ಶಾರ್ವರಿ ಸಂವತರದ ರಾಶಿಫಲ : ಯಾವ ರಾಶಿಯವರಿಗೆ ಹೇಗಿದೆ 2020ನೇ ವರ್ಷ…?

ಈ ಸುದ್ದಿಯನ್ನು ಶೇರ್ ಮಾಡಿ

ಹೊ ಸ ವರ್ಷದ ಮೊದಲನೇ ದಿನವನ್ನು “ಯುಗಾದಿ ಹಬ್ಬ ಆರೋಗ್ಯ ಪ್ರತಿಪತ್-ನಿಂಬದಳ ಭಕ್ಷಣಂ” ಎಂದು ಸಂಭ್ರಮ ಸಡಗರಗಳಿಂದ ಹೊಸವರ್ಷವನ್ನು ಸ್ವಾಗತಿಸಿ ಆಚರಿಸುತ್ತೇವೆ.  ನೂತನ ಸಂವತ್ಸರದ ಈ ದಿನ ಉಷಃ ಕಾಲದಲ್ಲಿ ಎದ್ದು ಮಂಗಳ ಸ್ನಾನ ಮಾಡಿ ಅಂದರೆ ಸುಗಂಧ-ತೈಲಾದಿಗಳಿಂದ ಅಭ್ಯಂಜನಸ್ನಾನ ಮಾಡಿ ಹೊಸ ವಸ್ತ್ರಾಭರಣವನ್ನು ಧರಿಸಿಕೊಂಡು ತಂದೆತಾಯಿ, ಗುರುಹಿರಿಯರಿಗೆ ನಮಸ್ಕಾರ ಮಾಡಿ, ಗೃಹದೇವತೆ ಪೂಜೆ ಮಾಡಿ ಆಶೀರ್ವಾದ ಪಡೆದು, ಬೇವು-ಬೆಲ್ಲ ತಿಂದು, ತರತರಹದ ಪಕ್ವಾನ್ನ ಊಟ ಮಾಡಿ ದೇಹಕ್ಕೆ ಶ್ರೀಗಂಧ, ಕಸ್ತೂರಾಧಿ ಸುಗಂಧಗಳನ್ನು ಹಚ್ಚಿ, ಸಂಗೀತ, ನಾಟ್ಯ ಇತ್ಯಾದಿ ಶ್ರವಣಮಾಡಿ ಸಂತೋಷದಿಂದ ಕುಟುಂಬದವರೊಂದಿಗೆ ಕಾಲ ಕಳೆಯಬೇಕು.

ಹೊಸ ವರ್ಷದ ಮೊದಲನೇ ದಿನ, ಹೋಳಿಹುಣ್ಣಿಮೆ ಮಾರನೇ ದಿನ, ದೀಪಾವಳಿ ಪಾಡ್ಯ ಈ ಮೂರು ದಿನಗಳಲ್ಲಿ ಅಭ್ಯಂಜನಸ್ನಾನ- ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡಿದರೆ ನರಕವಾಸ ತಪ್ಪುವುದೆಂದು ಶಾಸ್ತ್ರ ಸಮ್ಮತವಾಣಿ.  ಜಗತ್ ಸೃಷ್ಠಿ ರಚನೆಗೆ ಮೊದಲು ಓಂ ಕಾರ ನಾದವೇ ಎಲ್ಲೆಡೆ ತುಂಬಿತ್ತು. ಓಂ ಕಾರದಿಂದಲೇ ಬ್ರಹ್ಮಾಂಡ. ಓಂ ಕಾರವೇ ಆದಿಶಕ್ತಿ. ಸೂರ್ಯನು ಜೀವಾತ್ಮಗಳ ಯುಗಪುರುಷ. ಶ್ರೀಸೂರ್ಯನಾರಾಯಣ ದೇವನು ಜ್ಯೋತಿಶ್ಚಕ್ರರಥದಲ್ಲಿ ಹೊರಟಾಗ, ಅವನ ಸಾರಥಿಯಾದ ಅರುಣನು, ಸೂರ್ಯದೇವನ್ನು ಪ್ರಾರ್ಥಿಸಿ, ಸಂವತ್ಸರ ಫಲವನ್ನು ತಿಳಿಸಬೇಕು ಎನ್ನಲು, ಸೂರ್ಯನು ಅರುಣನಿಗೆ ಸಂವತ್ಸರ ಫಲವನ್ನು ಹೇಳಲು ಪ್ರಾರಂಭಿಸಿದನು.

