ಕರ್ನಾಟಕದಲ್ಲಿ ಇಂದು 16 ಮಂದಿಯಲ್ಲಿ ಕೊರೋನಾ ಪತ್ತೆ, 144ಕ್ಕೇರಿದ ಸೋಂಕಿತರ ಸಂಖ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ರಾಜ್ಯದಲ್ಲಿ ಶನಿವಾರ ಹೊಸದಾಗಿ 16 ಮಂದಿಯಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದ ಸೋಂಕಿತರ ಸಂಖ್ಯೆ 144ಕ್ಕೆ ಏರಿಕೆಯಾಗಿದೆ. ರಾಜ್ಯದ ಕೋವಿಡ್ -19 ಮಾಹಿತಿ ವಕ್ತಾರ ಸಚಿವ ಸುರೇಶ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು ರಾಜ್ಯದ ಸೋಂಕಿತರ ಸಂಖ್ಯೆ 144ಕ್ಕೇರಿದೆ ಎಂದರು.

ಇಂದು ರಾಜ್ಯದಲ್ಲಿ 16 ಹೊಸ ಪ್ರಕರಣಗಳು ಪತ್ತೆಯಾಗಿದೆ. ಬೆಂಗಳುರು ನಗರ ಜಿಲ್ಲೆಯಲ್ಲಿ 55 ಸೋಂಕಿತರು, ಮೈಸೂರಿನಲ್ಲಿ 28 ಪ್ರಕರಣ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 12 ಸೋಂಕಿತ ಪ್ರಕರಣಗಳಿವೆ ಎಂದರು.  ರಾಜ್ಯದಲ್ಲಿ ಒಟ್ಟು 32,649 ಜನರು ನಿಗಾದಲ್ಲಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.

ರಾಜ್ಯದಲ್ಲಿ ಕೊರೊನಾ ಸೋಂಕಿನ ಹಾಟ್‍ಸ್ಪಾಟ್‍ಗಳಲ್ಲಿ ಒಂದಾಗಿರುವ ಮೈಸೂರಿನಲ್ಲಿ ಇಂದು ಒಂದೇ ದಿನಕ್ಕೆ 7 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಅವರಲ್ಲಿ 5 ಮಂದಿ ದೆಹಲಿಗೆ ಹೋಗಿ ಬಂದವರಾಗಿದ್ದಾರೆ. ದೆಹಲಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಒಟ್ಟು 16 ಮಂದಿ ಕೊರೊನಾಗೆ ತುತ್ತಾಗಿದ್ದು, ಈ ಮೂಲಕ ಮೈಸೂರಿನಲ್ಲಿ ಸೊಂಕಿತರ ಸಂಖ್ಯೆ 28ಕ್ಕೆ ಏರಿದೆ.

ದೆಹಲಿಯಲ್ಲಿ ಭಾಗವಹಿಸಿದ್ದವರ ತಪಾಸಣೆ ಮಾಡಲಾಗಿದ್ದು, 214 ಮಂದಿಯ ವರದಿ ಬಂದಿದೆ. ಇದರಲ್ಲಿ 16 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇನ್ನುಳಿದ 198 ಪ್ರಕರಣ ನೆಗೆಟಿವ್ ಬಂದಿದೆ. 10 ಮಂದಿ ಇಂಡೋನೇಷ್ಯಾ ಹಾಗೂ 9 ಮಂದಿ ಕರ್ಗೀಸ್ತಾನ್‍ನಿಂದ ಜಮಾತ್ ಧಾರ್ಮಿಕ ಸಂಘಟನೆಯಲ್ಲಿ ಭಾಗವಹಿಸಿ ಕರ್ನಾಟಕಕ್ಕೆ ಬಂದಿದ್ದರು. ಈ 19 ಮಂದಿಯ ವರದಿ ನೆಗೆಟಿವ್ ಇದೆ ಎಂದು ಸಚಿವ ಸುರೇಶ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.

