ಬೆಂಗಳೂರಿನಲ್ಲಿ ಮತ್ತೆರಡು ಕೋವಿಡ್ ಕೇರ್ ಸೆಂಟರ್ ತೆರೆಯಲು ಮುಂದಾದ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.16- ಕೊರೋನಾ ಮಟ್ಟಹಾಕಲು ಕಠಿಣ ಕ್ರಮಗಳನ್ನು ತೆಗೆದುಕೊಂಡು ದಿಟ್ಟ ಹೋರಾಟ ಮಾಡುತ್ತಿರುವ ರಾಜ್ಯ ಸರ್ಕಾರ ಇದೀಗ ನಗರದಲ್ಲಿ ಮತ್ತೆರಡು ಕೋವಿಡ್ ಕೇರ್ ಸೆಂಟರ್ ಗಳನ್ನು ತೆರೆಯಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಕೋವಿಡ್-19 ನಿರ್ವಹಣೆಯ ಉಸ್ತುವಾರಿ ವಹಿಸಿಕೊಂಡಿರುವ ಅಧಿಕಾರಿಗಳು ನಿನ್ನೆಯಷ್ಟೇ ಉನ್ನತ ಮಟ್ಟದ ಸಭೆಯೊಂದನ್ನು ನಡೆಸಿದ್ದು, ಸಭೆಯಲ್ಲಿ ಬೆಂಗಳೂರು ನಗರದಲ್ಲಿ 2 ಕೋವಿಡ್ ಕೇರ್ ಕೇಂದ್ರಗಳನ್ನು ತೆರೆಯಲು ನಿರ್ಧಾರ ಕೈಗೊಂಡಿದ್ದಾರೆಂದು ತಿಳಿದುಬಂದಿದೆ.

ಈಗಾಗಲೇ ನಗರದಲ್ಲಿ 8 ಕೋವಿಡ್ ಕೇರ್ ಕೇಂದ್ರಗಳು ಅಸ್ತಿತ್ವದಲ್ಲಿದ್ದು, ಇದೀಗ ಮತ್ತೆರಡು ಕೇಂದ್ರಗಳನ್ನು ತೆರೆಯಲು ನಿರ್ಧರಿಸಲಾಗಿದೆ.ಜಿಕೆವಿಕೆ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿರುವ ಹಾಸ್ಟೆಲ್ ಗಳಲ್ಲಿ ಈ ಕೇಂದ್ರಗಳನ್ನು ತೆರೆಯಲು ಚಿಂತನೆ ನಡೆಸಲಾಗಿದೆ.

ಹಜ್ ಭವನ, ಶ್ರೀ ಶ್ರೀ ರವಿಶಂಕರ್ ಆಶ್ರಮ, ಜಿಕೆವಿಕೆ ಯ ಎರಡು ಹಾಸ್ಟೆಲ್‍ಗಳು, ತೋಟಗಾರಿಕಾ ಕಾಲೇಜಿನಲ್ಲಿ ಎರಡು ಹಾಸ್ಟೆಲ್‍ಗು, ಕೋರಮಂಗಲ ಒಳಾಂಗಣ ಕ್ರೀಡಾಂಗಣ ಮತ್ತು ಮೆಜೆಸ್ಟಿಕ್ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಕೋವಿಡ್ ಕೇಂದ್ರಗಳಿವೆ.

ಅಸ್ತಿತ್ವದಲ್ಲಿರುವ 8 ಕೇಂದ್ರಗಳಲ್ಲಿ 2,800 ಹಾಸಿಗೆಗಳ ಸಾಮಥ್ರ್ಯವಿದೆ. ಇದರಲ್ಲಿ ಈಗಾಗಲೇ 400 ಮಂದಿ ಸೋಂಕಿತರು ದಾಖಲಾಗಿದ್ದು, 250 ಮಂದಿ ಬಿಡುಗಡೆಗೊಂಡಿದ್ದಾರೆ.

ಈಗಾಗಲೇ ರಾಜ್ಯದಲ್ಲಿ ಆರೋಗ್ಯ ಸಿಬ್ಬಂದಿಗಳ ಕೊರತೆ ಎದುರಾಗಿರುವ ಈ ಹಿನ್ನೆಲೆಯಲ್ಲಿ ಇತರೆ ರಾಜ್ಯಗಳಿಂದ ಶುಶ್ರೂಷಕರನ್ನು ನೇಮಕ ಮಾಡಲೂ ಕೂಡ ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಆಸ್ಪತ್ರೆಗಳು ಹಾಗೂ ಕೋವಿಡ್ ಕೇರ್ ಕೇಂದ್ರಗಳಲ್ಲಿ ನರ್ಸ್ ಗಳಿಗೆ ಬೇಡಿಕೆಗಳು ಹೆಚ್ಚಾಗಿದೆ. ಶೀಘ್ರಗತಿಯಲ್ಲಿ ವೈದ್ಯರನ್ನು ನೇಮಕ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಕೋವಿಡ್ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸಲು ಕೆಲ ವೈದ್ಯರು ಹಿಂದೇಟು ಹಾಕುತ್ತಿದ್ದು, ಅಂತಹ ಆಸ್ಪತ್ರೆಗಳ ಪರವಾನಗಿ ರದ್ದು ಮಾಡಲು ಕೂಡ ಸಬೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರಿ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Facebook Comments

Sri Raghav

Admin