20 ವರ್ಷಗಳಿಂದ ರಕ್ತದಾನ ಮಾಡಿ ಮಾದರಿಯಾದ ಪಿ.ರಮೇಶ್

ಈ ಸುದ್ದಿಯನ್ನು ಶೇರ್ ಮಾಡಿ

Ramesh

ಬೆಂಗಳೂರು, ಸೆ.22- ಒಂದು ಜೀವ ಉಳಿಸಿದರೆ ಅದು ಪರಮಾತ್ಮನ ಸೇವೆಯೇ ಸರಿ. ಸಮಾಜಕ್ಕೆ ನಾವು ಏನಾದರೂ ಮಾಡಬೇಕು ಎಂಬ ಉದಾರ ಮನಸ್ಸಿದ್ದರೆ ಸಾಕು, ಅಳಿಲು ಸೇವೆಯೂ ಸಾರ್ಥಕವಾಗುತ್ತದೆ. ಇದೇ ಧ್ಯೇಯದೊಂದಿಗೆ ಕನ್ನಡ ಪ್ರೇಮಿಯೊಬ್ಬರು ಕಳೆದ 20 ವರ್ಷಗಳಿಂದ ರಕ್ತದಾನ ಮಾಡುತ್ತಿದ್ದಾರೆ. ಜತೆಗೆ ತಮ್ಮ ಮರಣದ ನಂತರ ದೇಹದಾನ ಮಾಡುವ ಪ್ರಮಾಣ ಕೂಡ ಮಾಡಿದ್ದಾರೆ.  ಗಾಂಧಿನಗರದ ನಿವಾಸಿಯಾದ ರಮೇಶ್ ಅವರು ಪತ್ರಿಕಾ ಏಜೆಂಟರಾಗಿಯೂ ಕೆಲಸ ನಿರ್ವಹಿಸುತ್ತಾರೆ. ದಿನಪತ್ರಿಕೆಗಳಲ್ಲಿ ಬರುವ ಸುದ್ದಿಗಳನ್ನು ತಪ್ಪದೆ ಓದಿ ಅದರಲ್ಲಿನ ಮಾನವೀಯ ಗುಣಗಳನ್ನು ಅಳವಡಿಸಿಕೊಂಡಿರುವ ಅವರು ರಕ್ತದಾನದ ಮಹತ್ವವನ್ನು ತಮ್ಮ ಸಹೋದ್ಯೋಗಿಗಳಿಗೂ ತಿಳಿಸುತ್ತ ಸ್ವತಃ ತಾವು ಕೂಡ ಅದನ್ನು ಪಾಲಿಸುತ್ತ ಬಂದಿದ್ದಾರೆ.

ಹಲವಾರು ತುರ್ತು ಸಂದರ್ಭಗಳಲ್ಲಿ ರಕ್ತ ನೀಡಿ ಹಲವರಿಗೆ ನೆರವಾಗಿದ್ದಾರೆ. ಕಳೆದ 20 ವರ್ಷಗಳ ಹಿಂದೆ ನಾನು ಸಮಾರಂಭವೊಂದಕ್ಕೆ ತೆರಳಿ ವಾಪಸ್ ಬರುತ್ತಿದ್ದೆ. ಆಗ ರಸ್ತೆಯಲ್ಲಿ ಅಪಘಾತ ಸಂಭವಿಸಿ ವ್ಯಕ್ತಿಯೊಬ್ಬರು ನರಳುತ್ತಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಿದಾಗ ರಕ್ತದ ಅವಶ್ಯಕತೆಯಿತ್ತು. ಆಗ ಎಲ್ಲಿ ಹುಡುಕಿದರೂ ರಕ್ತ ದೊರೆಯಲಿಲ್ಲ. ದುರದೃಷ್ಟವಶಾತ್ ನಾನು ಕೂಡ ಮದ್ಯಪಾನ ಮಾಡಿದ್ದೆ. ನನ್ನ ರಕ್ತವೂ ಕೂಡ ನೆರವಿಗೆ ಬರಲಿಲ್ಲ. ಎಂತಹ ಪ್ರಮಾದವಾಯಿತು ಎಂದು ಅರಿತುಕೊಂಡ ನಾನು ಅಂದೇ ನಾನು ಮದ್ಯಪಾನ ತ್ಯಜಿಸಿ ಸಮಾಜಕ್ಕೆ ಸೇವೆ ಸಲ್ಲಿಸುವ ಜವಾಬ್ದಾರಿ ಹೊತ್ತುಕೊಂಡೆ.

ಈ ನಿಟ್ಟಿನಲ್ಲಿ ಸುಮಾರು 20 ವರ್ಷಗಳಿಂದ ರಕ್ತದಾನ ಮಾಡಿಕೊಂಡು ಬರುತ್ತಿದ್ದೇನೆ. ಅದರಲ್ಲೂ ಡಾ.ರಾಜ್‍ಕುಮಾರ್ ಅವರ ಹುಟ್ಟುಹಬ್ಬದ ದಿನದಂದು ನನ್ನ ಸೇವೆ ಇದ್ದೇ ಇರುತ್ತದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಪಿ.ರಮೇಶ್.

Facebook Comments

Sri Raghav

Admin