ಕೋವಿಡ್ ನಿಗ್ರಹಕ್ಕೆ 120 ಕೋಟಿ ಲಸಿಕೆ ಪೂರೈಕೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಸೆ.25- ವಿಶ್ವದಲ್ಲಿ ಕೋವಿಡ್ ಸೋಂಕನ್ನು ನಿವಾರಣೆ ಮಾಡುವ ಸಲುವಾಗಿ ಮಹತ್ವದ ಚರ್ಚೆ ನಡೆಸಿರುವ ಚತುಷ್ಟ ರಾಷ್ಟ್ರಗಳ ಪ್ರಮುಖರು, ಜಾಗತಿಕವಾಗಿ 1.2 ಶತಕೋಟಿ ಲಸಿಕೆಯನ್ನು ಕೊಡುಗೆ ನೀಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ನಿನ್ನೆ ಅಮೆರಿಕಾದ ಶ್ವೇತ ಭವನದಲ್ಲಿ ನಡೆದ ಅಮೆರಿಕಾ, ಆಸ್ಟ್ರೇಲಿಯಾ, ಭಾರತ ಮತ್ತು ಜಪಾನ್ ರಾಷ್ಟ್ರಗಳ ಮುಖ್ಯಸ್ಥರ ಸಭೆಯಲ್ಲಿ ಜಾಗತಿಕ ಸವಾಲು ಮತ್ತು ಸಮಸ್ಯೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗಿದೆ.

ಕೋವಿಡ್ ಕೊನೆಗಾಣಿಸಲು ನಿರಂತರ ಹೋರಾಟ ಮಾಡುವ ಪ್ರತಿಜ್ಞಾಯನ್ನು ನಾಲ್ಕು ದೇಶಗಳ ಮುಖ್ಯಸ್ಥರು ತೆಗೆದುಕೊಂಡಿದ್ದಾರೆ. ವಿಶ್ವಾದ್ಯಂತ ಸುಲಭವಾಗಿ ಲಸಿಕೆ ಸಿಗುವಂತೆ ಮಾಡಲು ಜೈವಿಕ ಲಸಿಕೆಯ ಉತ್ಪಾದನೆಗೆ ಪ್ರೋತ್ಸಾಹ ನೀಡಲು ನಿರ್ಧರಿಸಲಾಗಿದೆ. 2022ರ ವೇಳೆಗೆ ಕನಿಷ್ಠ ನೂರು ಕೋಟಿ ಸುರಕ್ಷಿತ ಲಸಿಕೆ ಉತ್ಪಾದಿಸಲು ಬೆಂಬಲ ನೀಡಲಾಗುತ್ತದೆ.

ಜಪಾನ್ ಸ್ಥಳೀಯ ಪಾಲುದಾರ ದೇಶಗಳಿಗೆ ಲಸಿಕೆ ಖರೀದಿಗೆ ನೆರವು ನೀಡಲು 3.3 ಬಿಲಿಯನ್ ಡಾಲರ್ ನೆರವನ್ನು ಕೋವಿಡ್ ತುರ್ತು ಪ್ರತಿಕ್ರಿಯಾ ಸಾಲದ ಯೋಜನೆಯಡಿ ನೀಡುವುದಾಗಿ ಹೇಳಿದೆ. ದಕ್ಷಿಣ ಏಷ್ಯಾ ಮತ್ತು ಪೆಸಿಫಿಕ್ ರಾಷ್ಟ್ರಗಳು ಲಸಿಕೆ ಖರೀದಿಸಲು ಆಸ್ಟ್ರೇಲಿಯಾ 212 ದಶಲಕ್ಷ ಡಾಲರ್ ನೆರವನ್ನು ಘೋಷಣೆ ಮಡಿದೆ. 219 ಮಿಲಯನ್ ಡಾಲರ್ ನೆರವನ್ನು ಲಸಿಕೆ ಉತ್ಪಾದನೆಗೆ ನೀಡುವುದಾಗಿ ಹೇಳಿದೆ.

ನಾಲ್ಕು ರಾಷ್ಟ್ರಗಳು ಹವಾಮಾನ ಬಿಕ್ಕಟ್ಟು ಪರಿಹಾರದ ಬಗ್ಗೆಯೂ ಚರ್ಚೆ ನಡೆಸಿವೆ. ಪ್ಯಾರಿಸ್ ಒಪ್ಪಂದದಂತೆ ತಾಪಮಾನವನ್ನು ನಿಗದಿತ ಪ್ರಮಾಣದಲ್ಲೇ ನಿಯಂತ್ರಣ ಮಡಲು ಜಂಟಿಯಾಗಿ ಕೆಲಸ ಮಾಡಲು ಪರಸ್ಪರ ಒಪ್ಪಿಗೆ ಸೂಚಿಸಲಾಗಿದೆ. ಕೈಗಾರಿಕೆಗಳ ಮಟ್ಟದಲ್ಲಿ ತಾಪಮಾನದ ಪ್ರಮಾಣವನ್ನು ಶೇ.1.5ರ ಮಿತಿಯಲ್ಲಿ ಕಾಯ್ದುಕೊಳ್ಳಲು, ಕಾರ್ಬನ್ ಮುಕ್ತ ವಾತಾವರಣ ನಿರ್ಮಾಣದ ಪ್ರಯತ್ನಗಳ ಬಗ್ಗೆ ಸಮಾಲೋಚನೆ ನಡೆದಿದೆ. ಕಾರ್ಬನ್ ಮುಕ್ತ ಹಡಗು ಮತ್ತು ಬಂದರು ನಿರ್ವಹಣೆ, ಶುದ್ಧ ಹೈಡ್ರೋಜನ್ ತಂತ್ರಜ್ಞಾನ ನಿಯೋಜನೆಗೆ ನಿರ್ಧರಿಸಲಾಗಿದೆ.

ಉತ್ತಮ ಗುಣಮಟ್ಟದ ಮೂಲಸೌಲಭ್ಯ ಕಾಮಗಾರಿಗಳ ಬಗ್ಗೆ ಪರಸ್ಪರ ತಂತ್ರಜ್ಞಾನ ವಿನಿಮಯ, ಅಗತ್ಯ ಸಲಕರಣೆಗಳ ಪೂರೈಕೆಗೆ ಪಾಲುದಾರಿಕೆ ಕಾಯ್ದುಕೊಳ್ಳಲು ನಿರ್ಧರಿಸಲಾಗಿದೆ. ಭಾಹ್ಯಾಕಾಶ ಕ್ಷೇತ್ರದಲ್ಲಿನ ಅವಕಾಶಗಳು ಮತ್ತು ಹವಾಮಾನ ವೈಪರಿತ್ಯ, ಪ್ರಕೃತಿ ವಿಕೋಪ ಪರಿಸ್ಥಿತಿ ನಿರ್ವಹಣೆ, ಮiÁಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅಭಿವೃದ್ಧಿಗೊಳ್ಳುತ್ತಿರುವ ತಂತ್ರಜ್ಞಾನ, 5ಜಿ ಸಂಪರ್ಕ ಸೇರಿದಂತೆ ಇತರ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ.

ಪ್ರಮುಖವಾಗಿ ಆಫ್ಘಾನಿಸ್ತಾನದ ಪರಿಸ್ಥಿತಿಯ ಬಗ್ಗೆಯೂ ನಾಲ್ಕು ದೇಶಗಳ ನಾಯಕರು ಸಮಾಲೋಚನೆ ನಡೆಸಿದ್ದಾರೆ. ಆಫ್ಘಾನಿಸ್ತಾನ ತನ್ನ ನೆಲದಲ್ಲಿ ಭಯೋತ್ಪಾದನೆಗೆ ಅವಕಾಶ ನೀಡಬಾರದು, ಉಗ್ರರಿಗೆ ತರಬೇತಿ, ಹಣಕಾಸು ನೆರವು ಸೇರಿದಂತೆ ಯಾವುದೇ ಚಟುವಟಿಕೆಗಳಲ್ಲಿ ಆಫ್ಘಾನಿಸ್ತಾನ ಭಾಗಿಯಾಗಬಾರದು ಮತ್ತು ಅಲ್ಲಿಯೆ ನೆಲೆಸುವವರಿಗೆ ಸುರಕ್ಷಿತ ವಾತಾವರಣ ನಿರ್ಮಾಣ ಮಾಡಬೇಕು. ಮಹಿಳೆಯರು, ಮಕ್ಕಳ ರಕ್ಷಣೆ, ಮಾನವ ಹಕ್ಕುಗಳ ಘನತೆಗೆ ಧಕ್ಕೆಯಾಗದಂತೆ ತಾಲಿಬಾನ್ ಸರ್ಕಾರ ನಡೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ.

 

Facebook Comments