ಯೋಧ ಮತ್ತು ಬಾಲಕನನ್ನು ಕೊಂದಿದ್ದ ಇಬ್ಬರು ಉಗ್ರರು ಎನ್‌ಕೌಂಟರ್‌ನಲ್ಲಿ ಫಿನಿಷ್

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀನಗರ, ಜೂ.29-ಕಣಿವೆ ಪ್ರಾಂತ್ಯ ಕಾಶ್ಮೀರದಲ್ಲಿ ಭಯೋತ್ಪಾದಕರ ಉಪಟಳ ಮತ್ತು ವಿಧ್ವಂಸಕ ಕೃತ್ಯಗಳ ಯತ್ನ ಮುಂದುವರಿದಿದ್ದು, ಇವರನ್ನು ನಿಗ್ರಹಿಸುವ ಕಾರ್ಯಾಚರಣೆಯನ್ನು ಭಾರತೀಯ ಭದ್ರತಾಪಡೆ ಮತ್ತಷ್ಟು ತೀವ್ರಗೊಳಿಸಿವೆ.

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ವಾಘಾಮಾದಲ್ಲಿ ಇಂದು ಮುಂಜಾನೆ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಉಗ್ರಗಾಮಿಗಳನ್ನು ಜಂಟಿ ಭದ್ರತಾಪಡೆಗಳು ಹೊಡೆದುರುಳಿಸಿವೆ.

ಈ ಉಗ್ರಗಾಮಿಗಳು ಅನಂತನಾಗ್ ಜಿಲ್ಲೆಯ ಬೀಜ್‍ಬೆಹರಾ ಪ್ರದೇಶದ ಸೇತುವೆ ಬಳಿ ನಡೆದ ದಾಳಿಯಲ್ಲಿ ಸಿಆರ್‍ಪಿಎಫ್ ಯೋಧ ಮತ್ತು ಐದು ವರ್ಷದ ಬಾಲಕನನ್ನು ಹತ್ಯೆ ಮಾಡಿದ್ದರು. ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಗಳನ್ನು ಎನ್‍ಕೌಂಟರ್‍ನಲ್ಲಿ ನಿರ್ಮೂಲನೆ ಮಾಡಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾ ನಿರ್ದೇಶಕ ದಿಲ್‍ಬಾಗ್ ಸಿಂಗ್ ತಿಳಿಸಿದ್ದಾರೆ.

ಕಾಶ್ಮೀರ ಪೊಲೀಸರು, ರಾಷ್ಟ್ರೀಯ ರೈಫಲ್ಸ್ ಮತ್ತು ಸಿಆರ್‍ಪಿಎಫ್ ಯೋಧರು ನಡೆಸಿದ ಈ ಜಂಟಿ ಕಾರ್ಯಾಚರಣೆಯಲ್ಲಿ ಹತರಾದ ಇಬ್ಬರು ಉಗ್ರರಿಂದ ರೈಫಲ್‍ಗಳು, ಪಿಸ್ತೂಲ್‍ಗಳು, ಸ್ಪೋಟಕಗಳು, ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅನಂತನಾಗ್ ಜಿಲ್ಲೆಯಲ್ಲಿ ನಿನ್ನೆ ಬೆಳಗ್ಗೆ ನಡೆದ ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಹಿಜ್ಬುಲ್ ಉಗ್ರಗಾಮಿ (ಎಚ್‍ಎಂ) ಸಂಘಟನೆಯ ಕುಖ್ಯಾತ ಕಮಾಂಡರ್ ಸೇರಿದಂತೆ ಮೂವರು ಉಗ್ರಗಾಮಿಗಳನ್ನು ಭದ್ರತಾಪಡೆಗಳು ಹೊಡೆದುರುಳಿಸಿವೆ.

ಹಲವಾರು ಭಯೋತ್ಪಾದನೆ ಕೃತ್ಯಗಳಲ್ಲಿ ಶಾಮೀಲಾಗಿದ್ದ ಕಮಾಂಡರ್ ಮಸೂದ್ ಅಹಮದ್ ಭಟ್ ಹಾಗೂ ಲಷ್ಕರ್-ಎ-ತೈಬಾ ಉಗ್ರಗಾಮಿ ಸಂಘಟನೆಯ ಇನ್ನಿಬ್ಬರು ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲಾಗಿತ್ತು.

Facebook Comments