2 ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಲು ಎಂ.ಬಿ.ಪಾಟೀಲ್ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

MB-Patil--01
ಬೆಂಗಳೂರು, ಮೇ 22-ಉಪ ಮುಖ್ಯಮಂತ್ರಿ ಹುದ್ದೆಗೆ ಈವರೆಗೂ ತೆರೆಮರೆಯಲ್ಲಿ ನಡೆಯುತ್ತಿದ್ದ ಲಾಬಿಗಳು ಈಗ ಬಹಿರಂಗವಾಗಿ ಕೇಳಲಾರಂಭಿಸಿವೆ. ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರು ತಾವು ಉಪ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿ ಎಂದು ಹೇಳಿದ್ದು, ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗಕ್ಕೆ ತಲಾ ಒಂದೊಂದು ಉಪಮುಖ್ಯಮಂತ್ರಿ ಹುದ್ದೆ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.

ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ದಕ್ಷಿಣ ಕರ್ನಾಟಕಕ್ಕೆ ಸೇರಿದವರಾಗಿದ್ದಾರೆ. ಹಾಗಾಗಿ ಉತ್ತರ ಕರ್ನಾಟಕ ಭಾಗದ ಜನ ನಿರಾಶರಾಗುತ್ತಾರೆ. ಇದನ್ನು ಸರಿದೂಗಿಸಲು ಎರಡು ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಲೇಬೇಕು. ದಕ್ಷಿಣ ಕರ್ನಾಟಕದಿಂದ ಪರಮೇಶ್ವರ್ ಅಥವಾ ಡಿ.ಕೆ.ಶಿವಕುಮಾರ್ ಅವರು ಉಪಮುಖ್ಯಮಂತ್ರಿಯಾದರೆ, ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯಿತ ಸಮುದಾಯಕ್ಕೆ ಈ ಅವಕಾಶ ನೀಡಬೇಕು. ಆಗ ಯಾವುದೇ ತಾರತಮ್ಯ ವಾಗುವುದಿಲ್ಲ ಎಂದು ಹೇಳಿದ್ದಾರೆ.

ನಾನು ಎಂದಿಗೂ ಲಿಂಗಾಯಿತ ಎಂಬ ಟ್ರಂಪ್‍ಕಾರ್ಡ್‍ನ್ನು ಬಳಸಿಕೊಂಡು ರಾಜಕಾರಣ ಮಾಡಿಲ್ಲ. ಲಿಂಗಾಯಿತ ಧರ್ಮ ಎಂಬ ವಿಷಯವಾಗಿ ಚುನಾವಣೆ ಮುಗಿದ ನಂತರವೂ ಹೋರಾಟ ಮುಂದುವರೆಯಲಿದೆ. ಎಸ್.ಎಂ.ಜಾಮ್‍ಧಾರ್ ಅವರು ಇದರ ನೇತೃತ್ವ ವಹಿಸಿ ಮುಂದುವರೆಸಲಿದ್ದಾರೆ. ಲಿಂಗಾಯಿತ ಪ್ರತ್ಯೇಕ ಧರ್ಮ ಮತ್ತು ರಾಜಕಾರಣಕ್ಕೆ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ. ಎಂ.ಬಿ.ಪಾಟೀಲರನ್ನು ಸಚಿವರನ್ನಾಗಿ ಮಾಡಬೇಡಿ ಎಂದು ದೇವೇಗೌಡರು ಎಲ್ಲೂ ಹೇಳಿಲ್ಲ. ಇದೊಂದು ಸುಳ್ಳು ಸುದ್ದಿ. ಉದ್ದೇಶಪೂರ್ವಕವಾಗಿ ಹಬ್ಬಿಸಿದ ವದಂತಿ. ಲಿಂಗಾಯಿತ ಸಮುದಾಯದಿಂದ 16 ಮಂದಿ ಶಾಸಕರಿದ್ದಾರೆ. ಕಾಂಗ್ರೆಸ್‍ನಲ್ಲಿರುವ 78 ಮಂದಿ ಶಾಸಕರು ಕೂಡ ಸಚಿವ ಸ್ಥಾನದ ಆಕಾಂಕ್ಷಿಗಳೇ. ಆದರೆ, ಯಾರಿಗೆ ಸ್ಥಾನ ನೀಡಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಈ ಬಾರಿ ಮೈತ್ರಿ ಸರ್ಕಾರ ಇರುವುದರಿಂದ ಜೆಡಿಎಸ್-ಕಾಂಗ್ರೆಸ್ ಶಾಸಕರು ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ನಿರ್ಧಾರದ ವೇಳೆ ಜಾತಿ, ಧರ್ಮ, ಹಿರಿತನ, ಪ್ರಾದೇಶಿಕತೆ ಎಲ್ಲವನ್ನೂ ಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದರು.

ನಿನ್ನೆ ಲಿಂಗಾಯಿತ ಸಮುದಾಯದ ಶಾಸಕರು ಸಭೆ ಮಾಡಿದ್ದೇವೆ. ನಮಗೆ ಹೆಚ್ಚಿನ ಸಚಿವ ಸ್ಥಾನವನ್ನು ನೀಡಬೇಕೆಂದು ಬೇಡಿಕೆ ಮುಂದಿಟ್ಟಿದ್ದೇವೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ಮಾಡಿದ್ದೇನೆ. ಜೆಡಿಎಸ್‍ನ ತಿಪ್ಪಣ್ಣ ಅವರು ಅನಗತ್ಯವಾಗಿ ಹೇಳಿಕೆ ನೀಡಿ ಗೊಂದಲ ಮೂಡಿಸುವುದನ್ನು ನಿಲ್ಲಿಸಲಿ. ಕಾಂಗ್ರೆಸ್‍ನ ಆಂತರಿಕ ವಿಷಯಗಳ ಬಗ್ಗೆ ಮಾತನಾಡಲು ಅವರಿಗೆ ಅಧಿಕಾರ ಇಲ್ಲ ಎಂದು ಎಂ.ಬಿ.ಪಾಟೀಲ್ ತಿರುಗೇಟು ನೀಡಿದ್ದಾರೆ.

Facebook Comments

Sri Raghav

Admin