11 ಕೆಜಿ ಚಿನ್ನದ ಗಟ್ಟಿಗಳನ್ನು ಕದ್ದು ಪರಾರಿಯಾಗಿದ್ದ ಆರೋಪಿ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.16-ತಾನು ಕೆಲಸಕ್ಕಿದ್ದ ಅಂಗಡಿಯಿಂದಲೇ 11 ಕೆಜಿ 200 ಗ್ರಾಂ ತೂಕದ ಚಿನ್ನದ ಗಟ್ಟಿಗಳನ್ನು ಕಳ್ಳತನ ಮಾಡಿ ಮಹಾರಾಷ್ಟ್ರಕ್ಕೆ ಪರಾರಿಯಾಗಿದ್ದ ಆರೋಪಿಯನ್ನು ವಿಲ್ಸನ್‍ಗಾರ್ಡನ್ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೂಲತಃ ಮಹಾರಾಷ್ಟ್ರದ ಸ್ವಪ್ನೀಲ್ ಘಾಡ್ಗೆ (19) ಬಂತ ಆರೋಪಿ. ಈತನಿಂದ 4.58 ಕೋಟಿ ರೂ. ಮೌಲ್ಯದ 11 ಕೆಜಿ 200 ಗ್ರಾಂ ಚಿನ್ನದ ಗಟ್ಟಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಹಲಸೂರು ಗೇಟ್‍ನಲ್ಲಿರುವ ನಗರತ್‍ಪೇಟೆಯ ಕೆಂಪಣ್ಣಲೇನ್‍ನಲ್ಲಿ ಹಳೆ ಚಿನ್ನವನ್ನು ಕರಗಿಸಿ ಚಿನ್ನದ ಗಟ್ಟಿ ಹಾಗೂ ಆಭರಣ ತಯಾರು ಮಾಡುವ ಅಂಗಡಿಯಿದೆ. ಈ ಅಂಗಡಿಯಲ್ಲಿ ಸ್ವಪ್ನೀಲ್ ಘಾಡ್ಗೆ ಕೆಲಸ ಮಾಡುತ್ತಿದ್ದನು. ಅಂಗಡಿ ಸಮೀಪದಲ್ಲೇ ರೂಮ್ ಮಾಡಿಕೊಂಡು ಈತ ನೆಲೆಸಿದ್ದನು. ಆರೋಪಿ 12ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದು, ಮೊದಲು ಹೈದರಾಬಾದ್‍ನಲ್ಲಿ ಚಿನ್ನ ಕರಗಿಸುವ ಕೆಲಸ ಮಾಡುತ್ತಿದ್ದನು.

ಕೊರೊನಾ ಕಾರಣದಿಂದಾಗಿ ಕಳೆದ ನವೆಂಬರ್‍ನಲ್ಲಿ ತನ್ನ ಊರು ಮಹಾರಾಷ್ಟ್ರಕ್ಕೆ ಹೋಗಿದ್ದ ಈತ ಮತ್ತೆ ಕೆಲಸ ಹರಿಸಿಕೊಂಡು ಮೂರು ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದಾನೆ. ಸ್ನೇಹಿತ ದಿಗಂಬರನ ಪರಿಚಯದಿಂದಾಗಿ ಇವರ ಅಂಗಡಿಯಲ್ಲಿ ಚಿನ್ನದ ಆಭರಣಗಳನ್ನು ಕರಗಿಸಿ ಗಟ್ಟಿ ಮಾಡುವ ಕೆಲಸ ಮಾಡಿಕೊಂಡಿದ್ದು, ಜೀವನದಲ್ಲಿ ಏನಾದರೂ ಮಾಡಿ ಬೇಗ ಶ್ರೀಮಂತನಾಗುವ ದುರಾಸೆಯಿಂದ ಚಿನ್ನದ ಗಟ್ಟಿಗಳನ್ನು ಕಳ್ಳತನ ಮಾಡಲು ನಿರ್ಧರಿಸಿದ್ದನು.

ಅದರಂತೆ ಜ.30ರಂದು ಈತ ಅಂಗಡಿಗೆ ಬಂದು 11 ಕೆಜಿ 200 ಗ್ರಾಂ ಚಿನ್ನದ ಗಟ್ಟಿಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದನು. ಮಾಲೀಕ ಸಿದ್ದೇಶ್ವರ್ ಹರಿಭಾ ಸಿಂಧೆ ಅವರು ವಿಷಯ ತಿಳಿದು ವಿಲ್ಸನ್‍ಗಾರ್ಡನ್ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.

ಆರೋಪಿ ಪತ್ತೆಗಾಗಿ ಇನ್‍ಸ್ಪೆಕ್ಟರ್ ಶಂಕರಾಚಾರ್ ಅವರ ನೇತೃತ್ವದಲ್ಲಿ ಎರಡು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಈ ತಂಡಗಳು ವಿವಿಧ ಜಿಲ್ಲೆ, ರಾಜ್ಯಗಳಿಗೆ ತೆರಳಿ ಶೋಧ ನಡೆಸುತ್ತಿದ್ದವು. ಈತ ಮಹಾರಾಷ್ಟ್ರದಲ್ಲಿರುವ ಬಗ್ಗೆ ಮಾಹಿತಿ ತಿಳಿದು, ಒಂದು ತಂಡ ಅಲ್ಲಿಗೆ ತೆರಳಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಆರೋಪಿಯನ್ನು ತೀವ್ರ ವಿಚಾರಣೆಗೊಳಪಡಿಸಿ ಮಹಾರಾಷ್ಟ್ರದ ಚಿನ್ನದಂಗಡಿಯಲ್ಲಿ ಇಟ್ಟಿದ್ದ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಸಿ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿರುವ ವಿಲ್ಸನ್‍ಗಾರ್ಡನ್ ಠಾಣೆ ಪೊಲೀಸರ ಕಾರ್ಯವನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ.

Facebook Comments