13 ರಾಜಕಾರಣಿಗಳು,71ಅಧಿಕಾರಿಗಳು, 368 ಬಿಲ್ಡರ್ಗಳಿಂದ 1.2 ಲಕ್ಷ ಕೋಟಿ ಭೂಮಿ ಗುಳುಂ

ಈ ಸುದ್ದಿಯನ್ನು ಶೇರ್ ಮಾಡಿ

NRRamesh

ಬೆಂಗಳೂರು, ಆ.17- ಬಿಬಿಎಂಪಿ ವ್ಯಾಪ್ತಿಯಲ್ಲಿ 13 ಪ್ರತಿಷ್ಠಿತ ರಾಜಕಾರಣಿಗಳು, 71 ಅಧಿಕಾರಿಗಳು, 368 ಬಿಲ್ಡರ್ಗಳು, 150 ಮಾಲ್ಗಳ ಮಾಲೀಕರು ರಾಜಕಾಲುವೆ ಹಾಗೂ ಕೆರೆ ಪ್ರದೇಶವನ್ನು ಅಂದರೆ 1.2 ಲಕ್ಷ ಕೋಟಿ ರೂ. ಮೌಲ್ಯದ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಮನೆ, ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದರೂ ಯಾವುದೇ ಕ್ರಮಕೈಗೊಳ್ಳದ ಸರ್ಕಾರ ಬಡವರ ಸಣ್ಣಪುಟ್ಟ ಮನೆಗಳನ್ನು ನೆಲಸಮ ಮಾಡುತ್ತಾ ಅನ್ಯಾಯ ಮಾಡುತ್ತಿದೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಸರ್ಕಾರ ಒತ್ತುವರಿ ತೆರವು ಮಾಡುವ ಭರದಲ್ಲಿ  ಬಡ ಹಾಗೂ ಮಧ್ಯಮ ವರ್ಗದ ಜನರ ಮನೆಗಳನ್ನು ನಿರ್ದಾಕ್ಷಿಣ್ಯವಾಗಿ ನೆಲಸಮ ಮಾಡುತ್ತಿದೆ.

ಇತ್ತ ರಾಜಕಾಲುವೆ ಕೆರೆಗಳನ್ನು ಒತ್ತುವರಿ ಮಾಡಿಕೊಂಡಿರುವ ಪ್ರತಿಷ್ಠಿತ ಬಿಲ್ಡರ್, ರಾಜಕಾರಣಿಗಳ ಸೋಗಿನಲ್ಲಿರುವ ಸರ್ಕಾರಿ ನೆಲಗಳ್ಳರ ಲಕ್ಷಾಂತರ ಕೋಟಿ ರೂ. ಒತ್ತುವರಿ ಭೂಮಿಯನ್ನು ಹಾಗೆಯೇ ಬಿಟ್ಟು ಬಡವರಿಗೊಂದು, ಬಲ್ಲಿದರಿಗೊಂದು ನ್ಯಾಯ ಅನುಸರಿಸುತ್ತಿದೆ ಎಂದು ಆರೋಪಿಸಿದರು.  ಈ ಒತ್ತುವರಿ ಸಂಬಂಧ ಸುಮಾರು 15 ಸಾವಿರ ಪುಟಗಳ ಮಹತ್ವದ ದಾಖಲೆಗಳು ನನ್ನ ಬಳಿ ಇದ್ದು, ಅವುಗಳನ್ನು ಮುಖ್ಯಮಂತ್ರಿಯವರಿಗೆ ಸಲ್ಲಿಸುತ್ತೇನೆ. ಕೂಡಲೇ ಅವರ ವಿರುದ್ಧವೇ ಕ್ರಮಕೈಗೊಳ್ಳಬೇಕು ಇಲ್ಲದಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಒಂದು ವಾರದೊಳಗೆ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಅವರು ಹೇಳಿದರು.

ಒತ್ತುವರಿದಾರರಿಗೆ ಅನುವು ಮಾಡಿಕೊಟ್ಟ 20 ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿರುವ ಮುಖ್ಯಮಂತ್ರಿಗಳು ಅದರಲ್ಲಿ ಏಳು ಜನರನ್ನು ತಾವೇ ನಗರ ಯೋಜನೆಗೆ ಶಿಫಾರಸ್ಸು ಮಾಡಿದ್ದರು. ಇಂತಹ ಅಧಿಕಾರಗಳನ್ನು ಶಿಫಾರಸು ಮಾಡಿರುವ ಮುಖ್ಯಮಂತ್ರಿಗಳಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.  ಮಾಜಿ ಸಚಿವ ಕೆ.ಜೆ.ಜಾರ್ಜ್, ಆರ್.ವಿ.ದೇವರಾಜ್, ಗುರಪ್ಪ ನಾಯ್ಡು, ರಾಜೀವ್ಗೌಡ, ಜಿ.ಎ.ಬಾವಾ, ಶ್ಯಾಮನೂರು ಶಿವಶಂಕರಪ್ಪ, ಮಾಜಿ ಪಾಲಿಕೆ ಸದಸ್ಯ ಗೋವಿಂದರಾಜು, ಶಾಸಕ ಎನ್.ಎ.ಹ್ಯಾರೀಸ್ ಸೇರಿದಂತೆ 13 ರಾಜಕಾರಣಿಗಳು ಭೂ ಒತ್ತುವರಿಯಲ್ಲಿ ಭಾಗಿಯಾಗಿದ್ದಾರೆ. ಅದೇ ರೀತಿ ಮಂತ್ರಿಮಾಲ್, ಟಾಟಾ ಹೌಸಿಂಗ್ ಸೊಸೈಟಿ, ನಿತೀಶ್ ಬ್ರಿಗೇಡ್, ಬಾಗ್ಮನೆ ಟೆಕ್ಪಾರ್ಕ್, ಮಾನ್ಯತಾ, ಸಲಾಪುರಿಯಾ ಅಲ್ಲದೆ 150 ಮಾಲ್ಗಳು ರಾಜಕಾಲುವೆ ಒತ್ತುವರಿ ಮಾಡಿಕೊಂಡು ನಿರ್ಮಾಣವಾಗಿವೆ.

ಡಾಲರ್ಸ್ಸ ಕಾಲೋನಿಯಲ್ಲಿರುವ ಮುಖ್ಯಮಂತ್ರಿಗಳ ನಿವಾಸವೂ ಒತ್ತುವರಿಯಾಗಿದೆ ಎಂದು ರಮೇಶ್ ಆರೋಪಿಸಿದರು.   ರಾಜಕಾಲುವೆಗಳು, ಕೆರೆಗಳು ಮತ್ತು ಅದರ ಬಫರ್ ಝೋನ್ ಪ್ರದೇಶಗಳ ಪೈಕಿ ಶೇ.70ರಷ್ಟನ್ನು ಶೋಭಾ, ಪ್ರೇಸ್ಟೀಜ್, ಮಹಾವೀರ್, ಎಲ್ಆಂಡ್ಟಿಯಂತಹ ಬೃಹತ್ ವಸತಿ ವಾಣಿಜ್ಯ ಕಟ್ಟಡ ನಿರ್ಮಾಣ ಸಂಸ್ಥೆಗಳು ಒತ್ತುವರಿ ಮಾಡಿವೆ.   ಅಧಿಕಾರಿಗಳಾದ ಬಿ.ಪಿ.ಇಕ್ಕೇರಿ, ಕೆ.ಎನ್.ದೇವರಾಜ್, ಉಮಾನಂದರೈ, ರಾಮಚಂದ್ರಮೂರ್ತಿ, ಸರ್ಫ್ರಾಜ್ಖಾನ್, ಮುನಿರಾಜು, ಲಕ್ಷ್ಮೀನರಸಯ್ಯ, ಭೀಮಪ್ಪ, ವೀರಾನಾಯಕ್, ಜಿ.ಎನ್.ಪರಮೇಶ್ವರ್, ಕೆ.ಎಚ್.ರಾಜು, ಶಿವಬಸಯ್ಯ, ಎಂ.ಆರ್.ರಮೇಶ್, ಎಂ.ಸಿ.ಪ್ರಭುಶರಣ್, ರವೀಂದ್ರನಾಥ್, ಪಿ.ರಾಜೀವ್, ಬಿ.ಸಿ.ನಾಗೇಶ್, ಎಲ್.ರವೀಂದ್ರ, ಪುಟ್ಟ ಹಲಗಯ್ಯ, ಕೆ.ಎಂ.ರಾಮಚಂದ್ರನ್, ಬಿ.ಎಂ.ಕೃಷ್ಣಕುಮಾರ್, ಕಾಂತರಾಜ್, ಕೆ.ಕೃಷ್ಣಮೂರ್ತಿ, ಸಿ.ಸತ್ಯಭಾಮಾ, ಇ.ತವಣಿ, ಶಂಕರ್ಪಾಟೀಲ್, ರಾಮಾಶೆಟ್ಟಿಗಾರ್, ಟಿ.ವೆಂಕಟೇಶ್, ವಿಜಯ್ಕುಮಾರ್ ಮುಂತಾದವರು ಒತ್ತುವರಿ ಮಾಡಿಕೊಂಡಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ಈ ಬೃಹತ್ ಹಗರಣದಲ್ಲಿ 2,300ಕ್ಕೂ ಹೆಚ್ಚು ಬೃಹತ್ ವಸತಿ ಮತ್ತು ವಾಣಿಜ್ಯ ಸಮುಚ್ಚಯಗಳನ್ನು ನಿರ್ಮಿಸಲಾಗಿದೆ.
368ಕ್ಕೂ ಹೆಚ್ಚು ಕಟ್ಟಡಗಳು, 29 ಟೆಕ್ಪಾರ್ಕ್, ಐಟಿ-ಬಿಟಿ ಕಂಪೆನಿಗಳು ಇವೆ ಎಂದು ಅವರು ಹೇಳಿದರು.  ಮಿಲ್ಲರ್ ಕೆರೆ ಪ್ರದೇಶದಲ್ಲಿ ಶಾಸಕ ಎನ್.ಎ.ಹ್ಯಾರೀಸ್ ರವರು 12.500 ಚದರ ಅಡಿಗಳಷ್ಟು ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಅವರು ಆರೋಪಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin