ತುಮಕೂರು ಮಹಾನಗರ ಪಾಲಿಕೆಯಲ್ಲಿ ವಸೂಲಿ ಬಾಜಿ

ಈ ಸುದ್ದಿಯನ್ನು ಶೇರ್ ಮಾಡಿ

tumakuru

ತುಮಕೂರು, ಆ.12-  ತುಮಕೂರು ಮಹಾನಗರ ಪಾಲಿಕೆಯ ಭ್ರಷ್ಟಾಚಾರದ ಕರ್ಮಕಾಂಡ ಬಯಲಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಜನಪ್ರತಿನಿಧಿಗಳೇ ಜನರಿಂದ ಬೆದರಿಕೆ ಹಾಕಿ ವಸೂಲಿಗೆ ನಿಂತಿದ್ದಾರೆ.  ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನುಮತಿ ಇಲ್ಲದೆ ಮನೆ ಕಟ್ಟಿಕೊಂಡವರಿಗೆ ಸಕ್ರಮ ಮಾಡಿಕೊಳ್ಳಲು ಬಿಜೆಪಿ ಸದಸ್ಯರು ಲಕ್ಷ ಲಕ್ಷ  ಪೀಕುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.  ಇದಕ್ಕೆ ಅಧಿಕಾರಿಗಳು ಕೂಡ ಸಾಥ್ ನೀಡಿದ್ದಾರೆ. ಇದರಿಂದ ಕಷ್ಟಪಟ್ಟು ಮನೆ ಕಟ್ಟಿಕೊಂಡ ಜನ ಕಂಗಾಲಾಗಿದ್ದಾರೆ. ಮಹಾನಗರ ಪಾಲಿಕೆ ವ್ಯಾಪ್ತಿಯ ಹೊರ ವಲಯದಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಅದನ್ನು ಸಕ್ರಮ ಮಾಡಿಕೊಳ್ಳಲು ಸ್ಥಳೀಯ ಕಾರ್ಪೊರೇಟರ್ ಗಳಿಗೆ ಲಕ್ಷ ಲಕ್ಷ ಹಣ ಕೊಡಬೇಕು. ಇಲ್ಲದಿದ್ದರೆ ಮನೆ ಕೆಡಹುವ ಬೆದರಿಕೆ ಹಾಕುತ್ತಾರೆ. ಈ ಹಣವನ್ನು ಕೇಳುವ ಪರಿಯೇ ಬೇರೆ ಇರುತ್ತದೆ.

ಕೋಡ್‍ವರ್ಡ್‍ನಲ್ಲಿ ಹಣವನ್ನು ವಸೂಲಿ ಮಾಡುವ ಪದ್ಧತಿ ಇಲ್ಲಿದೆ. ಒಂದು ರೂ., ಎರಡು ರೂ. ಲೆಕ್ಕದಲ್ಲಿ ಎಂಬ ಪಾಸ್‍ವಲ್ರ್ಡ್ ಮೂಲಕ ಹಣ ವಸೂಲಿ ಮಾಡುತ್ತಾರೆ. 1ರೂ. ಎಂದರೆ 1 ಲಕ್ಷ, 2ರೂ. ಎಂದರೆ 2 ಲಕ್ಷ. ಇಂತಹ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತಮ್ಮದೇ ಆದ ಹವಾ ಇಟ್ಟುಕೊಂಡಿರುವ ಬಿಜೆಪಿ ಸದಸ್ಯರೊಬ್ಬರು ಪಕ್ಷದ ಮುಖಂಡರು ಸೇರಿದಂತೆ ವಿವಿಧ ನಾಯಕರ ಜತೆ ಗುರುತಿಸಿಕೊಂಡಿದ್ದಾರೆ.   ಇವರಿಗೆ  ವ್ಯಕ್ತಿಯೊಬ್ಬ ಇವರು ಹಣಕ್ಕೆ ಡಿಮ್ಯಾಂಡ್ ಮಾಡಿದ ಬಗ್ಗೆ ಆಡಿಯೋ ರೆಕಾರ್ಡ್ ಕೂಡ ಮಾಡಿದ್ದಾರೆ. ಎಸ್.ಎಸ್.ಪುರಂನಲ್ಲಿ ಕಟ್ಟಡ ಕಟ್ಟಿದ್ದ ವ್ಯಕ್ತಿ ಅನುಮತಿಗಾಗಿ ಪಾಲಿಕೆಗೆ ಅರ್ಜಿ ಹಾಕಿದ್ದಾನೆ. ಆದರೆ, ಪರವಾನಗಿ ಬೇಗ ಸಿಗಲಿಲ್ಲವೆಂಬ ಕಾರಣಕ್ಕೆ ಕಟ್ಟಡ ನಿರ್ಮಾಣ ಕಾರ್ಯ ಮುಗಿಸಿದ್ದಾನೆ. ಇದನ್ನೇ ಅಸ್ತ್ರವಾಗಿ ಬಳಸಿಕೊಂಡ ಪಾಲಿಕೆ ಸದಸ್ಯ ನಿನ್ನ ಮನೆ ಉಳಿಯಬೇಕೆಂದರೆ 2 ಲಕ್ಷ ಕೊಡಬೇಕು. ಇಲ್ಲದಿದ್ದರೆ ನಿಮ್ಮ ಕಟ್ಟಡವನ್ನು ಧ್ವಂಸ ಮಾಡುತ್ತೇನೆ ಎಂದು ಧಮ್ಕಿ ಹಾಕಿದ್ದಾರೆ.

ಎಷ್ಟೇ ಪರಿಪರಿಯಾಗಿ ಬೇಡಿಕೊಂಡರೂ ಬಿಟ್ಟಿಲ್ಲ. ಇದು ತುಮಕೂರಿನ ಒಂದು ಕಟ್ಟಡದ ಸಮಸ್ಯೆಯಲ್ಲ, ಸಾಕಷ್ಟು ಕಟ್ಟಡಗಳು ಅನುಮತಿ ಇಲ್ಲದೆ ತಲೆ ಎತ್ತಿವೆ. ಹೀಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳದ ಜನಪ್ರತಿನಿಧಿಗಳು ನಮ್ಮಂತಹ ಬಡವರ ವಿರುದ್ಧ ಬ್ರಹ್ಮಾಸ್ತ್ರ ಪ್ರಯೋಗಿಸುತ್ತಾರೆ ಎಂದು ಅಳಲು ತೋಡಿಕೊಂಡಿದ್ದಾರೆ.  ಸಂಬಂಧಪಟ್ಟ ಅಧಿಕಾರಿಗಳು ನಾಗರಿಕರಿಗೆ ಆಗುವ ಅನ್ಯಾಯ ತಪ್ಪಿಸಬೇಕೆಂದು ಮನವಿ ಮಾಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin