’14ನೆ ಪ್ರವಾಸಿ ದಿವಸ್’ ಕಾರ್ಯಕ್ರಮದ ಲಾಂಛನ ಬಿಡುಗಡೆ ಮಾಡಿದ ಸುಷ್ಮಾ-ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

Pravasi-divas ನವದೆಹಲಿ, ಆ.26-ಮುಂದಿನ ವರ್ಷದ ಜನವರಿಯಲ್ಲಿ ನಡೆಯುವ 14ನೆ ಭಾರತೀಯ ಪ್ರವಾಸಿ ದಿವಸ್ ಕಾರ್ಯಕ್ರಮದಲ್ಲಿ ಲಾಂಛನವನ್ನು ದೆಹಲಿಯಲ್ಲಿಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ನಂತರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಭಾರತದ ಸುಮಾರು 25 ದಶಲಕ್ಷ ಜನರು ವಿದೇಶಗಳಲ್ಲಿ ನೆಲೆಸಿದ್ದು, ವಿಶ್ವ ಬ್ಯಾಂಕ್ನ ಮಾಹಿತಿ ಅನುಸಾರ 2015ರಲ್ಲಿ 69 ಬಿಲಿಯನ್ ಡಾಲರನ್ನು ಸಂದಾಯಿಸಿದ್ದಾರೆ. ಅನಿವಾಸಿ ಭಾರತೀಯರ ಖ್ಯಾತಿ ಏರುಗತಿಯಲ್ಲಿದ್ದು, ಉತ್ತಮ ಭವಿಷ್ಯದ ಮುನ್ಸೂಚನೆ ಇದೆ ಎಂದರು. ಕರ್ನಾಟಕ ಭಾರತದ ದೊಡ್ಡ ರಾಜ್ಯಗಳ ಪೈಕಿ 7ನೆ ಸ್ಥಾನ ಪಡೆದಿದೆ, ಜನಸಂಖ್ಯೆಯಲ್ಲಿ 8ನೆ ಸ್ಥಾನದಲ್ಲಿದೆ. ನಮ್ಮಲ್ಲಿ ಕೈಗಾರಿಕೆಗೆ ಪೂರಕವಾದ ವಾತಾವರಣವಿದೆ ಎಂದು ಹೇಳಿದರು.

Siddu1

ಜನವರಿ 7 ರಿಂದ 9ರವರೆಗೂ ದೇಶದ 14ನೆ ಪ್ರವಾಸಿ ದಿವಸ್ ಕಾರ್ಯಕ್ರಮ ಕರ್ನಾಟಕದಲ್ಲಿ ನಡೆಯಲಿದೆ. ಜ.9 ಮಹಾತ್ಮಗಾಂಧೀಜಿಯವರು ದಕ್ಷಿಣ ಆಫ್ರಿಕಾದಿಂದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವ ಸಲುವಾಗಿ ಭಾರತಕ್ಕೆ ಮರಳಿದ ದಿನ, ಇಂತಹ ಐತಿಹಾಸಿಕ ದಿನವನ್ನು ಪ್ರವಾಸಿ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಸುಷ್ಮಾ ಸ್ವರಾಜ್ ಹೇಳಿದರು.  ಇದೇ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪ್ರವಾಸಿ ದಿವಸ್ ಸಮ್ಮೇಳನಕ್ಕೆ ಕೇಂದ್ರ ವಿದೇಶಾಂಗ ಇಲಾಖೆ ಜೊತೆ ಕೆಲಸ ಮಾಡಲು ಉತ್ಸುಕರಾಗಿರುವುದಾಗಿ ಹೇಳಿದರು.
ಈಗಾಗಲೇ ಜರ್ಮನಿ, ಜಪಾನ್, ಸ್ವಿಟ್ಜರ್ಲ್ಯಾಂಡ್, ಕೆನಡಾ, ಬ್ರಿಟನ್ ಸೇರಿದಂತೆ 19 ವಿದೇಶಾಂಗ ರಾಯಭಾರಿ ಕಚೇರಿಗಳು ಬೆಂಗಳೂರಿನಲ್ಲಿವೆ. ಬಹಳಷ್ಟು ಪ್ರಮುಖ ಕಂಪೆನಿಗಳು ತಮ್ಮ ಕೇಂದ್ರ ಕಚೇರಿಯನ್ನು ಬೆಂಗಳೂರಿನಲ್ಲಿ ತೆರೆದಿವೆ. ವಿವಿಧ ದೇಶಗಳ 650 ಕಂಪೆನಿಗಳು ಕರ್ನಾಟಕದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ ಎಂದು ತಿಳಿಸಿದರು. ಕರ್ನಾಟಕ ಹೂಡಿಕೆಗೆ ಪ್ರಶಸ್ತವಾಗಿದೆ. ಈಗಾಗಲೇ ಕೈಗಾರಿಕಾ ನೀತಿಯನ್ನು ಜಾರಿಗೆ ತರಲಾಗಿದೆ. ಹಲವಾರು ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳು ಪ್ರಗತಿಯಲ್ಲಿವೆ. ಮಾನವ ಸಂಪನ್ಮೂಲ ಹೇರಳವಾಗಿದೆ. ಉತ್ತಮ ಆಡಳಿತ ಮತ್ತು ಸಕಾರಾತ್ಮಕ ಸ್ಪಂದನೆಯ ಸರ್ಕಾರವಿದೆ ಎಂದು ವಿವರಿಸಿದರು.

ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ 2016ರ ಮೊದಲ ಆರು ತಿಂಗಳಲ್ಲಿ ಅತಿ ಹೆಚ್ಚು ಹೂಡಿಕೆಯನ್ನು ಆಕರ್ಷಿಸುವ ಮೂಲಕ ನಂ.1 ಸ್ಥಾನದಲ್ಲಿದೆ. ದೇಶದಲ್ಲಿ 3.11 ಲಕ್ಷ ಕೋಟಿ ಹೂಡಿಕೆಯಾಗಿದ್ದು, ಅದರಲ್ಲಿ ಕರ್ನಾಟಕ 68 ಸಾವಿರ ಕೋಟಿ ಬಂಡವಾಳ ಪಡೆದುಕೊಂಡು ರಾಷ್ಟ್ರಮಟ್ಟದಲ್ಲಿ ಶೇ.38.34ರಷ್ಟು ಪಾಲು ಹೊಂದಿದೆ.  ಕಳೆದ ಫೆಬ್ರವರಿಯಲ್ಲಿ ನಡೆದ ಹೂಡಿಕೆದಾರರ ಸಮಾವೇಶದಲ್ಲಿ 1.75ಲಕ್ಷ ಕೋಟಿ ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದ್ದು, 1.25 ಲಕ್ಷ ಕೋಟಿ ಹೂಡಿಕೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ವಿದೇಶ ನೇರ ಬಂಡವಾಳ ಹೂಡಿಕೆಯಲ್ಲಿ 5.2 ಬಿಲಿಯನ್ ಅಮೆರಿಕನ್ ಡಾಲರ್ ಆಕರ್ಷಿಸಿ ದೇಶದಲ್ಲೇ 2ನೆ ಅಗ್ರಸ್ಥಾನದಲ್ಲಿದೆ ಎಂದು ಅವರು ಹೇಳಿದರು.  ಇನ್ಫೋಸಿಸ್, ವಿಪ್ರೋದಂತಹ ಪ್ರಮುಖ ಕಂಪೆನಿಗಳು ಬೆಂಗಳೂರಿನಲ್ಲಿವೆ. ಐಟಿ ಮಾಹಿತಿ ತಂತ್ರಜ್ಞಾನದ ನಂತರ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದೆ ಎಂದು ಹೇಳಿದರು.

► Follow us on –  Facebook / Twitter  / Google+

Facebook Comments

Sri Raghav

Admin