ರಾಜ್ಯದಲ್ಲಿ ಇಂದು 11 ಮಂದಿಗೆ ಕೊರೋನಾ ಪಾಸಿಟಿವ್, ಸೋಂಕಿತರ ಸಂಖ್ಯೆ 535ಕ್ಕೆ ಏರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಗ್ರೀನ್ ಜೋನ್ ನಲ್ಲಿದ್ದ ದಾವಣಗೆರೆಯಲ್ಲಿ ಮಹಿಳೆ ಸೇರಿದಂತೆ ಬುಧವಾರ ರಾಜ್ಯದಲ್ಲಿ11 ಮಂದಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 535ಕ್ಕೆ ಏರಿಕೆಯಾಗಿದೆ. ಕಳೆದ ನಾಲ್ಕು ದಿನಗಳಲ್ಲಿ ಕರ್ನಾಟಕದಲ್ಲಿ ಕೇವಲ 34 (ಭಾನುವಾರ 3, ಸೋಮವಾರ 8, ಮಂಗಳವಾರ 11) ಪ್ರಕರಣಗಳು ಪತ್ತೆಯಾಗಿದ್ದು, ಕೋವಿಡ್‌-19 ಅಬ್ಬರ ತಣ್ಣಗಾದಂತೆ ಕಾಣಿಸುತ್ತಿದೆ.

ಕೊರೊನಾದಿಂದ ತುಮಕೂರಿನಲ್ಲಿ 73 ವರ್ಷದ ವೃದ್ಧರೊಬ್ಬರು (ಪಿ-535) ಏಪ್ರಿಲ್‌ 26 ರಂದು ಸಾವನ್ನಪ್ಪಿದ್ದರು. ಇವರಿಗೆ ಸೋಂಕು ಇರುವುದು ಬುಧವಾರ ಸಂಜೆ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಅಸುನೀಗಿದವರ ಸಂಖ್ಯೆ 21ಕ್ಕೆ ಏರಿದೆ.

ಹೊಸದಾಗಿ ವರದಿಯಾಗಿರುವ 12 ಪ್ರಕರಣಗಳಲ್ಲಿ 8 ಕಲಬುರಗಿ ಜಿಲ್ಲೆಗೆ ಸೇರಿದ್ದರೆ, ತಲಾ ಒಂದು ಪ್ರಕರಣ ಬೆಳಗಾವಿ, ದಾವಣಗೆರೆ, ತುಮಕೂರು ಮತ್ತು ಮೈಸೂರಿನ ನಂಜನಗೂಡಿನಿಂದ ವರದಿಯಾಗಿದೆ.

ಕಲಬುರಗಿಯಲ್ಲಿ ರೋಗಿ ನಂಬರ್ 425ರ ಮಹಿಳೆಯಿಂದ ನಾಲ್ವರಿಗೆ ಕೊರೊನಾ ಹಬ್ಬಿದ್ದು, ಜಿಲ್ಲೆಯಲ್ಲಿ ಒಟ್ಟು 8 ಮಂದಿಗೆ ಹಾಗೂ ಬೆಳಗಾವಿಯಲ್ಲಿ 12 ವರ್ಷದ ಬಾಲಕ, ಮೈಸೂರು ಮತ್ತು ದಾವಣಗೆರೆಯಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿರುವ ಬಗ್ಗೆ ವರದಿಯಾಗಿದೆ.

ಬೆಳಗಾವಿಯಲ್ಲೂ 12 ವರ್ಷ ಬಾಲಕನಲ್ಲಿ ಕೋವಿಡ್‌-19 ಸೋಂಕು ಕಾಣಿಸಿಕೊಂಡಿದೆ. ವಿಶೇಷವೆಂದರೆ ಬರೋಬ್ಬರಿ 34 ದಿನಗಳ ಬಳಿಕ ದಾವಣಗೆರೆಯ ನರ್ಸ್ ಒಬ್ಬರಿಗೆ ಕೊರೊನಾ ಪಾಸಿಟಿವ್‌ ಬಂದಿದೆ.

# 297 ಸಕ್ರಿಯ ಪ್ರಕರಣ :
ಬುಧವಾರ ಒಟ್ಟು 9 ಜನರು ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಹೀಗಾಗಿ ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಸ್ವಲ್ಪ ಮಟ್ಟಿಗೆ ಏರಿಕೆಯಾಗಿದ್ದು 297ಕ್ಕೆ ತಲುಪಿದೆ. ಇವರಲ್ಲಿ 290 ರೋಗಿಗಳ ಆರೋಗ್ಯ ಸ್ಥಿರವಾಗಿದೆ. ಏಳು ರೋಗಿಗಳಿಗೆ ವಿಶೇಷ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ಸಕ್ರಿಯ ಪ್ರಕರಣಗಳ ಪೈಕಿ ಬೆಂಗಳೂರು ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಬೆಳಗಾವಿ ಇದೆ. ಮೂರನೇ ಸ್ಥಾನಕ್ಕೆ ಕಲಬುರಗಿ ಮತ್ತು ನಾಲ್ಕನೇ ಸ್ಥಾನಕ್ಕೆ ವಿಜಯಪುರ ಜಿಲ್ಲೆಗಳು ಬಡ್ತಿ ಪಡೆದಿವೆ. ಮೈಸೂರು ಐದನೇ ಸ್ಥಾನಕ್ಕೆ ಜಾರಿದೆ. ಕಾರಣ ಜಿಲ್ಲೆಯಲ್ಲಿ ಹೆಚ್ಚಿನ ಸೋಂಕಿತರು ಚೇತರಿಸಿಕೊಂಡಿದ್ದಾರೆ.

# ರಾಜ್ಯದಲ್ಲಿ ಸೋಂಕಿಗೆ 21ನೇ ಬಲಿ :
ಬುಧವಾರ ಸಂಜೆಯ ಆರೋಗ್ಯ ಇಲಾಖೆ ಬುಲೆಟಿನ್‌ ಬಿಡುಗಡೆಯಾದ ನಂತರ ತುಮಕೂರಿನಲ್ಲಿ ಏಪ್ರಿಲ್‌; 26ರಂದೇ ಸಾವನ್ನಪ್ಪಿದ್ದ 73 ವರ್ಷದ ವ್ಯಕ್ತಿಯೊಬ್ಬರಿಗೆ (ಪಿ-535) ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಇವರು ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಜೊತೆಗೆ ಅಸ್ತಮಾ, ಡಯಾಬಿಟಿಸ್‌, ಸಿಒಪಿಡಿ ಕಾಯಿಲೆಯೂ ಇತ್ತು. ಈ ಮೂಲಕ ರಾಜ್ಯದಲ್ಲಿ ಇಲ್ಲಿಯವರೆಗೆ 21 ಜನರು ಕೋವಿಡ್‌-19 ಸೋಂಕಿನಿಂದ ಸಾವನ್ನಪ್ಪಿದಂತಾಗಿದೆ.

216 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.ರಾಜ್ಯದಲ್ಲಿ ಕೊರೊನಾ ವೈರಸ್​​ ಸೋಂಕಿನಿಂದಾಗಿ ಒಟ್ಟು 20 ಜನರು ಸಾವನ್ನಪ್ಪಿದ್ದರೆ, ಆತ್ಮಹತ್ಯೆ ಮಾಡಿಕೊಂಡ ಒಬ್ಬ ಸೋಂಕಿತನೂ ಸೇರಿ ಒಟ್ಟು 21 ಸೋಂಕಿತರು ಮೃತಪಟ್ಟಂತಾಗಿದೆ.

Facebook Comments

Sri Raghav

Admin