ಬಿಗ್ ಬ್ರೇಕಿಂಗ್ : ಕರ್ನಾಟಕಕ್ಕೆ ‘ಮಹಾ’ಆಘಾತ, ಒಂದೇ ದಿನದಲ್ಲಿ 127 ಮಂದಿಗೆ ಪಾಸಿಟಿವ್, 3 ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 19- ದೇಶದ ವಾಣಿಜ್ಯ ರಾಜಧಾನಿ ಮುಂಬೈನ ಸಂಪರ್ಕದಿಂದಾಗಿ ಕರ್ನಾಟಕಕ್ಕೆ ಬಹುದೊಡ್ಡ ಗಂಡಾಂತರವೇ ಎದುರಾಗಿದ್ದು, ಇಂದು ಒಂದೇ ದಿನದಲ್ಲಿ ಮೂವರು ಸಾವನ್ನಪ್ಪಿ 127 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ರಾಜ್ಯದಲ್ಲಿ ಈವರೆಗೂ ಒಂದೇ ದಿನದಲ್ಲೇ ಪತ್ತೆಯಾದ ಹೆಚ್ಚಿನ ಪ್ರಕರಣಗಳು ಇದಾಗಿದ್ದು, ಕರುನಾಡು ಅಕ್ಷರಸಃ ಬೆಚ್ಚಿಬಿದ್ದಿದೆ. ಒಂದೆಡೆ ರಾಜ್ಯ ಸರ್ಕಾರ ಲಾಕ್‍ಡೌನ್ ಸಡಿಲಗೊಳಿಸಿರುವ ಸಂದರ್ಭದಲ್ಲೇ 127 ಪ್ರಕರಣಗಳು ಒಂದೇ ದಿನ ಪತ್ತೆಯಾಗಿರುವುದು ಅಪಾಯದ ಮುನ್ಸೂಚನೆ ನೀಡಿದೆ.

ರಾಜ್ಯದಲ್ಲಿ ಈವರೆಗೂ ಕೊರೊನಾ ಸೋಂಕಿತರ ಸಂಖ್ಯೆ 1373ಕ್ಕೆ ಏರಿಕೆಯಾಗಿದೆ. ಈವರೆಗೂ ಹಸಿರುವಲಯದಲ್ಲಿದ್ದ ಚಿಕ್ಕಮಗಳೂರಿಗೂ ಈ ಮಹಾಮಾರಿ ಒಕ್ಕರಿಸಿರುವುದು ಇಂದಿನ ವಿಶೇಷ. ಮಂಡ್ಯ 62, ದಾವಣಗೆರೆ 19, ಕಲಬುರಗಿ 11, ಶಿವಮೊಗ್ಗ 12, ಬೆಂಗಳೂರು 05, ಉಡುಪಿ 04, ಚಿಕ್ಕಮಗಳೂರು 2, ಉತ್ತರಕನ್ನಡ 04, ಹಾಸನ 03, ಗದಗ, ಯಾದಗಿರಿ, ವಿಜಯಾಪುರ ಮತ್ತು ಚಿತ್ರದುರ್ಗದಲ್ಲಿ ತಲಾ ಒಂದೊಂದು ಪ್ರಕರಣಗಳು ಕಂಡುಬಂದಿವೆ.

ಇದೇ ಮೊದಲ ಬಾರಿಗೆ ಚಿಕ್ಕಮಗಳೂರಿನಲ್ಲಿ ಎರಡು ಪ್ರಕರಣಗಳು ಪತ್ತೆಯಾಗಿವೆ. ಇಂದು ದೃಢಪಟ್ಟಿರುವ 127 ಪ್ರಕರಣಗಳಲ್ಲಿ ಸಕ್ಕರೆ ಜಿಲ್ಲೆ ಮಂಡ್ಯದಲ್ಲೇ ಸರಿಸುಮಾರು ಅರ್ಧದಷ್ಟು ಅಂದರೆ 62 ಪ್ರಕರಣಗಳು ಪತ್ತೆಯಾಗಿವೆ.

ಮುಂಬೈನಿಂದ ಹಿಂತಿರುಗಿದ್ದ ನಾಗಮಂಗಲ ಮತ್ತು ಕೆ.ಆರ್.ಪೇಟೆಯಲ್ಲಿ 62 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಇವರೆಲ್ಲರೂ ಮುಂಬೈನಿಂದ ಹಿಂತಿರಿಗಿದ್ದು ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸ್ಪಷ್ಟಪಡಿಸಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 150ಕ್ಕೆ ಏರಿಕೆಯಾಗಿದೆ. ಇದರಲ್ಲಿ 91 ಮಂದಿ ಮುಂಬೈನ ಸಂಪರ್ಕ ಹೊಂದಿದ್ದಾರೆ.

ಮಂಡ್ಯ ಹೊರತುಪಡಿಸಿದರೆ ಇಂದು ಬೆಣ್ಣೆನಗರಿ ದಾವಣಗೆರೆಯಲ್ಲಿ ಪುನಃ 19 ಪ್ರಕರಣಗಳು ಪತ್ತೆಯಾಗಿರುವುದು ಜಿಲ್ಲೆಯ ಜನತೆಯಲ್ಲಿ ಇನ್ನಷ್ಟು ಆತಂಕ ಸೃಷ್ಟಿಸಿದೆ. ರೋಗಿ ಸಂಖ್ಯೆ 662ರ ಮಹಿಳೆಯ ಸಂಪರ್ಕದಿಂದಾಗಿ ಐದು ಮಂದಿಗೆ, ರೋಗಿ ಸಂಖ್ಯೆ 633ರ ಸಂಪರ್ಕದಿಂದಾಗಿ ಇಬ್ಬರಿಗೆ ಸೋಂಕು ಹಬ್ಬಿದೆ. ಇದರಲ್ಲಿ ಐದು ವರ್ಷದ ಮಗು ಕೂಡ ಸೇರಿದೆ.

ಗುಜರಾತ್‍ನ ಅಹಮಾದಾಬಾದ್‍ಗೆ ತೆರಳಿದ್ದ ಇಬ್ಬರು ಹಾಗೂ ಕೇರಳಕ್ಕೆ ತೆರಳಿದ್ದ ಒಬ್ಬನಿಗೆ ಸೋಂಕು ತಗುಲಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಇಂದು 12 ಮಂದಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ.

ಮಹಾರಾಷ್ಟ್ರಕ್ಕೆ ತೆರಳಿದ್ದ 05, ಕೇರಳದಿಂದ ಬಂದಿದ್ದ ಇಬ್ಬರು, ಅಂತರ್‍ಜಿಲ್ಲೆಗೆ ಪ್ರಯಾಣಿಸಿದ್ದ ಓರ್ವ, ಕೇರಳದಿಂದ ಆಗಮಿಸಿದ್ದ ಇಬ್ಬರಲ್ಲಿ ಸೋಂಕು ಕಾಣಿಸಿದೆ. ಉಳಿದ ಇಬ್ಬರಿಗೆ ಸೋಂಕು ಹೇಗೆ ಪತ್ತೆಯಾಗಿದೆ ಎಂಬುದನ್ನು ವೈದ್ಯರು ತಪಾಸಣೆ ನಡೆಸುತ್ತಿದ್ದಾರೆ. ಬಿಸಿಲನಾಡು ಗುಲ್ಬರ್ಗದಲ್ಲಿ ಪುನಃ ಇಂದು 12 ಪ್ರಕರಣಗಳು ದೃಢಪಟ್ಟಿವೆ.

ವಿಶೇಷವೆಂದರೆ ಇವರೆಲ್ಲರೂ ಮುಂಬೈನಿಂದ ನಗರಕ್ಕೆ ಹಿಂತಿರುಗಿದ್ದರು. ಏಳು ಮತ್ತು 8 ವರ್ಷದ ಇಬ್ಬರು ಮಕ್ಕಳು, 18 ಮತ್ತು 21 ವರ್ಷದ ಇಬ್ಬರು ಯುವತಿಯರು ಸೇರಿದಂತೆ ಒಟ್ಟು 12 ಮಂದಿಗೆ ಸೋಂಕು ದೃಢಪಟ್ಟಿದೆ.

