130 ಕೆಜಿ ಗಾಂಜಾ ವಶ, 6 ಮಂದಿ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ganja-selles-1
ಬೆಂಗಳೂರು, ಫೆ.14- ವಿದ್ಯಾರ್ಥಿಗಳಿಗೆ ಮತ್ತು ಸಾಫ್ಟ್‍ವೇರ್ ಎಂಜಿನಿಯರ್‍ಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿರುವ ಆಗ್ನೇಯ ವಿಭಾಗದ ಪೊಲೀಸರು ಆರು ಮಂದಿಯನ್ನು ಬಂಧಿಸಿ 130 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಹುಳಿಮಾವು: ದಿಢೀರ್ ಶ್ರೀಮಂತರಾಗುವ ಉದ್ದೇಶದಿಂದ ಗಾಂಜಾ ವ್ಯವಹಾರಕ್ಕೆ ಇಳಿದಿದ್ದ ತಮಿಳುನಾಡು ಮೂಲದ ಗೋವಿಂದರಾಜು (29), ರಾಮನಗರ ಜಿಲ್ಲೆ ಕೋಡಿಹಳ್ಳಿ ಹೋಬಳಿಯ ಬಸವರಾಜ್ (28), ಕೊಳ್ಳೆಗಾಲ ತಾಲೂಕಿನ ಮಗೇಂದ್ರ (22) ಬಂಧಿತ ಆರೋಪಿಗಳು.

ಆರೋಪಿ ಗೋವಿಂದರಾಜು ಕೆಲಸ ಅರಸಿಕೊಂಡು ಬೆಂಗಳೂರಿಗೆ ಬಂದು ಕೊತ್ತನೂರಿನಲ್ಲಿ ವಾಸವಾಗಿದ್ದ ಈತ ಹೊಟೇಲ್‍ಗಳಲ್ಲಿ ಚಪಾತಿ ಪ್ಯಾಕ್ ಮಾಡುವ ರೀತಿಯಲ್ಲಿ ಗಾಂಜಾವನ್ನು ರೋಲ್ ಮಾಡಿ ಪ್ಯಾಕ್ ಮಾಡಿ 1 ರೋಲ್‍ಅನ್ನು 200 ರಿಂದ 500ರೂ.ಗಳಿಗೆ ಆಯ್ದ ಗಿರಾಕಿಗಳನ್ನು ಮೊಬೈಲ್‍ನಲ್ಲಿ ಸಂಪರ್ಕಿಸಿ ಮಾರಾಟ ಮಾಡುತ್ತಿದ್ದುದು ವಿಚಾರಣೆಯಿಂದ ತಿಳಿದುಬಂದಿದ್ದು, ಈತನಿಂದ 70 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಈತನ ಹೇಳಿಕೆ ಮೇರೆಗೆ ಇನ್ನಿಬ್ಬರು ಸಹಚರರಾದ ಬಸವರಾಜ್ ಮತ್ತು ಮಗೇಂದ್ರನನ್ನು ಬಂಧಿಸಿ ಎಲೆಕ್ಟ್ರಾನಿಕ್ ತೂಕದ ಯಂತ್ರ, 3 ಮೊಬೈಲ್, 1 ಕಾರು, ಆಟೋರಿಕ್ಷಾ, 2 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಆರೋಪಿಗಳು 10 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದು, ದಿಢೀರ್ ಶ್ರೀಮಂತರಾಗುವ ಉದ್ದೇಶದಿಂದ ಗಾಂಜಾ ವ್ಯವಹಾರಕ್ಕೆ ಇಳಿದಿದ್ದು ವಿಚಾರಣೆಯಿಂದ ತಿಳಿದುಬಂದಿದೆ.ಆಗ್ನೇಯ ವಿಭಾಗದ ಡಿಸಿಪಿ ಡಾ.ಬೋರಲಿಂಗಯ್ಯ ಮಾರ್ಗದರ್ಶನದಲ್ಲಿ ಎಸಿಪಿ ರಮೇಶ್ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ಮಹಾಜನ್ ಅವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿತ್ತು.

ಕೋರಮಂಗಲ: ಸಾಫ್ಟ್‍ವೇರ್ ಉದ್ಯೋಗಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಹೈಟೆಕ್ ಗಾಂಜಾ ಮಾರಾಟಗಾರ ಚಾಮರಾಜನಗರದ ನವೀನ್‍ಕುಮಾರ್ (29) ಎಂಬಾತನನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿ 40 ಕೆಜಿ ಗಾಂಜಾ, 2 ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಟಾಟಾ ಇಂಡಿಕಾ ಕಾರನ್ನು ವಶಪಡಿಸಿಕೊಂಡಿದ್ದಾರೆ.ಆರೋಪಿ ನವೀನ್‍ಕುಮಾರ್ ಕಲಾಸಿಪಾಳ್ಯ ಠಾಣೆಯಲ್ಲಿ ಡಕಾಯಿತಿ ಪ್ರಕರಣದಲ್ಲಿ ಆರೋಪಿಯಾಗಿದ್ದು ವಿಚಾರಣೆ ಹಂತದಲ್ಲಿದೆ. ಈತನ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ನಂತರ ಸುಮಾರು ವರ್ಷಗಳಿಂದ ಗಾಂಜಾ ಮಾರಾಟ ಮಾಡಿಕೊಂಡಿದ್ದು, 2016ನೆ ಸಾಲಿನಲ್ಲಿ ಕಗ್ಗಲಿಪುರ ಠಾಣೆಯಲ್ಲಿ ಬಂಧಿತನಾಗಿ ಜೈಲಿನಿಂದ ಬಿಡುಗಡೆಯಾದ ನಂತರವೂ ಗಾಂಜಾ ಮಾರಾಟ ಮಾಡಿಕೊಂಡಿದ್ದನು. ಗಾಂಜಾ ಮಾರಾಟದಿಂದ ಬಂದ ಸಂಪಾದನೆಯಲ್ಲಿ ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಸೈಟ್‍ವೊಂದನ್ನು ಖರೀದಿ ಮಾಡಿ ಮನೆಯನ್ನು ಕಟ್ಟಿಸುತ್ತಿರುವುದು ತನಿಖಾ ವೇಳೆ ತಿಳಿದುಬಂದಿದೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಶೋಧ ಮುಂದುವರಿದಿದೆ.

ಮೈಕೊ ಲೇಔಟ್: ಖಾಲಿ ಜಾಗದಲ್ಲಿ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಒರಿಸ್ಸಾ ಮೂಲದ ಜಗರ್‍ಸಮಲ್ (30) ಮತ್ತು ಲೋಕನಾಥ್ ಸಹನಿ (32) ಎಂಬುವರನ್ನು ಮೈಕೊ ಲೇಔಟ್ ಪೊಲೀಸರು ಬಂಧಿಸಿ 15 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಬಿಟಿಎಂ 2ನೆ ಹಂತ, 6ನೆ ಕ್ರಾಸ್, ವೀರಾಂಜನೇಯ ದೇವಸ್ಥಾನದ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಇವರಿಬ್ಬರು ಒರಿಸ್ಸಾದಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ಬೆಂಗಳೂರು ನಗರದ ವಿವಿಧ ಸ್ಥಳಗಳಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಸಾಫ್ಟ್‍ವೇರ್ ಎಂಜಿನಿಯರ್‍ಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಮೈಕೊ ಲೇಔಟ್ ಉಪವಿಭಾಗದ ಎಸಿಪಿ ಕರಿಬಸವನಗೌಡ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ಅಜಯ್ ಮತ್ತು ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿತ್ತು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin