2018ರ ವಿಧಾನಸಭಾ ಚುನಾವಣೆಗೆ ಸಿದ್ದು-ಪರಂ ಸಾರಥ್ಯ

ಈ ಸುದ್ದಿಯನ್ನು ಶೇರ್ ಮಾಡಿ

Parameshwar

ಬೆಂಗಳೂರು, ನ.6– ರಾಜ್ಯದಲ್ಲಿ ದಲಿತ ಮತಬ್ಯಾಂಕ್ ಸೆಳೆಯಲು ಬಿಜೆಪಿ ಗಮನ ಕೇಂದ್ರೀಕರಿಸಿರುವ ಬೆನ್ನಲ್ಲೇ ಎಚ್ಚೆತ್ತಿರುವ ಕಾಂಗ್ರೆಸ್ ಹೈಕಮಾಂಡ್ ಮುಂಬರುವ ವಿಧಾನಸಭೆ ಚುನಾವಣೆಯನ್ನು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹಾಗೂ ಸಿಎಂ ಸಿದ್ದರಾಮಯ್ಯನವರ ಸಾರಥ್ಯದಲ್ಲಿ ಎದುರಿಸಲು ನಿರ್ಧರಿಸಿದೆ. ಹಿರಿಯ ದಲಿತ ನಾಯಕ ವಿ.ಶ್ರೀನಿವಾಸ ಪ್ರಸಾದ್ ಅವರು ಕಾಂಗ್ರೆಸ್ ತೊರೆದ ನಂತರದ ಬೆಳವಣಿಗೆಯಿಂದ ಹೈಕಮಾಂಡ್ ಆತಂಕಗೊಂಡಿದ್ದು,  ಈ ಹಿನ್ನೆಲೆಯಲ್ಲಿ ದಲಿತ ನಾಯಕ ಪರಮೇಶ್ವರ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮುಂದುವರಿಸಲು ತೀರ್ಮಾನಿಸಿದೆ.

ರಾಜ್ಯದಲ್ಲಿ ಶೇ.24ರಷ್ಟು ದಲಿತ ಮತಗಳಿದ್ದು, ಇಂತಹ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬೇರೆ ಸಮುದಾಯದ ನಾಯಕರನ್ನು ತಂದು ಕೂರಿಸಿದರೆ ಬಿಜೆಪಿ ಅದರ ಲಾಭ ಪಡೆಯಬಹುದು ಎಂಬುದು ಕಾಂಗ್ರೆಸ್ ಹೈಕಮಾಂಡ್‍ನ ಲೆಕ್ಕಾಚಾರ.  ಇಂದಿನ ಸ್ಥಿತಿಯಲ್ಲಿ ಪರಮೇಶ್ವರ್ ಅವರನ್ನು ಬದಲಿಸಿ ಆ ಜಾಗಕ್ಕೆ ಲಿಂಗಾಯತ ಸಮುದಾಯದ ಎಸ್.ಆರ್.ಪಾಟೀಲ್ ಸೇರಿದಂತೆ ಹಲವು ಸಮುದಾಯದ ನಾಯಕರನ್ನು ತರಬೇಕು ಎಂದು ಕೋರಿ ಲಾಬಿ ನಡೆದಿತ್ತಾದರೂ ಇಂತಹ ಎಲ್ಲ ಲಾಬಿಗಳಿಗೆ ಹೈಕಮಾಂಡ್ ಬ್ರೇಕ್ ಹಾಕಿದೆ ಎಂದು ಪಕ್ಷದ ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಶ್ರೀನಿವಾಸ್ ನಿರ್ಗಮನದ ನಂತರ ದಲಿತ ಸಮುದಾಯ ಗಣನೀಯ ಪ್ರಮಾಣದಲ್ಲಿ ಕಾಂಗ್ರೆಸ್‍ಗೆ ತಿರುಗಿ ಬಿದ್ದಿದ್ದು, ಇಂತಹ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷಗಾದಿಯಿಂದ ಪರಮೇಶ್ವರ್ ಅವರನ್ನು ಕೆಳಗಿಳಿಸಿದರೆ ಪಕ್ಷಕ್ಕೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬುದು ಹೈಕಮಾಂಡ್‍ನ ಚಿಂತನೆಯಾಗಿದೆ. ಮರಳಿ ಅಧಿಕಾರ ಪಡೆಯುವ ಉತ್ಸುಕತೆಯಲ್ಲಿರುವ ಬಿಜೆಪಿ ಈಗಾಗಲೇ ಸಮರದ ತಯಾರಿ ಆರಂಭಿಸಿದೆ. ಕಳೆದ ನಾಲ್ಕು ದಿನಗಳಿಂದ ಇಂತಹ ಸಮರಕ್ಕೆ ತಯಾರಿ ಮಾಡಿಕೊಳ್ಳುವ ಸಲುವಾಗಿಯೇ ಶಿಬಿರ ನಡೆಸಿದ ಬಿಜೆಪಿ ಹಿಂದೂ ಮತಗಳನ್ನು ಕ್ರೋಢೀಕರಿಸಿಕೊಳ್ಳಲು ಸಂಪೂರ್ಣ ಸಜ್ಜಾಗಿದೆ. ಇಂತಹ ಸಂದರ್ಭದಲ್ಲಿ ಪರಮೇಶ್ವರ್ ಹಾಗೂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಮುಂದಿನ ವಿಧಾನಸಭೆ ಚುನಾವಣೆ ಎದುರಿಸುವುದು ಸೂಕ್ತ ಎಂದು ಹೈಕಮಾಂಡ್ ನಿರ್ಧರಿಸಿದ್ದು, ಇತ್ತೀಚೆಗೆ ದೆಹಲಿಗೆ ಬಂದಾಗ ಇಬ್ಬರೂ ನಾಯಕರ ಜತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‍ಸಿಂಗ್ ಅವರು ಈ ಬಗ್ಗೆ ಸವಿವರವಾಗಿ ಮಾತನಾಡಿದ್ದಾರೆ ಎನ್ನಲಾಗಿದೆ.

ತಮಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬೇಡ, ಸಚಿವ ಸ್ಥಾನದಲ್ಲಿ ಮುಂದುವರಿಯುತ್ತೇನೆ ಎಂದು ಈ ಹಿಂದೆ ಪರಮೇಶ್ವರ್ ಅವರು ಹೈಕಮಾಂಡ್ ಬಳಿ ಹೇಳಿಕೊಂಡಿದ್ದರಾದರೂ ಬದಲಾದ ರಾಜಕೀಯ ಸಂದರ್ಭದ ಹಿನ್ನೆಲೆಯಲ್ಲಿ ಎರಡೂ ಹುದ್ದೆಗಳಲ್ಲಿ ಮುಂದುವರಿಯುವಂತೆ ಪರಮೇಶ್ವರ್ ಅವರಿಗೆ ಸೂಚಿಸಲಾಗಿದೆ.  ಸತತ ಆರು ವರ್ಷಗಳಿಂದ ಕೆಪಿಸಿಸಿ ಅಧ್ಯಕ್ಷರಾಗಿರುವ ಪರಮೇಶ್ವರ್ ಅವರು ಮುಂದಿನ ವಿಧಾನಸಭೆ ಚುನಾವಣೆಯಲ್ಲೂ ಪಕ್ಷ ಮುನ್ನಡೆಸಲು ಸಿಎಂ ಸಿದ್ದರಾಮಯ್ಯನವರಿಗೆ ಸಾಥ್ ನೀಡಲಿದ್ದು, ಸಹಜವಾಗಿಯೇ ಈ ಬೆಳವಣಿಗೆ ರಾಜಕೀಯ ವಲಯಗಳಲ್ಲಿ ಕುತೂಹಲ ಮೂಡಿಸಿದೆ. ಹಾಗೆಯೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿರುವುದು ಈ ಬೆಳವಣಿಗೆಯಿಂದ ನಿರಾಶರಾಗುವ ಸಾಧ್ಯತೆ ಇದೆ.

► Follow us on –  Facebook / Twitter  / Google+

Facebook Comments

Sri Raghav

Admin