ಸಂವತ್ಸರದ ಫಲವು ಗ್ರಹಗಳ ಅಧೀನ, ನವಗ್ರಹಗಳು ಕಾಲಕ್ಕೆ ಸರಿಯಾಗಿ ತಮ್ಮ ಸಂಚಾರದಿಂದ ಒಳ್ಳೆಯ ಹಾಗೂ ಕೆಟ್ಟ ಫಲವನ್ನು ಕೊಡುತ್ತಾರೆ ಕಾಲವನ್ನು ಸೃಷ್ಟಿಯಲ್ಲಿ ಯುಗ ಕಲ್ಪವೆಂದು, ಆಪರಬ್ರಹ್ಮನಿಂದಲೇ ನಿಯಮಿತವಾಗಿ ಸೃಷ್ಟಿಯಿಂದಲೇ ಸಂವತ್ಸರ ಪ್ರಾರಂಭ. ವೈಕುಂಠವಾಸಿಯಾದ ಲೋಕಪಾಲಕನಾದ ಶ್ರೀ ಮಹಾವಿಷ್ಣುವು ಕ್ಷೀರ ಸಮುದ್ರದಲ್ಲಿ ವಟಪತ್ರಶಾಯಿಯಾದ, ಯೋಗ ನಿದ್ರಾರೂಢನಾದ, ಲಕ್ಷ್ಮೀ ಸಹಿತನಾದ ಆದಿ ನಾರಾಯಣನ ನಾಭಿ ಕಮಲದಲ್ಲಿ ಹುಟ್ಟಿದ ಬ್ರಹ್ಮನಿಗೆ ಹುಟ್ಟಿಸು, ತಪಸ್ಸುಮಾಡು ಎಂಬ ಆಕಾಶವಾಣಿ ಕೇಳಿಬಂದಿತು.

ಆಗ ಕಮಲಾಸನನಾದ ಬ್ರಹ್ಮನು ತಪಸ್ಸುಮಾಡಿ ಹದಿನಾಲ್ಕು ಲೋಕಗಳನ್ನು ಸೃಷ್ಟಿ ಮಾಡಿದನು ಮತ್ತು ಗ್ರಹ ನಕ್ಷತ್ರದಿಂದ ಕೂಡಿದ ಭಚಕ್ರವನ್ನು ತಿರುಗಿಸಲು ಆರಂಭ ಮಾಡಿದನು. ಬ್ರಹ್ಮನ ಸೃಷ್ಟಿ ಸಮಯದಲ್ಲಿ ದಕ್ಷಿಣಕ್ಕೆ ಇರುವ ಶ್ರೀಲಂಕಾ ನಗರದಲ್ಲಿ ಮೂರು ಸಮುದ್ರಗಳ ಸಂಗಮದಲ್ಲಿ ಸೂರ್ಯೋದಯವಾಯಿತು.
ಅಂದು ಭಾನುವಾರ ಆನಂತರ ಸೋಮವಾರ, ಮಂಗಳವಾರ, ಬುಧ, ಗುರು, ಶುಕ್ರ, ಶನಿವಾರಗಳಾಗಿ ಪ್ರಾರಂಭವಾಯಿತು.ಆ ಪ್ರಾರಂಭದ ಭಾನುವಾರ ಹೊಸ ಯುಗ, ವರ್ಷ, ಮಾಸ, ದಿನ, ಚೈತ್ರಮಾಸ ಶುಕ್ಲಪಕ್ಷ ಪ್ರಥಮಿಯಿಂದ ಆರಂಭ, ಯುಗಗಳು ನಾಲ್ಕು.

# ಕೃತ, ತ್ರೇತಾ, ದ್ವಾಪರ ಮತ್ತು ಕಲಿಯುಗ : 
ಈ ನಾಲ್ಕು ಯುಗಳಿಂದ ಒಂದು ಮಹಾ ಯುಗ, 71 ಮಹಾಯುಗಗಳು ಒಂದು ಮನ್ವಂತರ, 14 ಮನ್ವಂತರ ಸೃಷ್ಟಿಕರ್ತನಾದ ಬ್ರಹ್ಮನಿಗೆ ಒಂದು ದಿನದ ಹಗಲು. ಹಗಲು ಎಂದರೆ ಸೂರ್ಯೋದಯದಿಂದ ಸೂರ್ಯಾಸ್ತದವರೆವಿಗೆ, ರಾತ್ರಿ ಎಂದರೆ ಸೂರ್ಯಾಸ್ತದಿಂದ ಸೂರ್ಯೋದಯದವರೆವಿಗೆ. ಹಗಲು ರಾತ್ರಿಗಳ ಸಂಗಮ ಒಂದು ದಿನ. 30 ದಿನಗಳಿಗೆ ಒಂದು ಮಾಸ. 12 ಮಾಸಗಳಿಗೆ 1 ವರ್ಷ. ಬ್ರಹ್ಮನ ನೂರು ವರ್ಷಕ್ಕೆ ಮಹಾಕಲ್ಪವೆಂದು ಕರೆಯುವರು. ಈಗ ಬ್ರಹ್ಮನ ನೂರು ವರ್ಷದಲ್ಲಿ 50 ವರ್ಷಕಳೆದು, ಈಗ 2ನೇ ಪರಾರ್ಧದಲ್ಲಿ ಆರು ಮನ್ವಂತರ ಕಳೆದಿದೆ.

#  ನವ ನಾಯಕರು : 
ಯುಗಾದಿಹಬ್ಬ ಬುಧ ವಾರ ಬಂದಿರುವುದರಿಂದ ರಾಜಾ ಬುಧ , ಮಂತ್ರಿ ಚಂದ್ರ , ಸೇನಾಧಿಪತಿ ಚಂದ್ರ , ಸಸ್ಯಾಧಿಪತಿ ಗುರು , ನೀರಸಾದಿಪತಿ ಗುರು , ರಸಾಧಿಪತಿ ಶನಿ, ಧಾನ್ಯಾದಿಪತಿ ಕುಜ , ಮೇಘಾದಿಪತಿ-ಚಂದ್ರ, ಅರ್ಘ್ಯಾಧಿಪತಿ ಚಂದ್ರ , ಪಶುಗಳ ನಾಯಕ ಬಲರಾಮ. ಬುಧ ರಾಜನಾಗಿರುವುದರಿಂದ ಮೋಡಗಳು ಮಳೆ ಕಡಿಮೆ. ಭೂಮಿಯಲ್ಲಿ ಪದಾರ್ಥಗಳು ಸರಿಯಾಗಿ ಲಭ್ಯವಿರುವುದಿಲ್ಲ.. ಜನರು ಪಾಪ, ಕಾಮುಕರಾಗಿ ಪರಸ್ಪರ ವೈರ,ಕೋಪ, ದಿಂದ . .ಮೋಜುಗಳಲ್ಲಿ ತೊಡಗಿ ಜೀವನ ನಡೆಸುವರು. ಕಳ್ಳರ ಕಾಟ, ರೋಗಗಳ ಬಾಧೆ ಇರುವುದು.

ಬಲರಾಮನು ಗೋನಾಯಕನಾಗಿರುವುದರಿಂದ ಹಸುಗಳು ಚೆನ್ನಾಗಿ ಹಾಲು ಕೊಡುತ್ತ್ತವೆ. ಭೂಮಿಯಲ್ಲಿ ಕಳ್ಳಕಾಕರ ಭಯವಿದ್ದು, ಬೆಂಕಿ ಅನಾಹುತ ಜಾಸ್ತಿ, ಅಪಘಾತ, ನೋವು-ಸಾವು ನೀಚರಿಂದ ಹೆಚ್ಚು ತೊಂದರೆಗಳಿರುತ್ತವೆ. ಮಳೆಯು ಸರಿಯಾಗಿ ಆಗಿ, 10 ಭಾಗದಲ್ಲಿ 5 ಭಾಗ ಸಮುದ್ರದಲ್ಲಿ  3 ಭಾಗ ಪರ್ವತದಲ್ಲಿ, 2 ಭಾಗ ಭೂಮಿಯಲ್ಲಿ ಬೀಳುತ್ತದೆ.

# ಆದಾಯ-ವ್ಯಯ : 
ಮೇಷ-ವೃಶ್ಚಿಕ ರಾಶಿಯವರಿಗೆ ಆದಾಯ ಖರ್ಚು. ಸಮ, ವೃಷಭ-ತುಲಾ ರಾಶಿಯವರಿಗೆ ಆದಾಯ ಹೆಚ್ಚು , ಖರ್ಚು ಕಮ್ಮಿ.  ಮಿಥುನ-ಕನ್ಯಾರಾಶಿಯವರಿಗೆ ಆದಾಯಕ್ಕಿಂತ ಖರ್ಚು ಹೆಚ್ಚು .  ಕರ್ಕಾಟಕ ರಾಶಿಯವರಿಗೆ ಖರ್ಚು, ಆದಾಯ ಸಮ.. ಸಿಂಹರಾಶಿಯವರಿಗೆ ಖರ್ಚು ಗಿಂತ, ಆದಾಯ ಏಳರಷ್ಟು. ಧನಸ್ಸು-ಮೀನ ರಾಶಿಯವರಿಗೆ ಆದಾಯ ಕ್ಕಿಂತ ಖರ್ಚು ಹೆಚ್ಚು .  ಮಕರ-ಕುಂಭ ರಾಶಿಯವರಿಗೆ ಖರ್ಚುಗಿಂತ ಆದಾಯ ಎರಡರಷ್ಟು.

# ಮಕರ ಸಂಕ್ರಾಂತಿ : 
ತಾರೀಖು 14-1-2021 ಗುರುವಾರ ಸಂಕ್ರಾಂತಿ-ಸಂಕ್ರಮಣ. ಸೂರ್ಯನು ಬೆಳಗ್ಗೆ 8 ಘಂಟೆ 15 ಮಿಷ ಕ್ಕೆ ಮಕರ ರಾಶಿ ಪ್ರವೇಷ. ಸಂಕ್ರಾಂತಿ ಪುರುಷನ ಹೆಸರು ಮಂದಾ. ಹುಲಿ ವಾಹನದಲ್ಲಿ ಕೂತು, ಗೋದಾವರಿ ನದಿಯಲ್ಲಿ ಸ್ನಾನಾ ನಂತರ ಕೇಸರಿ ಲೇಪನ ಮಾಡಿ, ಬಿಳಿ ಬಟ್ಟೆ ಉಟ್ಟು, ಜೋಳದ ಅಕ್ಷತೆ, ಜಾಜಿ ಹೂವು ಮುಡಿದು,ಮುತ್ತಿನ ಆಭರಣಧರಿಸಿದಿದ್ದಾಳೆ. ರಕ್ತ ಛತ್ರಿ ಹಿಡಿದು, ಕುಮಾರಿ ವಯಸ್ಸು, .ಇದರ ಫಲ ಕುಮಾರಿಯರಲ್ಲಿ ಕಾಮುಕ ಆಸಕ್ತಿ, ರಾಜಕಾರಣಿಗಳಿಗೆ ಪೀಡೆ, ಮೊರದ ಪಾತ್ರೆ ಯಲ್ಲಿ ಪಾಯಸ ಸೇವನೆ, ನದಿ ಗಳಲ್ಲಿ ನೀರು ಕಮ್ಮಿ. ಕುಮಾರಿಯರಿಗೆ ಪೀಡೆ.

 # ಗ್ರಹಣಗಳು : 
ಈ ಸಂವತ್ಸರದಲ್ಲಿ 5 ಗ್ರಹಣಗಳಿದ್ದು, 4 ಗ್ರಹಣಗಳು ಕಾಣಿಸುವುದಿಲ್ಲವಾದ್ದರಿಂದ ಆಚರಣೆ ಇಲ್ಲ.  ದಿನಾಂಕ 21-6-2020 ರಂದು ಸಂಭವಿಸುವ ಸೂರ್ಯ ಗ್ರಹಣ ಕಾಣಿಸುವುರಿಂದ ಆಚರಣೆ ಇದೆ.  ಏಳನೇ ವೈವಸ್ವತ ಮನ್ವಂತರದಲ್ಲಿ 27 ಮಹಾಯುಗ ಕಳೆದು, ಕೃತ, ತ್ರೇತಾ, ದ್ವಾಪರ ಯುಗ ಕಳೆದು ಕಲಿಯುಗ ಪ್ರಾರಂಭವಾಗಿದೆ.

ಕೃತಯುಗ 1728000, ತ್ರೇತಾಯುಗ 1296000, ದ್ವಾಪರಯುಗ 864000, ಕಲಿಯುಗ 432000 ವರ್ಷಗಳು. ಈ ಕಲಿಯುಗದಲ್ಲಿ ಭೂಮಿಯಲ್ಲಿ ಶಕಕರ್ತರಾಗಿ ಕರೆದಿದ್ದಾರೆ. ಮಹಾಭಾರತ ಕಾಲದ ಯುಧಿಷ್ಠಿರ, ವಿಕ್ರಮ, ಶಾಲಿವಾಹನ, ವಿಜಯಾಭಿನಂದನ, ನಾಗಾರ್ಜುನ, ಕಲ್ಕಿಭೂಪ ಎಂಬ ಆರು ಜನರು ಶಕಕರ್ತರು, ಕಲಿಯುಗದ 432000 ವರ್ಷಗಳನ್ನು 3044,135, 18000, 10000, 400000 ಮತ್ತು 821 ಆಗಿ ಶಕ ಕರ್ತರಿಗೆ ಭಾಗಿಸಿದೆ. ಈಗ ಶಾಲಿವಾಹನ ಶಕದಲ್ಲಿ ಗತಶಾಲಿ 1942 ವರ್ಷಗಳು, ಅಂದರೆ ಕಲಿಯುಗದಲ್ಲಿ ಗತಕಲಿ 5121 ವರ್ಷಗಳು, ಈಗ ಶಾರ್ವರಿ ಸಂವತ್ಸರ ಪ್ರಾರಂಭವಾಗಿದೆ.

