2 ದಿನದಲ್ಲಿ ಮನೆ ಖಾಲಿ ಮಾಡುವಂತೆ ಕೊಳಗೇರಿ ನಿವಾಸಿಗಳಿಗೆ ಬಿಬಿಎಂಪಿ ನೋಟಿಸ್

ಈ ಸುದ್ದಿಯನ್ನು ಶೇರ್ ಮಾಡಿ

Noticwe--01

ಬೆಂಗಳೂರು, ಸೆ.20- ಎರಡು ದಿನಗಳಲ್ಲಿ ಮನೆ ಖಾಲಿ ಮಾಡಿ. ಇಲ್ಲದಿದ್ದರೆ ನಿಮ್ಮ ಮನೆಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಗುವುದು ಎಂದು ಬಿಬಿಎಂಪಿ ನೋಟಿಸ್ ನೀಡಿರುವುದರಿಂದ ನಗರದ ಸುಬ್ರಹ್ಮಣ್ಯ ಕೆರೆ ಪ್ರದೇಶದ ಕೊಳಗೇರಿ ನಿವಾಸಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ನಗರದಲ್ಲಿ ಇತ್ತೀಚೆಗೆ ಸತತವಾಗಿ ಮಳೆ ಸುರಿದು ಕೆರೆಗಳು ತುಂಬಿ ತಗ್ಗು ಪ್ರದೇಶಕ್ಕೆ ಹರಿದು ಸಾಕಷ್ಟು ಅನಾಹುತವಾಗಿದೆ. ಈ ಅನಾಹುತಕ್ಕೆ ಕೆರೆಗಳ ಒತ್ತುವರಿಯೇ ಕಾರಣ ಎಂದು ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ಇಂತಹ ಕ್ರಮಕ್ಕೆ ಬಿಬಿಎಂಪಿ ಮುಂದಾಗಿದೆ.

ಸುಬ್ರಹ್ಮಣ್ಯಪುರ ಕೆರೆ ಒತ್ತುವರಿ ಮಾಡಿ ನೂರಾರು ಕೊಳಚೆ ಪ್ರದೇಶದ ನಿವಾಸಿಗಳು ಮನೆ ಕಟ್ಟಿಕೊಂಡಿದ್ದಾರೆ. ಹಾಗಾಗಿ ಬಿಬಿಎಂಪಿ ಕೆರೆ ವಿಭಾಗದ ಚೀಫ್ ಎಂಜಿನಿಯರ್ ಬಿ.ವಿ.ಸತೀಶ್ ಅವರು ನೋಟಿಸ್ ಜಾರಿ ಮಾಡಿ ಇಲ್ಲಿನ ಜನರನ್ನು ತೆರವುಗೊಳಿಸುವಂತೆ ಆದೇಶ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಬಿಬಿಎಂಪಿ ಅಧಿಕಾರಿಗಳು ಸುಬ್ರಹ್ಮಣ್ಯಪುರ ಕೆರೆಗೆ ತೆರಳಿ ನಿವಾಸಿಗಳಿಗೆ ನೋಟಿಸ್ ನೀಡಿದ್ದಾರೆ.

ನಿವಾಸಿಗಳು ಇಲ್ಲದ ಮನೆಗಳಿಗೆ ನೋಟಿಸ್ ಅಂಟಿಸಿ ಬಂದಿದ್ದಾರೆ. ಎರಡು  ದಿನಗಳಲ್ಲಿ ಮನೆ ಖಾಲಿ ಮಾಡಲೇಬೇಕು. ಒಂದು ವೇಳೆ ನೀವು ಖಾಲಿ ಮಾಡದೆ ಇದ್ದರೆ ನಿರ್ದಾಕ್ಷಿಣ್ಯವಾಗಿ ನಾವೇ ಮನೆ ತೆರವುಗೊಳಿಸುತ್ತೇವೆ ಎಂದು ನೋಟಿಸ್‍ನಲ್ಲಿ ಎಚ್ಚರಿಕೆ ನೀಡಲಾಗಿದೆ. ಹಾಗಾಗಿ ಇಲ್ಲಿನ ನಿವಾಸಿಗಳು ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಗಿದ್ದಾರೆ. ಏಕಾಏಕಿ ಮನೆಗಳನ್ನು ಖಾಲಿ ಮಾಡಿ ಎಂದರೆ ನಾವು ಹೋಗುವುದಾದರೂ ಎಲ್ಲಿಗೆ, ನಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ. ನಾವೀಗ ಮಕ್ಕಳು-ಮರಿಗಳನ್ನು ಕಟ್ಟಿಕೊಂಡು ಬೀದಿಗೆ ಬೀಳುವಂತಾಗಿದೆ ಎಂದು ನಿವಾಸಿಗಳು ಅಸಹಾಯಕತೆ ತೋಡಿಕೊಂಡಿದ್ದಾರೆ. ಸರ್ಕಾರ ಇಲ್ಲಿನ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡುತ್ತದೋ, ಸೂರು ವ್ಯವಸ್ಥೆ ಕಲ್ಪಿಸಿಕೊಡುತ್ತದೋ ಎಂಬುದನ್ನು ಕಾದು ನೋಡಬೇಕಿದೆ.

Notice--01

Facebook Comments

Sri Raghav

Admin