2018 ರ ವಿಧಾನಸಭಾ ಚುನಾವಣೆಗೆ ರಣವೀಳ್ಯ : ಏಕತಾ ಸಮಾವೇಶದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವಾಕ್ ಪ್ರಹಾರ

ಈ ಸುದ್ದಿಯನ್ನು ಶೇರ್ ಮಾಡಿ

Ekata--Samavesha-5

ಬೆಂಗಳೂರು, ನ.27-ಮುಂಬರುವ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟು ಬಿಜೆಪಿ ಹಮ್ಮಿಕೊಂಡಿದ್ದ ಹಿಂದುಳಿದ ವರ್ಗಗಳ ಬೃಹತ್ ಏಕತಾ ಸಮಾವೇಶಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಜನಸಾಗರವೇ ಹರಿದು ಬಂದಿತ್ತು.  ರಾಯಚೂರಿನ ಲಿಂಗಸಗೂರಿನಲ್ಲಿ ನಡೆದ ಪರಿಶಿಷ್ಟ ವರ್ಗಗಳ ಸಮಾವೇಶದ ನಂತರ ನಡೆದ ಹಿಂದುಳಿದ ವರ್ಗಗಳ ಸಮಾವೇಶಕ್ಕೆ ಹರಿದು ಬಂದ ಜನಸಾಗರ ಬಿಜೆಪಿಯ ಆತ್ಮಸ್ಥೈರ್ಯ ಹೆಚ್ಚಿಸುವಲ್ಲಿ ಯಶಸ್ವಿಯಾಯಿತು.  ಅಮಿತ್‍ಷಾ, ರಾಜ್ಯ ಉಸ್ತುವಾರಿ ಮುರಳೀಧರ್‍ರಾವ್, ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತ್‍ಕುಮಾರ್, ಡಿ.ವಿ.ಸದಾನಂದಗೌಡ, ರಮೇಶ್ ಜಿಗಜಿಣಗಿ, ಮುಖಂಡರಾದ ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಷಿ, ಶೋಭಾಕರಂದ್ಲಾಜೆ, ಪಿ.ಸಿ.ಮೋಹನ್, ಪ್ರತಾಪ್‍ಸಿಂಹ, ಜಿ.ಎಂ.ಸಿದ್ದೇಶ್ವರ್, ಶ್ರೀರಾಮುಲು ಸೇರಿದಂತೆ ಬಿಜೆಪಿಯ ಹಲವಾರು ಶಾಸಕರು, ಮಾಜಿ ಸಚಿವರು, ಮುಖಂಡರು ಪಾಲ್ಗೊಂಡಿದ್ದರು.

ವೇದಿಕೆಗೆ ಗಣ್ಯರು ಆಗಮಿಸುತ್ತಿದ್ದಂತೆ ನೆರೆದಿದ್ದ ಸಾವಿರಾರು ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರನ್ನು ಚಪ್ಪಾಳೆ, ಜಯಘೋಷದ ಮೂಲಕ ಅವರನ್ನು ಸ್ವಾಗತಿಸಿದರು.

ಸರ್ಕಾರದ ವಿರುದ್ಧ ವಾಗ್ದಾಳಿ:

ವೇದಿಕೆಯಲ್ಲಿ ಭಾಷಣ ಮಾಡಿದ ಅಮಿತ್‍ಷಾ, ಬಿ.ಎಸ್.ಯಡಿಯೂರಪ್ಪ, ಅನಂತ್‍ಕುಮಾರ್ ಮತ್ತಿತರರು ರಾಜ್ಯದ ಸರ್ಕಾರದ ಕಾರ್ಯವೈಖರಿ ವಿರುದ್ಧ ಹರಿಹಾಯ್ದರು.  ಇದೇ ಸಂದರ್ಭದಲ್ಲಿ ಹಳೆ ನೋಟು ರದ್ಧತಿ ವಿರೋಧಿಸಿ ನಾಳೆ ಕರೆದಿರುವ ಭಾರತ್ ಬಂದ್‍ಗೆ ಬೆಂಬಲ ನೀಡದಿರುವಂತೆ ಬಿಜೆಪಿ ಮುಖಂಡರು ಮನವಿ ಮಾಡಿದರು. ದೇಶದಲ್ಲಿ ಹೆಚ್ಚುತ್ತಿರುವ ಕಾಳದಂಧೆಕೋರರು, ಹವಾಲಾ ಹಾಗೂ ಭಯೋತ್ಪಾದನೆಗೆ ಕಡಿವಾಣ ಹಾಕಲು ನೋಟುಗಳ ನಿಷೇಧ ಅನಿವಾರ್ಯವಾಗಿತ್ತು. ಆದರೆ ವಿರೋಧ ಪಕ್ಷಗಳು ಜನರನ್ನು ತಪ್ಪು ದಾರಿಗೆ ಎಳೆಯುತ್ತಿವೆ. ಈ ವದಂತಿಗಳಿಗೆ ಕಿವಿಗೊಡಬಾರದೆಂದು ಮನವಿ ಮಾಡಿದರು.

ಹರಿದು ಬಂದ ಜನಸಾಗರ:

ಅರಮನೆ ಮೈದಾನದಲ್ಲಿ ನಡೆದ ಏಕತಾ ಸಮಾವೇಶಕ್ಕೆ ಜನಸಾಗರವೇ ಹರಿದುಬಂದಿತ್ತು. ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಹುಣಸೂರು, ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ಅರಮನೆ ಮೈದಾನದ ಸುತ್ತಮುತ್ತ ಕೇಸರಿ ಬಾವುಟಗಳೇ ರಾರಾಜಿಸುತ್ತಿತ್ತು.

ಒಗ್ಗಟ್ಟು ಪ್ರದರ್ಶನ:

ಸಮಾವೇಶದಲ್ಲಿ ಎಲ್ಲ ಮುಖಂಡರು ತಮ್ಮ ವೈಯಕ್ತಿಕ ವೈಮನಸ್ಸನ್ನು ಮರೆಮಾಚಿ ಒಗ್ಗಟ್ಟು ಪ್ರದರ್ಶಿಸಿದ್ದು, ಗಮನ ಸೆಳೆಯಿತು. ಕುಂದಾಪುರ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸಶೆಟ್ಟಿ ಸಮಾರಂಭಕ್ಕೆ ಹಾಜರಾಗುವ ಮೂಲಕ ತಾವು ಮತ್ತೆ ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದರು.

ಬಂದೋಬಸ್ತ್:

ಇನ್ನು ಸಮಾವೇಶ ನಡೆದ ಅರಮನೆ ಮೈದಾನದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಅರಮನೆ ಮೈದಾನದ ಸುತ್ತಮುತ್ತ ಹಾಗೂ ಸಮಾವೇಶಕ್ಕೆ ಸಂಪರ್ಕ ಕಲ್ಪಿಸುವ ಜಯಮಹಲ್, ವಿಮಾನ ನಿಲ್ದಾಣದ ರಸ್ತೆ, ತುಮಕೂರು-ಬೆಂಗಳೂರು ರಸ್ತೆ, ಬೆಂಗಳೂರು-ಮೈಸೂರು ರಸ್ತೆ ಸೇರಿದಂತೆ ಬಹುತೇಕ ರಸ್ತೆಗಳಲ್ಲಿ ಪೊಲೀಸರ ಲಾಠಿಗಳ ಸದ್ದು ಜೋರಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ನಗರ ಪೆÇಲೀಸ್ ಆಯುಕ್ತ ಎಂ.ಎನ್.ಮೆಘರಿಕ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಆಯುಕ್ತ ಹರಿಶೇಖರನ್, ಇಬ್ಬರು ಡಿಸಿಪಿ, ಎಂಟು ಎಸಿಪಿ, 14 ಇನ್ಸ್‍ಪೆಕ್ಟರ್‍ಗಳು, 75 ಸಬ್‍ಇನ್ಸ್‍ಪೆಕ್ಟರ್‍ಗಳು, 500 ಪೊಲೀಸರು ಹಾಗೂ 8 ಕೆಎಸ್‍ಆರ್‍ಪಿ ತುಕಡಿಗಳನ್ನು ನಿಯೋಜಿಸಲಾಗಿತ್ತು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin