ಕೊರೋನಾ ವರ್ಷವೆಂದೇ ಖ್ಯಾತಿಯಾದ 2020ರಲ್ಲಿ ಏನೇನಾಯ್ತು..? ಇಲ್ಲಿದೆ ಹಿನ್ನೋಟ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.29- ದೇಶದ ಮೊದಲ ಕೋವಿಡ್ ಸಾವಿನಿಂದ ಹಿಡಿದು ವಿನಾಶಕಾರಿ ಪ್ರವಾಹದಿಂದ ಜರ್ಝರಿತ ಜನಜೀವನ ಮತ್ತು ವಿವಾದಾತ್ಮಕ ಗೋ ಹತ್ಯೆ ಮಸೂದೆ ವಿಧಾನಸಭೆಯಲ್ಲಿ ಅಂಗೀಕಾರ ಇವೆಲ್ಲವೂ ರಾಜ್ಯದಲ್ಲಿ ಕಳೆದ ವರ್ಷ ನಡೆದ ಮಹತ್ವಪೂರ್ಣ ಘಟನೆಗಳಾಗಿವೆ.

ಬಿಜೆಪಿ ಮತ್ತು ಜೆಡಿಎಸ್ ನಡುವಣ ಸ್ನೇಹಪರತೆ, ಬಹು ನಿರೀಕ್ಷಿತ ಬಿಎಸ್ ಯಡಿಯೂರಪ್ಪ ಸಂಪುಟದ ವಿಸ್ತರಣೆ, ರಾಜ್ಯ ಕಾಂಗ್ರೆಸ್ ನಲ್ಲಿ ಹೊಸ ನಾಯಕತ್ವ , ಯಡಿಯೂರಪ್ಪ ನಾಯಕತ್ವ ಬದಲಾಗುತ್ತದೆ ಎಂಬ ಊಹಾಪೋಹಗಳು ಬಲವಾಗಿ ಕೇಳಿಬಂದವು. ಕಳೆದ ವರ್ಷ ರಾಜ್ಯದಲ್ಲಿ ಕೋವಿಡ್-19 ಮತ್ತು ವಿನಾಶಕಾರಿ ಪ್ರವಾಹದಲ್ಲಿ ರಾಜ್ಯದಲ್ಲಿ ಅಧಿಕ ಮಂದಿ ಸಾವನ್ನಪ್ಪಿದರು.

ಮೊದಲ ಕೋವಿಡ್-19 ಸಾವು:
ಕೋವಿಡ್-19 ಸಾಂಕ್ರಾಮಿಕದಿಂದ ದೇಶದಲ್ಲಿಯೇ ಪ್ರಥಮ ಎಂಬಂತೆ ಕಲಬುರಗಿಯಲ್ಲಿ ಮಾರ್ಚ್‍ನಲ್ಲಿ 76 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟರು. ನಂತರ ರೋಗ ನಿಯಂತ್ರಣದತ್ತ ಗಮನ ಹರಿಸಲಾಯಿತು. ಕಠಿಣ ಲಾಕ್‍ಡೌನ್ ಜಾರಿಗೊಳಿಸುವ ಮೂಲಕ ರಾಜ್ಯದಲ್ಲಿ ಪರಿಸ್ಥಿತಿ ಸುಧಾರಿಸಲಾಯಿತು.

ಸೆಪ್ಟೆಂಬರ್ – ಅಕ್ಟೋಬರ್‍ನಿಂದ ಸಾವಿನ ಪ್ರಕರಣಗಳ ಸಂಖ್ಯೆ ಹೆಚ್ಚಳದೊಂದಿಗೆ ಪ್ರತಿದಿನ 10 ಸಾವಿರ ಪ್ರಕರಣಗಳು ಕಂಡುಬಂದು ಪರಿಸ್ಥಿತಿ ಹದಗೆಟ್ಟಿತ್ತು. ಆದಾಗ್ಯೂ, ಅತ್ಯುತ್ತಮ ಪರೀಕ್ಷಾ ವಿಧಾನ ಮತ್ತು ಕಠಿಣ ಕ್ರಮಗಳಿಂದ ಪರಿಸ್ಥಿತಿ ನಿಯಂತ್ರಣಕ್ಕೆ ತರುವಲ್ಲಿ ಸರ್ಕಾರ ಯಶಸ್ವಿಯಾಯಿತು. ಪ್ರಸ್ತುತ 12 ಸಾವಿರ ಸಾವು ಸೇರಿದಂತೆ 9 ಲಕ್ಷ ಸೋಂಕಿತರಿದ್ದು, ಪ್ರತಿದಿನ 1 ಸಾವಿರ ಪ್ರಕರಣಗಳು ಕಂಡುಬರುತ್ತಿವೆ. ಸುಮಾರು 14 ಸಾವಿರ ಸಕ್ರಿಯ ಪ್ರಕರಣಗಳಿವೆ.

ವಿನಾಶಕಾರಿ ಪ್ರವಾಹ :
ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ಮಧ್ಯದಿಂದ ಸತತವಾಗಿ ಮೂರನೇ ವರ್ಷ ರಾಜ್ಯದ ಹಲವೆಡೆ ಧಾರಾಕಾರ ಮಳೆ ಹಾಗೂ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಮಹಾರಾಷ್ಟ್ರದಲ್ಲಿನ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದ ನೀರು ಬಿಡುಗಡೆಯಿಂದ ಕೃಷ್ಣ ಮತ್ತು ಭೀಮಾ ತೀರದಲ್ಲಿ ಪ್ರವಾಹ ಪರಿಸ್ಥಿತಿ ಉಲ್ಬಣಿಸಿತ್ತು. ಪ್ರವಾಹ ಮತ್ತು ಭೂ ಕುಸಿತದಿಂದ ಅಂದಾಜು 15,410 ಕೋಟಿ ನಷ್ಟವಾಗಿರುವುದಾಗಿ ಸರ್ಕಾರ ಅಂದಾಜಿಸಿದೆ.

ಕಾಂಗ್ರೆಸ್ , ಜೆಡಿಎಸ್ ನ 10 ಶಾಸಕರು ಬಿಜೆಪಿ ಸೇರ್ಪಡೆ:
ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಗೆದ್ದಿದ್ದ 10 ಶಾಸಕರು ಬಿಜೆಪಿ ಸೇರುವುದರೊಂದಿಗೆ ಬಿಜೆಪಿ ಸರ್ಕಾರಕ್ಕೆ ಅಗತ್ಯ ಸುಭದ್ರತೆ ನೀಡಲಾಯಿತು. ಆದಾಗ್ಯೂ, ಯಡಿಯೂರಪ್ಪ ಅವರ ವಯಸ್ಸು 77 ಆಗಿರುವುದರಿಂದ ಅವರನ್ನು ಹೈಕಮಾಂಡ್ ಬದಲಾಯಿಸಲು ಯೋಚಿಸುತ್ತಿದೆ. ಅದಕಾರಣ ಸಂಪುಟ ವಿಸ್ತರಣೆಯಾಗಿಲ್ಲ ಎಂಬಂತಹ ಊಹಾಪೋಹಗಳು ಹರಿದಾಡುತ್ತಿವೆ. ರಾಜ್ಯ ಬಿಜೆಪಿ ನಾಯಕರು ಇದನ್ನು ತಳ್ಳಿ ಹಾಕಿದ್ದಾರೆ.

ಅಕ್ರಮ ಆಸ್ತಿ ಸಂಪಾದನೆ ಆರೋಪದಲ್ಲಿ ಸಿಬಿಐನಿಂದ ದಾಳಿಗೊಳಗಾಗಿದ್ದ ಡಿ.ಕೆ.ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಜೆಡಿಎಸ್,ಕೇಸರಿ ಪಕ್ಷದೊಂದಿಗೆ ಮೃಧು ಧೋರಣೆ ಅನುಸರಿಸುವ ಮೂಲಕ ಸರ್ಕಾರದ ಪ್ರಮುಖ ಮಸೂದೆಗಳು ಮತ್ತು ಮೇಲ್ಮನೆ ಸಭಾಪತಿ ಕೆ. ಪ್ರತಾಪ್ ಚಂದ್ರ ಶೆಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ನೀಡಿತು. ಅವಿಶ್ವಾಸನಿರ್ಣಯ ವಿವಾದ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಸದಸ್ಯರ ನಡುವಣ ದೊಡ್ಡ ಹೈಡ್ರಾಮಕ್ಕೆ ವಿಧಾನಪರಿಷತ್ ಸಾಕ್ಷಿಯಾಯಿತು.

ವಿವಾದಾತ್ಮಕ ಕಾಯ್ದೆಗಳಿಗೆ ತಿದ್ದುಪಡಿ
ಕೃಷಿ ಭೂ ಮಾಲೀಕತ್ವವನ್ನು ಉದಾರೀಕರಣಗೊಳಿಸುವ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗಳು ಮತ್ತು ಸ್ಥಳೀಯ ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿಗಳ ಅಧಿಕಾರವನ್ನು ಮೊಟಕುಗೊಳಿಸುವ ಮತ್ತು ಖಾಸಗಿ ವ್ಯಕ್ತಿಗಳಿಗೆ ಕೃಷಿ ವ್ಯಾಪಾರವನ್ನು ಪ್ರಾರಂಭಿಸಲು ಅನುವು ಮಾಡಿಕೊಡುವ ಎಪಿಎಂಸಿ ತಿದ್ದುಪಡಿ ಮಸೂದೆಯಂತಹ ವಿವಾದಾತ್ಮಕ ಕಾನೂನುಗಳನ್ನು ಸರ್ಕಾರ ಈ ವರ್ಷ ಅಂಗೀಕರಿಸಿತು. ವಿವಾದಾತ್ಮಕ ಗೋ ಹತ್ಯೆ ಮಸೂದೆಯನ್ನು ವಿಧಾನಸಭೆಯಲ್ಲಿ ಅಂಗೀಕರಿಸುವಲ್ಲಿ ಸರ್ಕಾರ ಯಶಸ್ವಿಯಾದರೆ, ಆದರೆ, ಪರಿಷತ್ ನಲ್ಲಿ ಬಹುಮತವಿಲ್ಲದೆ ಇನ್ನೂ ಅಂಗೀಕಾರವಾಗಿಲ್ಲ. ಈ ಕಾಯ್ದೆಯನ್ನು ವಿರೋಧಿಸಿರುವುದಾಗಿ ಜೆಡಿಎಸ್ ಸ್ಪಷ್ಟಪಡಿಸಿದೆ.

ಡ್ರಗ್ಸ್ ಪ್ರಕರಣದಲ್ಲಿ ಇಬ್ಬರು ನಟಿಯರ ಬಂಧನ
ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಅವರನ್ನು ಬಂಧಿಸುವ ಮೂಲಕ ಸರ್ಕಾರ ಮಾದಕ ವಸ್ತು ನಿಯಂತ್ರಣಕ್ಕೆ ಮುಂದಾಯಿತು. ಚೀನಾದಿಂದ ಬೇರೆ ರಾಷ್ಟ್ರಗಳ ಕಾಪೆರ್ರೇಟ್ ಸಂಸ್ಥೆಗಳಿಂದ ಹೂಡಿಕೆಯನ್ನು ಎದುರು ನೋಡುತ್ತಿರುವಾಗ ಟೊಯೋಟಾ ಕಿರ್ಲೋಸ್ಕರ್ ಮತ್ತ ವಿಸ್ಟ್ರಾನ್ ನಲ್ಲಿ ಕಾರ್ಮಿಕರ ಬಿಕ್ಕಟ್ಟು ಸಮಸ್ಯೆ ತಲೆದೋರಿತು.

ಕೋವಿಡ್-19 ಸಾಂಕ್ರಾಮಿಕದಿಂದಾಗಿ ಇಸ್ರೋ ಚಟುವಟಿಕೆಗಳ ಮೇಲೆ ಪರಿಣಾಮ ಉಂಟಾಯಿತು. ಈ ವರ್ಷ ಕೇವಲ ಮೂರು ರಾಕೆಟ್ ಗಳನ್ನು ಉಡಾಯಿಸಲಾಯಿತು. ಮಾನವ ಸಹಿತ ಗಗನಯಾನ ಯೋಜನೆ ವಿಳಂಬವಾಗಿದ್ದು, ಮುಂದಿನ ವರ್ಷ ನಡೆಯುವ ಸಾಧ್ಯತೆಯಿದೆ. ಚಂದ್ರಯಾನ -3 ವೇಳಾಪಟ್ಟಿ ಇನ್ನೂ ನಿಗಧಿಯಾಗಿಲ್ಲ. ಬಾಹ್ಯಾಕಾಶ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಖಾಸಗಿಯವರಿಗೂ ಅವಕಾಶ ನೀಡಲಾಗಿದೆ.

Facebook Comments