪ್ರಮಾಣವನ್ನು ಈಗಿರುವ ಶೇ.49.5ರಿಂದ ಶೇ.59.5ಕ್ಕೆ ಏರಿಸಲು ಸರ್ಕಾರ ತೀರ್ಮಾನಿಸಿತ್ತು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin