100ರ ಹೊಸ್ತಿಲಲ್ಲಿ ದಣಿವಿರದ ಹೋರಾಟಗಾರ

ಈ ಸುದ್ದಿಯನ್ನು ಶೇರ್ ಮಾಡಿ

3
-ಕೆ.ಎಸ್.ನಾಗರಾಜ್, ಬೆಂಗಳೂರು
ಸಾಮಾಜಿಕ ನ್ಯಾಯದ ಹೋರಾಟಗಳ ಅಪರಾವತರ, ಎಲ್ಲೂ ರಾಜಿಯಾಗದ ಅಪ್ರತಿಮ ವೀರ, ದಿಟ್ಟ ಹೋರಾಟಗಾರ ಎಚ್.ಎಸ್.ದೊರಸ್ವಾಮಿ ಅವರಿಗೆ ನಾಳೆ (ಏ.10ಕ್ಕೆ) 100ರ ಸಂಭ್ರಮ. ಜನಪರ ಹೋರಾಟ ಮಾಡುತ್ತಲೇ ಸದ್ದಿಲ್ಲದೆ 100 ವಸಂತಗಳನ್ನು ಪೂರೈಸಿದ ಈ `ದೊರೆ’ ಇನ್ನೂ ನೂರ್ಕಾಲ ಬಾಳಲಿ.
ಕೇವಲ ಒಂದು ಶಾಸಕ ಸ್ಥಾನಕ್ಕಾಗಿ ಮೈಮೇಲಿನ ಅಂಗಿಯನ್ನು ಬದಲಾಯಿಸಿದಂತೆ ರಾತ್ರೋರಾತ್ರಿ ಪಕ್ಷಗಳನ್ನು ಬದಲಾಯಿಸುತ್ತ ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಮಾತುಗಳನ್ನಾಡುತ್ತ, ರಾಜಕಾರಣವೆಂದರೆ ಅಧಿಕಾರ, ಅವಕಾಶವಾದ ಎಂಬಂತಹ ಮಾತುಗಳಿಗೆ ಮಾತ್ರ ತಮ್ಮನ್ನು ಸೀಮಿತಗೊಳಿಸಿಕೊಳ್ಳುತ್ತ ಹೇಸಿಗೆ ಬರುವ ರೀತಿಯಲ್ಲಿ ಇರುವವರ ನಡುವೆ ಸಾಮಾಜಿಕ ಕ್ಷೇತ್ರದಲ್ಲಿ ಇಂದಿಗೂ ದಣಿವಿಲ್ಲದೆ ನಿಸ್ವಾರ್ಥದಿಂದ ಬದುಕನ್ನು ನಡೆಸುತ್ತ ಕರ್ನಾಟಕದ ಸಾಕ್ಷೀಪ್ರಜ್ಞೆಯಾಗಿ, ಇತರರಿಗೆ ಮಾದರಿಯಾಗಿ ನಮ್ಮೊಂದಿಗಿರುವವರು, 100 ವರ್ಷ ಸಮೀಪಿಸುತ್ತಿದ್ದರೂ ಎಲ್ಲಿಯೂ, ಎಂದಿಗೂ ರಾಜಿಯಾಗದ ಬಹು ಎತ್ತರದ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರು.

ಹಾರೋಹಳ್ಳಿ ಶ್ರೀನಿವಾಸ ಅಯ್ಯರ್ ದೊರೆಸ್ವಾಮಿ 1918ರ ಏಪ್ರಿಲ್ 10ರಂದು ಜನಿಸಿದರು. ಇವರ ತಾಯಿ ಪಾರ್ವತಮ್ಮ 5ನೆ ವಯಸ್ಸಿನಲ್ಲಿದ್ದಾಗಲೇ ತಂದೆಯನ್ನು ಕಳೆದುಕೊಂಡ ಇವರು ತಾತನ ಆರೈಕೆಯಲ್ಲಿ ತುಂಬು ಕುಟುಂಬದಲ್ಲಿ ಬೆಳೆದವರು. 10ನೆಯ ವಯಸ್ಸಿನಲ್ಲಿಯೇ ಗಾಂಧೀಜಿಯವರ ಮೈ ಅರ್ಲಿ ಲೈಫ್ ಎಂಬ ಪುಸ್ತಕದಿಂದ ಪ್ರಭಾವಿತರಾಗಿದ್ದರು. ವಿವಿ ಪುರಂನಲ್ಲಿ ಹೈಯರ್ ಪ್ರೈಮರಿ ಶಿಕ್ಷಣ ಮುಗಿಸಿ ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದರು. ಇವರ ಅಣ್ಣ ಎಚ್.ಎಸ್.ಸೀತಾರಾಮು, ಸರ್ದಾರ್ ವೆಂಕಟರಾಮಯ್ಯ, ಎ.ಜಿ.ರಾಮಚಂದ್ರರಾಯರು ಹೀಗೆ ಇವರೆಲ್ಲರೂ ಸೇರಿ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು.

1942ರ ಕ್ವಿಟ್ ಇಂಡಿಯ ಚಳವಳಿಯಲ್ಲಿ ಭಾಗವಹಿಸಿ ಸೆರೆಮನೆ ವಾಸವನ್ನು ಅನುಭವಿಸುತ್ತಾರೆ.
ಮೈಸೂರಿನಲ್ಲಿ ನೆಲೆಸಿ ಸಾಹಿತ್ಯ ಮಂದಿರ ಎಂಬ ಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸಿ, ದೇಶದ ಸ್ವಾತಂತ್ರ್ಯ ಹೋರಾಟ, ಸಾಮಾಜಿಕ ಸಮಸ್ಯೆಗಳು, ನಮ್ಮ ಆರ್ಥಿಕ ಸಮಸ್ಯೆಗಳು, ಕೋಮು ಸೌಹಾರ್ದತೆ ಕುರಿತಂತಹ ಕೃತಿಗಳನ್ನು ಪ್ರಕಟಿಸಿದರು. ಇದರೊಂದಿಗೆ ಪೌರವಾಣಿ ಎನ್ನುವ ಪತ್ರಿಕೆಯ ಸಂಪಾದಕರಾಗಿಯೂ ದೊರೆಸ್ವಾಮಿಯವರು ಸೇವೆ ಸಲ್ಲಿಸಿದರು.ಅಖಂಡ ಕರ್ನಾಟಕ ರಚನೆಯ ಹಿನ್ನೆಲೆಯಲ್ಲಿ ನಡೆದ ಏಕೀಕರಣದ ಹೋರಾಟದಲ್ಲಿ ಇವರದು ಪ್ರಮುಖವಾದಂತಹ ಪಾತ್ರ. ಎಚ್.ಎಸ್. ದೊರೆಸ್ವಾಮಿಯವರು ಆಚಾರ್ಯ ವಿನೋಬಾ ಭಾವೆ ನೇತೃತ್ವದಲ್ಲಿ ನಡೆದ ಭೂದಾನ ಚಳವಳಿಯಲ್ಲಿ ತೊಡಗಿಕೊಂಡು ಹಲವಾರು ಕಡೆ ಪಾದಯಾತ್ರೆ ನಡೆಸಿ, ಭೂ ಮಾಲೀಕರ ಮನವೊಲಿಸಿ ಬಡವರಿಗೆ ಭೂಮಿ ದೊರಕಿಸಿಕೊಟ್ಟಿದ್ದಾರೆ.

ಎಚ್.ಎಸ್.ದೊರೆಸ್ವಾಮಿ ಲೋಕನಾಯಕ ಜಯಪ್ರಕಾಶ್ ನಾರಾಯಣ್ ನೇತೃತ್ವದಲ್ಲಿ ನಡೆದ ಎರಡನೆ ಸ್ವಾತಂತ್ರ್ಯ ಸಂಗ್ರಾಮವೆಂದೇ ಬಿಂಬಿಸಲ್ಪಟ್ಟ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಟದಲ್ಲಿ ಪಾಲ್ಗೊಂಡು ನಾಲ್ಕು ತಿಂಗಳ ಸೆರೆಮನೆವಾಸವನ್ನು ಅನುಭವಿಸಿದ್ದಾರೆ.ದೊರೆಸ್ವಾಮಿ ದಣಿವಿಲ್ಲದ ಹೋರಾಟಗಾರ ಎನ್ನುವುದಕ್ಕೆ ಒಂದಲ್ಲ, ಎರಡಲ್ಲ, ಹತ್ತಾರು ಉದಾಹರಣೆಗಳನ್ನು ಕೊಡಬಹುದು. ಹೆಂಡದ ಅಂಗಡಿಗಳನ್ನು ಮುಚ್ಚಿಸಲು ಬೆಂಗಳೂರಿನಲ್ಲಿ ಅವರು ನಡೆಸಿದಂತಹ ಹೋರಾಟಗಳು ಹತ್ತು-ಹಲವಾರು. ದಲಿತರ ಮೇಲೆ ದೌರ್ಜನ್ಯಗಳಾದಾಗ ಸಾಮರಸ್ಯ ಸ್ಥಾಪಿಸುವ ಸಲುವಾಗಿ ಅವರು ಮಾಡಿದ ಕಾರ್ಯಗಳು ಮೆಚ್ಚುವಂಥದ್ದು. ಸಹಕಾರಿ ಧುರೀಣರಾಗಿ ಹನುಮಂತನಗರ ಸಹಕಾರಿ ಬ್ಯಾಂಕ್ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಬಡವರ ಮನೆಯ ಮಕ್ಕಳ ಶಿಕ್ಷಣಕ್ಕಾಗಿ ಹನುಮಂತನಗರದಲ್ಲಿ ಭಾರತ ವಿದ್ಯಾಮಂದಿರ ಶಿಕ್ಷಣ ಸಂಸ್ಥೆ ಸ್ಥಾಪನೆಯಾಗಲು ಕಾರಣಕರ್ತರಾದರು. ದಲಿತರ ಕೇರಿಗಳಲ್ಲಿ ಶಾಲೆಗಳನ್ನು ತೆರೆಸಿದರು. ಸ್ವಚ್ಚತೆಯ ಬದುಕನ್ನು ಅವರಿಗೆ ತಿಳಿಸಿದ್ದಾರೆ.

ಕಾರವಾರದಲ್ಲಿ ಕೈಗಾ ಅಣುಸ್ಥಾವರದ ಸ್ಥಾಪನೆಯ ವಿರುದ್ಧ ಎರಡು ವರ್ಷಗಳ ಕಾಲ ಕಾರವಾರ ಜಿಲ್ಲೆಯ ಮೂಲೆ ಮೂಲೆಗಳಲ್ಲಿ ಸಂಚರಿಸಿ ಜನರಲ್ಲಿ ಕೈಗಾ ಅಣುಸ್ಥಾವರದ ಸ್ಥಾಪನೆಯಿಂದ ಆಗುವಂತಹ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.ಪಿ.ವಿ.ನರಸಿಂಹರಾಯರ ಸರ್ಕಾರ ಡೆಂಕಲ್ ಪ್ರಸ್ತಾವನೆಗೆ ಯಾವುದೇ ರೀತಿಯ ಮಾತುಕತೆಗಳಾಗದೆ, ಲೋಕಸಭೆಯಲ್ಲಿ ಮತ್ತು ರಾಜ್ಯಸಭೆಯಲ್ಲಿ ವಿಷಯ ಚರ್ಚಿಸದೆ, ಅಭಿಪ್ರಾಯ ಪಡೆಯದೆ, ಗ್ಯಾಟ್ ಒಪ್ಪಂದಕ್ಕೆ ಸಹಿ ಹಾಕಿದ್ದು ತಪ್ಪು. ಇದರಿಂದ ನಮ್ಮ ರೈತರ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಕೈಪಿಡಿ ಬರೆದು, ಮುದ್ರಿಸಿ ಹಂಚಿದರು.ಕರ್ನಾಟಕ ರಾಜ್ಯದಲ್ಲಿ ಹಲವಾರು ದಶಕಗಳಿಂದ ಸರ್ಕಾರಿ ಭೂಮಿಯನ್ನು ಕಬಳಿಕೆ ಮಾಡಿದ್ದನ್ನು ವಿರೋಧಿಸುತ್ತಲೇ ಬಂದಿದ್ದಾರೆ.
ಈ ಮಧ್ಯೆ ಬಾಲಸುಬ್ರಹ್ಮಣ್ಯಂರವರು ತಮ್ಮ ವರದಿಯಲ್ಲಿ ರಾಜ್ಯದಲ್ಲಿ ಒಟ್ಟು 4 ಲಕ್ಷ ಎಕರೆ ಸರ್ಕಾರಿ ಜಮೀನು, ಅರಣ್ಯ ಪ್ರದೇಶ, ಗೋಮಾಳ ಕಬಳಿಕೆಯಾಗಿರುವ ವಿಚಾರವನ್ನು ವರದಿಯಲ್ಲಿ ತಿಳಿಸಿದರು.
ಎಚ್.ಎಸ್.ದೊರೆಸ್ವಾಮಿ, ನ್ಯಾ.ಸಂತೋಷ್ ಹೆಗಡೆ, ಮಾಜಿ ಸ್ಪೀಕರ್ ಕೃಷ್ಣ, ಯಲ್ಲಪ್ಪ ರೆಡ್ಡಿ , ಎಸ್.ಕೆ.ಕಾಂತ ಎಲ್ಲರೂ ನಿರಂತರವಾಗಿ ಹೋರಾಟವನ್ನು ಮಾಡಿ ಸರ್ಕಾರದ ಕಣ್ಣುಗಳನ್ನು ತೆರೆಸಿ ಅಂತಿಮವಾಗಿ ಕಬಳಿಕೆಯಾಗಿರುವ ಭೂಮಿಯನ್ನು ಸರ್ಕಾರ ಭೂಗಳ್ಳರಿಂದ ವಶಪಡಿಸಿಕೊಳ್ಳಲು ಬೇಕಾದಂತಹ ಕಾನೂನುಗಳನ್ನು ರೂಪಿಸಲು, ಭೂಮಿ ಹಂಚಿಕೆ ಮಾಡಲು, ವಿಶೇಷ ಜಿಲ್ಲಾಧಿಕಾರಿಗಳವರಿಗೆ ಇದ್ದ ಅಧಿಕಾರ ಮೊಟಕುಗೊಳಿಸುವುದು, ಭೂ ಒತ್ತುವರಿ ಪ್ರಕರಣಗಳಲ್ಲಿ ತನಿಖೆ ನಡೆಸಿ ಮೊಕದ್ದಮೆಗಳನ್ನು ಹೂಡಲು ವಿಶೇಷ ನ್ಯಾಯಾಲಯಗಳ ಸ್ಥಾಪನೆ, ಹೀಗೆ ಹತ್ತು ಹಲವಾರು ರೀತಿಯ ಕಾರ್ಯಗಳು ಅನುಷ್ಠಾನಕ್ಕೆ ಬರಲು ದೊರೆಸ್ವಾಮಿ ನಡೆಸಿದ ಹೋರಾಟ ಬಹು ದೊಡ್ಡದು.

ಇದಕ್ಕಾಗಿ ಇವರು ಭೂಕಬಳಿಕೆ ವಿರುದ್ಧದ ಹೋರಾಟದ ಸಮಿತಿಯನ್ನು ರಚಿಸಿ ಹಲವಾರು ಸಂಘ-ಸಂಸ್ಥೆಗಳು, ಸಾರ್ವಜನಿಕ ವ್ಯಕ್ತಿಗಳನ್ನು, ಹೋರಾಟಗಾರರನ್ನು ಇದರಲ್ಲಿ ವಿಶ್ವಾಸಕ್ಕೆ ತೆಗೆದುಕೊಂಡು ಪುರಭವನದ ಮುಂಭಾಗದಲ್ಲಿ ಸತತವಾಗಿ 39 ದಿನಗಳ ಕಾಲ ನಡೆಸಿದ ಹೋರಾಟ ಒಂದು ದೊಡ್ಡ ಚರಿತ್ರೆಯೇ ಆಗಿದೆ. ದೊರೆಸ್ವಾಮಿರವರು ಕಬಳಿಕೆದಾರರ ವಿರುದ್ಧ ನಡೆಸಿದಂತಹ ಹೋರಾಟದ ಫಲವಾಗಿ ಸುಮಾರು 50 ಸಾವಿರ ಎಕರೆ ಜಮೀನು ಭೂಗಳ್ಳರಿಂದ ಹಿಂಪಡೆದುಕೊಂಡು ಸರ್ಕಾರ ತನ್ನ ಸ್ವಾಧೀನಕ್ಕೆ ಪಡೆದುಕೊಂಡಿದೆ. ಇದರ ಮೌಲ್ಯ ಸಾವಿರಾರು ಕೋಟಿ ರೂ. ಅಣ್ಣಾ ಹಜಾರೆ ನಡೆಸಿದ ಜನಲೋಕಪಾಲ್ ಮಸೂದೆಯ ಒತ್ತಾಯದ ಹೋರಾಟದಲ್ಲೂ ಪ್ರಮುಖವಾಗಿ ಕರ್ನಾಟಕದಲ್ಲಿ ಪಾಲ್ಗೊಂಡಿದ್ದರು. ಸಂತೋಷ್ ಹೆಗಡೆರವರ ಜೊತೆಯಲ್ಲಿ ಇವರೂ ಅನೇಕ ದಿನಗಳ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

ಎಚ್.ಎಸ್.ದೊರೆಸ್ವಾಮಿ ಅವರು ಶತಮಾನವನ್ನು ಸಮೀಪಿಸುತಿದ್ದಾರೆ. ಸ್ವಾತಂತ್ರ್ಯ ಚಳವಳಿಯಿಂದ ಹಿಡಿದು, ಏಕೀಕರಣದ ಹೋರಾಟ, ಮೈಸೂರು ಚಲೋ ಚಳವಳಿ, ತದನಂತರ ಕೇಂದ್ರ ಮತ್ತು ರಾಜ್ಯಗಳಲ್ಲಿ ಬಂದಿರುವ ಸರ್ಕಾರಗಳು ಅದರ ನೇತೃತ್ವ ವಹಿಸಿದ ನಾಯಕರುಗಳು ಮತ್ತು ಸರ್ಕಾರ ಕೈಗೊಂಡಂತಹ ನಿರ್ಧಾರಗಳು, ಇವುಗಳಿಂದ ಜನರ ಮೇಲಾಗಿರುವ ಒಳ್ಳೆಯ ಪರಿಣಾಮಗಳು ಮತ್ತು ಕೆಟ್ಟ ಪರಿಣಾಮಗಳು, ಇವುಗಳ ಬಗ್ಗೆ ಅಧಿಕಾರಯುತವಾಗಿ ಮಾತನಾಡಬಲ್ಲ ಕರ್ನಾಟಕದ ಏಕೈಕ ವ್ಯಕ್ತಿ ದೊರೆಸ್ವಾಮಿಯವರೆಂದರೆ ಅತಿಶಯೋಕ್ತಿಯಲ್ಲ.ಗಾಂಧಿಯವರನ್ನು ಕಂಡ ಇವರು ಅಣ್ಣಾ ಹಜಾರೆ ರವರ ಹೋರಾಟದಲ್ಲಿ ಸಕ್ರಿಯರಾದರು. ಇಂದಿಗೂ ಕಾಡುತ್ತಿರುವ ಬಡತನದ ಸಮಸ್ಯೆ , ಜನರ ಬದುಕನ್ನು ಹಿಂಡುತ್ತಿರುವ ಭ್ರಷ್ಟಾಚಾರದ ಪಿಡುಗು, ಸಮಾಜದಲ್ಲಿ ನಿವಾರಣೆಯಾಗದೇ ಉಳಿದಿರುವ ಅಸ್ಪೃಶ್ಯತೆಯ ವಿಚಾರಗಳಿಗೆ ಸ್ಪಂದಿಸುತ್ತಲೇ ಇದ್ದಾರೆ.

ತಮ್ಮ ಜೀವಿತದ ಅವಧಿಯಲ್ಲಿ ಭೂ ರಹಿತರಿಗೆ ರಾಜ್ಯ ಸರ್ಕಾರ ತನ್ನ ಅಧೀನದಲ್ಲಿರುವ ಸರ್ಕಾರಿ ಜಮೀನುಗಳನ್ನು ಒಂದು ಕುಟುಂಬಕ್ಕೆ ಕನಿಷ್ಠ 2 ಎಕರೆಯ ಲೆಕ್ಕದಲ್ಲಿ ಉಚಿತವಾಗಿ ನೀಡಬೇಕು. ಪ್ರತಿಯೊಬ್ಬರೂ ಭೂ ಮಾಲೀಕರಾಗಬೇಕು ಎಂಬುದು ಇವರ ಪಟ್ಟು.ನಮ್ಮೊಂದಿಗಿರುವ ಬದ್ಧತೆಯ ಸತ್ಯವಂತ ಈ ಹೋರಾಟಗಾರರಿಗೆ ಭಗವಂತ ಮತ್ತಷ್ಟು ಆರೋಗ್ಯ, ಆಯುಷ್ಯ ನೀಡಿ ಕಾಪಾಡಲಿ.ಸಮಾಜ ಸೇವೆ ಮಾಡಲು ಬರುವವರು, ಬಡತನವನು ಅಪ್ಪಿಕೊಳ್ಳಲು ಸಿದ್ಧರಿರಬೇಕು ಎನ್ನುವ ಗಾಂಧೀಜಿ ಮಾತಿನಂತೆ ದೊರೆಸ್ವಾಮಿ ತಮ್ಮ ಬದುಕನ್ನು ಅತ್ಯಂತ ಸರಳವಾಗಿ , ಸಂತೃಪ್ತಿಯಿಂದ ನಡೆಸಿ ಸಂಭ್ರಮದಿಂದ ಹೋರಾಟಗಳಲ್ಲಿ ಇಂದಿಗೂ ಮುಂಚೂಣಿಯಲ್ಲಿದ್ದಾರೆ. ಅವರ ಜೀವನ ಶೈಲಿಯೇ ಆದರ್ಶ ಪ್ರಾಯ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin