ಬಿಗ್ ಬ್ರೇಕಿಂಗ್ : ರಾಜ್ಯದಲ್ಲಿ ನಾಳೆಯಿಂದಲೇ 12 ಜಿಲ್ಲೆಗಳಲ್ಲಿ ಕಠಿಣ ಲಾಕ್‍ಡೌನ್..!?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.13- ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಈಗಾಗಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್‍ಡೌನ್ ಘೋಷಣೆ ಮಾಡಿರುವ ಬೆನ್ನಲ್ಲೆ ಮತ್ತೆ 12 ಜಿಲ್ಲೆಗಳಲ್ಲಿ ನಾಳೆಯಿಂದಲೇ ಲಾಕ್‍ಡೌನ್ ಜಾರಿಯಾಗಲಿದೆ.

ಶರವೇಗದಲ್ಲಿ ಕೊರೊನಾ ಸೋಂಕು ಹಬ್ಬುತ್ತಿರುವ ಬಳ್ಳಾರಿ, ಕಲಬುರಗಿ, ಧಾರವಾಡ, ಮೈಸೂರು, ವಿಜಾಪುರ, ಯಾದಗಿರಿ, ಬೀದರ್, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ನಾಳೆಯಿಂದ ಒಂದು ವಾರ ಲಾಕ್‍ಡೌನ್ ಜಾರಿಗೆ ಬರಲಿದೆ.

ಈ ಜಿಲ್ಲೆಗಳಲ್ಲಿ ಕಳೆದ 15 ದಿನಗಳಿಂದ ವ್ಯಾಪಕವಾಗಿ ಕೊರೊನಾ ಸೋಂಕು ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ.

ಅಗತ್ಯ ಸೇವೆಗಳಾದ ಹಾಲು, ಹಣ್ಣು, ತರಕಾರಿ, ವೈದ್ಯಕೀಯ ಸೇವೆ, ಆ್ಯಂಬುಲೆನ್ಸ್ , ಔಷಧಿ ಅಂಗಡಿ, ದಿನಪತ್ರಿಕೆಗಳು, ಮಾಧ್ಯಮ , ಗ್ಯಾಸ್ ಹೊರತುಪಡಿಸಿ ಉಳಿದಂತೆ ಎಲ್ಲ ಸೇವೆಗಳೂ ಬಂದ್ ಆಗಲಿವೆ.

ಹೋಟೆಲ್, ಮದ್ಯದಂಗಡಿ, ಖಾಸಗಿ ಮತ್ತು ಸರ್ಕಾರಿ ಸಂಚಾರ , ಆಟೋ, ಟ್ಯಾಕ್ಸಿ, ಕ್ಯಾಬ್, ಖಾಸಗಿ ಕಚೇರಿಗಳು, ಸರ್ಕಾರಿ ಕಚೇರಿಗಳು ಸ್ತಬ್ದವಾಗಲಿವೆ.ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು.

ಅವರು ನೀಡಿದ ಅಂಕಿಅಂಶಗಳ ಮೇರೆಗೆ ಈ 12 ಜಿಲ್ಲೆಗಳಲ್ಲಿ ಲಾಕ್‍ಡೌನ್ ಮಾಡುವುದು ಅನಿವಾರ್ಯ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಹೀಗಾಗಿ ಸರ್ಕಾರ ನಾಳೆ ರಾತ್ರಿ 8 ಗಂಟೆಯಿಂದಲೇ ಜಾರಿಯಾಗುವಂತೆ 22ರವರೆಗೆ ಲಾಕ್‍ಡೌನ್ ಘೋಷಣೆ ಮಾಡಿದೆ. ಈ ಜಿಲ್ಲೆಗಳಲ್ಲಿ ಅಂತರಜಿಲ್ಲಾ ಓಡಾಟಕ್ಕೂ ನಿರ್ಬಂಧ ಹಾಕಲಾಗಿದೆ.

ಕಳೆದ ಬಾರಿಗಿಂತಲೂ ಈ ಬಾರಿ ಲಾಕ್‍ಡೌನ್‍ನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಗೃಹ ಇಲಾಖೆ ಸೂಚನೆ ಕೊಟ್ಟಿದೆ.

ಅನಗತ್ಯವಾಗಿ ತಿರುಗಾಡುವವರು, ಮಾಸ್ಕ್ ಧರಿಸದೆ ಇರುವವರು, ಸಾಮಾಜಿಕ ಅಂತರ ಪಾಲಿಸದವರು, ಗುಂಪು ಸೇರುವುದು ಸೇರಿದಂತೆ ಕಾನೂನು ಉಲ್ಲಂಘನೆ ಮಾಡುವವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸೂಚನೆ ನೀಡಲಾಗುವುದು.

ಜಿಲ್ಲಾ ಮಟ್ಟದಿಂದ ಹಿಡಿದು ಗ್ರಾಮಪಂಚಾಯ್ತಿ ಮಟ್ಟದವರೆಗೂ ಸಮಿತಿಗಳನ್ನು ರಚಿಸಿ ಹೊರರಾಜ್ಯ ಹಾಗೂ ಹೊರಭಾಗಗಳಿಂದ ಬರುವವರ ಮೇಲೆ ನಿಗಾವಹಿಸಲು ಸಮಿತಿಗೆ ಜವಾಬ್ದಾರಿ ವಹಿಸಲಾಗುತ್ತದೆ.

ಮುಖ್ಯವಾಗಿ ಈ ಬಾರಿ ಆಶಾ ಕಾರ್ಯಕರ್ತೆಯರು, ನರ್ಸ್‍ಗಳು, ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಮಪಂಚಾಯ್ತಿ ಪಿಡಿಒ, ಕಾರ್ಯದಶಿಗಳು ಸೇರಿದಂತೆ ಮತ್ತಿತರ ನೌಕರರು ಹೆಚ್ಚು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಅವರಿಗೆ ಕೆಲವು ಜಿಲ್ಲಾಧಿಕಾರಿಗಳ ಮೂಲಕ ವಿಶೇಷ ಅಧಿಕಾರವನ್ನು ನೀಡುವ ಸಾಧ್ಯತೆ ಇದೆ.

ಇನ್ನು ವಿಡಿಯೋ ಕಾನ್ಫರೆನ್ಸ್ ವೇಳೆ ಜಿಲ್ಲಾಧಿಕಾರಿಗಳು ಕೊರೊನಾ ನಿಯಂತ್ರಣಕ್ಕಾಗಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿವರ ನೀಡಿದರು.
ಮುಖ್ಯವಾಗಿ ಮಹಾರಾಷ್ಟ್ರ, ದೆಹಲಿ, ಗುಜರಾತ್, ತಮಿಳುನಾಡು ಸೇರಿದಂತೆ ಮತ್ತಿತರ ರಾಜ್ಯಗಳಿಂದ ಆಗಮಿಸಿದವರಿಂದಲೇ ಹೆಚ್ಚು ಸೋಂಕು ಕಾಣಿಸಿಕೊಂಡಿದೆ.

ಹೀಗಾಗಿ ಹೊರರಾಜ್ಯಗಳಿಂದ ಬಂದವರಿಗೆ ಇನ್ನು ಮುಂದೆ ಕಡ್ಡಾಯವಾಗಿ 7 ದಿನ ಸಾಂಸ್ಥಿಕ ಕ್ವಾರಂಟೈನ್, 14 ದಿನ ಹೋಂ ಕ್ವಾರಂಟೈನ್, ಸೋಂಕು ಕಾಣಿಸಿಕೊಂಡ ಗ್ರಾಮಗಳನ್ನು ಕಡ್ಡಾಯವಾಗಿ ಸೀಲ್‍ಡೌನ್ ಮಾಡುವುದು ಸೇರಿದಂತೆ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ವಿವರ ನೀಡಿದರು.

ಸೋಂಕು ಹೆಚ್ಚಾಗಿ ಕಾಣಿಸಿಕೊಂಡ ಕಾರಣ ಕೆಲವು ಕಡೆ ಹಾಸಿಗೆಗಳ ಕೊರತೆ ಎದುರಾಗಿದೆ. ಖಾಸಗಿ ಆಸ್ಪತ್ರೆಯವರು ನಮ್ಮ ನಿರೀಕ್ಷೆಗೆ ತಕ್ಕಂತೆ ಹಾಸಿಗೆಗಳನ್ನು ಕೊಡುತ್ತಿಲ್ಲ ಎಂದು ಕೆಲ ಡಿಸಿಗಳು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಯಡಿಯೂರಪ್ಪನವರು, ಯಾವ ಆಸ್ಪತ್ರೆಗಳು ಒಪ್ಪಂದದಂತೆ ಹಾಸಿಗೆಗಳನ್ನು ನೀಡುವುದಿಲ್ಲವೋ ಅಂಥವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಸೂಚನೆ ನೀಡಿದರು.

ಒಂದು ವೇಳೆ ಖಾಸಗಿ ಆಸ್ಪತ್ರೆಗಳು ಹಾಸಿಗೆ ನೀಡಲು ಹಿಂದೇಟು ಹಾಕಿದರೆ ಅಂತಹ ಆಸ್ಪತ್ರೆಗಳ ಸೌಲಭ್ಯಗಳನ್ನು ಬಂದ್ ಮಾಡಿ ವಶಕ್ಕೆ ತೆಗೆದುಕೊಳ್ಳುವಂತೆ ಬಿಎಸ್‍ವೈ ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.

Facebook Comments

Sri Raghav

Admin