ಉಡುಪಿಯಲ್ಲಿ ಇಂದು ನಾಲ್ಕು ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಇವರೆಲ್ಲರೂ ಮುಂಬೈನಿಂದ ನಗರಕ್ಕೆ ಹಿಂತಿರುಗಿದ್ದರು. ಇದರಲ್ಲಿ 8 ವರ್ಷದ ಮಗು, 24 ವರ್ಷದ ಮಹಿಳೆ ಮತ್ತು ಪುರುಷ ಸೇರಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು ಐದು ಪ್ರಕರಣಗಳು ಪತ್ತೆಯಾಗಿವೆ. ರೋಗಿ ಸಂಖ್ಯೆ 608ರ ಸಂಪರ್ಕದಿಂದಾಗಿ 54 ವರ್ಷದ ಮಹಿಳೆ, 74 ವರ್ಷದ ವೃದ್ಧನಿಗೆ ಸೋಂಕು ಕಾಣಿಸಿಕೊಂಡಿದೆ. 54 ವರ್ಷದ ಮಹಿಳೆಯೊಬ್ಬರಿಗೆ ಸೋಂಕು ತಗುಲಿದ್ದು, ಸೋಂಕು ಹೇಗೆ ಹಬ್ಬಿದೆ ಎಂಬುದು ದೃಢಪಟ್ಟಿಲ್ಲ.

ಉಳಿದಂತೆ 25 ವರ್ಷದ ಯುವತಿ ಹಾಗೂ 32 ವರ್ಷದ ಪುರಷನಿಗೂ ಸೋಂಕು ಹಬ್ಬಿದೆ. ಈವರೆಗೂ ಒಂದೇ ಒಂದು ಕೊರೊನಾ ಪ್ರಕರಣ ಕಾಣಿಸಿಕೊಳ್ಳದೆ ಹಸಿರುವಲಯದಲ್ಲಿದ್ದ ಚಿಕ್ಕಮಗಳೂರಿನಲ್ಲಿ ಮೊದಲ ಬಾರಿಗೆ ಎರಡು ಪ್ರಕರಣಗಳು ಪತ್ತೆಯಾಗಿವೆ.

ಮುಂಬೈನಿಂದ ಹಿಂತಿರುಗಿದ್ದ 27 ವರ್ಷದ ಯುವತಿಗೆ ಸೋಂಕು ತಗುಲಿದ್ದರೆ, 43 ವರ್ಷದ ಪುರುಷನಿಗೆ ಯಾವ ರೀತಿ ಸೋಂಕು ಹಬ್ಬಿದೆ ಎಂಬುದು ಪತ್ತೆಯಾಗಿಲ್ಲ. ಈಗಾಗಲೇ ಕೊರೊನಾದಿಂದ ತತ್ತರಿಸಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಲ್ಕು ಪ್ರಕರಣಗಳು ಪತ್ತೆಯಾಗಿವೆ.

ಮಹಾರಾಷ್ಟ್ರದ ಸೊಲ್ಲಾಪುರದಿಂದ ಹಿಂತಿರುಗಿದ್ದ 16 ವರ್ಷದ ಯುವತಿ, ಗುಜರಾತ್‍ನಿಂದ ಬಂದಿದ್ದ 24 ವರ್ಷದ ಯುವಕ, ತಮಿಳುನಾಡಿನ ಮಧುರೈನಿಂದ ಬಂದಿದ್ದ 31 ವರ್ಷದ ಮಹಿಳೆ ಹಾಗೂ ಮುಂಬೈನಿಂದ ವಾಪಸ್ಸಾಗಿದ್ದ 34 ವರ್ಷದ ಮಹಿಳೆಗೆ ಸೋಂಕು ಕಾಣಿಸಿಕೊಂಡಿದೆ.

ಬೆಂಗಳೂರು, ಬಳ್ಳಾರಿ ಮತ್ತು ವಿಜಯಾಪುರದಲ್ಲಿ ಕೊರೊನಾ ಸೋಂಕಿನಿಂದ ಮೂವರು ಸಾವನ್ನಪ್ಪಿದ್ದಾರೆ. ಇದರಿಂದ ಈ ರೋಗಕ್ಕೆ ಬಲಿಯಾದವರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಈವರೆಗೂ 802 ಸಕ್ರಿಯ ಪ್ರಕರಣಗಳಿದ್ದರೆ, 530 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

Facebook Comments

Sri Raghav

Admin