2 ಕೋಟಿ ರೂ. ಬಗ್ಗೆ ಕುಮಾರಸ್ವಾಮಿ ಅವರಿಗೇ ಹೆಚ್ಚಿನ ಮಾಹಿತಿ ಇದೆ : ಸಿ.ಟಿ.ರವಿ

ಈ ಸುದ್ದಿಯನ್ನು ಶೇರ್ ಮಾಡಿ

CT-Tasvi

ಬೆಂಗಳೂರು, ಅ.25-ವಿಧಾನಸೌಧದ ಆವರಣದಲ್ಲಿ ಸಿಕ್ಕ 2 ಕೋಟಿ ರೂ. ಹಣದ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹೆಚ್ಚಿನ ಮಾಹಿತಿ ಇರುವಂತೆ ಕಾಣುತ್ತಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಅವರಿಗೆ ಎರಡು ಕೋಟಿ ರೂ. ಬಗ್ಗೆ ಮಾಹಿತಿ ಇದೆ ಎಂದು ಕುಮಾರಸ್ವಾಮಿ ಹೇಳಿರುವುದನ್ನು ನೋಡಿದರೆ ಯಡಿಯೂರಪ್ಪ ಅವರಿಗಿಂತ ಕುಮಾರಸ್ವಾಮಿಯವರಿಗೆ ಹೆಚ್ಚಿನ ಮಾಹಿತಿ ಇದ್ದಂತಿದೆ ಎಂದರು.
ಕುಮಾರಸ್ವಾಮಿಯವರು ಸುಮ್ಮನೆ ಗೊಂದಲಕಾರಿ ಹೇಳಿಕೆ ನೀಡುವುದರ ಬದಲು ಸತ್ಯಾಂಶವೇನು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಕುಮಾರಸ್ವಾಮಿ ಅವರದ್ದು ಹಿಟ್ ಅಂಡ್ ರನ್ ಗುಣ. ವಿಧಾನಸಭೆಯಲ್ಲೂ ಹೀಗೇ ಮಾಡುತ್ತಾರೆ ಎಂದು ಟೀಕಿಸಿದರು.

ಯಾವುದೇ ಒಂದು ವಿಚಾರವನ್ನು ಪ್ರಸ್ತಾಪಿಸಿದಾಗ ಅದು ತಾರಕಕ್ಕೇರಿದರೆ ತಕ್ಷಣವೇ ಆ ವಿಚಾರದ ಪ್ರಸ್ತಾಪವನ್ನು ಬಿಟ್ಟುಬಿಡುತ್ತಾರೆ. ಇದೇ ಪ್ರವೃತ್ತಿ ಮುಂದುವರೆದರೆ ಯಾರೂ ಕುಮಾರಸ್ವಾಮಿಯವರನ್ನು ನಂಬುವುದಿಲ್ಲ. ಮಾಜಿ ಮುಖ್ಯಮಂತ್ರಿ ಎಂಬ ಗೌರವವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.  ಪ್ರಾರಂಭವಾಗದ ಬರ ಪರಿಹಾರ: ರಾಜ್ಯದ 110 ತಾಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿದರೂ ಎಲ್ಲೂ ಬರ ಪರಿಹಾರ ಕಾಮಗಾರಿ ಪ್ರಾರಂಭವಾಗಿಲ್ಲ. ಸರ್ಕಾರ ಸಾವಿರಾರು ಕೋಟಿ ರೂ. ವ್ಯಯಿಸಿ ಉಕ್ಕಿನ ಸೇತುವೆ ನಿರ್ಮಾಣಕ್ಕೆ ಹೊರಟಿದೆ. ಆದರೆ ರೈತರ ನೆರವಿಗೆ ಧಾವಿಸುತ್ತಿಲ್ಲ. ಪ್ರಸ್ತುತ ಸನ್ನಿವೇಶದಲ್ಲಿ ಕೂಡಲೇ ಬರಪರಿಹಾರ ಕಾಮಗಾರಿಗಳನ್ನು ಆರಂಭಿಸಿ ರೈತರ ನೆರವಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಸಮೃದ್ಧಿಯಾಗಿರುವ ಕಾಲದಲ್ಲಿ ಉಕ್ಕಿನ ಸೇತುವೆಯೇನು ಚಿನ್ನದ ಸೇತುವೆ ನಿರ್ಮಿಸಿದರೂ ನಮ್ಮ ಅಭ್ಯಂತರವಿಲ್ಲ. ಉತ್ತರ ಪ್ರದೇಶ ಚುನಾವಣೆಗೆ ಹಣ ಹೊಂದಿಸುವುದಕ್ಕೆ ಸರ್ಕಾರಕ್ಕಿರುವ ಮಾರ್ಗ ಇದಾಗಿದೆ ಎಂದು ಆರೋಪಿಸಿದರು. ಉಕ್ಕಿನ ಸೇತುವೆ ನಿರ್ಮಿಸುವುದನ್ನು ಕೈಬಿಡದಿದ್ದರೆ ಜನರು ಕಾಂಗ್ರೆಸ್ ಸರ್ಕಾರವನ್ನು ಉಕ್ಕಿನ ಸೇತುವೆ ಕೆಳಗೆ ಸಮಾಧಿ ಮಾಡುತ್ತಾರೆ. ಇದನ್ನು ತಪ್ಪಿಸಬೇಕು ಎಂದು ಕಾಂಗ್ರೆಸ್ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್‍ಗಾಂಧಿ ಅವರು ವಿವಾದಿತ ಸೇತುವೆ ಬೇಡ ಎಂದಿದ್ದಾರಂತೆ. ಈಗಲಾದರೂ ಸರ್ಕಾರ ಉಕ್ಕಿನ ಸೇತುವೆ ನಿರ್ಮಾಣ ಕೈಬಿಡಬೇಕು ಎಂದರು.

ಪಟಾಕಿ ನಿಷೇಧಿಸಿ:

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಬೇಕು ಎಂದು ರವಿ ಇದೇ ವೇಳೆ ಒತ್ತಾಯಿಸಿದರು. ಪಟಾಕಿ ಸಿಡಿಸುವುದರಿಂದ ಪರಿಸರಕ್ಕೂ ಹಾನಿ, ಶಬ್ಧ ಮಾಲಿನ್ಯವೂ ಹೆಚ್ಚಾಗುತ್ತದೆ. ಇದು ಕೇವಲ ಹಬ್ಬಕ್ಕೆ ಸೀಮಿತವಾಗದೆ, ರಾಜಕೀಯ ಪಕ್ಷಗಳ ಸಭೆ, ಸಮಾರಂಭಗಳಲ್ಲೂ ಪಟಾಕಿಯನ್ನು ನಿಷೇಧಿಸಬೇಕು.  ಪಟಾಕಿ ಸಿಡಿಸಿದಾಗ ಯಾರೂ ಮೆಚ್ಚುಗೆ ಸೂಚಿಸುವುದಿಲ್ಲ. ಬದಲಾಗಿ ಕಿವಿ, ಮೂಗು ಮುಚ್ಚಿಕೊಳ್ಳುತ್ತಾರೆ. ದೀಪಾವಳಿ ಬೆಳಕಿನ ಹಬ್ಬವಾಗಿದ್ದು, ಹಣತೆ, ದೀಪಗಳನ್ನು ಹಚ್ಚುವುದು ಸಂಪ್ರದಾಯವೇ ಹೊರತು ಪಟಾಕಿ ಸಿಡಿಸುವುದು ಸಂಪ್ರದಾಯವಲ್ಲ ಎಂದರು.

► Follow us on –  Facebook / Twitter  / Google+

Facebook Comments

Sri Raghav

Admin