ಕೊರೋನಾ ಬುಲೆಟಿನ್ : ರಾಜ್ಯದಲ್ಲಿ ಇಂದು 12 ಮಂದಿಯಲ್ಲಿ ಸೋಂಕು ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.18- ನಿನ್ನೆ-ಮೊನ್ನೆ ದಿಢೀರ್ ಏರಿಕೆ ಕಂಡಿದ್ದ ಕೊರೊನಾ ಪೀಡಿತರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಇಂದು 12 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದ ಒಟ್ಟಾರೆ ಸೋಂಕಿತರ ಸಂಖ್ಯೆ 371ಕ್ಕೆ ಏರಿಕೆಯಾಗಿದೆ. ಕೊರೊನಾ ಹಾಟ್‍ಸ್ಪಾಟ್‍ಗಳೆಂದು ಗುರುತಿಸಿಕೊಂಡಿದ್ದ ಮೈಸೂರು, ಕಲಬುರ್ಗಿಯಲ್ಲೂ ಬೆರಳೆಣಿಕೆಯಷ್ಟು ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿವೆ.

ಕಲಬುರ್ಗಿಯಲ್ಲಿ ಸೋಂಕಿತ 205 ಮತ್ತು 174ರ ವ್ಯಕ್ತಿಗಳ ಜತೆ ಸಂಪರ್ಕವಿರಿಸಿಕೊಂಡಿದ್ದ 34 ವರ್ಷದ ಯುವಕ ಹಾಗೂ 16 ವರ್ಷದ ಬಾಲಕನಲ್ಲಿ ಸೋಂಕು ಕಾಣಿಸಿಕೊಂಡಿದೆ. ವಿಜಯಪುರದಲ್ಲಿ 60 ವರ್ಷದ ವೃದ್ದ, ಹುಬ್ಬಳ್ಳಿ-ಧಾರವಾಡದಲ್ಲಿ 63 ವರ್ಷದ ವೃದ್ದನಿಗೂ ಸೋಂಕು ವಕ್ಕರಿಸಿಕೊಂಡಿದೆ.

ಮೈಸೂರಿನ ಒಬ್ಬರು, ನಂಜನಗೂಡಿನಲ್ಲಿ ಇಬ್ಬರಿಗೆ, ಬಾಗಲಕೋಟೆಯಲ್ಲಿ 48 ವರ್ಷದ ಮಹಿಳೆ, 65 ವರ್ಷದ ವೃದ್ದ, ಬೆಳಗಾವಿಯ ಹಿರಿಬಾಗೇವಾಡಿಯ 45 ವರ್ಷದ ಪುರುಷ, ಗದಗದ 42 ವರ್ಷದ ವ್ಯಕ್ತಿ ಹಾಗೂ ಮಂಡ್ಯದ 39 ವರ್ಷದ ವ್ಯಕ್ತಿಗೂ ಕೊರೊನಾ ಪಾಸಿಟಿವ್ ಆಗಿದೆ. 371 ಕೊರೊನಾ ಪೀಡಿತರ ಪೈಕಿ 92 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗಳಿಗೆ ತೆರಳಿದ್ದಾರೆ.

ಬೆಂಗಳೂರಿನಲ್ಲಿ ನಿನ್ನೆ 10 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿತ್ತು. ಆದರೆ, ನಿನ್ನೆ ಸಂಜೆಯಿಂದೀಚೆಗೆ ಇಂದು ಮಧ್ಯಾಹ್ನದವರೆಗೂ ಯಾವುದೇ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗದಿರುವುದು ತುಸು ಸಮಾಧಾನ ತಂದಿದೆ.

ಸಾರ್ವಜನಿಕರು ಇತ್ತೀಚೆಗಷ್ಟೇ ಲಾಕ್‍ಡೌನ್ ಸಂದರ್ಭದಲ್ಲಿ ಮನೆಯಿಂದ ಹೊರ ಬಾರದೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವತ್ತ ಗಮನ ಹರಿಸಿದ ಪರಿಣಾಮ ಕೊರೊನಾ ಸೋಂಕು ಪ್ರಕರಣಗಳು ಕಡಿಮೆಯಾಗುತ್ತಿರುವುದಕ್ಕೆ ಕಾರಣ ಎನ್ನಲಾಗಿದೆ.

ಉಳಿದ ಅವಧಿಯಲ್ಲೂ ಜನ ಸಾಮಾಜಿಕ ಅಂತರ ಕಾಯ್ದುಕೊಂಡು ಶುಚಿತ್ವಕ್ಕೆ ಆದ್ಯತೆ ನೀಡಿದರೆ ಮಹಾಮಾರಿಯನ್ನು ರಾಜ್ಯದಿಂದ ಹೊರಹಾಕಲು ಸಾಧ್ಯವಾಗುತ್ತದೆ.

Facebook Comments

Sri Raghav

Admin