1000 ಪೌರ ಕಾರ್ಮಿಕರಿಗೆ ಸಿಂಗಾಪೂರ್ ಪ್ರವಾಸ..!

ಈ ಸುದ್ದಿಯನ್ನು ಶೇರ್ ಮಾಡಿ

Singapur--01

ಬೆಂಗಳೂರು, ಜೂ.24- ಮ್ಯಾನ್‍ವೊಲ್ ಸ್ವಚ್ಛ ಗೊಳಿಸುವಾಗ ಆಗುವ ಅನಾಹುತ ತಪ್ಪಿಸಲು 1 ಸಾವಿರ ಪೌರಕಾರ್ಮಿಕರನ್ನು ಅಧ್ಯಯನಕ್ಕಾಗಿ ವಿದೇಶಿ ಪ್ರವಾಸಕ್ಕೆ ಕಳುಹಿಸಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಿಳಿಸಿದರು. ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮ್ಯಾನ್‍ಹೋಲನ್ನು ಸ್ವಚ್ಛಗೊಳಿಸುವಾಗ ಅನುಸರಿಸಬೇಕಾದ ವೈಜ್ಞಾನಿಕ ಕ್ರಮಗಳ ಬಗ್ಗೆ ದೇಶ-ವಿದೇಶಗಳಲ್ಲಿ ಬಳಸುತ್ತಿರುವ ವಿಧಾನಗಳನ್ನು ನಮ್ಮ ಪೌರಕಾರ್ಮಿಕರು ತಿಳಿದುಕೊಳ್ಳಬೇಕಿದೆ. ಅದಕ್ಕಾಗಿ ಅಮೆರಿಕಾ, ಚೀನಾ ದೇಶಗಳಲ್ಲಿನ ಅಧ್ಯಯನ ಪ್ರವಾಸಕ್ಕೆ ಪ್ರಯತ್ನಿಸಲಾಯಿತು. ಅಲ್ಲಿನ ಸರ್ಕಾರಗಳು ಇಂತಹದ್ದಕ್ಕೆಲ್ಲಾ ಅವಕಾಶ ಕೊಡುವುದಿಲ್ಲ ಎಂದು ಹೇಳಿವೆ.

ಕೊನೆಗೆ ಸಿಂಗಾಪುರ ಸರ್ಕಾರ ಒಪ್ಪಿಕೊಂಡಿದೆ. ಜುಲೈ ತಿಂಗಳಲ್ಲಿ ಬರುವಂತೆ ಸೂಚನೆ ನೀಡಿದೆ. ಮೊದಲಹಂತದಲ್ಲಿ ತಲಾ 10 ಮಂದಿಯನ್ನೊಳಗೊಂಡ 7 ತಂಡಗಳನ್ನು ಪ್ರವಾಸಕ್ಕೆ ಕಳುಹಿಸಲಾಗುವುದು. 30 ಜಿಲ್ಲೆಗಳಿಂದಲೂ ವಿದೇಶಿ ಪ್ರವಾಸಕ್ಕೆ ಪೌರಕಾರ್ಮಿಕರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂದರು.

ಸ್ಥಳೀಯ ಪುರಸಭೆ, ಪಟ್ಟಣ ಪಂಚಾಯ್ತಿಗಳು ಕಾರ್ಮಿಕರ ಕೆಲಸವನ್ನು ಗುರುತಿಸಿ ಜಿಲ್ಲೆಯಿಂದ ಸುಮಾರು 30ರಿಂದ 40 ಮಂದಿ ಪೌರಕಾರ್ಮಿಕರನ್ನು ಅಧ್ಯಯನ ಪ್ರವಾಸಕ್ಕೆ ಆಯ್ಕೆ ಮಾಡಲಿದೆ. ಸರ್ಕಾರ ಸ್ವಂತ ಖರ್ಚಿನಲ್ಲಿ ವಿದೇಶ ಪ್ರವಾಸಕ್ಕೆ ಕಳುಹಿಸಲಿದೆ. ನಮಗೆ ಯಾವುದೇ ಹಣಕಾಸಿನ ಕೊರತೆ ಇಲ್ಲ ಎಂದು ತಿಳಿಸಿದರು.

ಹಸಿವು, ಹಣ, ಬಡತನದ ಕಾರಣಗಳಿಂದಾಗಿ ಅಪಾಯದ ಅರಿವಿದ್ದರೂ ಮ್ಯಾನ್‍ಹೋಲ್‍ಗೆ ಇಳಿದು ಪೌರಕಾರ್ಮಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮ್ಯಾನ್‍ಹೋಲ್‍ನ ಮುಚ್ಚಳ ಹೇಗೆ ತೆಗೆಯಬೇಕು, ಯಂತ್ರಗಳನ್ನು ಹೇಗೆ ಬಳಸಬೇಕು, ಅಪಾಯದಿಂದ ಹೇಗೆ ಪಾರಾಗಬೇಕು ಎಂಬೆಲ್ಲ ಅಂಶಗಳನ್ನು ವಿದೇಶಿ ಪ್ರವಾಸದ ವೇಳೆ ಪೌರಕಾರ್ಮಿಕರು ಕಲಿತುಕೊಳ್ಳಲಿದ್ದಾರೆ.

ಪ್ರತಿಯೊಬ್ಬರ ಪ್ರವಾಸಕ್ಕೆ ಸುಮಾರು ಒಂದು ಲಕ್ಷ ವೆಚ್ಚವಾಗಲಿದ್ದು, ಒಟ್ಟು 10ಕೋಟಿ ವೆಚ್ಚ ಮಾಡಲು ಸರ್ಕಾರ ಸಿದ್ಧವಿದೆ. ಪೌರಕಾರ್ಮಿಕರ ಪ್ರಾಣ ರಕ್ಷಣೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಯನ ಪ್ರವಾಸ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಎಂದು ಆಂಜನೇಯ ಹೇಳಿದರು.

ಸಿದ್ದರಾಮಯ್ಯ ರಾಮನಿದ್ದಂತೆ ನಾನು ಆಂಜನೇಯ:

ಬಳ್ಳಾರಿಯಲ್ಲಿ ಭೀಮನಂತೆ ಮಾತನಾಡಿದ ಸಿದ್ದರಾಮಯ್ಯ ಈಗ ದುಶ್ಯಾಸನಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಪಕ್ಷ ತೊರೆದ ಮಾಜಿ ಸಂಸದ ಎಚ್.ವಿಶ್ವನಾಥ್ ಅವರ ಟೀಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಎಚ್.ಆಂಜನೇಯ ಹೇಳಿದರು.  ಪಕ್ಷ ಬಿಟ್ಟು ಹೋಗುವಾಗ ಈ ರೀತಿ ಮಾತನಾಡುವುದು ಸಹಜ. ಅವರ ಟೀಕೆಗೆ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸುತ್ತಿಲ್ಲ, ನಾವೂ ಪ್ರತಿಕ್ರಿಯಿಸುವುದಿಲ್ಲ. ಸಿದ್ದರಾಮಯ್ಯ ಭೀಮಾರ್ಜುನರಿದ್ದಂತೆ. ಕಾಂಗ್ರೆಸ್ ಹೈಕಮಾಂಡ್ ಅವರಿಗೆ ಸಂಪೂರ್ಣ ಶಕ್ತಿ ತುಂಬಿದೆ.

ಕೆಪಿಸಿಸಿ ಅಧ್ಯಕ್ಷರು ಸೇರಿದಂತೆ ನಾವೆಲ್ಲ ಸಾಮೂಹಿಕವಾಗಿ ಸಿಎಂಗೆ ಬೆಂಬಲ ನೀಡುತ್ತಿದ್ದೇವೆ. ಮುಂದಿನ ಚುನಾವಣೆ ಮುಖ್ಯಮಂತ್ರಿಗಳ ನೇತೃತ್ವದಲ್ಲೇ ನಡೆದು ಕರ್ನಾಟಕದಲ್ಲಿ ಬಡವರ ಪರ ಸರ್ಕಾರವನ್ನು ಮರು ಸ್ಥಾಪಿಸುವುದು ನಮ್ಮ ಗುರಿ. ಮಕ್ಕಳಿಗೆ ಸಿದ್ದರಾಮಯ್ಯ ಸರ್ಕಾರ ಹಾಲು ವಿತರಣೆ ಮಾಡಿ ಒಳ್ಳೆಯ ಕೆಲಸ ಮಾಡಿದ್ದಾರೆ. ಬೊಬ್ಬೆ ಹೊಡೆಯುತ್ತಿರುವ ಬಿಜೆಪಿ ಎಲ್ಲೆಲ್ಲಿ ಆಡಳಿತ ನಡೆಸುತ್ತಿದೆಯೋ ಅಲ್ಲಲ್ಲಿ ಸಾಲ ಮನ್ನಾ ಮಾಡಿಲ್ಲ. ಆದರೆ, ಸಿದ್ದರಾಮಯ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ ಎಂದು ಹೇಳಿದರು.  ಸಿದ್ದರಾಮಯ್ಯ ಭೀಮಾರ್ಜುನರಾದರೆ ನೀವೇನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆಂಜನೇಯ, ಅವರು ರಾಮನಾದರೆ ನಾನು ಆಂಜನೇಯ ಎಂದು ಉತ್ತರಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin