100 ಅಡಿ ಎತ್ತರದ ‘ನಮೋ’ಪ್ರತಿಮೆಯ ದೇಗುಲ ನಿರ್ಮಾಣಕ್ಕೆ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

Namo--002

ಲಖನೌ, ಅ.4-ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆಗೆ ಸಾಕ್ಷಿ ಎಂಬಂತೆ ಉತ್ತರಪ್ರದೇಶದ ಮೀರತ್‍ನಲ್ಲಿ ನಮೋ ಅವರ 100 ಅಡಿ ಎತ್ತರದ ಪ್ರತಿಮೆ ದೇಗುಲ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆತಿದೆ. ಮೋದಿ ಹೆಸರಿನಲ್ಲಿ ಅಭಿಮಾನಿಗಳ ಸಂಘ, ಹಚ್ಚೆ ಹಾಕಿಸಿಕೊಳ್ಳುವುದು, ನಮೋ ಮಂತ್ರ ಇತ್ಯಾದಿ ಸಂಗತಿಗಳು ಸುದ್ದಿಯಾಗುತ್ತಿರುವಾಗಲೇ ಮೋದಿ ಮಂದಿರ ನಿರ್ಮಾಣ ವಿಶೇಷ ಗಮನಸೆಳೆದಿದೆ. ಅಲ್ಲದೇ ಪರ-ವಿರೋಧ ಅಭಿಪ್ರಾಯಗಳಿಂದ ವಿವಾದಕ್ಕೂ ಕಾರಣವಾಗಿದೆ. ಈ ದೇವಸ್ಥಾನದ ನಿರ್ಮಾಣ ಹೊಣೆಯನ್ನು ಪ್ರಧಾನಿಯವರ ಪರಮ ಅಭಿಮಾನಿ ಹಾಗೂ ಉತ್ತರಪ್ರದೇಶ ನೀರಾವರಿ ಇಲಾಖೆಯ ನಿವೃತ್ತ ಸಹಾಯಕ ಎಂಜಿನಿಯರ್ ಜೆ.ಪಿ.ಸಿಂಗ್ ಹೊತ್ತಿದ್ದಾರೆ. ಬಹು ಮುತುವರ್ಜಿಯಿಂದ ನಿರ್ಮಾಣ ಕಾರ್ಯದ ಉಸ್ತುವಾರಿ ವಹಿಸಿದ್ದಾರೆ.
ನಮೋ ದೇಗುಲದ ವೈಶಿಷ್ಟ್ಯಗಳೇನು ?
ಮೀರತ್‍ನ ಸರ್ಧಾನ ಪ್ರದೇಶದ ಕರ್ನಾಲ್ ಹೆದ್ದಾರಿ ಬಳಿ ಐದು ಎಕರೆ ವಿಸ್ತೀಣದಲ್ಲಿ ಈ ದೇವಸ್ಥಾನ ನಿರ್ಮಾಣವಾಗುತ್ತಿದೆ. ಇದಕ್ಕೆ ತಗಲುವ ವೆಚ್ಚ 10 ಕೋಟಿ ರೂ.ಗಳು. ತಮ್ಮ ದುಡಿಮೆ, ಸಾರ್ವಜನಿಕ ದೇಣಿಗೆ ಹಾಗೂ ಮೋದಿ ಅಭಿಮಾನಿ ಬಳಗದಿಂದ ಆರ್ಥಿಕ ಸಂಪನ್ಮೂಲ ಸಂಗ್ರಹಿಸುವ ಭರವಸೆಯನ್ನು ಸಿಂಗ್ ವ್ಯಕ್ತಪಡಿಸಿದ್ದಾರೆ.

ಮಂದಿರ ನಿರ್ಮಾಣದ ಶಿಲಾನ್ಯಾಸ ಅ.23ರಂದು ಮುಹೂರ್ತ ನಿಗದಿಯಾಗಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರಿಗೆ ಆಹ್ವಾನ ನೀಡುವುದಾಗಿ ಸಿಂಗ್ ಹೇಳಿದ್ದಾರೆ. ಎರಡು ವರ್ಷಗಳಲ್ಲಿ ಈ ಭವ್ಯ ಮೋದಿ ಮಂದಿರ ತಲೆಎತ್ತಲಿದೆ.  ಪ್ರತಿಪಕ್ಷಗಳ ಟೀಕೆ : ಮೋದಿ ದೇಗುಲಕ್ಕೆ ಭೂಮಿ ಪೂಜೆಗೂ ಮುನ್ನವೇ ಈ ಯೋಜನೆ ಬಗ್ಗೆ ಅಪಸ್ವರಗಳು ಕೇಳಿ ಬಂದಿವೆ. ಕಾಂಗ್ರೆಸ್, ಸಮಾಜವಾದಿ ಪಕ್ಷ ಸೇರಿದಂತೆ ಅನೇಕ ಪಕ್ಷಗಳು ಇದನ್ನು ಟೀಕಿಸಿವೆ. ಅನೇಕ ವಾರ್ತಾವಾಹಿನಿಗಳಲ್ಲಿ ಇದು ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿ ಅಲ್ಲೂ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.

Facebook Comments

Sri Raghav

Admin