ಬ್ರೇಕಿಂಗ್ : ರಾಜ್ಯದಲ್ಲಿ ಇಂದು ಕೊರೋನಾ ಸೆಂಚುರಿ, 2282 ಕ್ಕೆ ಏರಿದ ಸೋಂಕಿತರ ಸಂಖ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 26- ರಾಜ್ಯದಲ್ಲಿ ಕೊರೊನಾ ಕಬಂಧಬಾಹು ಚಾಚುತ್ತಲೇ ಇದೆ. ಇಂದು ಒಂದೇ ದಿನ 100 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 2282ಕ್ಕೆ ಏರಿಕೆಯಾಗಿದೆ.

ಹೊರರಾಜ್ಯದಿಂದ, ಹೊರ ದೇಶಗಳಿಂದ ಬರುತ್ತಿರುವವರು ಕೋವಿಡ್-19ನಿಂದ ಆಸ್ಪತ್ರೆಗೆ ದಾಖಲಾಗುತ್ತಿರುವುದು ಹೆಚ್ಚಾಗುತ್ತಿದ್ದು ಇಂದು ಕಂಡುಬಂದ 100 ಪಾಸಿಟಿವ್ ಪ್ರಕರಣಗಳಲ್ಲಿ 87 ಮಂದಿ ಹೊರರಾಜ್ಯ, ಹೊರದೇಶಗಳಿಂದ ಬಂದವರೇ ಆಗಿದ್ದಾರೆ. ರಾಜ್ಯಕ್ಕೆ ಮಹಾರಾಷ್ಟ್ರವಷ್ಟೇ ಅಲ್ಲ, ತಮಿಳುನಾಡು, ಜಾರ್ಖಂಡ್ ರಾಜ್ಯಗಳ ಕಂಟಕ ಈಗ ಎದುರಾಗಿದೆ.

ಯಾದಗಿರಿಯಲ್ಲಿ ಕಂಡುಬಂದ 18 ಮಂದಿ ಕೊರೊನಾ ಪಾಸಿಟಿವ್ ಪ್ರಕರಣಗಳೆಲ್ಲ ಮಹಾರಾಷ್ಟ್ರದಿಂದ ಹಿಂದಿರುಗಿದವರಾಗಿದ್ದಾರೆ. ಚಿತ್ರದುರ್ಗದಲ್ಲಿ ಕಂಡುಬಂದಿರುವ 20 ಮಂದಿ ತಮಿಳುನಾಡಿನಿಂದ ಹಿಂದಿರುಗಿದವರಾಗಿದ್ದಾರೆ.

ಇನ್ನು ಬೆಳಗಾವಿಯಲ್ಲಿ ಇಂದು ಪತ್ತೆಯಾದ 13 ಮಂದಿ ಕೊರೊನಾ ಸೋಂಕಿತರು ಎಲ್ಲರೂ ಜಾರ್ಖಂಡ್ ರಾಜ್ಯದಿಂದ ಬಂದಿದ್ದಾರೆ. 100 ಮಂದಿ ಕೊರೊನಾ ಸೋಂಕಿತರಲ್ಲಿ 46 ಮಂದಿ ಮಹಾರಾಷ್ಟ್ರದಿಂದ ವಾಪಸಾದವರಾಗಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವುದು ವಿಶೇಷವಾಗಿದೆ. ಇಂದು ಎರಡು ಪಾಸಿಟಿವ್ ಪ್ರಕರಣಗಳು ಮಾತ್ರ ಪತ್ತೆಯಾಗಿವೆ.

ನಿನ್ನೆ ಸಂಜೆ 5 ಗಂಟೆಯಿಂದ ಇಂದು ಬೆಳಗ್ಗೆ 12 ಗಂಟೆವರೆಗೆ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಚಿತ್ರದುರ್ಗ 20, ಹಾಸನ 13, ಬೆಳಗಾವಿ 13, ದಾವಣಗೆರೆ 11, ಬೀದರ್ 10, ಯಾದಗಿರಿ 14, ಉಡುಪಿ 3, ಬೆಳಗಾವಿ 3, ವಿಜಯಪುರ 5, ಕೊಪ್ಪಳ 1, ಚಿಕ್ಕಬಳ್ಳಾಪುರ 1, ಬಾಗಲಕೋಟೆ 1, ಬಳ್ಳಾರಿ 1, ಕೋಲಾರ 2, ದಕ್ಷಿಣ ಕನ್ನಡ 3, ಬೆಂಗಳೂರು ನಗರ 1, ಬೆಂಗಳೂರು ನಗರ 2 ಸೇರಿದಂತೆ ಒಟ್ಟು 100 ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 2282ಕ್ಕೆ ಏರಿಕೆಯಾಗಿದೆ.

ಸೋಂಕಿನಿಂದ 44 ಜನ ಮೃತಪಟ್ಟಿದ್ದಾರೆ. 722 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 1514 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಳಗಾವಿಯಲ್ಲಿ 14, ಕಲಬುರಗಿ 1, ಉತ್ತರ ಕನ್ನಡ, 1 ಚಿಕ್ಕಬಳ್ಳಾಪುರ 1 ಸೇರಿದಂತೆ ಇಂದು ಒಂದೇ ದಿನ 17 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಕೋಲಾರದಲ್ಲಿ 9 ವರ್ಷದ ಬಾಲಕ ಹಾಗೂ 28 ವರ್ಷದ ವ್ಯಕ್ತಿಗೆ ರೋಗಿ ನಂ.1946ರ ಸಂಪರ್ಕದಿಂದ ಸೋಂಕು ತಗುಲಿದೆ. ಯಾದಗಿರಿಯಲ್ಲಿ 6 ವರ್ಷದ ಬಾಲಕ ಸೇರಿದಂತೆ 14 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದ್ದು, ಎಲ್ಲರೂ ಕೂಡ ಮಹಾರಾಷ್ಟ್ರದಿಂದ ಹಿಂದಿರುಗಿದವರೇ ಆಗಿದ್ದಾರೆ. ಎಲ್ಲರನ್ನೂ ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಾಸನದಲ್ಲಿ 13 ಮಂದಿಗೆ ಮತ್ತೆ ಕೊರೊನಾ ಪಾಸಿಟಿವ್ ಕಂಡುಬಂದಿದ್ದು, ಈ ಎಲ್ಲರೂ ಕೂಡ ಮಹಾರಾಷ್ಟ್ರ ರಾಜ್ಯದಿಂದ ವಾಪಸಾದವರಾಗಿದ್ದಾರೆ. ಎಲ್ಲರನ್ನೂ ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ.

ದಾವಣಗೆರೆಯಲ್ಲಿ 11 ಮಂದಿಗೆ ಸೋಂಕು ಕಂಡುಬಂದಿದ್ದು, ಇಬ್ಬರು ರೋಗಿ ಸಂಖ್ಯೆ 993ರಿಂದ ಸೋಂಕು ಅಂಟಿಸಿಕೊಂಡಿದ್ದಾರೆ. ಒಬ್ಬರು ಗುಜರಾತ್ ರಾಜ್ಯದಿಂದ ಹಿಂದಿರುಗಿದವರಾಗಿದ್ದಾರೆ. ಮತ್ತೊಬ್ಬರು ರೋಗಿ ಸಂಖ್ಯೆ 627ರ ಸಂಪರ್ಕದಿಂದ ರೋಗ ತಗುಲಿಸಿಕೊಂಡಿದ್ದಾರೆ.

ಮತ್ತಿಬ್ಬರಿಗೆ 1378ರ ರೋಗಿ ಸಂಪರ್ಕದಿಂದ ಸೋಂಕು ತಗುಲಿದೆ.  55 ವರ್ಷದ ಮಹಿಳೆಯನ್ನು ತೀವ್ರ ಜ್ವರದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. 28 ವರ್ಷದ ಮಹಿಳೆಗೆ 933ರ ಸಂಪರ್ಕದಿಂದ ಸೋಂಕು ಬಂದಿದೆ.

47 ವರ್ಷದ ಮಹಿಳೆಗೆ ತೀವ್ರ ಉಸಿರಾಟದ ತೊಂದರೆಯಿಂದ ಸೋಂಕು ತಗುಲಿದ್ದು, ಇವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಾವಿಯಲ್ಲಿ 13 ಮಂದಿಗೆ ತಗುಲಿರುವ ಸೋಂಕು ಜಾರ್ಖಂಡ್ ಸಂಪರ್ಕದಿಂದ ಬಂದಿದೆ. ಈ ಎಲ್ಲರನ್ನೂ ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೀದರ್‍ನಲ್ಲಿ 10 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಎಲ್ಲರೂ ಮಹಾರಾಷ್ಟ್ರ ರಾಜ್ಯದಿಂದ ಹಿಂದಿರುಗಿದವರಾಗಿದ್ದಾರೆ. ಈ ಎಲ್ಲರೂ ಒಂದೇ ಕುಟುಂಬದವರು ಎಂದು ಹೇಳಲಾಗಿದೆ. ಎಲ್ಲರನ್ನೂ ಬೀದರ್‍ನ ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ.

ಖತಾರ್‍ನಿಂದ ಹಿಂದಿರುಗಿದ 30 ವರ್ಷದ ದಕ್ಷಿಣ ಕನ್ನಡ ಮೂಲದ ಮೂವರು ಹಾಗೂ ಬಾಗಲಕೋಟೆಯ ಒಬ್ಬರಿಗೆ ಕೊರೊನಾ ಸೋಂಕು ತಗುಲಿದ್ದು, ನಾಲ್ವರನ್ನು ಬೆಂಗಳೂರಿನ ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊರೊನಾ ಸೋಂಕಿತ ವಿಜಯಪುರದ 5 ಮಂದಿ ಮಹಾರಾಷ್ಟ್ರದಿಂದ ಹಿಂದಿರುಗಿದವರಾಗಿದ್ದು, ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಡುಪಿ, ಚಿಕ್ಕಬಳ್ಳಾಪುರದ ಸೋಂಕಿತರು ಕೂಡ ಮಹಾರಾಷ್ಟ್ರದಿಂದ ಹಿಂದಿರುಗಿದವರಾಗಿದ್ದಾರೆ.

ಚಿತ್ರದುರ್ಗದಲ್ಲಿ ಇಂದು 20 ಮಂದಿಗೆ ಸೋಂಕು ಕಂಡುಬಂದಿದ್ದು, ಎಲ್ಲರೂ ತಮಿಳುನಾಡಿನಿಂದ ಹಿಂದಿರುಗಿದವರಾಗಿದ್ದಾರೆ. ಎಲ್ಲರನ್ನೂ ಚಿತ್ರದುರ್ಗದ ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಳ್ಳಾರಿಯಲ್ಲಿ ಒಬ್ಬರಿಗೆ ಕೊರೊನಾ ಸೋಂಕು ಕಂಡುಬಂದಿದ್ದು, ಸಂಪರ್ಕ ಪತ್ತೆಹಚ್ಚಲಾಗುತ್ತಿದೆ.  ಬೆಂಗಳೂರು ನಗರದ 33 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಂಡುಬಂದಿದ್ದು, ಸಂಪರ್ಕ ಪತ್ತೆಹಚ್ಚಲಾಗುತ್ತಿದೆ. 65 ವರ್ಷದ ವೃದ್ಧೆ ತಮಿಳುನಾಡಿನಿಂದ ಬಂದಿದ್ದಾರೆ.

Facebook Comments

Sri Raghav

Admin