2014-15ರಲ್ಲಿ ಸಿಎಂ ಕಚೇರಿಯಿಂದಲೇ 2062 ಕೋಟಿ ಗಣಿ ಅಕ್ರಮ : ಹೆಚ್ಡಿಕೆ ಗಂಭೀರ ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy

ಬೆಂಗಳೂರು, ಜ.13-ಅಕ್ರಮ ಗಣಿಗಾರಿಕೆ ಮುಖ್ಯಮಂತ್ರಿಗಳ ಕಚೇರಿಯಿಂದಲೇ ನಡೆದಿದ್ದು 2014-15 ಸಾಲಿನಲ್ಲಿ 2062 ಕೋಟಿ ರೂ. ಗಣಿ ಅಕ್ರಮ ನಡೆಸಲಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಗಂಭೀರ ಆರೋಪ ಮಾಡಿದ್ದಾರೆ.   ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಭೂ ವಿಜ್ಞಾನ ಸಚಿವರು ನೆಪ ಮಾತ್ರಕ್ಕೆ ಇದ್ದಾರೆ. ಸಮಾಜ ಒಡೆಯುವ ಹಾಗೂ ಧರ್ಮ ಪ್ರಚಾರ ನಡೆಸುವ ಕಾರ್ಯದಲ್ಲಿ ವಿನಯ್‍ಕುಲಕರ್ಣಿ ತೊಡಗಿದ್ದಾರೆ ಎಂದು ಹರಿಹಾಯ್ದರು.   ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕು ಬಳಿ ಸುಬ್ಬರಾಯನಹಳ್ಳಿಯ ತಿಮ್ಮಾಪುರ ಗುಡಿ ಬಳಿ ಮೈಸೂರು ಮಿನರಲ್ಸ್‍ನಿಂದ ಗಣಿ ಗುತ್ತಿಗೆ ನೀಡಲಾಗಿದೆ ಎಂದು ದೂರಿದರು.

ಮುಚಂಡಿ ಎಂಟರ್‍ಪ್ರೈಸಸ್‍ನಿಂದ ಅಕ್ರಮ ನಡೆದಿದೆ. ಸರ್ಕಾರ ಮೂರು ಕಂಪನಿಗಳಿಗೆ ಗಣಿ ಗುತ್ತಿಗೆ ನೀಡಿದೆ. ಸುಬ್ಬರಾಯನಹಳ್ಳಿ ಬಳಿ 30 ಲಕ್ಷ ಮೆಟ್ರಿಕ್ ಟನ್ ಉತ್ಖನನ ಮಾಡಲು ಅವಕಾಶ ನೀಡಲಾಗಿದೆ.   ಜುಲೈ 2015ರಲ್ಲಿ 1,05,820 ಮೆಟ್ರಿಕ್ ಟನ್ ಅದಿರು ತೆಗೆಯಲಾಗಿದೆ. ಆದರೆ 52,920 ಮೆಟ್ರಿಕ್ ಟನ್ ಲೆಕ್ಕ ತೋರಿಸಿದ್ದಾರೆ. ಉಳಿದ ಕಬ್ಬಿಣದ ಅದಿರು ಎಲ್ಲಿ ಹೋಯಿತು ಎಂಬುದು ತನಿಖೆಯಿಂದ ಹೊರಬರಬೇಕಿದೆ ಎಂದರು.   ಟೆಂಡರ್ ಅಗ್ರಿಮೆಂಟ್‍ಗೂ ಮುಂಚೆಯೇ ಮುಚಂಡಿ ಕಂಪನಿ ಗಣಿಗಾರಿಕೆಯನ್ನು ಆರಂಭಿಸಿದೆ. ಒಂದು ತಿಂಗಳ ಹಿಂದೆ ಸರ್ಕಾರದ ಗಣಿ ಇಲಾಖೆಯ ಅಕ್ರಮದ ಬಗ್ಗೆ ಬಯಲು ಮಾಡಿದ್ದೇನೆ. ಭ್ರಷ್ಟಾಚಾರದ ಬಗ್ಗೆ ಇಷ್ಟೊಂದು ವಿಚಾರ ಬಹಿರಂಗಪಡಿಸುತ್ತಿದ್ದೇನೆ. ನನಗೆ ಬೇಸರವಾಗುತ್ತಿದೆ. ಎಷ್ಟೇ ಅಕ್ರಮ ದಾಖಲೆಗಳನ್ನು ನೀಡಿದರೂ ತಾರ್ಕಿಕ ಅಂತ್ಯ ಮುಟ್ಟುತ್ತಿಲ್ಲ ಎಂದು ವಿಷಾದಿಸಿದರು.

ಹಿರಿಯ ಅಧಿಕಾರಿ ಹೇಮಲತಾ ಅವರು ಗಣಿ ಅಕ್ರಮದ ತನಿಖೆಗೆ ಮುಂದಾಗಿದ್ದರು. ತಕ್ಷಣ ಅವರನ್ನು ಎತ್ತಂಗಡಿ ಮಾಡಲಾಯಿತು. ಮೂರು ವರ್ಷದಲ್ಲಿ ಐದಾರು ಜನ ಅಧಿಕಾರಿಗಳು ಬದಲಾಗಿದ್ದಾರೆ. ತುಷಾರ್ ಗಿರಿನಾಥ್ ಅವರ ಅವಧಿಯಲ್ಲಿ ಇಷ್ಟೆಲ್ಲ ಅಕ್ರಮ ನಡೆದಿದೆ. ಆಕಾರಣ ಮುಖ್ಯಮಂತ್ರಿ ಕಚೇರಿಯಲ್ಲೇ ಉಳಿಸಿಕೊಂಡಿದ್ದಾರೆ. ತೋರಿಕೆಗೆ ಮಾತ್ರ ಅಕ್ರಮ ತನಿಖೆ ಸಮಿತಿಯನ್ನು ರಚಿಸಲಾಗಿದೆ ಎಂದು ವಾಗ್ದಾಳಿ ಮಾಡಿದರು.  ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ತಿಳಿಯದೆ ಚೆಕ್ ಮೂಲಕ ಹಣ ಪಡೆದಿದ್ದರು. ಆದರೆ ಇಂದಿನ ಮುಖ್ಯಮಂತ್ರಿಗಳು ಬೇರೆ ಮಾರ್ಗದ ಮೂಲಕ ವ್ಯವಹಾರ ನಡೆಸುತ್ತಿದ್ದಾರೆ.

ವಾಸ್ತವವಾಗಿ ಮಚ್ಚಂಡಿ ಸಂಸ್ಥೆಯಲ್ಲಿ ಗಣಿ ಯಂತ್ರಗಳೇ ಇರಲಿಲ್ಲ. ಸೌತ್ ವೆಸ್ಟ್ ಮೈನಿಂಗ್ ಕಾರ್ಪೊರೇಷನ್  ಈ ಹೆಸರಿನಲ್ಲಿ ಗಣಿಗಾರಿಕೆ ಮಾಡಿದೆ. ಯಡಿಯೂರಪ್ಪ ಸರ್ಕಾರದ ಅವಧಿಯಲ್ಲೂ ಸೌತ್ ವೆಸ್ಟ್ ಮೈನಿಂಗ್ ಕಂಪನಿಯಿಂದಲೇ ಗಣಿಗಾರಿಕೆ ನಡೆಯುತ್ತಿತ್ತು. ಈ ಸರ್ಕಾರದಲ್ಲು ಅದೇ ಮುಂದುವರೆದಿದೆ.
ಈ ಕಂಪನಿಗಳ ಮಾಲೀಕರು ಯಾರೆಂದು ಗೊತ್ತಿಲ್ಲ. ಏಕೆಂದರೆ ನನಗೆ ಯಾರು ದುಡ್ಡು ಕೊಡಲು ಬರುವುದಿಲ್ಲ. ನನ್ನ ಹತ್ತಿರ ಬರುವವರೆಲ್ಲ ದುಡ್ಡು ತೆಗೆದುಕೊಂಡು ಹೋಗುವವರೇ ಎಂದು ಹೇಳಿದರು.  ರಾಜ್ಯದ ಸಂಪತ್ತು ಹೊಡೆಯುವವರಿಂದ ಕಿಕ್‍ಬ್ಯಾಕ್ ಪಡೆಯುವ ವ್ಯಕ್ತಿ ನಾನಲ್ಲ. ರಾಜ್ಯದ ಆಸ್ತಿ ಉಳಿಯಬೇಕು. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರಿಗೆ ಇಂತಹ ಭಾಗ್ಯ ಕರುಣಿಸಿದ ಸರ್ಕಾರ ಇದು ಎಂದು ಕಿಡಿಕಾರಿದರು.

Facebook Comments

Sri Raghav

Admin