‘ಸೆ.20ರ ವರೆಗೆ 1200 ಕ್ಯೂಸೆಕ್ ನೀರು ಬಿಡಿ’ : ರಾಜ್ಯಕ್ಕೆ ಗಾಯದ ಮೇಲೆ ಬರೆ ಎಳೆದ ಸುಪ್ರೀಂ ಕೋರ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Kaveri

ನವದೆಹಲಿ,ಸೆ.12- ಕಾವೇರಿ ಜಲಾನಯನ ತೀರ ಪ್ರದೇಶದಿಂದ ತಮಿಳುನಾಡಿಗೆ 15 ಸಾವಿರ ಕ್ಯೂಸೆಕ್ಸ್ ನೀರು ಹರಿಸುವ ಬದಲು 12 ಸಾವಿರ ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಇಂದು ಆದೇಶ ನೀಡಿದೆ. ನ್ಯಾಯಾಲಯದ ಈ ಆದೇಶದಿಂದ ಕರ್ನಾಟಕಕ್ಕೆ ಮತ್ತೆ ಕಾನೂನು ಹೋರಾಟದಲ್ಲಿ ತೀವ್ರ ಹಿನ್ನಡೆಯಾಗಿದೆ.
ಕಳೆದ ಸೋಮವಾರ ನ್ಯಾಯಮೂರ್ತಿಗಳಾದ ದೀಪಕ್‍ಮಿಶ್ರ ಹಾಗೂ ಲಲಿತ್ ಉದಯ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಸೆ.5ರಿಂದ ಅನ್ವಯವಾಗುವಂತೆ ಪ್ರತಿ ದಿನ ತಮಿಳುನಾಡಿಗೆ 15 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶ ನೀಡಿತ್ತು.

ಇಂದು ಇದೇ ನ್ಯಾಯ ಪೀಠ 15ಸಾವಿರ ಕ್ಯೂಸೆಕ್ ಬದಲಿಗೆ ಇದೇ ತಿಂಗಳ 20ರವರೆಗೆ 12ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಕಳೆದ ಶನಿವಾರ ರಾತ್ರಿ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್‍ಗೆ ಈ ಹಿಂದೆ ನೀಡಿದ್ದ ಆದೇಶವನ್ನು ಮರು ಮಾರ್ಪಾಡು ಮಾಡುವಂತೆ ಅರ್ಜಿ ಸಲ್ಲಿಸಿತ್ತು. ಇಂದು ಸುಪ್ರೀಂಕೋರ್ಟ್ ರಜಾ ದಿನವಾದರೂ ಸರ್ಕಾರದ ಕೋರಿಕೆ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆ ನಡೆಯಿತು. ಇದೀಗ ನ್ಯಾಯಾಲಯ ನೀಡಿರುವ ತೀರ್ಪು ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ.

ಕರ್ನಾಟಕಕ್ಕೆ ನಿರಾಶೆ:
ಸುಪ್ರೀಂಕೋರ್ಟ್‍ನಲ್ಲಿ ಸಲ್ಲಿಸಿದ್ದ ಮಾರ್ಪಾಡು ಅರ್ಜಿಯ ವೇಳೆ ನ್ಯಾಯಾಲಯ ಹಿಂದೆ ನೀಡಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಬಹುದೆಂಬ ನಿರೀಕ್ಷೆ ಎಲ್ಲರಲ್ಲಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಹಿರಿಯ ವಕೀಲ ನಾರಿಮನ್ ಕೂಡ ರಾಜ್ಯದ ಜಲಾಶಯ ಸ್ಥಿತಿ-ಗತಿ ಕುರಿತು ಅಂಕಿ-ಅಂಶಗಳ ಕುರಿತು ನ್ಯಾಯಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು.
ಆದರೆ, ಕನ್ನಡ ಪರ ಸಂಘಟನೆಗಳು ಮತ್ತು ರೈತ ಮುಖಂಡರು ಕಳೆದ ಒಂದು ವಾರದಿಂದ ನಡೆಸಿದ ಪ್ರತಿಭಟನೆ, ಕರ್ನಾಟಕ ಬಂದ್, ನ್ಯಾಯಾಲಯದ ಆದೇಶ ವಿರುದ್ಧ ಧಿಕ್ಕಾರದ ಘೋಷಣೆಗಳಿಗೆ ನ್ಯಾಯಪೀಠ ಅಸಮಧಾನ ವ್ಯಕ್ತಪಡಿಸಿತು.

ಗರಂ ಆದ ಕೋರ್ಟ್:
ವಾದ ಮಂಡನೆ ನಡೆಯುತ್ತಿದ್ದ ವೇಳೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ದೀಪಕ್‍ಮಿಶ್ರ ಅವರು ಗರಂ ಆದ ಪ್ರಸಂಗವೂ ಜರುಗಿತು. ಕೆಲವರು ನ್ಯಾಯಾಲಯದ ಆದೇಶದ ವಿರುದ್ಧ ಕೂಗಾಡುತ್ತಿದ್ದಾರೆ. ಏನಿದು ಎಂದು ವಕೀಲರನ್ನು ಪ್ರಶ್ನಿಸಿದರು. ಸುಪ್ರೀಂಕೋರ್ಟ್ ನೀಡುವ ತೀರ್ಪನ್ನು ಪಾಲನೆ ಮಾಡಬೇಕಾದದ್ದು ಈ ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಯಾರೋ ಒಂದಿಷ್ಟು ಮಂದಿ ಪ್ರತಿಭಟನೆ ನಡೆಸುತ್ತಾರೆ. ಇಲ್ಲವೇ ಕೂಗಾಟ ಮಾಡುತ್ತಾರೆ ಎಂದಾಕ್ಷಣ ನಾವು ಕೈ ಕಟ್ಟಿ ಕೂರಲು ಸಾಧ್ಯವಿಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ನ್ಯಾಯಾಲಯದ ಆದೇಶಗಳನ್ನು ಪಾಲನೆ ಮಾಡುವುದು ನಿಮ್ಮ ಕರ್ತವ್ಯ ಎಂದು ನ್ಯಾಯಾಧೀಶರು ಕಿವಿಮಾತು ಹೇಳಿದರು.

ಪ್ರಸ್ತುತ ಉಂಟಾಗಿರುವ ಸಮಸ್ಯೆಯಲ್ಲಿ ಕೇಂದ್ರ ಸರ್ಕಾರದ ಯಾವುದೇ ಪಾತ್ರವಿಲ್ಲ. ಕೆಲವರು ವಸ್ತುಸ್ಥಿತಿ ತಿಳಿಯದೆ ನ್ಯಾಯಾಲಯದ ಆದೇಶವನ್ನೇ ದಿಕ್ಕರಿಸುವ ಹಂತಕ್ಕೆ ಬಂದಿದ್ದಾರೆ.
ಒಕ್ಕೂಟ ವ್ಯವಸ್ಥೆ ಗೌರವಿಸುವುದಾದರೆ ಮೊದಲು ಆದೇಶ ಪಾಲನೆ ಮಾಡಬೇಕು. ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದು ಮಿಶ್ರ ಆಕ್ಷೇಪಿಸಿದರು.

ವಾದ ಮಂಡನೆ:
ಇದಕ್ಕೂ ಮುನ್ನ ಬೆಳಗ್ಗೆ ರಾಜ್ಯದ ಪರ ವಾದ ಮಂಡಿಸಿದ ಪಾಲಿ ನಾರಿಮನ್ ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೈ ಕೊಟ್ಟ ಪರಿಣಾಮ ಬರಗಾಲ ಆವರಿಸಿದೆ. ಕಾವೇರಿ ಜಲಾನಯನ ಜಲಾಶಯಗಳಾದ ಕೆಆರ್‍ಎಸ್, ಕಬಿನಿ, ಹಾರಂಗಿ ಮತ್ತು ಹೇಮಾವತಿಯಲ್ಲಿ ನೀರಿನ ಸಂಗ್ರಹ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಕುಡಿಯುವ ನೀರಿಗೆ ರಾಜ್ಯದಲ್ಲಿ ಸಾಕಷ್ಟು ಸಮಸ್ಯೆ ಎದುರಾಗಿದೆ. ಮುಂಗಾರು ಕೈಕೊಟ್ಟಿರುವ ಕಾರಣ ಹಿಂಗಾರು ಮಳೆಯಾಗುತ್ತದೆ ಎಂಬ ಭರವಸೆಯೂ ಇಲ್ಲ. ಬೆಂಗಳೂರು, ರಾಮನಗರ, ಮೈಸೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ಮತ್ತಿತರ ನಗರ ಪ್ರದೇಶಗಳು ಈ ನೀರನ್ನೇ ಅವಲಂಭಿಸಿವೆ.

