9/11ರ ಭಯಾನಕ ದಾಳಿ ನಡೆದು ಇಂದಿಗೆ 18 ವರ್ಷ

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಯಾರ್ಕ್/ವಾಷಿಂಗ್ಟನ್, ಸೆ.11- ಗಗನಚುಂಬಿ ನಗರಿ ನ್ಯೂಯಾರ್ಕ್‍ನ ವಿಶ್ವ ವಾಣಿಜ್ಯ ಕೇಂದ್ರ (ಡಬ್ಲ್ಯುಟಿಸಿ) ಮತ್ತು ವಾಷಿಂಗ್ಟನ್‍ನ ರಕ್ಷಣಾ ಇಲಾಖೆ ಪೆಂಟಗನ್ ಮೇಲೆ ನಡೆದ ಭೀಕರ ಭಯೋತ್ಪಾದನೆ ದಾಳಿಗೆ ಇಂದು 18 ವರ್ಷ. ಅಲ್‍ಖೈದಾ ಉಗ್ರರು ನಡೆಸಿದ ಈ ದಾಳಿಯಲ್ಲಿ 3,000ಕ್ಕೂ ಹೆಚ್ಚು ಜನರು ಬಲಿಯಾಗಿದ್ದರು.

ಈ ಭಯಾನಕ ದಾಳಿ ನಡೆದು ಒಂದೂವರೆ ದಶಕಗಳು ಕಳೆದಿದ್ದರೂ, ವಿಶ್ವದ ಅತ್ಯಂತ ಬಲಿಷ್ಠ ರಾಷ್ಟ್ರ ಅಮೆರಿಕ ಇನ್ನೂ ಕೂಡ ಈ ವಿಧ್ವಂಸಕ ದಾಳಿಯ ಭೀಕರತೆಯಿಂದ ಇನ್ನೂ ಹೊರ ಬರಲು ಹೆಣಗುತ್ತಿದೆ. ಇಂದಿಗೆ ಸರಿಯಾಗಿ 18 ವರ್ಷಗಳ ಹಿಂದೆ ಸೆ.11, 2001ರಂದು ಅಲ್ ಖೈದಾ ಉಗ್ರರು ಎರಡು ವಿಮಾನಗಳನ್ನು ಅಪಹರಿಸಿ ಮುಗಿಲ ಚುಂಬಿ ಅವಳಿ ಗೋಪುರಗಳ ಮೇಲೆ ಸಿನಿಮೀಯ ಶೈಲಿಯಲ್ಲಿ ದಾಳಿ ನಡೆಸಿದರು.

ಇಡೀ ಜಗತ್ತಿನ ವಾಣಿಜ್ಯ-ವ್ಯವಹಾರದ ಕೇಂದ್ರ ಬಿಂದುವಿನಂತಿದ್ದ ಡಬ್ಲ್ಯುಟಿಸಿ ಕಟ್ಟಡಗಳು ತರಗೆಲೆಯಂತೆ ನೆಲಕ್ಕುರುಳಿದವು. ವಿಶ್ವದ ಅತ್ಯಂತ ಶಕ್ತಿಶಾಲಿ ದೇಶ ಅಮೆರಿಕದ ಮೇಲೆ ನಡೆದ ಉಗ್ರರ ಘೋರ ಕೃತ್ಯದಿಂದಾಗಿ ಇಡೀ ಜಗತ್ತೇ ದಿಗ್ಭ್ರಮೆಗೊಂಡಿತ್ತು. ಮತ್ತೊಂದು ಉಗ್ರಗಾಮಿಗಳ ತಂಡ ವಾಷಿಂಗ್ಟನ್‍ನಲ್ಲಿರುವ ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ಮೇಲೆ ದಾಳಿ ನಡೆಸಿ ತಮ್ಮ ಕುತಂತ್ರದ ಕೌರ್ಯ ಪ್ರದರ್ಶಿಸಿದರು. ಅಲ್ಲಿಯೂ ಸಾವು-ನೋವು ಉಂಟಾಯಿತು.

9/11ರ 18ನೆ ವರ್ಷದ ಸಂದರ್ಭದಲ್ಲಿ ಡಬ್ಲ್ಯುಟಿಸಿ ಬಳಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮೇಣದ ಬತ್ತಿಗಳನ್ನು ಬೆಳಗಿಸಿ ಸಾರ್ವಜನಿಕರು ಉಗ್ರರ ದಾಳಿಯಲ್ಲಿ ಮೃತಪಟ್ಟವರಿಗೆ ಆತ್ಮ ಶಾಂತಿ ಕೋರಿದರು. ದಾಳಿಯಲ್ಲಿ ಮಡಿದವರಿಗೆ ನಾವು ಪ್ರತಿ ವರ್ಷ ಶ್ರದ್ಧಾಂಜಲಿ ಸಲ್ಲಿಸುತ್ತೇವೆ. ಇಂಥ ಭೀಕರ ಘಟನೆ ಇಂದಿಗೂ ಅಮೆರಿಕನ್ನರನ್ನು ಕಾಡುತ್ತಿದೆ ಎಂದು ಶ್ರದ್ಧಾಂಜಲಿ ಸಮರ್ಪಿಸಿದವರು ಹೇಳಿದರು.

ಇಂದು ನ್ಯೂಯಾರ್ಕ್, ವಾಷಿಂಗ್ಟನ್ ಸೇರಿದಂತೆ ಅಮೆರಿಕದಾದ್ಯಂತ ಈ ಕರಾಳ ನೆನೆಪಿನ ದಿನ ಆಚರಿಸಲಾಗುತ್ತಿದೆ. ದಾಳಿಯಲ್ಲಿ ಮೃತಪಟ್ಟವರ ಗೌರವಾರ್ಥ ಶ್ರದ್ಧಾಂಜಲಿ ಕಾರ್ಯಕ್ರಮಗಳು ನಡೆಯುತ್ತಿವೆ. ನ್ಯಾಷನಲ್ ಸೆ.11 ಮೆಮೊರಿಯಲ್ ಮ್ಯೂಸಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು.

Facebook Comments