ಈ ವರ್ಷ ಆವರ್ತ ಎಂಬ ಮೇಘವು, ಮೇರು ಶಿಖರದ ಉತ್ತರ ದಿಕ್ಕಿನಲ್ಲಿ ಹುಟ್ಟಿ, ಗಾಳಿಯಿಂದ ಕೂಡಿದ ಸಸ್ಯಗಳಿಗೆ ಅನುಕೂಲವಾಗುವಂತೆ ಮಳೆಯನ್ನು ಸುರಿಸುತ್ತದೆ.  ಈ ವರ್ಷ ದೇಶವಾಳುವ ರಾಜಕಾರಣಿಗಳಲ್ಲಿ ಪರಸ್ಪರ ವೈರತ್ವ ಇದ್ದು, ಜಗಳ ಮಾಡುವ ಭೀತಿ ಮನಸ್ಸುಳ್ಳವರಾಗಿರುತ್ತಾರೆ. ಪ್ರಜೆಗಳು ಚುನಾವಣೆಗಳಲ್ಲಿ ಭಾಗವಹಿಸಿ ಮತ ನೀಡುತ್ತಾರೆ. ಸ್ತ್ರೀಯರು ರಾಜಕೀಯದಲ್ಲಿ ಹೆಚ್ಚು ಆಸಕ್ತಿ ಹೊಂದಿ ಮಹತ್ವ ಪಾತ್ರ ವಹಿಸುವರು.

ಮಳೆಯು ದೇಶವಾಳುವವರ ಶ್ರದ್ಧಾ- ಭಕ್ತಿಗಳನ್ನು ಅವಲಂಭಿಸಿ ಮಳೆ ಸುರಿಸುತ್ತದೆ. ಪ್ರಜೆಗಳು, ಜನರು ಹಣಕ್ಕೆ ಹೆಚ್ಚು ಮಹತ್ವ ನೀಡಿ ಅನೈತಿಕ ಅವ್ಯವಹಾರ ಸಂಪಾದನೆಯಲ್ಲಿ ತೋಡಗುವರು. ದೇಶವಾಳುವ ಪ್ರಜೆ ಶ್ರದ್ಧಾ ಭಕ್ತಿಗಳಿಂದಕೂಡಿ ರುದ್ರಾಭಿಷೇಕ, ಜಪ ಯಜ್ಞಗಳಿಂದ ದೇವರ ಪ್ರಾರ್ಥನೆ ಮಾಡಬೇಕು.

@  2020ರ ರಾಶಿ ಭವಿಷ್ಯ   : 
# ಮೇಷ : 
ಈ ವರ್ಷ ನಿಮ್ಮ ಆದಾಯ 10 ಇದ್ದರೆ ಖರ್ಚು 10, ಗುರುವು ಕೇಂದ್ರದಲ್ಲಿರುವುದರಿಂದ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಸುಖ 10 ಇದ್ದರೆ ದುಃಖ 5. ಎಲ್ಲರಿಂದ ಗೌರವ, ಪೂಜ್ಯತೆ ಪಡೆಯುವಿರಿ. ನಿಂತುಹೋಗಿದ್ದ ಶುಭ ಕಾರ್ಯ ಜರುಗುವುದು. ಬಂಧು-ಮಿತ್ರರ ಸಹಾಯ ಪಡೆಯುವಿರಿ. ಹೆಚ್ಚು ಪ್ರಯಾಣ ಇರುವುದು. ವ್ಯಾಪಾರದಲ್ಲಿ ಲಾಭ. ಮನೆಯಲ್ಲಿ ಕಳ್ಳತನ ಸಂಭವ, ಎಚ್ಚರ ವಹಿಸಿ. ಉದ್ಯೋಗ, ವ್ಯಾಪಾರದಲ್ಲಿ ನಿಧಾನ ಪ್ರಗತಿ. ಪ್ರತಿ ಶನಿವಾರ ಎಳ್ಳು ದೀಪ ಹಚ್ಚಿ ಶನಿ ದೇವರಿಗೆ ತುಳಸಿ ಅರ್ಚನೆ ಮಾಡಿಸಿ ನವಗ್ರಹ ಸುತ್ತಿರಿ.

# ವೃಷಭ :
ಈ ಸಂತ್ಸರದಲ್ಲಿ ನಿಮ್ಮ ಆದಾಯ 14 ಇದ್ದರೆ 11 ಖರ್ಚು, ಆರೋಗ್ಯ ಚೆನ್ನಾಗಿದ್ದು, ಸುಖವು ದುಃಖದ ಎರಡರಷ್ಟಿರುವುದು. ಬಂಧು-ಮಿತ್ರರ ಸಹಾಯವಿರುವುದು. ಮನೆಯಲ್ಲಿ ವಿವಾಹ ಇತ್ಯಾದಿ ಶುಭ ಸಮಾರಂಭ ಜರುಗುವುದು, ಸಂತಾನ ವೃದ್ಧಿ, ಸರ್ಕಾರಿ ಇತ್ಯಾದಿ ಕೆಲಸ-ಕಾರ್ಯಗಳು ಸುಗಮ. ಲಾಭ, ಉದ್ಯೋಗ, ವ್ಯಾಪಾರದಲ್ಲಿ ನಿಧಾನ ಪ್ರಗತಿ.

# ಮಿಥುನ : 
ಈ ಸಂವತ್ಸರದಲ್ಲಿ ನಿಮ್ಮ ಆದಾಯ 2 ಆದರೆ ಖರ್ಚು 11. ಗುರುವು 8ರಲ್ಲಿ ಇರುವುದರಿಂದ ಸ್ವಲ್ಪ ಅನಾರೋಗ್ಯದಿಂದ ಬಳಲುವಿರಿ. ಆದರೂ ಸುಖ ಹೆಚ್ಚು. ದುಃಖದ ಎರಡಷ್ಟು ಸುಖ. ಉದ್ಯೋಗ, ವ್ಯಾಪಾರದಲ್ಲಿ ಮನೋವ್ಯಾಧಿ. ಸರ್ಕಾರಿ ಕೆಲಸಗಳಿಂದ ತೊಂದರೆ ನಿಧಾನ. ಸೇವಕರಿಂದ ಅಸಹಾಯಕತೆ. ಪರಸ್ಥಳ ವಾಸ. ನೆಮ್ಮದಿ ಸ್ವಲ್ಪ ಕಡಿಮೆ.

# ಕಟಕ : 
ಈ ಸಂತ್ಸರದಲ್ಲಿ ನಿಮ್ಮ ಆದಾಯ-ಖರ್ಚು ಸಮಾಸಮ. ಗುರು ಸಪ್ತಮದಲ್ಲಿ ಸಂಚಾರ. ಶುಭಕಾಲ, ಕುಟುಂಬದಲ್ಲಿ ವಿವಾಹ, ಇತ್ಯಾದಿ ಶುಭ ಸಮಾರಂಭಗಳು ನಡೆಯುವವು, ಸನ್ಮಾನ, ಬಂಧು-ಮಿತ್ರರಿಂದ ಹೊಗಳುವಿಕೆ. ಪ್ರಯಾಣದಿಂದ ಲಾಭ. ಕೆಲಸ ಕಾರ್ಯಗಳಿಂದ ಶುಭ. ಉದ್ಯೋಗ ವ್ಯವಹಾರದಲ್ಲಿ ಹಣ ಬಂದರೂ ಅಷ್ಟೇ ಖರ್ಚು ಇರುವುದು, ಪರಸ್ಥಳದಲ್ಲಿ ವಾಸ. ಮನೆ ಕಟ್ಟುವಿರಿ. ತೀರ್ಥ ಯಾತ್ರೆ ಮಾಡುವಿರಿ.

# ಸಿಂಹ : 
ಈ ಸಂವತ್ಸರದಲ್ಲಿ ನಿಮ್ಮ ಆದಾಯ 7 ಇದ್ದರೆ ಖರ್ಚು 1. 6 ಉಳಿತಾಯ. ಸ್ವಲ್ಪ ಅನಾರೋಗ್ಯವಿರುದುವು. ಉದ್ಯೋಗ ವ್ಯವಹಾರದಿಂದ ಲಾಭ. ಕುಟುಂಬದಲ್ಲಿ ಶುಭ ಕಾರ್ಯ ನೆರವೇರುವುದು. ಬಂಧು-ಮಿತ್ರರಿಂದ ದೂಷಣೆ. ಮನೋವ್ಯಾಧಿ ಇರುವುದು. ವರ್ಷಾಂತ್ಯಕ್ಕೆ ಸ್ವಲ್ಪ ಮಟ್ಟಿನ ನೆಮ್ಮದಿ. ಪ್ರತಿ ಗುರುವಾರ ಕೇತುವಿಗೆ ಅರ್ಚನೆ ಮಾಡಿಸಿ ನವಗ್ರಹ ಸುತ್ತಿರಿ.

