150 ಜನರು ಬಲಿಯಾದ ಕಾನ್ಪುರ ರೈಲು ಹಳಿ ಸ್ಫೋಟಕ್ಕೆ ಪ್ರೆಷರ್ ಕುಕ್ಕರ್ ಬಾಂಬ್ ಬಳಕೆ

ಈ ಸುದ್ದಿಯನ್ನು ಶೇರ್ ಮಾಡಿ

Khanpur

ಲಕ್ನೋ, ಜ.20-ಉತ್ತರಪ್ರದೇಶದ ಕಾನ್ಪುರದಲ್ಲಿ ಕಳೆದ ನವೆಂಬರ್‍ನಲ್ಲಿ 150 ಜನರನ್ನು ಬಲಿ ತೆಗೆದುಕೊಂಡ ರೈಲು ಅಪಘಾತಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಮೂವರು ಶಂಕಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಕೃತ್ಯದಲ್ಲಿ ಐಎಸ್‍ಐ ಶಾಮೀಲಾಗಿತು ಎಂಬುದೂ ಸೇರಿದಂತೆ ಆತಂಕಕಾರಿ ಸ್ಫೋಟಕ ಮಾಹಿತಿಗಳು ಬಹಿರಂಗಗೊಳ್ಳುತ್ತಿದೆ.
ಈ ಕೃತ್ಯದಲ್ಲಿ ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಇಂಟರ್ ಸರ್ವಿಸ್ ಇಂಟಲಿಜೆನ್ಸ್ (ಐಎಸ್‍ಐ) ಶಾಮೀಲಾಗಿರುವ ಸಂಗತಿ ಬೆಳಕಿಗೆ ಬಂದಿದೆಯಲ್ಲದೇ, ಐಎಸ್‍ಐ ಆದೇಶದ ಮೇರೆಗೆ ರೈಲು ಹಳಿ ಸ್ಫೋಟಿಸಲು 10 ಲೀಟರ್ ಪ್ರೆಷರ್ ಕುಕ್ಕರ್‍ನನ್ನು ಬಳಸಲಾಗಿತ್ತು ಎಂಬ ಮಾಹಿತಿಯು ಲಭಿಸಿದೆ.

ರೈಲು ದುರಂತದ ಬಗ್ಗೆ ತನಿಖೆ ನಡೆಸುತ್ತಿರುವ ಉತ್ತರಪ್ರದೇಶ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್) ಈ ಕುರಿತು ಮಾಹಿತಿ ನೀಡಿದೆ. 10 ಲೀಟರ್ ಪ್ರೆಷರ್ ಕುಕ್ಕರ್ ಸುಧಾರಿತ ಸ್ಪೋಟಕ ಸಾಧನ (ಐಇಡಿ) ರೂಪದಲ್ಲಿ ಬಳಸಲಾಗಿತ್ತು. ಸ್ಫೋಟಕಗಳನ್ನು ಪ್ರೆಷರ್ ಕುಕ್ಕರ್‍ನಲ್ಲಿರಿಸಿ ಅದನ್ನು ರೈಲ್ವೆ ಹಳಿಗಳ ಮೇಲೆ ಇಟ್ಟು ಸ್ಫೋಟಿಸಲಾಗಿತ್ತು ಎಂದು ಬಂಧಿತರಲ್ಲಿ ಒಬ್ಬನಾದ ಮೋತಿಲಾಲ್ ಪಾಸ್ವಾನ್ ಒಪ್ಪಿಕೊಂಡಿದ್ದಾನೆ.  ನವೆಂಬರ್ 20ರಂದು ಕಾನ್ಪುರದಿಂದ 100 ಕಿ.ಮೀ.ದೂರದಲ್ಲಿ ಇಂದೋರ್-ಪಾಟ್ನಾ ಎಕ್ಸ್‍ಪ್ರೆಸ್‍ನ 14 ಬೋಗಿಗಳು ಹಳಿ ತಪ್ಪಿ, 150 ಮಂದಿ ಸಾವಿಗೀಡಾಗಿದ್ದರು. ಈ ಘಟನೆ ನಂತರ ರೈಲು ಹಳಿಯನ್ನು ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಹಾನಿಗೊಳಿಸಿದ್ದ ಬಗ್ಗೆ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದರು.

ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ನಡೆದ ಕೊಲೆಯೊಂದರ ಸಂಬಂಧ ಕಳೆದ ವಾರ ಮೋತಿಲಾಲ್ ಪಾಸ್ವಾನ್, ಉಮಾ ಶಂಕರ್ ಪಟೇಲ್ ಮತ್ತು ಮುಖೇಶ್ ಯಾದವ್ ಎಂಬುವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಸ್ಫೋಟಕ ಮಾಹಿತಿ ಲಭಿಸಿದೆ. ಇಂದೋರ್-ಪಾಟ್ನಾ ಹಾಗೂ ಸೀಲ್‍ದ್ಹಾ-ಅಜ್ಮೀರ್ ಎಕ್ಸ್‍ಪ್ರೆಸ್ ರೈಲುಗಳ ದುರಂತಗಳಲ್ಲಿ ಶಾಮೀಲಾಗಿರುವ ಇತರ ದುಷ್ಕರ್ಮಿಗಳಿಗಾಗಿ ಬಲೆ ಬೀಸಲಾಗಿದ್ದು ತನಿಖೆ ಇನ್ನಷ್ಟು ತೀವ್ರಗೊಂಡಿದೆ.

ಸರ್ಜಿಕಲ್ ದಾಳಿಗೆ ಪ್ರತೀಕಾರ?:

ಈ ಎರಡೂ ರೈಲು ದುರ್ಘಟನೆಗಳ ಬಗ್ಗೆ ತನಿಖೆ ತೀವ್ರಗೊಳಿಸಿರುವಂತೆಯೇ ಸೆಪ್ಟೆಂಬರ್ 29ರಂದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಭಾರತೀಯ ಕಮಾಂಡೊಗಳು ನಡೆಸಿದ ಸರ್ಜಿಕಲ್ ದಾಳಿಗೆ ಪ್ರತೀಕಾರವಾಗಿ ಈ ವಿಧ್ವಂಸಕ ಕೃತ್ಯಗಳನ್ನು ಎಸಗಲಾಗಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin