ಮಹಾಸಮರ ಮುಕ್ತಾಯ, ರಿಸಲ್ಟ್ ಮೇಲೆ ಕೋಟ್ಯಾಂತರ ಜನರ ಚಿತ್ತ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 19- ದೇಶದ ಹೊಸ ಸರ್ಕಾರ ರಚನೆಗಾಗಿ ನಡೆದ ಹೈವೋಲ್ಟೇಜ್ ಮಹಾ ಚುನಾವಣೆಯ ಏಳನೇ ಹಂತಗಳ ಚುನಾವಣೆಯ ಕೊನೆ ಘಟ್ಟಕ್ಕೆ ಭಾರೀ ಬಂದೋಬಸ್ತ್ ನಡುವೆ ಭರ್ಜರಿ ಮತದಾನವಾಗಿದೆ.

ಸಂಜೆ ಆರು ಗಂಟೆಗೆ ಹದಿನೇಳನೇ ಲೋಕಸಭಾ ಚುನಾವಣೆಗೆ ಅಂತಿಮ ತೆರೆ ಬೀಳಲಿದ್ದು, ಆ ನಂತರ ಪ್ರಕಟವಾಗುವ ಮತಗಟ್ಟೆ ಸಮೀಕ್ಷೆಗಳತ್ತ ಇಡೀ ದೇಶದ ಜನರ ಕಣ್ಣು ನೆಟ್ಟಿದೆ. ಯಾವ ಪಕ್ಷ ಅಧಿಕಾರ ಗದ್ದುಗೆಗೇರಲಿದೆ ಎಂಬ ಲೆಕ್ಕಾಚಾರ ನಡೆಯುತ್ತಿದೆ. 23ರಂದು ಘೋಷಣೆಯಾಗುವ ಚುನಾವಣಾ ಫಲಿತಾಂಶದತ್ತ ಎಲ್ಲರ ಚಿತ್ತ ಕೇಂದ್ರೀಕೃತವಾಗಿದೆ.

59 ಕ್ಷೇತ್ರಗಳ ಈ ನಿರ್ಣಾಯಕ ಹಂತದ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸುವ ಪಕ್ಷವೇ ಸರ್ಕಾರ ರಚಿಸಲಿದೆ ಎಂದು ವಿಶ್ಲೇಸಲಾಗುತ್ತಿದೆ. ಪ್ರಧಾನಿ ನರೇಂದ್ರ ನೇತೃತ್ವದ ಬಿಜೆಪಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸುವ ಉತ್ಸಾಹದಲ್ಲಿದ್ದರೆ, ಇನ್ನೊಂದೆಡೆ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ಶತಾಯ-ಗತಾಯ ತಪ್ಪಿಸಲು ಪ್ರತಿಪಕ್ಷಗಳು ಕಾರ್ಯತಂತ್ರ ಹೆಣೆದಿವೆ.

ಆಂಧ್ರಪ್ರದೇಶ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಪಕ್ಷದ ನಾಯಕ ಎನ್. ಚಂದ್ರಬಾಬು ನಾಯ್ಡು ಈಗಾಗಲೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ,
ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಮತ್ತು ಎನ್‍ಸಿಪಿ ಧುರೀಣ ಶರದ್ ಪವಾರ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಯ ಕಸರತ್ತು ತೀವ್ರಗೊಳಿಸಿದ್ದಾರೆ.

# ಬಿರುಸಿನ ಮತದಾನ :
ಏಳು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ 59 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಏಳನೇ ಹಂತದ ಮತೋತ್ಸವದಲ್ಲಿ ಜನರು ಅತ್ಯುತ್ತಾಹದಿಂದ ಮತದಾನ ಮಾಡಿದರು. ಬೆಳಗ್ಗೆ ಏಳು ಗಂಟೆಯಿಂದಲೇ ಮತದಾರರು ಮತಗಟ್ಟೆಗಳ ಮುಂದೆ ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕುಗಳನ್ನು ಚಲಾಯಿಸಿದರು.

ಉತ್ತರ ಪ್ರದೇಶ (13 ಲೋಕಸಭಾ ಕ್ಷೇತ್ರಗಳು, 167 ಅಭ್ಯರ್ಥಿಗಳು, 2.32 ಕೋಟಿ ಮತದಾರರು), ಪಂಜಾಬ್(13/278/2.02) ಪಶ್ಚಿಮ ಬಂಗಾಳ(9/111/1.50), ಮಧ್ಯಪ್ರದೇಶ(8/82/1.49), ಬಿಹಾರ(8/157/1.52), ಮಾಚಲ ಪ್ರದೇಶ(4/45/53 ಲಕ್ಷ), ಜಾರ್ಖಂಡ್(3/42/45.55 ಲಕ್ಷ) ಹಾಗೂ ಚಂಡೀಗಢ(1/36/6 ಲಕ್ಷ)-ಈ ರಾಜ್ಯಗಳಲ್ಲಿ ಬಿರುಸಿನ ಮತದಾನ ದಾಖಲಾಗಿದೆ.

ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನದೊಂದಿಗೆ ಕರ್ನಾಟಕ(ಕುಂದಗೋಳ ಮತ್ತು ಚಿಂಚೋಳಿ), ತಮಿಳುನಾಡು, ಗೋವಾ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಬಿಹಾರ ಮತ್ತು ಗುಜರಾತ್‍ನ ಕೆಲವು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆಗೂ ಚುರುಕಿನ ಮತದಾನವಾಗಿದೆ.

ಉತ್ತರ ಪ್ರದೇಶ ಸೇರಿದಂತೆ ಕೆಲವಡೆ ಚುನಾವಣಾ ಅಕ್ರಮಗಳು, ಸಣ್ಣಪುಟ್ಟ ಗಲಭೆ, ವಿದ್ಯುನ್ಮಾನ ಮತಯಂತ್ರಗಳ ಗೊಂದಲ ಹೊರತುಪಡಿಸಿದಂತೆ ಮತದಾನ ಬಹುತೇಕ ಶಾಂತಿಯುತವಾಗಿತ್ತು.

ಕ್ಲೈಮ್ಯಾಕ್ಸ್ ಹಂತದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 918 ಅಭ್ಯರ್ಥಿಗಳು ಸ್ಫರ್ಧಾ ಕಣದಲ್ಲಿದ್ದು, 10.01 ಕೋಟಿ ಜನರು ಮತದಾನದ ಹಕ್ಕು ಹೊಂದಿದ್ದಾರೆ. ಮತದಾನಕ್ಕಾಗಿ 1.12 ಲಕ್ಷ ಬೂತ್‍ಗಳನ್ನು ಸ್ಥಾಪಿಸಲಾಗಿದ್ದು, ಭಾರೀ ಭದ್ರತೆ ಒದಗಿಸಲಾಗಿದೆ.

ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿರುವ ಪ್ರಧಾನಿ ನರೇಂದ್ರ ಮೋದಿ ಪ್ರಮುಖ ಆಕರ್ಷಣೆಯಾಗಿದ್ದಾರೆ. ಈ ಪ್ರತಿಷ್ಠಿತ ಕ್ಷೇತ್ರದಿಂದ ಪುನರಾಯ್ಕೆ ಬಯಸಿರುವ ಪ್ರಧಾನಿಗೆ ಕಾಂಗ್ರೆಸ್‍ನ ಅಜಯ್ ರಾವ್ ಪ್ರಮುಖ ಸ್ಪರ್ಧಿಯಾಗಿದ್ದಾರೆ.

ನಟ, ರಾಜಕಾರಣಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಶತ್ರುಘ್ನ ಸಿನ್ಹಾ ಬಿಹಾರದ ಪಟ್ನಾ ಸಾಬ್‍ನಲ್ಲಿ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ. ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಈ ಕ್ಷೇತ್ರದಲ್ಲಿ ಶತ್ರುಘ್ನ ಸಿನ್ಹಾ ಅವರಿಗೆ ಪ್ರಬಲ ಪೈಪೆÇೀಟಿ ಒಡ್ಡಿದ್ಧಾರೆ ಚಿತ್ರನಟ ಸನ್ನಿ ಡಿಯೋಲ್(ಪಂಜಾಬ್‍ನ ಗುರುದಾಸ್‍ಪುರ್) ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.

ಪ್ರಧಾನಿ ಮೋದಿ, ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ(ಉತ್ತರ ಪ್ರದೇಶ), ನಿತೀಶ್ ಕುಮಾರ್(ಬಿಹಾರ), ಉಪ ಮುಖ್ಯಮಂತ್ರಿ ಸುಶೀಲ್‍ಕುಮಾರ್ ಮೋದಿ ಸೇರಿದಂತೆ ಗಣ್ಯಾತಿಗಣ್ಯರು ಬೆಳಗ್ಗೆಯೇ ಮತ ಚಲಾಯಿಸಿದರು.

# ಚುನಾವಣಾ ಅಕ್ರಮ, ಘರ್ಷಣೆ
ಆರು ಹಂತಗಳ ಚುನಾವಣೆ ಸಂದರ್ಭದಲ್ಲಿ ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಗಲಭೆ, ಗುಂಪು ಘರ್ಷಣೆ ಮತ್ತು ಹಿಂಸಾಚಾರಕ್ಕೆ ಸಾಕ್ಷಿಯಾಗಿತ್ತು. ಏಳನೆ ಹಂತದಲ್ಲಿ ಉತ್ತರ ಪ್ರದೇಶ ಮತ್ತಿತರೆಡೆ ಚುನಾವಣಾ ಅಕ್ರಮಗಳು, ಸಣ್ಣಪುಟ್ಟ ಘರ್ಷಣೆ ಮತ್ತು ವಿದ್ಯುನ್ಮಾನ ಮತಯಂತ್ರಗಳ ಗೊಂದಲಗಳ ವರದಿಯಾಗಿದೆ.

ಉತ್ತರ ಪ್ರದೇಶದ ಚಂಚೌಲಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ತಾರಾ ಜೀವನ್‍ಪುರ್ ಗ್ರಾಮದ ಗ್ರಾಮಸ್ಥರಿಗೆ ಬಿಜೆಪಿ ಕಾರ್ಯಕರ್ತರು ತಲಾ 500 ರೂ.ಗಳನ್ನು ನೀಡಿ ಅವರ ಬೆರಳಿಗೆ ಇಂಕ್ ಹಾಕಿ ಮತ ಚಲಾಯಿಸದಂತೆ ಮಾಡಿದ್ದಾರೆ ಎಂದು ಸಮಾಜವಾದಿ ಪಕ್ಷದ ಮುಖಂಡರು ದೂರಿದ್ಧಾರೆ.

ಎಸ್‍ಪಿ ಪ್ರಬಲವಾಗಿರುವ ಕ್ಷೇತ್ರಗಳಲ್ಲಿ ಬಿಜೆಪಿ ಕಾರ್ಯಕರ್ತರು ಹಳ್ಳಿಯರನ್ನು ಮತ್ತು ದಲಿತರನ್ನು ಪುಸಲಾಸಿ ಅವರಿಗೆ ಹಣ ಹಂಚಿ ಅವರ ಬೆರಳಿಗೆ ಮಸಿ ಹಾಕಿ ಮತದಾನ ಮಾಡದಂತೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ಧಾರೆ.  ಉತ್ತರ ಪ್ರದೇಶದ ಇನ್ನೂ ಕೆಲವೆಡೆ ಇದೇ ರೀತಿಯ ಅಕ್ರಮಗಳು ನಡೆದಿರುವ ವರದಿಗಳಿವೆ.

ವ್ಯಾಪಕ ಚುನಾವಣಾ ಹಿಂಸಾಚಾರಕ್ಕೆ ಕಾರಣವಾಗಿ ಪಶ್ಚಿಮ ಬಂಗಾಳದ ವಿವಿಧೆಡ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಚುನಾವಣಾ ಅಕ್ರಮಗಳಲ್ಲಿ ತೊಡಗಿದ ಬಗ್ಗೆ ದೂರುಗಳು ದಾಖಲಾಗಿವೆ. ಮತಗಟ್ಟೆ ವಶ ಮತ್ತು ಮತದಾರರರಿಗೆ ಬೆದರಿಕೆ ಹಾಕಿರುವ ಪ್ರಕರಣಗಳೂ ನಡೆದಿವೆ.

ತೃಣಮೂಲ ಕಾಂಗ್ರೆಸ್ ಸಂಸ್ಥೆ ಮಾಲಾ ರಾಯ್ ಅವರು ಮತಗಟ್ಟೆಗೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದರೆಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಅವರಿಗೆ ತಡೆಯೊಡ್ಡಿದಾಗ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಮತ್ತು ಸಣ್ಣಪುಟ್ಟ ಘರ್ಷಣೆ ನಡೆಯಿತು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದರು.

ಎಂಟು ರಾಜ್ಯಗಳಲ್ಲಿ ವಿವಿಧ ಮತಗಟ್ಟೆಗಳಲ್ಲಿ ಬೆಳಗ್ಗೆ ಮತದಾನ ಆರಂಭದ ವೇಳೆ ವಿದ್ಯುನ್ಮಾನ ಮತ ಯಂತ್ರಗಳಲ್ಲಿ(ಇಎಂಗಳು) ದೋಷ ಕಂಡುಬಂದು ಕೆಲ ಹೊತ್ತು ಚುನಾವಣೆ ಸ್ಥಗಿತಗೊಂಡಿತ್ತು. ಇವಿಎಂಗಳನ್ನು ಸರಿಪಡಿಸಿದ ನಂತರ ಮತದಾನ ಪ್ರಕ್ರಿಯೆ ಮುಂದುವರಿಯಿತು.

ಅಂತಿಮ ಹಂತದ ಚುನಾವಣೆಗಾಗಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅುತ್ ಶಾ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವ್ಯಾಪಕ ಪ್ರಚಾರ ನಡೆಸಿದರು. ಒಟ್ಟು ಏಳು ಹಂತಗಳಿಗೆ ಈ ಮೂವರು ತಾರಾ ಪ್ರಚಾರಕರು ಸಹಸ್ರಾರು ಕಿ.ುೀ. ಕ್ರುಸಿ 100ಕ್ಕೂ ಹೆಚ್ಚು ಪ್ರಭಾರ ಸಭೆ ಮತ್ತು ರ್ಯಾಲಿಗಳನ್ನು ನಡೆಸಿದ್ದರು.

# ಭಾರೀ ಭದ್ರತೆ
ಈಗಾಗಲೇ ನಡೆದ ಎಲ್ಲ ಆರು ಹಂತಗಳ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತಾ ಸೇರಿದಂತೆ ವಿವಿಧೆಡೆ ವ್ಯಾಪಕ ಗಲಭೆ ಮತ್ತು ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ಏಳನೇ ಹಂತದ ಮತದಾನಕ್ಕಾಗಿ ಈ ರಾಜ್ಯದಲ್ಲಿ ಅಭೂತಪೂರ್ವ ಬಂದೋಬಸ್ತ್ ಮಾಡಲಾಗಿದೆ.

ಏಳನೇ ಹಂತದ ಚುನಾವಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಬಿಹಾರ ಮತ್ತು ಜಾರ್ಖಂಡ್ ನಕ್ಸಲರ ದಾಳಿ ಸಾಧ್ಯತೆ ಹಿನ್ನೆಲೆಯಲ್ಲಿ ಬಿಗಿ ಪಹರೆ ಹಾಕಲಾಗಿದೆ.

# 23ರ ಫಲಿತಾಂಶದತ್ತ ದೇಶದ ಚಿತ್ತ
ಏಳು ಹಂತಗಳ ಲೋಕಸಭಾ ಚುನಾವಣೆಗೆ ಏಪ್ರಿಲ್ 11, ಏ.18, ಏ.23, ಏ.29, ಮೇ 6, ಮೇ 12 ರಂದು ಆರು ಹಂತಗಳಿಗೆ ಮತದಾನ ನಡೆದಿದ್ದು, ಇಂದಿನ ಮತ್ತು ಅಂತಿಮ ಹಂತದ ಚುನಾವಣೆಯೊಂದಿಗೆ ವಿಶ್ವದ ಅತ್ಯಂತ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ 17ನೇ ಲೋಕಸಭಾ ಚುನಾವಣೆ ಮುಕ್ತಾಯಗೊಳ್ಳಲಿದೆ. ಮೇ 23 ರಂದು ಫಲಿತಾಂಶ ಪ್ರಕಟವಾಗಲಿದ್ದು. ಇದೇ ವಿಶ್ವದ ದೃಷ್ಟಿ ಭಾರತದತ್ತ ನಟ್ಟಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin