ಕರ್ನಾಟಕದಲ್ಲಿ ಕೊರೋನಾ ದಾಖಲೆ, ಒಂದೇ ದಿನ 196 ಮಂದಿಗೆ ಅಟ್ಯಾಕ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 23- ರಾಜ್ಯದಲ್ಲಿ ಕೊರೊನಾ ಸೋಂಕು ಕೋಲಾಹಲ ಸೃಷ್ಟಿಸಿದೆ. ಇಂದು ಒಂದೇ ದಿನ 196 ಪ್ರಕರಣಗಳು ವರದಿಯಾಗಿದ್ದು, ಯಾದಗಿರಿಗೆ ಕೋವಿಡ್ ಬರಸಿಡಿಲು ಬಡಿದಿದೆ. ರಾಜಧಾನಿಗೂ ಮುಂಬೈ ಸೋಂಕು ಅಂಟಿಕೊಂಡಿದೆ. ಕೊರೊನಾ ಸೋಂಕಿತರ ಸಂಖ್ಯೆ ಎರಡು ಸಾವಿರದತ್ತ ದಾಪುಗಾಲಿಟ್ಟಿದೆ. ಕೋವಿಡ್-19ನಿಂದ ಮತ್ತಿಬ್ಬರು ಬಲಿಯಾಗಿದ್ದು, ಸಾವನ್ನಪ್ಪಿದವರ ಸಂಖ್ಯೆ 42ಕ್ಕೆ ಏರಿದೆ.

ನಿನ್ನೆ ಸಂಜೆ 5 ಗಂಟೆಯಿಂದ ಇಂದು ಬೆಳಗ್ಗೆ 12 ಗಂಟೆವರೆಗೂ ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿದ ಮಾಹಿತಿ ಪ್ರಕಾರ, ರಾಯಚೂರಿನಲ್ಲಿ 38, ಯಾದಗಿರಿ 72, ಚಿಕ್ಕಬಳ್ಳಾಪುರ 22, ಮಂಡ್ಯ 28, ಗದಗ 15, ಉತ್ತರ ಕನ್ನಡ 2, ಬೆಂಗಳೂರು 4, ಧಾರವಾಡ 1, ಬೆಳಗಾವಿ 1, ಕಲಬುರಗಿ 1, ದಕ್ಷಿಣ ಕನ್ನಡ 3, ಉತ್ತರ ಕನ್ನಡ 3, ಹಾಸನ 4, ದಾವಣಗೆರೆ 2, ಉಡುಪಿ 1, ಕೋಲಾರ 2 ಸೇರಿದಂತೆ ಒಂದೇ ದಿನ 196 ಪ್ರಕರಣಗಳು ಪತ್ತೆಯಾಗಿದ್ದು, ಇಂದು ಸಂಜೆ ವೇಳೆಗೆ ಮತ್ತಷ್ಟು ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ.

ಸೋಂಕಿತ 196ರಲ್ಲಿ 10 ವರ್ಷದೊಳಗಿನ 30 ಮಕ್ಕಳಿರುವುದು ಪೋಷಕರಲ್ಲಿ ಆತಂಕ ಸೃಷ್ಟಿಸಿದೆ. ರಾಯಚೂರಿನ 38, ಚಿಕ್ಕಬಳ್ಳಾಪುರದ 22, ಯಾದಗಿರಿಯ 72, ಮಂಡ್ಯದ 28 ಕೊರೊನಾ ಸೋಂಕಿತರಲ್ಲಿ ಬಹುತೇಕ ಮಹಾರಾಷ್ಟ್ರದ ಸಂಪರ್ಕವಿದೆ. ರಾಜಧಾನಿ ಬೆಂಗಳೂರಿನಲ್ಲಿ ಪತ್ತೆಯಾದ 4 ಪ್ರಕರಣಗಳಲ್ಲಿ ಒಬ್ಬರು ಮಹಾರಾಷ್ಟ್ರದಿಂದ ಹಿಂದಿರುಗಿದವರಾಗಿದ್ದಾರೆ.

ಮತ್ತೊಬ್ಬರು ದೆಹಲಿಯಿಂದ ಹಿಂದಿರುಗಿದವರಾಗಿದ್ದಾರೆ. ಇನ್ನೊಬ್ಬರು ತಮಿಳುನಾಡಿನಿಂದ ವಾಪಸಾದವರಾಗಿದ್ದಾರೆ. ಮತ್ತೊಬ್ಬರಿಗೆ ತೀವ್ರ ಜ್ವರದ ಹಿನ್ನೆಲೆಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಎಲ್ಲರನ್ನೂ ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಂದು ಪತ್ತೆಯಾಗಿರುವ ಶೇ.9 ಪ್ರಕರಣಗಳು ಹೊರರಾಜ್ಯದಿಂದ ಬಂದವರೇ ಆಗಿರುವುದು ವಿಶೇಷವಾಗಿದೆ. ರಾಜ್ಯದಲ್ಲಿ ಈವರೆಗೆ ಸೋಂಕಿತರ ಸಂಖ್ಯೆ 1939ಕ್ಕೆ ಏರಿಕೆಯಾಗಿದ್ದು, 598 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 42 ಮಂದಿ ರೋಗದಿಂದ ಮೃತಪಟ್ಟಿದ್ದಾರೆ.

ಗದಗ ಜಿಲ್ಲೆಯಲ್ಲಿ 15 ಮಂದಿಯಲ್ಲಿ ಕೊರೊನಾ ರೋಗ ಕಂಡುಬಂದಿದ್ದು, ಅದರಲ್ಲಿ ಇಬ್ಬರು ಗುಜರಾತ್‍ನಿಂದ ವಾಪಸಾದವರಾಗಿದ್ದರೆ, 9 ಮಂದಿ ರೋಗಿ ಸಂಖ್ಯೆ 913ರ ಸಂಪರ್ಕದಿಂದ ರೋಗ ಅಂಟಿಸಿಕೊಂಡಿದ್ದಾರೆ. ಇನ್ನುಳಿದವರು ಮಹಾರಾಷ್ಟ್ರದಿಂದ ಹಿಂದಿರುಗಿದವರಾಗಿದ್ದಾರೆ.

ದಾವಣಗೆರೆಯಲ್ಲಿ 69 ವರ್ಷದ ವೃದ್ಧೆ ಹಾಗೂ 42 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ಕಂಡುಬಂದಿದ್ದು, 1251ರ ರೋಗಿಯಿಂದ ರೋಗ ಅಂಟಿಸಿಕೊಂಡಿದ್ದಾರೆ. ರಾಯಚೂರಿನಲ್ಲಿ 38 ಕೊರೊನಾ ಸೋಂಕಿತರಲ್ಲಿ ಒಬ್ಬರು ಆಂಧ್ರ ಪ್ರದೇಶದಿಂದ ಹಿಂದಿರುಗಿದವರಾಗಿದ್ದು, ಮತ್ತೊಂದು ಮಗುವಿಗೆ ತೀವ್ರ ಜ್ವರದಿಂದ ಕೊರೊನಾ ಸೋಂಕು ಕಂಡುಬಂದಿದೆ. ಇನ್ನೊಬ್ಬ ಮಹಿಳೆಗೆ 1836ರ ರೋಗಿ ಸಂಪರ್ಕದಿಂದ ಸೋಂಕು ತಗುಲಿದೆ.

ಇನ್ನುಳಿದಂತೆ ಎಲ್ಲರೂ ಮಹಾರಾಷ್ಟ್ರದಿಂದ ಹಿಂದಿರುಗಿದವರಾಗಿದ್ದಾರೆ. ಯಾದಗಿರಿಯಲ್ಲಿ ಕಂಡುಬಂದಿರುವ 72 ಮಂದಿ ಕೊರೊನಾ ಸೋಂಕಿತರು ಮಹಾರಾಷ್ಟ್ರದಿಂದ ಹಿಂದಿರುಗಿದವರೇ ಆಗಿದ್ದು, ಎಲ್ಲರನ್ನೂ ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಡ್ಯದಲ್ಲಿ ಮತ್ತೆ 28 ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಎಲ್ಲರೂ ಕೂಡ ಮಹಾರಾಷ್ಟ್ರದಿಂದ ವಾಪಸ್ ಬಂದವರೇ ಆಗಿದ್ದಾರೆ. ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡದ ಮೂವರು ಮಹಾರಾಷ್ಟ್ರದಿಂದ ಹಿಂದಿರುಗಿದವರಾಗಿದ್ದು, ಒಬ್ಬರಿಗೆ ತೀವ್ರ ಜ್ವರದಿಂದ ಸೋಂಕು ಅಂಟಿದೆ.

 

Facebook Comments

Sri Raghav

Admin