ಕಾಶ್ಮೀರದಲ್ಲಿ ಭಾರಿ ಹಿಂಸಾಚಾರ, ಕಲ್ಲು ತೂರಾಟ, 150ಕ್ಕೂ ಹೆಚ್ಚು ಪ್ರತೇಕತಾವಾದಿಗಳ ಬಂಧನ
ಶ್ರೀನಗರ, ಫೆ.23-ಪುಲ್ವಾಮಾ ಭಯೋತ್ಪಾದಕರ ದಾಳಿ ನಂತರ ಕಣಿವೆ ರಾಜ್ಯದಲ್ಲಿ ಪ್ರತ್ಯೇಕತಾವಾದಿಗಳ ವಿರುದ್ದ ಪೊಲೀಸರು ಮತ್ತೊಂದು ಸುತ್ತಿನ ಪ್ರಹಾರ ಮುಂದುವರಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ವಿಮೋಚನಾ ರಂಗ(ಜೆಕೆಎಲ್ಎಫ್) ನಾಯಕ ಯಾಸಿನ್ ಮಲಿಕ್ ಹಾಗೂ ಜಮಾತ್-ಎ-ಇಸ್ಲಾಮಿ ಜಮ್ಮು ಮತ್ತು ಕಾಶ್ಮೀರದ ಮುಖ್ಯಸ್ಥ ಅಬ್ದುಲ್ ಹಮೀದ್ ಫಯಾಜ್ ಸೇರಿದಂತೆ 150ಕ್ಕೂ ಹೆಚ್ಚು ಪ್ರತ್ಯೇಕತಾವಾದಿಗಳನ್ನು ಬಂಧಿಸಲಾಗಿದೆ.
ಪ್ರತ್ಯೇಕತಾವಾದಿಗಳ ಬಂಧನದ ನಂತರ ಅನಂತನಾಗ್ ಸೇರಿದಂತೆ ಕಾಶ್ಮೀರದ ವಿವಿಧೆಡೆ ಹಿಂಸಾಚಾರ ಭುಗಿಲೆದ್ದಿದೆ. ಪ್ರತ್ಯೇಕತಾವಾದಿಗಳ ಪರವಾಗಿ ಜನರು ಬೀದಿಗಿಳಿದು ಅಂಗಡಿ-ಮುಂಗಡ್ಡುಗಳನ್ನು ಬಲವಂತವಾಗಿ ಮುಚ್ಚಿಸಿ ಯೋಧರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಯೋಧರು ಮತ್ತು ಪ್ರತಿಭಟನಾಕಾರರ ನಡುವೆ ನಡೆದ ಘರ್ಷಣೆಯಲ್ಲಿ ಕೆಲವರು ಗಾಯಗೊಂಡಿದ್ದಾರೆ.
ಪೊಲೀಸರು ನಿನ್ನೆ ರಾತ್ರಿಯಿಂದ ನಡೆಸಿದ ಈ ಕ್ಷಿಪ್ರ ಕಾರ್ಯಾಚರಣೆಗಳಿಂದಾಗಿ ಪ್ರತ್ಯೇಕತಾವಾದಿಗಳು ಮತ್ತು ಉಗ್ರಗಾಮಿಗಳ ಪರ ಒಲವು ಹೊಂದಿರುವ ಮುಖಂಡರು ಮತ್ತು ಪ್ರತ್ಯೇಕತಾವಾದಿ ಬಣದ ಸದಸ್ಯರಲ್ಲಿ ನಡುಕು ಉಂಟಾಗಿದೆ.
ಪೊಲೀಸರು ಇಂದು ಮಾಮೂಲಿ ಕಾರ್ಯಾಚರಣೆ ಎಂದು ಹೇಳಿದ್ದರೂ, ತೆಹ್ರೀಕ್-ಎ-ಹುರಿಯತ್ ಪ್ರತ್ಯೇಕತಾವಾದಿ ಒಕ್ಕೂಟಕ್ಕೆ ಸೇರಿದ ಸಂಘಟನೆಯ ಮೇಲೆ ನಡೆದ ಪ್ರಥಮ ಅತಿದೊಡ್ಡ ಕಾರ್ಯಾಚರಣೆ ಇದಾಗಿದೆ ಎಂದು ಬಣ್ಣಿಸಲಾಗಿದೆ.
ಪೊಲೀಸರು ಬಂಧಿಸಿದವರಲ್ಲಿ ಜೆಕೆಎಲ್ಎಫ್ ನಾಯಕ ಯಾಸಿನ್ ಮಲಿಕ್ ಮತ್ತು ಜೆಇಐಜೆಕ್ ಮುಖಸ್ಥ ಅಬ್ದುಲ್ ಹಮೀದ್ ಫಯಾಜ್ ಕೂಡ ಸೇರಿದ್ದಾರೆ. ಪೊಲೀಸರ ಕಾರ್ಯಾಚರಣೆ ಮತ್ತು ತನ್ನ ನಾಯಕರು ಮತ್ತು ಸದಸ್ಯರನ್ನು ಬಂಧಿಸಿರುವ ಕ್ರಮವನ್ನು ಜಮಾತ್-ಎ-ಇಸ್ಲಾಮಿ ಜಮ್ಮು ಮತ್ತು ಕಾಶ್ಮೀರ ಸಂಘಟನೆ ಖಂಡಿಸಿದೆ. ಕಣಿವೆ ರಾಜ್ಯದಲ್ಲಿ ಮತ್ತಷ್ಟು ಅನಿಶ್ಚಿತತೆಗೆ ಎಡೆ ಮಾಡಿಕೊಡುವ ವ್ಯವಸ್ಥಿತ ಪಿತೂರಿ ಇದಾಗಿದೆ ಎಂದು ಸಂಘಟನೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ.
ಪುಲ್ವಾಮಾ ದಾಳಿ ನಂತರ ನಡೆದ ಬೆಳವಣಿಗೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ನಾಲ್ವರು ಪ್ರತ್ಯೇಕತಾವಾದಿ ನಾಯಕರಿಗೆ ನೀಡಲಾಗಿದ್ದ ಸರ್ಕಾರದ ಭದ್ರತೆಯನ್ನು ಹಿಂದಕ್ಕೆ ಪಡೆಯಲಾಗಿತ್ತು. ತರುವಾರು ವಿವಿಧ ಪ್ರತ್ಯೇಕತಾವಾದಿ ಸಂಘಟನೆಗಳ ಕೆಲವು ನಾಯಕರನ್ನು ಪೊಲೀಸರು ಬಂಧಿಸಿದ್ದರು.
ಯಾಸಿನ್ ಮಲಿಕ್ ಮತ್ತು ಹಮೀದ್ ಫಯಾಜ್ ಸೇರಿದಂತೆ ಪ್ರತ್ಯೇಕತಾವಾದಿ ನಾಯಕರನ್ನು ಬಂಧಿಸಿರುವ ಕ್ರಮವನ್ನು ಖಂಡಿಸಿರುವ ಹುರಿಯತ್ ಕಾನ್ಫರೆನ್ಸ್ ಅಧ್ಯಕ್ಷ ಇದು ಕಣಿವೆ ರಾಜ್ಯದಲ್ಲಿ ಮತ್ತಷ್ಟು ಆತಂಕದ ವಾತಾವರಣ ಸೃಷ್ಟಿಸಿ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತದೆ ಎಂದು ಹೇಳಿದ್ದಾರೆ.
ಪಿಡಿಪಿ ನಾಯಕಿ ಮತ್ತು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಈ ಬಗ್ಗೆ ಪ್ರತಿಕ್ರಿಯೆ ನೀಡಿ ಇದು ಪೊಲೀಸರ ನಿರಂಕುಶ ಕ್ರಮ. ಇದು ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.