150 ಕೋಟಿ ರೂ. ವೆಚ್ಚದಲ್ಲಿ ‘ಮುಖ್ಯಮಂತ್ರಿ ಆದರ್ಶ ಗ್ರಾಮ ಯೋಜನೆ’

ಈ ಸುದ್ದಿಯನ್ನು ಶೇರ್ ಮಾಡಿ

H.Anjaneya-Session

ಬೆಂಗಳೂರು, ಡಿ.21- ಪರಿಶಿಷ್ಟ ಜಾತಿ, ಪಂಗಡದ ಅತಿ ಹೆಚ್ಚು ಜನಸಂಖ್ಯೆ ಇರುವ ಗ್ರಾಮಗಳ ಅಭಿವೃದ್ಧಿಗೆ ಸರ್ಕಾರ ಮುಖ್ಯಮಂತ್ರಿ ಆದರ್ಶ ಗ್ರಾಮ ಎಂಬ ಮಹತ್ವಾಕಾಂಕ್ಷಿ ಯೋಜನೆಯನ್ನು 150 ಕೋಟಿ ರೂ. ವೆಚ್ಚದಲ್ಲಿ ಜಾರಿಗೆ ತರಲು ಉದ್ದೇಶಿಸಿದೆ ಎಂದು ಸಮಾಜ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಎಚ್.ಆಂಜನೇಯ ಇಂದಿಲ್ಲಿ ತಿಳಿಸಿದರು.  ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ, ಪಂಗಡಗಳ ಉಪಯೋಜನೆಯಡಿ ಜಾರಿಗೆ ತರಲಾಗುತ್ತಿರುವ ಈ ಯೋಜನೆಯ ಲಾಭವನ್ನು ಪರಿಶಿಷ್ಟ ಜಾತಿ ಹೆಚ್ಚಿರುವ ನೂರು ಗ್ರಾಮಗಳು ಹಾಗೂ ಪರಿಶಿಷ್ಟ ಪಂಗಡದವರು ಹೆಚ್ಚಿರುವ 50 ಗ್ರಾಮಗಳು ಪಡೆಯಲಿವೆ. ಈ ಯೋಜನೆಯಡಿ ಆಯ್ದ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು, ರಸ್ತೆ, ಒಳಚರಂಡಿ, ವಸತಿ, ವಿದ್ಯುತ್, ಸಮುದಾಯ ಭವನ, ಶಾಲಾ ಕಟ್ಟಡದ ದುರಸ್ತಿ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅನುದಾನದಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ.

ಹಾಡಿ ವಾಸ್ತವ್ಯ:

ಹೊಸ ವರ್ಷವನ್ನು ಬುಡಕಟ್ಟು ಜನರ ಹಾಡಿಯಲ್ಲಿ ವಾಸ್ತವ್ಯ ಮಾಡುವ ಮೂಲಕ ಆಚರಿಸುವ ಸಂಪ್ರದಾಯವನ್ನು ರೂಢಿಸಿಕೊಂಡಿರುವ ಸಚಿವ ಎಚ್.ಆಂಜನೇಯ ಅವರು ಈ ಬಾರಿ ಉಡುಪಿಯಿಂದ 80ಕಿಮೀ ದೂರವಿರುವ ಮುರೂರ ಕೊರಗರ ಹಾಡಿಯಲ್ಲಿ ಮರ್ಲಿ ಕೋಂ ಮರ್ಲ ಕೊರಗ ಎಂಬುವರ ಮನೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಸುಮಾರು 10 ಕುಟುಂಬಗಳು ವಾಸಿಸುವ ಈ ಹಾಡಿಯಲ್ಲಿ 45 ರಿಂದ 50 ಜನ ವಾಸಿಸುತ್ತಿದ್ದು, ಈ ತಿಂಗಳ 31ರಂದು ಬೈಂದೂರು ವಿಧಾನಸಭಾ ಕ್ಷೇತ್ರದ ಕಲ್ತೋಡು ಪಂಚಾಯಿತಿಯ ಈ ಹಾಡಿಯಲ್ಲಿ ವಾಸ್ತವ್ಯ ಮಾಡಿ ಅಲ್ಲಿನ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin