ಬೆಂಗಳೂರಲ್ಲಿ ಒಂದೇ ದಿನ 20 ಸಾವಿರ ಕೊರೋನಾ ಕೇಸ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.14-ನಗರದಲ್ಲಿ ಒಂದೇ ದಿನ 20121 ಸೋಂಕಿತರು ಪತ್ತೆಯಾಗಿದ್ದಾರೆ. ನಿನ್ನೆ 18374 ಮಂದಿ ಕೊರೊನಾ ಸೋಂಕಿಗೆ ಗುರಿಯಾಗಿದ್ದರೂ ಇಂದು ಸೋಂಕಿತರ ಸಂಖ್ಯೆ 20 ಸಾವಿರ ದಾಟಿರುವುದರಿಂದ ಮುಂದಿನ ದಿನಗಳಲ್ಲಿ ನಗರದಲ್ಲಿ ಕೊರೊನಾ ಅಟ್ಟಹಾಸ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.

ದಿನೇ ದಿನೇ ಸೋಂಕು ಉಲ್ಬಣಗೊಳ್ಳುತ್ತಿರುವುದನ್ನು ಗಮನಿಸಿದರೆ ಮಹಾಮಾರಿ ಸಮುದಾಯಕ್ಕೆ ಹರಡಿದೆ ಎನ್ನುವುದನ್ನು ಖಚಿತಪಡಿಸಿದೆ.ನಾಳೆ ಸಂಕ್ರಾತಿ ಹಬ್ಬವಿರುವುದರಿಂದ ನಗರದಲ್ಲಿ ವ್ಯಾಪಾರ ವಹಿವಾಟು ಜೋರಾಗಿ ನಡೆಯುವುದರಿಂದ ಸೋಂಕು ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಸೋಂಕಿನ ಭೀತಿಯಿಂದ ಪಾರಾಗಬೇಕಾದರೆ ಜನ ಮನೆಯಲ್ಲೇ ಇದ್ದು ಹಬ್ಬ ಆಚರಿಸುವುದು ಒಳಿತು. ಮಾಸ್ಕ್ ಧರಿಸದೆ ಹೋರ ಹೋಗುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಮೈಮರೆತರೆ ಮಹಾಮಾರಿಗೆ ಆಹ್ವಾನ ನೀಡಿದಂತಾಗುತ್ತದೆ. ಅದರಲ್ಲೂ ಐಟಿ ಬಿಟಿ ಸಂಸ್ಥೆಗಳು ಹೆಚ್ಚಿರುವ ಪ್ರದೇಶಗಳಲ್ಲೇ ಸೋಂಕು ಹೆಚ್ಚಳವಾಗಿರುವುದು ಆಘಾತ ತರಿಸಿದೆ.

ಕೈಗಾರಿಕಾ ಪ್ರದೇಶಗಳು ಹೆಚ್ಚಿರುವ ಬೊಮ್ಮನಹಳ್ಳಿಯಲ್ಲಿ 2232, ಮಹದೇವಪುರದಲ್ಲಿ 2343, ದಕ್ಷಿಣದಲ್ಲಿ 3172, ಪಶ್ಚಿಮ ವಲಯದಲ್ಲಿ 2454, ಆರ್.ಆರ್.ನಗರದಲ್ಲಿ 1528, ದಾಸರಹಳ್ಳಿಯಲ್ಲಿ 593, ಯಲಹಂಕದಲ್ಲಿ 1412, ಅನೆಕಲ್‍ನಲ್ಲಿ 921, ಪೂರ್ವ ತಾಲೂಕಿನಲ್ಲಿ 380, ಉತ್ತರ ತಾಲೂಕಿನಲ್ಲಿ 243, ದಕ್ಷಿಣ ತಾಲೂಕಿನಲ್ಲಿ 457 ಹಾಗೂ ಹೊರಗಿನಿಂದ ಬೆಂಗಳೂರಿಗೆ ಆಗಮಿಸಿರುವ 1360 ಮಂದಿಗೆ ಕೊರೊನ ಮಹಾಮಾರಿ ಒಕ್ಕರಿಸಿದೆ.

Facebook Comments