ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮುಸುಕುಧಾರಿಗಳ ಅಟ್ಟಹಾಸ : ಇಬ್ಬರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Delhi--2-Killed

ನವದೆಹಲಿ (ಪಿಟಿಐ), ಆ.31-ರಾಜಧಾನಿ ದೆಹಲಿ ಹೊರವಲಯದ ಮಂಗಲ್‍ಪುರಿಯಲ್ಲಿ ಇಬ್ಬರು ಮುಸುಕುಧಾರಿಗಳು ನಡೆಸಿದ ದಾಳಿಯಲ್ಲಿ ಇಬ್ಬರು ಇರಿತದಿಂದ ಬಲಿಯಾಗಿದ್ದು, ಅನೇಕರು ತೀವ್ರ ಗಾಯಗೊಂಡಿದ್ದಾರೆ. ಮ್ಯಾಸ್ಕ್ ಮೆನ್‍ಗಳ ಈ ಆಕ್ರಮಣದಿಂದ ಜನತೆ ಭಯಭೀತರಾಗಿದ್ದಾರೆ.  ಇದು ಭೂಗತಲೋಕದ ಕುಖ್ಯಾತರ ಕೃತ್ಯವೆಂದು ಪೊಲೀಸರು ಶಂಕಿಸಿದ್ದು, ಹಂತಕರ ಸೆರೆಗೆ ಬಲೆ ಬೀಸಿದ್ದಾರೆ. ಈ ಪ್ರದೇಶದಲ್ಲಿ ಪ್ರಾಬಲ್ಯ ಸಾಧಿಸಲು ಎರಡು ಗುಂಪುಗಳ ನಡುವೆ ನಡೆದ ಗ್ಯಾಂಗ್‍ವಾರ್ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಮುಸುಕುಧಾರಿಗಳು ಜನರತ್ತ ನುಗ್ಗಿ ನಡೆಸಿದ ಚೂರಿ ದಾಳಿಯಿಂದ ಕರಣ್ ವೀರ್(47) ಹಾಗೂ ದಿನೇಶ್(32) ಹತರಾಗಿದ್ದಾರೆ. ಇರಿತದಿಂದ ತೀವ್ರ ಗಾಯಗೊಂಡ ಆರು ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಬ್ಬರ ಸ್ಥಿತಿ ಶೋಚನೀಯವಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ಧಾರೆ.  ತಮ್ಮ ಮನೆಗಳ ಸಮೀಪ ಇದ್ದ ಜನರ ಗುಂಪಿನ ಮೇಲೆ ಮೊನ್ನೆ ರಾತ್ರಿ ಮಾರಕಾಸ್ತ್ರಗಳನ್ನು ಹೊಂದಿದ್ದ ಇಬ್ಬರು ಮುಸುಕುಧಾರಿಗಳು ಹಠಾತ್ ದಾಳಿ ನಡೆಸಿದರು. ಇಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿಯುವುದಕ್ಕೆ ಮುನ್ನವೇ ಇಬ್ಬರು ಇರಿತಕ್ಕೆ ಬಲಿಯಾಗಿ, ಅನೇಕರು ಗಾಯಗೊಂಡರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಹತರಾದವರು ಹಾಗೂ ಇರಿತಕ್ಕೆ ಒಳಗಾದವರು ಸಾಮಾನ್ಯ ಜನರು ಮತ್ತು ಸರ್ಕಾರಿ ನೌಕರರಾಗಿದ್ದು, ಯಾವುದೇ ಕ್ರಿಮಿನಲ್ ಪ್ರಕರಣಗಳು ಅವರ ಮೇಲಿಲ್ಲ. ಜನರಲ್ಲಿ ಭೀತಿ ಹುಟ್ಟಿಸಲು ರೌಡಿಗಳು ಈ ಕೃತ್ಯ ಎಸಗಿರುವ ಶಂಕೆ ಇದೆ. ಈ ಪ್ರಕರಣದ ಸಂಬಂಧ ಪೊಲೀಸರು ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Facebook Comments

Sri Raghav

Admin