# ಕನ್ಯಾ : 
ಈ ಸಂವತ್ಸದರಲ್ಲಿ ನಿಮ್ಮ ಆದಾಯ 2 ಇದ್ದರೆ ಖರ್ಚು 11. ಗುರುವು 5ರಲ್ಲಿದ್ದು, ಗುರು ದೃಷ್ಟಿ ಇರುವುದರಿಂದ ಒಳ್ಳೆಯ ಕಾಲ. ಆದಾಯ ಕಮ್ಮಿ ಇದ್ದರೂ ಸಮದೂಗಿಸಿಕೊಂಡು ಹೋಗುವಿರಿ. ಉದ್ಯೋಗ ವ್ಯವಹಾರದಿಂದ ಸಮಸ್ಯೆ.ವಿಳಂಬ ಕೆಲಸ ಕಾರ್ಯಗಳಲ್ಲಿ ಅಡಚಣೆ. ಪರಸ್ಥಳ ವಾಸ. ಪ್ರವಾಸವಿರುವುದು. ವೃತಾ ತಿರುಗಾಟ. ಮಿತ್ರರೊಡನೆ ಮನಸ್ತಾಪ.

# ತುಲಾ : 
ಈ ಸಂವತ್ಸರದಲ್ಲಿ ನಿಮ್ಮ ಆದಾಯ 14 ಇದ್ದರೆ ಖರ್ಚು 11. ಆರೋಗ್ಯ ಚೆನ್ನಾಗಿದ್ದು, ಸುಖವು ದುಃಖದ ಎರಡರಷ್ಟಿರುವುದು. ಉದ್ಯೋಗ ವ್ಯವಹಾರದಲ್ಲಿ ಲಾಭ ಕಂಡು ಬರುವುದು. ಕುಟುಂಬದಲ್ಲಿ ಸುಖ, ಶಾಂತಿ ಇದ್ದು, ಮನೆಕಟ್ಟುವಿರಿ. ಪ್ರಯಾಣ ಇರುವುದು. ಕೆಲಸ ಕಾರ್ಯದಲ್ಲಿ ಅಡಚಣೆ ಇದ್ದರೂ ಸ್ವಲ್ಪ ಶ್ರಮದಿಂದ ಎಲ್ಲವೂ ಪರಿಹಾರ.

# ವೃಶ್ಚಿಕ : 
ಈ ಸಂವತ್ಸರದಲ್ಲಿ ನಿಮ್ಮ ಆದಾಯ 10 ಇದ್ದರೆ ಖರ್ಚು 10. ಗುರುವು 3ನೇ ರಾಶಿಯಲ್ಲಿ ಸಂಚಾರ. ನಿಮ್ಮ ಆರೋಗ್ಯ ಚೆನ್ನಾಗಿರುವುದು. ಸುಖ 10 ಇದ್ದರೆ ದುಃಖ 5. ಎಲ್ಲರಿಂದ ಗೌರವ, ಪೂಜ್ಯತೆ ಪಡೆಯುವಿರಿ. ಉದ್ಯೋಗ, ವ್ಯಾಪಾರದಲ್ಲಿ ಅಡಚಣೆ. ಪರಸ್ಥಳದಲ್ಲಿ ವಾಸ. ವೃತಾ ತಿರುಗಾಟ. ಶುಭ ಕುಟುಂಬ ಕಾರ್ಯಗಳಲ್ಲಿ ಅನುಕೂಲ. ಸೇವಕರಿಂದ ತೊಂದರೆ.

# ಧನಸ್ಸು : 
ಈ ಸಂವತ್ಸರದಲ್ಲಿ ನಿಮ್ಮ ಆದಾಯ 8 ಇದ್ದರೆ ಖರ್ಚು 11. ಗುರುವು ರಾಶ್ಯಾಧಿಪತಿ 2ನೇ ಶುಭ ಸ್ಥಾನದಲ್ಲಿ ಸಂಚರಿಸುವುದರಿಂದ ಹಣದ ಕೊರತೆ ಕಾಣುವುದಿಲ್ಲ. ಆರೋಗ್ಯ ಚೆನ್ನಾಗಿದ್ದು, ಸುಖದಿಂದ ಕಾಲ ಕಳೆಯಿರಿ. ಮನಸ್ಸಿಗೆ ನೆಮ್ಮದಿ. ಸಾಲ ತೀರಿಸುವಿರಿ. ಸ್ವಲ್ಪ ಹಣಕಾಸಿನ ಮುಗ್ಗಟ್ಟು ಕಂಡು ಬಂದರೂ ಶುಭ ಕಾರ್ಯಗಳು ನೆರವೇರುವುದು. ಸರ್ಕಾರಿ ವ್ಯವಹಾರಗಳಲ್ಲಿ ಹೆಚ್ಚು ಅಡಚಣೆಯಿದ್ದರೂ ನಿಮ್ಮ ಶ್ರಮದಿಂದ ಪರಿಹಾರ ದೊರಕುವುದು. ಕೋರ್ಟ್ ವ್ಯವಹಾರಗಳಲ್ಲಿ ಜಯ. ಧರ್ಮಾಸಕ್ತಿ, ತೀರ್ಥಯಾತ್ರೆ ಮಾಡುವಿರಿ.

