ಆ.21ರ ವರೆಗೆ ಕೆಜಿ ಹಳ್ಳಿ-ಡಿಜೆ ಹಳ್ಳಿ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಮುಂದುವರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.18- ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ವ್ಯಾಪ್ತಿಗಳಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಆ.21ರ ವರೆಗೆ ನಿಷೇಧಾಜ್ಞೆ ಮುಂದುವರಿಸಲಾಗಿದೆ.

ಈ ಎರಡೂ ವ್ಯಾಪ್ತಿಗಳಲ್ಲಿ ಇಂದು ಬೆಳಗ್ಗೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿಯಲ್ಲಿತ್ತು. ಇದೀಗ ಅಂದಿನ ಘಟನೆ ಆಧರಿಸಿ ವಸ್ತುಸ್ಥಿತಿ ಅವಲೋಕಿಸಿ ಅಹಿತಕರ ಘಟನೆಗಳು ಮರುಕಳಿಸದಂತೆ ಪ್ರತಿಬಂಧಕ ಕಾಯ್ದೆಯನ್ನು ಮುಂದುವರಿಸುವುದು ಸೂಕ್ತ ಎಂದು ನಗರ ಪೊಲೀಸ್ ಆಯುಕ್ತ ಕಮಲ್‍ಪಂಥ್ ಅವರು ನಿಷೇಧಾಜ್ಞೆಯನ್ನು ಆ.21 ಬೆಳಗ್ಗೆ 6 ಗಂಟೆವರೆಗೆ ವಿಸ್ತರಿಸಿದ್ದಾರೆ.

ಅಂದಿನ ಘಟನೆಯನ್ನಾಧರಿಸಿ ದಾಖಲಾಗಿರುವ ಪ್ರಕರಣಗಳ ತನಿಖೆ ನಡೆಯುತ್ತಿದ್ದು, ಆರೋಪಿಗಳನ್ನು ಬಂಸುವ ಕಾರ್ಯ ಮುಂದುವರಿದಿದೆ.

ಪ್ರಸ್ತುತ ಜಾರಿಯಲ್ಲಿರುವ ನಿಷೇಧಾಜ್ಞೆಯನ್ನು ತೆರವುಗೊಳಿಸಿದಲ್ಲಿ ಗಲಭೆಯಲ್ಲಿ ಪಾಲ್ಗೊಂಡ ಆರೋಪಿಗಳು, ಅವರ ಬೆಂಬಲಿಗರು ಸಾಕ್ಷ್ಯಗಳನ್ನು ನಾಶಪಡಿಸಿ ಸಾಕ್ಷಿದಾರರನ್ನು ಬೆದರಿಸಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಕೃತ್ಯಗಳಲ್ಲಿ ತೊಡಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಎರಡೂ ಠಾಣೆ ವ್ಯಾಪ್ತಿಗಳಲ್ಲಿ ಯಾವುದೇ ಅಹಿತಕರ ಘಟನೆಗಳು ಮರುಕಳಿಸದಂತೆ ನಿಷೇಧಾಜ್ಞೆ ಮುಂದುವರಿಸಲಾಗಿದೆ.

ಈ ಸಂದರ್ಭದಲ್ಲಿ ಯಾವುದೇ ವ್ಯಕ್ತಿ ಸಾರ್ವಜನಿಕರಿಗೆ ಧಕ್ಕೆ ಉಂಟಾಗುವಂತೆ ಯಾವುದೇ ಕೃತ್ಯದಲ್ಲಿ ತೊಡಗುವಂತಿಲ್ಲ. ಅನಗತ್ಯವಾಗಿ ಸಂಚರಿಸುವಂತಿಲ್ಲ.

ಇಬ್ಬರಿಗಿಂತ ಹೆಚ್ಚು ಜನ ಸೇರುವಂತಿಲ್ಲ. ಮೆರವಣಿಗೆ ಮತ್ತು ಸಭೆಗಳನ್ನು ನಡೆಸುವಂತಿಲ್ಲ ಹಾಗೂ ಮಾರಕಾಸ್ತ್ರಗಳನ್ನು ಕೊಂಡೊಯ್ಯುವಂತಿಲ್ಲ.

Facebook Comments

Sri Raghav

Admin