ತಮಿಳುನಾಡು ಕಾವೇರಿ ನೀರು ಕೇಳುತ್ತಿರುವುದು ಸಾಂಬಾ ಬೆಳೆಗೆ. ಮೆಟ್ಟೂರು ಜಲಾಶಯದಲ್ಲಿ ಈಗಾಗಲೇ 90 ಅಡಿಗೂ ಹೆಚ್ಚು ನೀರು ಸಂಗ್ರಹವಾಗಿದೆ. ಕಾವೇರಿ ತೀರದ ನಾಲ್ಕು ಜಲಾಶಯಗಳಲ್ಲಿ 37 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ.   ಕರ್ನಾಟಕದಲ್ಲಿ ಮಾನ್ಸೂನ್ ಪ್ರಭಾವ ದಿನದಿಂದ ದಿನಕ್ಕೆ ತಮಿಳುನಾಡಿನಲ್ಲಿ ಹೆಚ್ಚಾಗುತ್ತಿದೆ. ಹವಾಮಾನ ಇಲಾಖೆ ತಜ್ಞರ ಪ್ರಕಾರ ಹಿಂಗಾರು ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮೆಟ್ಟೂರು ಜಲಾಶಯದಲ್ಲಿ 42.04 ಟಿಎಂಸಿ ನೀರು ಸಂಗ್ರಹವಾಗಿದೆ.  ಕುಡಿಯುವ ನೀರು ಮತ್ತು ಕೃಷಿ ಚಟುವಟಿಕೆಗಳಿಗೆ ಈ ನೀರು ತೊಂದರೆ ಉಂಟು ಮಾಡುವುದಿಲ್ಲ. ಒಂದು ಬಾರಿ ಕರ್ನಾಟಕದ ಜಲಾಶಯಗಳಿಂದ ನೀರು ಹರಿಸಿದರೆ ಪುನಃ ಅದನ್ನು ಪಡೆಯಲು ಸಾಧ್ಯವಿಲ್ಲ.

ಈಗಾಗಲೇ ನೀರು ಹರಿಸಿರುವುದರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಜಲಾಶಯಗಳಿಂದ ನೀರು ಬಿಡಲು ಎಷ್ಟು ಸಮಸ್ಯೆ ಇದೆಯೋ ಜತೆಗೆ ಕಾನೂನು ಸುವ್ಯವಸ್ಥೆಯ ತೊಂದರೆಯೂ ಎದುರಾಗಲಿದೆ. ನಾವು ಒಕ್ಕೂಟದ ವ್ಯವಸ್ಥೆಯನ್ನು ಗೌರವಿಸುತ್ತಲೇ ಬಂದಿದ್ದೇವೆ. ಈ ಹಿಂದೆ ನ್ಯಾಯಾಲಯ ಆದೇಶ ನೀಡಿದ ಸಂದರ್ಭದಲ್ಲೆಲ್ಲಾ ನೀರು ಬಿಡುತ್ತಾ ಬಂದಿದ್ದೇವೆ. ಈಗ ಬರಗಾಲ ಎದುರಾಗಿರುವುದರಿಂದ ಈ ಸಮಸ್ಯೆ ಉಂಟಾಗಿದೆ ಎಂದು ನಾರಿಮನ್ ನ್ಯಾಯಾಲಯಕ್ಕೆ ಮನವಿ ಮಾಡಿಕೊಟ್ಟರು. ನಮ್ಮಲ್ಲೇ ಕುಡಿಯಲು ನೀರು ಇಲ್ಲದಿರುವಾಗ ಬೆಳೆಗಳಿಗೆ ನೀರು ಬಿಡಲು ಕೇಳುತ್ತಿರುವುದು ಸರಿಯಾದ ಕ್ರಮವಲ್ಲ. ಈಗಾಗಲೇ ಕಳೆದ ಸೆ.5ರಂದು ನ್ಯಾಯಾಲಯ ನೀಡಿದ ಆದೇಶದಂತೆ ಪ್ರತಿದಿನ ಜಲಾಶಯಗಳಿಂದ 15ಸಾವಿರ ಕ್ಯೂಸೆಕ್ಸ್ ನೀರು ಹರಿಸಲಾಗುತ್ತಿದೆ.

► Follow us on –  Facebook / Twitter  / Google+

Facebook Comments

Sri Raghav

Admin