# ಮಕರ : 
ಈ ಸಂವತ್ಸರದಲ್ಲಿ ನಿಮ್ಮ ಆದಾಯ 11 ಇದ್ದರೆ ಖರ್ಚು 5, ಉಳಿತಾಯ 6. ವ್ಯಾಪಾರ ಉದ್ಯೋಗದಲ್ಲಿ ಧನಲಾಭ. ಸಾಲ ತೀರಿಸುವಿರಿ. ಹೊಸ ಕೆಲಸ ಪ್ರಾರಂಭ. ಸೇವಕರಿಂದ ತೊಂದರೆ. ಕುಟುಂಬದಲ್ಲಿ ಶುಭ ಕಾರ್ಯ ನಡೆಯುವುದು. ಮನೆ ಕಟ್ಟುವಿರಿ. ಪ್ರತಿ ಬುಧವಾರ ರಾಹು ಪ್ರಾರ್ಥನೆ ಮಾಡಿ ಅರ್ಚನೆ ಮಾಡಿಸಿ ನವಗ್ರಹ ಸುತ್ತಿ.

# ಕುಂಭ : 
ಈ ಸಂವತ್ಸದರದಲ್ಲಿ ನಿಮ್ಮ ಆದಾಯ 11 ಇದ್ದರೆ. ಖರ್ಚು 5. ಉಳಿಕೆ 6. ಆರೋಗ್ಯ ಚೆನ್ನಾಗಿದ್ದು, ಸುಖದಿಂದ ಇರುವಿರಿ. ಉದ್ಯೋಗ ವ್ಯಾಪಾರಕ್ಕಾಗಿ ಹಿಂದೆ ಮಾಡಿದ ಸಾಲ ತೀರಿಸುವಿರಿ. ಕೆಲಸ ಕಾರ್ಯಗಳಲ್ಲಿ ಸಮೃದ್ಧಿ ಕಾಣುವಿರಿ. ಮನೆ ಕಟ್ಟುವಿರಿ. ಸ್ಥಿರ ಆಸ್ತಿ ಹೊಂದುವಿರಿ. ಪ್ರಯಾಣ ಹೆಚ್ಚು ಇರುವುದು. ಪ್ರತಿ ಬುಧವಾರ ರಾಹುಗೆ ಅರ್ಚನೆ ಮಾಡಿಸಿ ನವಗ್ರಹ ಸುತ್ತಿರಿ. ಪ್ರತಿ ಗುರುವಾರ ಗುರುವಿಗೆ ಅರ್ಚನೆ ಮಾಡಿಸಿ ನವಗ್ರಹ ಸುತ್ತಿರಿ.

# ಮೀನ : 
ಈ ಸಂವತ್ಸರದಲ್ಲಿ 8 ಆದಾಯ. 11 ಖರ್ಚು ಆದರೆ ರಾಶ್ಯಾಧಿಪತಿ ಗುರು ಲಾಭ ರಾಶಿಗೆ ಬಂದಿರುವುದರಿಂದ ಹಣದ ಕೊರತೆ ಬರುವುದಿಲ್ಲ. ಮನೆಯಲ್ಲಿ ಶುಭಕಾರ್ಯ ನೆರವೇರುವುದು. ಸರ್ಕಾರದ ಕೆಲಸ ಕಾರ್ಯಗಳಿಂದ ಲಾಭ. ಬಂಧು-ಮಿತ್ರರಿಗೆ ಸಹಾಯ. ತೀರ್ಥಯಾತ್ರೆ ನಡೆಸುವಿರಿ. ಪ್ರಯಾಣ ಹೆಚ್ಚು ಇರುವುದು. ಪ್ರತಿ ಗುರುವಾರ ಗುರುಗೆ ಅರ್ಚೆನೆ ಮಾಡಿಸಿ ನವಗ್ರಹ ಸುತ್ತಿ.

Facebook Comments

Sri Raghav

Admin