ಸರ್ಕಾರ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಬೆಂಗಳೂರು ನಗರದಲ್ಲಿ 55, ಮೈಸೂರು 28, ದಕ್ಷಿಣ ಕನ್ನಡ 12, ಉತ್ತರ ಕನ್ನಡ 8, ಚಿಕ್ಕಬಳ್ಳಾಪುರ 7, ಕಲಬುರಗಿ 5, ಬಳ್ಳಾರಿ 5, ದಾವಣಗೆರೆ 3, ಉಡುಪಿ 3, ಧಾರವಾಡ 1, ಕೊಡಗು 1, ತುಮಕೂರು 1, ಬೀದರ್​ನಲ್ಲಿ 10, ಬಾಗಲಕೋಟೆ 1, ಬೆಳಗಾವಿ 3 ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ 1 ಸೋಂಕಿತ ಪ್ರಕರಣಗಳು ಕಂಡುಬಂದಿವೆ. ಬೆಂಗಳೂರಿನಲ್ಲಿ 9 ಮತ್ತು ಕಲಬುರಗಿಯಲ್ಲಿ ಇಬ್ಬರು ಗುಣಮುಖರಾಗಿ ಡಿಸ್ಚಾರ್ಜ್​ ಆಗಿದ್ದಾರೆ.

ಇನ್ನು ರಾಜ್ಯದಲ್ಲಿ 4 ಮಂದಿ ಮೃತಪಟ್ಟಿದ್ದು 11 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.  16 ಮಂದಿ ಸೋಂಕಿತರ ಪೈಕಿ ಏಳು ಪ್ರಕರಣಗಳು ಮೈಸೂರಿನಲ್ಲಿ ಪತ್ತೆಯಾಗಿವೆ. ಇನ್ನು ಮೈಸೂರಿನಲ್ಲಿ ಸೋಂಕಿತರ ಸಂಖ್ಯೆ 28ಕ್ಕೇರಿದೆ. ಏಳು ಮಂದಿ ಪೈಕಿ ನಾಲ್ವರು ದೆಹಲಿಯ ತಬ್ಲೀಘಿ ಜಮಾತ್ ಗೆ ಹೋಗಿದ್ದವರು. ಇನ್ನು ಒಂದು ಪ್ರಕರಣ 109ನೇ ಕೊರೋನಾ ಸೋಂಕಿತನಿಂದ ಬಂದಿದೆ. ಇನ್ನೆರೆಡು ಪ್ರಕರಣದ ತನಿಖೆ ನಡೆಯುತ್ತಿದೆ ಎಂದರು.

144 ಜನರಲ್ಲಿ ನಾಲ್ವರು ಸಾವನ್ನಪ್ಪಿದ್ದರೆ 11 ಜನರು ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಒಬ್ಬರು ಗರ್ಭಿಣಿ ಸೇರಿ 129ರಲ್ಲಿ 126 ರೋಗಿಗಳ ಆರೋಗ್ಯವು ಸ್ಥಿರವಾಗಿದೆ. ಮೂವರು ರೋಗಿಗಳಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 43ನೇ ರೋಗಿಗೆ ಆಕ್ಸಿಜನ್‌ ಮತ್ತು 101 ಹಾಗೂ 102ನೇ ರೋಗಿಗಳಿಗೆ ವೆಂಟಿಲೇಟರ್‌ ಮೂಲಕ ಚಿಕಿತ್ಸೆ ಮುಂದುವರಿದಿದೆ.

ಕರೊನಾ ವೈರಸ್‌ ನಿಯಂತ್ರಣಕ್ಕೆ ಸ್ವ-ಇಚ್ಛೆಯಿಂದ ಟೆಲಿಮೆಡಿಸಿನ್‌ ಮುಖಾಂತರ ಸೇವೆ ಸಲ್ಲಿಸಲು ಬಯಸುವ ವೈದ್ಯರಿಗೆ ದೂರವಾಣಿ ಸಂಖ್ಯೆ 080 47192219ಗೆ ಮಿಸ್ಡ್‌ ಕಾಲ್‌ ನೀಡಲು ಅಥವಾ https://forms.gle/TPbU7eZgazdxG9gS9 ವೆಬ್‌ಸೈಟ್‌ ಮೂಲಕ ಸರ್ಕಾರಕ್ಕೆ ಸಹಾಯ ಮಾಡುವಂತೆ ಮುಖ್ಯಮಂತ್ರಿಗಳು ಮನವಿ ಮಾಡಿಕೊಂಡಿದ್ದಾರೆ.
ಕೋವಿಡ್​-19 ಸಂಬಂಧಿತ ಎಲ್ಲಾ ರೀತಿಯ ಅನುಮಾನಗಳಿಗೆ ಕರೊನಾ! ವೈರಸ್‌ ಸಹಾಯವಾಣಿ ಸಂಖ್ಯೆ 104 ಹಾಗೂ ಹೊಸ ಸಂಖ್ಯೆ 9745697456 ಅನ್ನು ಸಂಪರ್ಕಿಸಬಹುದಾಗಿದೆ.

Facebook Comments

Sri Raghav

Admin