1600 ಪಿಡಿಒಗಳ ಹುದ್ದೆಗಳಿಗೆ 3.5ಲಕ್ಷ ಅರ್ಜಿ, ಸರ್ಕಾರಕ್ಕೆ 15 ಕೋಟಿ ರೂ. ಲಾಭ..!

ಈ ಸುದ್ದಿಯನ್ನು ಶೇರ್ ಮಾಡಿ

Job-Recruitment

ಬೆಂಗಳೂರು, ನ.5-ಡಿಸೆಂಬರ್ ತಿಂಗಳ ಮಧ್ಯಭಾಗದಲ್ಲಿ ನಡೆಯಲಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗಳ ನೇಮಕಾತಿಗೆ ನಡೆಯಲಿರುವ ಪರೀಕ್ಷೆಗೆ ದಾಖಲೆ ಪ್ರಮಾಣದ ಅರ್ಜಿಗಳು ಬಂದಿದ್ದು, ಸರ್ಕಾರದ ಬೊಕ್ಕಸಕ್ಕೆ 15 ಕೋಟಿ ಲಾಭ ಬಂದಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಖಾಲಿ ಇರುವ 1600 ಪಿಡಿಒ ಹುದ್ದೆಗಳಿಗೆ ಡಿಸೆಂಬರ್ ತಿಂಗಳ ಎರಡನೆ ವಾರದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪರೀಕ್ಷೆ ನಡೆಸಲಿದೆ. 1600 ಹುದ್ದೆಗಳಿಗೆ ಈವರೆಗೂ ದಾಖಲೆಯ ಅಂದರೆ ಮೂರೂವರೆ ಲಕ್ಷಕ್ಕೂ ಅಧಿಕ ಅರ್ಜಿಗಳನ್ನು ಅಕಾಂಕ್ಷಿಗಳು ಹಾಕಿದ್ದಾರೆ.

ವೈದ್ಯಕೀಯ, ಇಂಜಿನಿಯರಿಂಗ್ ಕೋರ್ಸ್‍ಗಳಿಗೆ ನಡೆಸುವ ಸಿಇಟಿ ಪರೀಕ್ಷೆಗೆ ಸಾಮಾನ್ಯವಾಗಿ ಹೆಚ್ಚಿನ ಅರ್ಜಿಗಳು ಬರುವುದು ವಾಡಿಕೆ. ಅದನ್ನು ಹೊರತುಪಡಿಸಿದರೆ ಈವರೆಗೂ ಸರ್ಕಾರಿ ಹುದ್ದೆ ಪಡೆಯಲು ಇಷ್ಟು ದೊಡ್ಡ ಪ್ರಮಾಣದಲ್ಲಿ ಅರ್ಜಿಗಳನ್ನು ಅಭ್ಯರ್ಥಿಗಳು ಸಲ್ಲಿಸಿರುವುದು ಇದೇ ಮೊದಲು. ಈ ತಿಂಗಳ 15ಕ್ಕೆ ಪಿಡಿಒ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕಡೆಯ ದಿನಾಂಕವಾಗಿದೆ. ಆನ್‍ಲೈನ್ ಮೂಲಕ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸುತ್ತಿದ್ದಾರೆ. ಹೀಗೆ ಮೂರೂವರೆ ಲಕ್ಷ ಅಭ್ಯರ್ಥಿಗಳು ಅರ್ಜಿ ಹಾಕಿರುವುದರಿಂದ ಇಲಾಖೆಗೆ 15 ಕೋಟಿ ರೂ. ಲಾಭವಾಗಿದೆ.
ಪಿಡಿಒ ಹುದ್ದೆಗೆ ರಾಜ್ಯ ಯಾವುದೇ ವಿಶ್ವವಿದ್ಯಾನಿಲಯದಿಂದ ಪದವಿ ಪೂರ್ಣಗೊಳಿಸಿದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಗ್ರಾಮಪಂಚಾಯ್ತಿಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಈ ಹುದ್ದೆಗಳನ್ನು ಸೃಷ್ಟಿಸಲಾಗಿತ್ತು.

20 ಸಾವಿರ ಮೂಲವೇತನದಿಂದ ಒಟ್ಟು 36 ಸಾವಿರದವರೆಗೆ ವೇತನವನ್ನು ಪಿಡಿಒಗಳಿಗೆ ನೀಡಲಾಗುತ್ತದೆ. ಸಾಮಾನ್ಯ ವರ್ಗದವರಿಗೆ 35 ವರ್ಷ, 2ಎ, 2ಬಿ, 3ಬಿ ವರ್ಗದವರಿಗೆ 38 ವರ್ಷ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಅಭ್ಯರ್ಥಿಗಳಿಗೆ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಪರೀಕ್ಷೆಯಲ್ಲಿ ಯಾವುದೇ ಅವ್ಯವಹಾರ ನಡೆಯದಂತೆ ಕೆಇಎಗೆ ವಹಿಸಲಾಗಿದೆ.
ಪರೀಕ್ಷಾ ಮಾದರಿ: ಪಿಡಿಒ ಹುದ್ದೆಗಳಿಗೆ ಬಹು ಆಯ್ಕೆ ಪರೀಕ್ಷೆಯನ್ನು ನಡೆಸಲಾಗುತ್ತದೆ. ಒಟ್ಟು 200 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಪ್ರತಿ ಪ್ರಶ್ನೆ ಪತ್ರಿಕೆ 100 ಅಂಕಗಳನ್ನು ಒಳಗೊಂಡಿದ್ದು, ಎರಡು ಹಂತದಲ್ಲಿ ಒಂದೇ ಪರೀಕ್ಷೆ ಜರುಗಲಿದೆ. ಸಾಮಾನ್ಯಜ್ಞಾನ, ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲೀಷ್ ವಿಷಯ ಒಳಗೊಂಡ ಈ ಪ್ರಶ್ನೆಪತ್ರಿಕೆಗಳು ಬಹುತೇಕ ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಪಟ್ಟ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.

► Follow us on –  Facebook / Twitter  / Google+

Facebook Comments

Sri Raghav

Admin