16ರ ವಯಸ್ಸಿಗೆ ವಿಶ್ವಕಪ್ ಶೂಟಿಂಗ್‍ನಲ್ಲಿ 2 ಚಿನ್ನ ಗೆದ್ದ ಮನು ಬಾಕರ್…!

ಈ ಸುದ್ದಿಯನ್ನು ಶೇರ್ ಮಾಡಿ

manu

ಗ್ವಾದಲಜಾರ, ಮಾ.6-ಮೆಕ್ಸಿಕೋದಲ್ಲಿ ನಡೆಯುತ್ತಿರುವ ಈ ವರ್ಷದ ಪ್ರಥಮ ಅಂತಾರಾಷ್ಟ್ರೀಯ ಶೂಟಿಂಗ್ ಕ್ರೀಡಾ ಒಕ್ಕೂಟ (ಐಎಸ್‍ಎಸ್‍ಎಫ್)ದ ಸ್ಪರ್ಧೆಗಳಲ್ಲಿ ಮೂರನೇ ದಿನವೂ ಭಾರತದ ಪ್ರಾಬಲ್ಯ ಮುಂದುವರಿದಿದೆ. ಮಹಿಳೆಯರ 10 ಮೀ.ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಈಗಾಗಲೇ ಚಿನ್ನ ಗೆದ್ದಿರುವ ಭಾರತದ ಮನು ಬಾಕರ್ ಇದೇ ವಿಭಾಗದಲ್ಲಿ ಮಿಶ್ರ ಡಬಲ್ಸ್‍ನಲ್ಲೂ ಸ್ವರ್ಣ ಪದಕ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಸ್ಫರ್ಧೆಯಲ್ಲಿ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಶೂಟಿಂಗ್ ಪಟು ಎಂಬ ಹೆಗ್ಗಳಿಕೆಗೆ ಹರಿಯಾಣದ 16 ವರ್ಷದ ಬಾಲೆ ಪಾತ್ರರಾಗಿದ್ದಾರೆ. 10 ಮೀ.ಏರ್ ಪಿಸ್ತೂಲ್ ಮಿಶ್ರ ತಂಡದ ಸ್ಫರ್ಧೆಯಲ್ಲಿ ಭಾರತದ ಓಂ ಪ್ರಕಾಶ್ ಮಿತರ್‍ವಾಲ್ ಅವರೊಂದಿಗೆ ಉತ್ತಮ ಪ್ರದರ್ಶನ ನೋಡಿದ ಮನು ಮತ್ತೊಂದು ಬಂಗಾರದ ಪದಕದ ಗೆಲುವಿನ ನಗೆ ಬೀರಿದರು.

ಮನು ಮತ್ತು ಮಿತರ್‍ವಾಲ್ ಅವರು ಫೈನಲ್‍ನಲ್ಲಿ ಒಟ್ಟು 476.1 ಅಂಕಗಳೊಂದಿಗೆ ಚಿನ್ನ ಗೆದ್ದರು. ಇದು ಭಾರತಕ್ಕೆ ಲಭಿಸಿರುವ ಮೂರನೇ ಸ್ವರ್ಣ ಪದಕವಾಗಿದೆ. ಅಕ್ಟೋಬರ್‍ನಲ್ಲಿ ಅರ್ಜೈಂಟಿನಾದ ಬ್ಯೂನಸ್ ಏರಿಸ್‍ನಲ್ಲಿ ನಡೆಯಲಿರುವ 2018ರ ಯೂತ್ ಒಲಿಂಪಿಕ್ಸ್ ಗೇಮ್ಸ್‍ನಲ್ಲಿ ಈಗಾಗಲೇ ಸ್ಥಾನ ಪಡೆದಿರುವ ಮನು ಭಾನುವಾರ ನಡೆದ ಫೈನಲ್‍ನಲ್ಲಿ ಮೆಕ್ಸಿಕೋದ ಅಲೆಜಾಂಡ್ರ ಝಾವಲಾ ಅವರನ್ನು ಮಣಿಸಿ ಬಂಗಾರದ ಗೆಲುವಿನ ನಗೆ ಬೀರಿದ್ದರು. ಮನು ಒಟ್ಟು 237.5 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದರು. ಭಾರತ ಈವರೆಗೆ ಅರು ಪದಕಗಳನ್ನು ಗಳಿಸಿದ್ದು, ಮೂರು ಚಿನ್ನ ಮತ್ತು ಮೂರು ಕಂಚು ಮೆಡಲ್‍ಗಳು ಸೇರಿವೆ. ಈಗಾಗಲೇ ಶಹಜಾರ್ ರಿಜ್ವಿ ಚಿನ್ನ ಹಾಗೂ ರವಿಕುಮಾರ್, ಜೀತು ರಾಯ್ ಮತ್ತು ಮೆಹುಲಿ ಘೋಷ್ ತಲಾ ಒಂದೊಂದು ಕಂಚು ಪದಕಗಳನ್ನು ಕೊರಳಿಗೇರಿಸಿದ್ದಾರೆ.

Facebook Comments

Sri Raghav

Admin