20 ಲಕ್ಷ ನಿರ್ಮಾಪಕರಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುರಿತು ಸಿನಿಮಾ

ಈ ಸುದ್ದಿಯನ್ನು ಶೇರ್ ಮಾಡಿ

veerendra-hegde

ಚಿಕ್ಕಮಗಳೂರು, ನ.4-ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಚಟುವಟಿಕೆಗಳನ್ನು ಬಿಂಬಿಸುವ ಕಾನೂರಾಯಣ ಎಂಬ ಚಲನಚಿತ್ರ ನಿರ್ಮಿಸಲಾಗುತ್ತಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರಹೆಗಡೆ ತಿಳಿಸಿದರು. ತಾಲೂಕಿನ ಬೆಳವಾಡಿ ಗ್ರಾಮದಲ್ಲಿ ಚಿತ್ರೀಕರಣ ವೀಕ್ಷಿಸಲು ಬಂದಿದ್ದ ವೀರೇಂದ್ರ ಹೆಗಡಯವರು ಸುದ್ದಿಗಾರರೊಂದಿಗೆ ಮಾತನಾಡಿ, ಇದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಚಟುವಟಿಕೆ ರಾಜ್ಯಾದ್ಯಂತ ಹರಡಿದೆ. ಚಟುವಟಿಕೆಗಳ ಸಾಧನೆಯನ್ನು ಜನತೆ ನೋಡಲಿ. ಆ ಮೂಲಕ ಇನ್ನುಳಿದವರು ಪರಿವರ್ತನೆಗೊಂಡು ಸ್ವಾವಲಂಬಿಗಳಾಗಲಿ ಎಂಬ ಸದುದ್ದೇಶದಿಂದ ಈ ಚಿತ್ರ ನಿರ್ಮಿಸಲಾಗುತ್ತಿದೆ ಎಂದರು.
20 ಲಕ್ಷ ಸದಸ್ಯರಿಂದ ತಲಾ 20 ರೂ. ನಂತೆ ಹಣ ಸಂಗ್ರಹಿಸಿ ಈ ಚಿತ್ರಕ್ಕೆ ಬಂಡವಾಳ ಸಂಗ್ರಹಿಸಲಾಗಿದೆ. ಬೆಳವಾಡಿಯ ಗ್ರಾಮೀಣ ಪರಿಸರವನ್ನು ಚಿತ್ರೀಕರಣಕ್ಕೆ ಆಯ್ಕೆ ಮಾಡಿಕೊಂಡಿದ್ದು, ಟಿ.ಎಸ್.ನಾಗಾಭರಣ ಅವರು ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಗ್ರಾಮೀಣರು, ರೈತರೇ ಈ ಸಿನಿಮಾದ ಹೀರೋಗಳು.ಯೋಜನೆಕಾಯಕದ ಸ್ಫೂರ್ತಿಯಿಂದ ಸಿನಿಮಾ ಯಶಸ್ವಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸ್ವಾವಲಂಬಿಗಳಾಗಬೇಕು ಎಂಬುದೇ ಸ್ವಸಹಾಯ ಸಂಘಗಳ ಪರಿಕಲ್ಪನೆ. ಪರಾವಲಂಬಿಗಳಾದರೆ ಬೆಳೆಯಲು ಸಾಧ್ಯವಿಲ್ಲ. ಮೊದಲು ಕುಟುಂಬ, ಗ್ರಾಮ, ಕೃಷಿ, ಭವಿಷ್ಯದ ಬಗೆಗಿನ ಸಂಕಷ್ಟಗಳನ್ನು ನನಸಾಗಿಸುವ ನಿಟ್ಟಿನಲ್ಲಿ ಯೋಜನೆ ಹಾಕಿಕೊಂಡು ಮುಂದುವರೆಬೇಕೆನ್ನುವುದು ನನ್ನ ಆಶಯ ಎಂದರು. ವಾರಕ್ಕೆ 10 ರೂ.ನಂತೆಸದಸ್ಯರು ಉಳಿತಾಯ ಮಾಡಿ 35 ವರ್ಷದಿಂದ 1,200 ಕೋಟಿರೂ. ಉಳಿತಾಯವಾಗಿದೆ. 6500 ಕೋಟಿರೂ.ಹಣವನ್ನು ಬ್ಯಾಂಕ್‍ಗಳಿಂದ ಸಾಲವಾಗಿ ಪಡೆದು ಮರು ಪಾವತಿಸುತ್ತಿದ್ದಾರೆ.ಇಷ್ಟೆಲ್ಲ ಬೆಳವಣಿಗೆಗೆ ಸಾಕಷ್ಟು ಶ್ರಮವಹಿಸಿದ್ದೇವೆ ಎಂದು ಹೇಳಿದರು. ಪ್ರತಿ ಹಳ್ಳಿಗಳಲ್ಲೂ ಜನಜಾಗೃತಿ ವೇದಿಕೆ ಮಾಡಿ ಮದ್ಯವ್ಯರ್ಜನ ಶಿಬಿರ ಮಾಡಿ ದುಶ್ಚಟಗಳ ನಿವಾರಣೆಗೆ ಶ್ರಮಿಸಿದ್ದೇವೆ ಎಂದರು.

ನಿರ್ದೇಶಕ ನಾಗಭೂಷಣ್ ಮಾತನಾಡಿ, 2 ಕೋಟಿರೂ. ವೆಚ್ಚದಲ್ಲಿ 2 ಗಂಟೆ ಕಾಲಾವಧಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ಬೆಳವಾಡಿ ಉದ್ಭವ ಗಣಪತಿ ದೇವಾಲಯದಿಂದ ಚಿತ್ರೀಕರಣ ಆರಂಭಗೊಂಡಿದ್ದು, ಈಗಾಗಲೇ ಶೇ.20ರಷ್ಟು ಮುಗಿದಿದ್ದು, ಮಾರ್ಚ್‍ನಲ್ಲಿ ಚಿತ್ರ ಬಿಡುಗಡೆ ಮಾಡಲಾಗುವುದು ಎಂದರು. ಚಿತ್ರದಲ್ಲಿ ಸ್ವಸಹಾಯ ಸಂಘಗಳ ಮಹಿಳೆಯ ಸ್ವಾವಲಂಬಿ ಬದುಕಿನ ಯಶೋಗಾಥೆಯನ್ನು ಚಿತ್ರದ ಮೂಲಕ ತಿಳಿಸಲಾಗಿದೆ ಎಂದರು. ತಾರಾಗಣದಲ್ಲಿ ಸ್ಕಂದ, ದೊಡ್ಡಣ್ಣ, ಸೋನುಗೌಡ, ಕರಿಸುಬ್ಬ, ಗಿರಿಜಾಲೋಕೇಶ್, ಕಡ್ಡಿಪುಡಿಚಂದ್ರು, ಲಕ್ಷ್ಮಿ ಭಾಗವತಾರ್, ನಿನಾಸಂ ಅಶ್ವಥ್ ಮೊದಲಾದವರು ಅಭಿನಯಿಸಿದ್ದಾರೆ. ಸಂಭಾಷಣೆ ಹರೀಶ್ ಅಗಲವಾಡಿ, ಛಾಯಾಗ್ರಹಣ ಶ್ರೀನಿವಾಸ್, ರಾಮಯ್ಯ, ಸಂಗೀತ ವಾಸುಕಿ ವೈಭವ್ ನಿರ್ವಹಿಸುತ್ತಿದ್ದಾರೆ.

Facebook Comments

Sri Raghav

Admin