150 ಜನರು ಬಲಿಯಾದ ಕಾನ್ಪುರ ರೈಲು ದುರಂತಕ್ಕೆ ಕಾರಣರಾದ ನಾಲ್ವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Kanpur-Train-Accident

ಕಠ್ಮಂಡು, ಫೆ.7-ಕಳೆದ ವರ್ಷ ನವೆಂಬರ್‍ನಲ್ಲಿ 150 ಜನರನ್ನು ಬಲಿ ಪಡೆದ ಕಾನ್ಪುರ ರೈಲು ದುರಂತಕ್ಕೆ ಕಾರಣ ಎನ್ನಲಾದ ದುಷ್ಕರ್ಮಿಯೊಬ್ಬನನ್ನು ಹಿಮಾಲಯ ರಾಷ್ಟ್ರ ನೇಪಾಳದ ರಾಜಧಾನಿ ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಈತನೊಂದಿಗೆ ಇನ್ನೂ ಮೂವರನ್ನೂ ಸಹ ಸೆರೆಹಿಡಿಯಲಾಗಿದೆ.
ಈ ನಾಲ್ವರು ಕುಖ್ಯಾತರ ಬಂಧನದೊಂದಿಗೆ ರೈಲು ದುರಂತಕ್ಕೆ ವಿದ್ವಂಶಕ ಕೃತ್ಯ ಕಾರಣವೆಂಬುದು ಸಾಬೀತಾಗಿದ್ದು, ಇದರ ಹಿಂದೆ ಇರುವ ವ್ಯವಸ್ಥಿತ ಜಾಲ ಭೇದಿಸಲು ಕಾರ್ಯಾಚರಣೆ ತೀವ್ರಗೊಂಡಿದೆ.

ದುಬೈನಿಂದ ಬಂದ ಷಂಶುಲ್ ಹೋಡಾ ಮತ್ತು ಆತನ ಮೂವರು ಸಹಚರರಾದ ಬ್ರಿಜ್ ಕಿಶೋರ್ ಗಿರಿ, ಅಶೀಶ್ ಸಿಂಗ್ ಮತ್ತು ಉಮೇಶ್‍ಕುಮಾರ್ ಕುರ್ಮಿ ಅವರನ್ನು ನೇಪಾಳ ವಿಶೇಷ ಪೊಲೀಸ್ ತಂಡ ಬಂಧಿಸಿದೆ. ಇವರು ದಕ್ಷಿಣ ನೇಪಾಳದ ಕಲೈಯಾ ಜಿಲ್ಲೆಯವರು.   ಹೋಡಾನನ್ನು ನಿನ್ನೆ ರಾತ್ರಿ ತ್ರಿಭುವನ್ ಇಂಟರ್‍ನ್ಯಾಷನಲ್ ಏರ್‍ಪೋರ್ಟ್‍ನಲ್ಲಿ ಬಂಧಿಸಲಾಗಿದೆ ಎಂದು ಉಪ ಪೊಲೀಸ್ ಮಹಾ ನಿರೀಕ್ಷಕ (ಡಿಐಜಿ) ಪಶುಪತಿ ಉಪಾಧ್ಯಾಯ ತಿಳಿಸಿದ್ದಾರೆ.   ಕಳೆದ ವರ್ಷ ನವೆಂಬರ್‍ನಲ್ಲಿ ಉತ್ತರಪ್ರದೇಶದ ಕಾನ್ಪುರದಲ್ಲಿ 150 ಜನರು ಮೃತಪಟ್ಟ ರೈಲು ದುರಂತಕ್ಕೆ ಸಂಬಂಧಪಟ್ಟಂತೆ ಹೋಡಾ ಪೊಲೀಸರಿಗೆ ಅಗತ್ಯವಾಗಿ ಬೇಕಾಗಿದ್ದ ಎಂಬ ಬಗ್ಗೆ ನಮಗೆ ಮಾಹಿತಿ ಬಂದಿತ್ತು ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ಶಾಮೀಲಾಗಿದ್ದ ಹೋಡಾ ಬಂಧನಕ್ಕಾಗಿ ಭಾರತೀಯ ಪೊಲೀಸರೊಂದಿಗೆ ನೇಪಾಳ ಪೊಲೀಸರು ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಉಪಾಧ್ಯಾಯ ತಿಳಿಸಿದ್ದಾರೆ.   ಇಂಟರ್‍ಪೋಲ್ ಸಮನ್ವಯತೆಯೊಂದಿಗೆ ದುಬೈನಿಂದ ಈ ನಾಲ್ವರನ್ನು ಪೊಲೀಸರು ನೇಪಾಳಕ್ಕೆ ಕರೆತಂದಿದ್ದರು. ನೇಪಾಳದ ಬಾರಾ ಜಿಲ್ಲೆಯಲ್ಲಿ ಜೋಡಿ ಕೊಲೆ ಪ್ರಕರಣದಲ್ಲೂ ಹೋಡಾ ಶಾಮೀಲಾಗಿದ್ದಾನೆ. ಅಂತಾರಾಷ್ಟ್ರೀಯ ಕ್ರಿಮಿನಲ್ ಗ್ಯಾಂಗ್‍ಗಳೊಂದಿಗೆ ಈತ ಸಂಪರ್ಕ ಹೊಂದಿದ್ದು, ಭಾರತ ಮತ್ತು ನೇಪಾಳದ ಅನೇಕ ಅಪರಾಧ ಚಟುವಟಿಕೆಗಳಿಗೆ ರೂವಾರಿಯಾಗಿದ್ದಾನೆ ಎಂದು ಅವರು ತಿಳಿಸಿದ್ದಾರೆ.   ಹೋಡಾ ವಿರುದ್ಧ ಬಾರಾ ಜಿಲ್ಲಾ ನ್ಯಾಯಾಲಯದಲ್ಲಿ ಈಗಾಗಲೇ ಪ್ರಕರಣ ದಾಖಲಾಗಿದೆ.

ಭಾರತೀಯ ರೈಲುಗಳನ್ನು ಗುರಿಯಾಗಿಟ್ಟುಕೊಂಡು ವಿಧ್ವಂಸಕ ಕೃತ್ಯಗಳನ್ನು ನಡೆಸಲು ಪಾಕಿಸ್ತಾನಿ ಬೇಹುಗಾರಿಕೆ ಸಂಸ್ಥೆ ಐಎಸ್‍ಐನಿಂದ ಆದೇಶ ಪಡೆದಿದ್ದಾರೆ ಎನ್ನಲಾದ ಮೂವರನ್ನು ಜನವರಿಯಲ್ಲಿ ಬಿಹಾರ ಪೊಲೀಸರು ಬಂಧಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin