14,000 ಅಡಿ ಎತ್ತರದಿಂದ ಸ್ಕೈ ಡೈವಿಂಗ್ ಮಾಡಿದ 102ರ ವಯೋವೃದ್ಧೆ..!

ಈ ಸುದ್ದಿಯನ್ನು ಶೇರ್ ಮಾಡಿ

Skydiving

ಸಾಹಸಕ್ಕೆ ವಯೋಮಾನ ಅಡ್ಡಿಯಾಗದು. ಶತಾಯುಷ್ಯ ದಲ್ಲೂ ರೋಚಕ ಸಾಹಸ ಸಾಧ್ಯ ಎಂಬುದನ್ನು ಆಸ್ಟ್ರೇಲಿಯಾದ ಅಜ್ಜಿಯೊಬ್ಬರು ಸಾಧಿಸಿ ಸಾಬೀತು ಮಾಡಿದ್ದಾರೆ. ಇಷ್ಟಕ್ಕೂ ಈ ವಯೋವೃದ್ಧೆ ಮಾಡಿದ ಮೈನವಿರೇಳಿಸುವ ಸಾಹಸವಾದರೂ ಏನು..? ಕುತೂಹಲವೇ..? ನೀವೇ ನೋಡಿ!
ಇವರ ಹೆಸರು ಇರೆನ್ ಓಶಿಯಾ, ವಯಸ್ಸು :102 ವರ್ಷಗಳು. ಆಸ್ಟ್ರೇಲಿಯಾದ ಈ ಹಿರಿಯ ಜೀವ ಸ್ಕೈ ಡೇವಿಂಗ್ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಇಂಥ ಸಾಹಸ ಮಾಡಿದ ವಿಶ್ವದ ಅತ್ಯಂತ ವಯೋವೃದ್ಧೆ ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ. ಇರೆನ್ ಅವರ ಈ ಸಾಧನೆ ಕಂಡು ಉತ್ಸಾಹಿ ಯುವಕ-ಯುವತಿಯರೇ ನಾಚುವಂತಾಗಿದೆ. ಸಮುದ್ರ ಮಟ್ಟದಿಂದ 14,000 ಅಡಿಗಳ ಮೇಲಿಂದ ವಿಮಾನದ ಮೂಲಕ ಸಹಾಯಕರೊಂದಿಗೆ ಇರೆನ್ ಸ್ಕೈ ಡೈವ್ ಮಾಡಿದರು. ಈ ಮಹಾ ಸಾಹಸದ ಹಿಂದೆ ಸಾರ್ಥಕ ಉದ್ದೇಶವೂ ಇತ್ತು.

ಮೋಟಾರ್ ನ್ಯೂರೊನ್ ಎಂಬ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಹಣ ಸಂಗ್ರಹಿಸುವುದು ಈ ಶತಾಯುಷಿಯ ಉದಾತ್ತ ಧ್ಯೇಯವಾಗಿತ್ತು. ಕೆಲವು ವರ್ಷಗಳ ಹಿಂದೆ ಈ ರೋಗಕ್ಕೆ ಇವರ ಮಗಳು ಬಲಿಯಾಗಿದ್ದರು. ಇದು ಇರೆನ್ ಅವರ ಮೂರನೇ ಸ್ಕೈ ಡೈವಿಂಗ್. ತಮ್ಮ 100ನೇ ವರ್ಷದ ಜನ್ಮದಿನದಂದು ಅವರು ಇದೇ ಸಾಹಸ ಮಾಡಿದ್ದರು. ಕಳೆದ ವರ್ಷವೂ ಸಹ ಇದೇ ಸದುದ್ದೇಶಕ್ಕಾಗಿ ಬಾನಿನಿಂದ ಭುವಿಗೆ ಹಾರಿದ್ದರು.

ತೈವಾನ್‍ನ ವು ರುಯಿ- ಲಿನ್. ಎಂಬ 93 ವರ್ಷದ ಅಜ್ಜಿ ಇತ್ತೀಚೆಗೆ ಪ್ಯಾರಾ ಗ್ಲೈಡಿಂಗ್ ಮಾಡಿ ಎಲ್ಲರ ಗಮನ ಸೆಳೆದಿದ್ದರು. ಪ್ಯಾರಾ ಗ್ಲೈಡಿಂಗ್ ಮಾಡಿದ ತೈವಾನ್‍ನ ಅತ್ಯಂತ ಹಿರಿಯ ಉತ್ಸಾಹಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

Facebook Comments