2018ರಲ್ಲಿ 30,000 ಸರ್ಕಾರಿ ನೌಕರರ ನಿವೃತ್ತಿ, ರಾಜ್ಯದ ಇತಿಹಾಸದಲ್ಲೇ ಇದೇ ಮೊದಲು..!

ಈ ಸುದ್ದಿಯನ್ನು ಶೇರ್ ಮಾಡಿ

Govt-Employs

ಬೆಂಗಳೂರು, ಏ.2-ರಾಜ್ಯದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 2018ರಲ್ಲಿ ಸುಮಾರು 30 ಸಾವಿರ ಸರ್ಕಾರಿ ನೌಕರರು ನಿವೃತ್ತರಾಗಲಿದ್ದು , ಸೇವೆಗಳ ಮೇಲೆ ಭಾರೀ ಹೊಡೆತ ಬೀಳಲಿದೆ.   ಸಾಮಾನ್ಯವಾಗಿ ಪ್ರತಿ ವರ್ಷ ಆಸುಪಾಸು 10 ಸಾವಿರ ನೌಕರರು ನಿವೃತ್ತಿ ಹೊಂದುತ್ತಿದ್ದರು. ಇದೇ ಮೊದಲ ಬಾರಿಗೆ 2018ರ ಮಾರ್ಚ್ ಅಂತ್ಯಕ್ಕೆ ವಿವಿಧ ಶ್ರೇಣಿಯ 30 ಸಾವಿರ ನೌಕರರು ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ.   ರಾಜ್ಯ ಸರ್ಕಾರ ಈ ಹಿಂದೆ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 55ರಿಂದ 58ಕ್ಕೆ ಬಳಿಕ 58ರಿಂದ 60 ವರ್ಷಕ್ಕೆ ಏರಿಕೆ ಮಾಡಿದ್ದೇ ಇಷ್ಟು ದೊಡ್ಡ ಪ್ರಮಾಣದಲ್ಲಿ ನೌಕರರು ನಿವೃತ್ತಿಯಾಗಲು ಕಾರಣ ಎಂದು ತಿಳಿದುಬಂದಿದೆ.

ಇಷ್ಟು ದೊಡ್ಡ ಮಟ್ಟದಲ್ಲಿ ನೌಕರರು ನಿವೃತ್ತಿಯಾಗುತ್ತಿರುವುದರಿಂದ ಸರ್ಕಾರ ತೆರವುಗೊಳ್ಳುತ್ತಿರುವ ಸ್ಥಾನವನ್ನು ತುಂಬಬೇಕಾಗಿದೆ. ಆದರೆ ಏಕಾಏಕಿ ಇಷ್ಟು ಹುದ್ದೆಗಳನ್ನು ಸೃಷ್ಟಿಸುವುದೆಂದರೆ ರಾಜ್ಯದ ಬೊಕ್ಕಸಕ್ಕೆ ಭಾರೀ ಹೊಡೆತ ಬೀಳಲಿದೆ.   ಇನ್ನು ಖಾಲಿಯಾಗದ ಹುದ್ದೆಗಳನ್ನು ತುಂಬದಿದ್ದರೆ, ಸೇವೆಗಳ ಮೇಲೆ ಪರಿಣಾಮ ಬೀರಲಿದ್ದು, ಸಾರ್ವಜನಿಕರಿಗೆ ತೊಂದರೆಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಐಎಎಸ್, ಐಪಿಎಸ್, ಐಎಫ್‍ಎಸ್, ಕೆಎಎಸ್ ಸೇರಿದಂತೆ ಕಂದಾಯ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಲೋಕೋಪಯೋಗಿ, ಇಂಧನ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್, ನೀರಾವರಿ, ಸಮಾಜ ಕಲ್ಯಾಣ, ತೋಟಗಾರಿಕೆ, ಸಹಕಾರ, ನಗರಾಭಿವೃದ್ದಿ , ಗೃಹ ಸೇರಿದಂತೆ ಪ್ರಮುಖ ಇಲಾಖೆಗಳಲ್ಲಿ ಸಾವಿರಾರು ನೌಕರರು ನಿವೃತ್ತಿ ಹೊಂದಲಿದ್ದಾರೆ.

ರಾಜ್ಯದಲ್ಲಿ ಒಟ್ಟು 7, 79,439 ಸರ್ಕಾರಿ ನೌಕರರಿದ್ದಾರೆ. 2,69,572 ಹುದ್ದೆಗಳನ್ನು ಭರ್ತಿ ಮಾಡಬೇಕಾದ ಸವಾಲು ಸರ್ಕಾರದ ಮುಂದಿದೆ. ಇತ್ತೀಚೆಗೆ ಕೊನೆಗೊಂಡ ಬಜೆಟ್ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು. ಆದರೆ ಏಕಾಏಕಿ 30 ಸಾವಿರ ಸರ್ಕಾರಿ ನೌಕರರು ನಿವೃತ್ತರಾದರೆ ಸರ್ಕಾರದ ಬೊಕ್ಕಸಕ್ಕೆ ನಿರೀಕ್ಷೆ ಮಾಡದಷ್ಟು ಹೊರೆಯಾಗಲಿದೆ.
ಕೆಪಿಎಸ್‍ಸಿ ಮೂಲಕ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಮುಂದೆಯಾಗಿದೆಯಾದರೂ 2,69,572 ಹುದ್ದೆಗಳನ್ನು ಪೂರ್ಣ ಪ್ರಮಾಣದಲ್ಲಿ ಭರ್ತಿ ಮಾಡುವುದೆಂದರೆ ಸರ್ಕಾರಕ್ಕೆ ಅದು ಸವಾಲೇ ಸರಿ.

ರಾಜ್ಯ ಮಟ್ಟದಲ್ಲಿ 3,47,900 ಹುದ್ದೆಗಳಿದ್ದರೆ ಖಾಲಿ ಇರುವ ಹುದ್ದೆಗಳ ಸಂಖ್ಯೆ 1,32,529. ಇದೇ ರೀತಿ ಜಿಲ್ಲಾ ಮಟ್ಟದಲ್ಲಿ 4,38,454 ಸರ್ಕಾರಿ ಹುದ್ದೆಗಳಿದ್ದರೆ ಖಾಲಿ ಇರುವ ಹುದ್ದೆಗಳ ಸಂಖ್ಯೆ 1,37,043.  ಕಳೆದ ಹಲವು ವರ್ಷಗಳಿಂದ ಎರಡು ಲಕ್ಷಕ್ಕೂ ಅಧಿಕ ಸರ್ಕಾರಿ ಹುದ್ದೆಗಳನ್ನು ಯಾವುದೇ ಸರ್ಕಾರ ಭರ್ತಿ ಮಾಡುವತ್ತ ಗಮನಹರಿಸಿರಲಿಲ್ಲ. 2013ರ ನಂತರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಖಾಲಿ ಹುದ್ದೆಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.  ಪ್ರತಿ ವರ್ಷ ಕೆಪಿಎಸ್‍ಸಿ ಮೂಲಕ ಕೆಎಎಸ್, ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು, ಉಪನ್ಯಾಸಕರು, ಸಾರಿಗೆ, ಗೃಹ ಸೇರಿದಂತೆ ಮತ್ತಿತರ ಇಲಾಖೆಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತದೆ.

ಆದರೆ ಖಾಲಿ ಇರುವ ಹುದ್ದೆಗಳ ಸಂಖ್ಯೆಯನ್ನು ಪರಿಗಣಿಸಿದರೆ ಸರ್ಕಾರ ಭರ್ತಿ ಮಾಡುತ್ತಿರುವ ಹುದ್ದೆಗಳ ಸಂಖ್ಯೆ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಿದೆ.  ವರ್ಷದಿಂದ ವರ್ಷಕ್ಕೆ ಖಾಲಿ ಹುದ್ದೆಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಸರ್ಕಾರ ಮಾತ್ರ ಒಂದಿಷ್ಟು ಹುದ್ದೆಗಳನ್ನು ತುಂಬುವ ಪ್ರಯತ್ನ ನಡೆಸಿದೆಯಾದರೂ ಪೂರ್ಣ ಪ್ರಮಾಣದಲ್ಲಿ ಮಾಡದಿರುವುದು ಹೆಚ್ಚಿನ ಸಂಖ್ಯೆಯಲ್ಲಿ ಹುದ್ದೆಗಳು ಉಳಿಯಲು ಕಾರಣವಾಗಿದೆ.   2013ರಲ್ಲಿ 1,25,000 ಸರ್ಕಾರಿ ಹುದ್ದೆಗಳು ಖಾಲಿಯಿದ್ದರೆ, 2015ರಲ್ಲಿ 1,98,000ಕ್ಕೆ ಏರಿಕೆಯಾಯಿತು. ಯಾವುದೇ ಒಂದು ಸರ್ಕಾರದಲ್ಲಿ ಸರ್ಕಾರಿ ಹುದ್ದೆಗಳನ್ನು ಹಾಗೆಯೇ ಉಳಿಸಿಕೊಳ್ಳುವುದು ಆಡಳಿತಾತ್ಮಕ ದೃಷ್ಟಿಯಿಂದ ಸರಿಯಲ್ಲ. ನಿವೃತ್ತರಾಗುತ್ತಿದ್ದಂತೆ ಅವುಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳುವುದು ಸರ್ಕಾರದ ಆದ್ಯ ಕರ್ತವ್ಯ.   ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಷಯದಲ್ಲಿ ಒಂದಿಷ್ಟು ಸಕಾರಾತ್ಮಕವಾಗಿ ನಡೆದುಕೊಳ್ಳುತ್ತಿದ್ದರಾದರೂ ವೇಗ ಮಾತ್ರ ಆಮೆಗತಿಯಂತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin