12 ಸದಸ್ಯರ ಅಮಾನತ್ತು ಹಿಂಪಡೆಯಲು ಪಟ್ಟು ; ರಾಜ್ಯಸಭೆಯಲ್ಲಿ ಗದ್ದಲ-ಕೋಲಾಹಲ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ನ.30- ಕಳೆದ ಅಧಿವೇಶನದಲ್ಲಿ 12 ಮಂದಿ ರಾಜ್ಯಸಭಾ ಸದಸ್ಯರ ಅಮಾನತ್ತು ಪ್ರಕರಣವನ್ನು ಪ್ರತಿಪಕ್ಷಗಳು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಸಂಸತ್‍ನಲ್ಲಿಂದು ಭಾರೀ ಗದ್ದಲ ಎಬ್ಬಿಸಿವೆ. ಪ್ರತಿಪಕ್ಷಗಳು ಒಟ್ಟಾಗಿ ರಾಜ್ಯಸಭಾಧ್ಯಕ್ಷ ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿ 12 ಮಂದಿ ಸದಸ್ಯರ ಅಮಾನತ್ತು ಆದೇಶವನ್ನು ಹಿಂಪಡೆಯುವಂತೆ ಒತ್ತಡ ಹೇರಿವೆ.

ಆದರೆ ಇದಕ್ಕೆ ವೆಂಕಯ್ಯ ನಾಯ್ಡು ಅವರು, ಅಸಮ್ಮತಿ ಸೂಚಿಸಿದ್ದಾರೆ. ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮನವಿಯನ್ನು ತಳ್ಳಿ ಹಾಕಿರುವ ಅವರು, ಅಶಿಸ್ತು ಪ್ರದರ್ಶಿಸುವ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಲು ನಿಯಮಾವಳಿ 256 ಮತ್ತು 259ರಡಿ ಸದನಕ್ಕೆ ಅಧಿಕಾರವಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ನಿನ್ನೆ ಏನು ನಡೆದಿದೆ ಅದಕ್ಕೆ ಪೀಠದಿಂದ ಯಾವುದೇ ಕ್ರಮ ಕೈಗೊಂಡಿಲ್ಲ. ಅದು ಸದನ ತೆಗೆದುಕೊಂಡಿರುವ ಕ್ರಮ. ಕಳೆದ ಅಧಿವೇಶನದಲ್ಲಿ ಆ.10ರಂದು ನಡೆದ ಕಲಾಪದ ದಾಖಲಾತಿಗಳನ್ನು ಪರಿಶೀಲನೆ ಮಾಡಿ, ನಾವು ಅಶಿಸ್ತು ಪ್ರದರ್ಶಿಸಿದ ಸದಸ್ಯರ ಹೆಸರನ್ನು ಹೇಳಿದ್ದೇವೆ. ಟೇಬಲ್ ಮೇಲೆ ನಿಯಮಬಾಹಿರವಾಗಿ ವರ್ತಿಸಿ ಸದನದ ಘನತೆಗೆ ಧಕ್ಕೆ ತಂದವರ ವಿರುದ್ಧ ಕ್ರಮ ಕೈಗೊಳ್ಳುವುದು ಅನಿವಾರ್ಯ.

ತಪ್ಪು ಮಾಡಿದವರು ಕ್ಷಮೆ ಕೇಳದ ಹೊರತು ಅಮಾನತ್ತು ಆದೇಶವನ್ನು ಹಿಂಪಡೆಯುವುದಿಲ್ಲ. ಕಳೆದ ಅಧಿವೇಶನದಲ್ಲಿ ಕಹಿ ಘಟನೆಗಳು ನಡೆದಿವೆ. ಅದು ಸದಾ ಕಾಲ ನಮ್ಮನ್ನು ಕಾಡುತ್ತಲೇ ಇರುತ್ತದೆ. ಹಿಂದಿನ ಘಟನೆಗಳ ಮೇಲೆ ಬೆಳಕು ಚೆಲ್ಲಿ ದುವರ್ತನೆಗಳು ಮರುಕಳಿಸದಂತಹ ಅನುಭವದ ಪಾಠವನ್ನು ನಾವು ನಿರೀಕ್ಷಿಸಬೇಕು ಎಂದು ಹೇಳಿದರು.

ಪ್ರಜಾಪ್ರಭುತ್ವ ಸಂಸದೀಯ ನಡವಳಿಕೆಯಲ್ಲಿ ಬೇಕಿದ್ದರೆ ಮಾತನಾಡಬಹುದು ಇಲ್ಲವೇ ಸಭಾತ್ಯಾಗ ಮಾಡಬಹುದು. ಅದರ ಹೊರತಾಗಿ ದುವರ್ತನೆ ತೋರುವುದು ಸರಿಯಲ್ಲ. ನಾನು ಸದಸ್ಯರ ಭಾವನೆಗಳನ್ನು ಗೌರವಿಸುತ್ತೇನೆ. ಆದರೆ ಸಭಾನಾಯಕರು ಸದನವನು ತಪ್ಪು ದಾರಿಗೆ ಎಳೆಯಬಾರದು ಎಂದು ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು 12 ಮಂದಿ ಸದಸ್ಯರ ಅಮಾನತ್ತು ಆದೇಶವನ್ನು ವಾಪಸ್ ಪಡೆಯಬೇಕು ಎಂದು ಬಲವಾಗಿ ಪ್ರತಿಪಾದಿಸಿದರು. ಅಮಾನತ್ತುಗೊಳಿಸಿರುವುದು ಗರಿಷ್ಠ ಮಟ್ಟದ ನಿಯಮ ಉಲ್ಲಂಘನೆ. ಘಟನೆ ನಡೆದಾಗ ಸಚಿವರು ನಿಯಮ ಮಂಡಿಸುತ್ತಿದ್ದರು. ನಾನು ಕ್ರಿಯಲೋಪವನ್ನು ಪ್ರಸ್ತಾಪಿಸಿದ್ದೇನೆ. ಈವರೆಗೂ ನಡೆದ ಸಂಪ್ರದಾಯದ ಪ್ರಕಾರ ಕ್ರಿಯಾಲೋಪ ಪ್ರಸ್ತಾಪಿಸಲು ಎಲ್ಲ ಸದಸ್ಯರಿಗೂ ಅಧಿಕಾರವಿದೆ. ಪ್ರತಿಪಕ್ಷದ ನಾಯಕರಿಗೂ ಅವಕಾಶವಿದೆ. ಆದರೆ ಅಂದು ನನಗೆ ಅವಕಾಶ ನೀಡಿಲ್ಲ. ಇದು ಸಂಸದೀಯ ಸಂಪ್ರದಾಯಗಳಲ್ಲಿ ಗರಿಷ್ಠ ಮಟ್ಟದ ನಿಯಮ ಉಲ್ಲಂಘನೆ ಎಂದು ಖರ್ಗೆ ಹೇಳಿದರು.

ಯಾವುದೇ ಕ್ರಮ ತೆಗೆದುಕೊಳ್ಳುವ ನಿರ್ಣಯಕ್ಕೂ ಮೊದಲು ನಿಯಮ 256ರಡಿ ಪೀಠಾಧ್ಯಕ್ಷರು ಕ್ರಮಕ್ಕೊಳಗಾಗುವ ಸದಸ್ಯರ ಹೆಸರನ್ನು ಹೇಳಿ ಪ್ರಸ್ತಾವನೆ ಮಂಡಿಸಬೇಕು. ಆದರೆ ಯಾವ ನಿಯಮಗಳು ಪಾಲನೆಯಾಗಿಲ್ಲ ಎಂದು ವಾದಿಸಿದರು. ಈ ವೇಳೆ ಪ್ರತಿಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿದರು.

Facebook Comments