ಪೊಲೀಸ್ ಇಲಾಖೆಯಲ್ಲಿ 206 ಹೊಸ ಹುದ್ದೆಗಳಿಗೆ ಮಂಜೂರಾತಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.13-ಅಪರಾಧ ನಡೆದ ಸ್ಥಳದಲ್ಲಿ ಶೀಘ್ರವಾಗಿ ಶೋಧನೆ ಮಾಡಲು ಅನುಕೂಲವಾಗುವಂತೆ 206 ಹೊಸ ಹುದ್ದೆಗಳಿಗೆ ಮಂಜೂರಾತಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.  ವಿಧಾನಸೌಧದ ಮುಂಭಾಗ ರಾಜ್ಯ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ವಿವಿಧ ನೂತನ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಅಪರಾಧ ಶೋಧನೆಗಾಗಿ ಈ ಹೊಸ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.

ಕರ್ನಾಟಕ ಪೊಲೀಸ್ ಪಡೆ ಅತ್ಯಂತ ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿದೆ. ಪೊಲೀಸರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾನಿಧಿ ಯೋಜನೆಗೆ ಚಾಲನೆ ನೀಡಲಾಗಿದೆ. ಆರೋಗ್ಯ ಭಾಗ್ಯ ಯೋಜನೆಯಲ್ಲಿ ಇದ್ದಂತಹ ಸಣ್ಣಪುಟ್ಟ ಸಮಸ್ಯೆಗಳನ್ನು ಪರಿಹರಿಸಲಾಗಿದೆ.ಪೊಲೀಸ್ ಇಲಾಖೆಯ ಸಿಬ್ಬಂದಿಯ ಕ್ಷೇಮಾಭಿವೃದ್ಧಿಗೆ ಸರ್ಕಾರ ಒತ್ತು ಕೊಟ್ಟಿದೆ.

ಶಿಗ್ಗಾವಿಯ ಕೆಎಸ್‍ಆರ್‍ಪಿ ಪಬ್ಲಿಕ್ ಶಾಲೆಯನ್ನು ಮೇಲ್ದರ್ಜೆಗೆ ಏರಿಸಲಾಗುವುದು. 50 ನೂತನ ಪೊಲೀಸ್ ಬಸ್‍ಗಳನ್ನು 6.09 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲಾಗಿದೆ. 10,032 ವಸತಿ ಗೃಹ ನಿರ್ಮಾಣ ಮಾಡಲು 25 ಕೋಟಿ ರೂ. ಮೀಸಲಿಡಲಾಗಿದೆ. ಸ್ವಂತ ಕಟ್ಟಡಗಳಿಲ್ಲದ ಪೊಲೀಸ್ ಠಾಣೆಗಳಿಗೆ, ಕಟ್ಟಡ ನಿರ್ಮಾಣಕ್ಕಾಗಿ ಅನುದಾನ ನೀಡಲಾಗುವುದು ಎಂದು ಹೇಳಿದರು.

ಹೊಸ ಯುಗ: ದೇಶದಲ್ಲಿಯೇ ಮೊದಲ ಬಾರಿಗೆ ಅಪರಾಧ ಶೋಧನೆಯಲ್ಲಿ ಕರ್ನಾಟಕ ಹೊಸ ಯುಗವನ್ನು ಪ್ರಾರಂಭ ಮಾಡಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು. ಅಪರಾಧ ನಡೆದ ಕೂಡಲೇ ವಿಜ್ಞಾನದ ಜ್ಞಾನ ಇರುವಂತಹ ಎಫ್‍ಎಸ್‍ಎಲ್ ಅಧಿಕಾರಿ ಘಟನಾ ಸ್ಥಳಕ್ಕೆ ಹೋಗಬೇಕು. ಕೆಲವೇ ನಿಮಿಷಗಳಲ್ಲಿ ಸಾಕ್ಷಿ ಸಂರಕ್ಷಣೆ ಮಾಡಬೇಕಾದದ್ದು ಬಹಳ ಮುಖ್ಯ.

ಹೀಗಾಗಿ 206 ಹುದ್ದೆಗಳನ್ನು ಮಂಜೂರು ಮಾಡಲಾಗಿದ್ದು, ಅವರಿಗೆ ವಿಶೇಷ ತರಬೇತಿ ನೀಡಿ ಪ್ರತಿ ಜಿಲ್ಲೆಗೂ ನೇಮಕ ಮಾಡಲಾಗುವುದು. ಅತ್ಯಂತ ಹೇಯ, ದೊಡ್ಡ ಕೃತ್ಯಕ್ಕೆ ಈ ಸಿಬ್ಬಂದಿಗಳನ್ನು ಬಳಸಲಾಗುವುದು. ಆನಂತರ ಎಲ್ಲಾ ಕೃತ್ಯಗಳಿಗೂ ಬಳಕೆ ಮಾಡಲಾಗುವುದು ಎಂದರು.

ಇಂದುಪೊಲೀಸ್ ಇಲಾಖೆಯಲ್ಲಿ ಮಹತ್ವದ ತಿರುವು ಪಡೆದ ದಿನವಾಗಿದೆ. ಅಪರಾಧ ನಿಯಂತ್ರಣ, ಅಪರಾಧ ತಡೆ, ಶೀಘ್ರ ಶೋಧನೆ ಬಹಳ ಮುಖ್ಯ. ಕಳೆದೆರಡು ವರ್ಷದಲ್ಲಿ ಅಪರಾಧ ನಿಯಂತ್ರಣದಲ್ಲಿ ಬಹಳಷ್ಟು ಯಶಸ್ಸು ಗಳಿಸಿದ್ದೇವೆ. ಇದಕ್ಕಾಗಿ ಕಠಿಣ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದರು. ಅಪರಾಧ ಹಿನ್ನೆಲೆಯುಳ್ಳವರ ಮೇಲೆ ನಿಗಾ ಇಟ್ಟಿದ್ದೇವೆ.

ಸಮಾಜದಲ್ಲಿ ಸಾಕಷ್ಟು ಜಾಗೃತಿಯನ್ನು ಮೂಡಿಸಲಾಗಿದೆ. ಬೇರೆ ಬೇರೆ ದೇಶಗಳಲ್ಲಿ ಅಪರಾಧ ನಡೆದ ಕೂಡಲೇ ವಿಜ್ಞಾನದ ಜ್ಞಾನವುಳ್ಳ ಅಧಿಕಾರಿ ಶೀಘ್ರವಾಗಿ ಸ್ಥಳದಲ್ಲೇಶೋಧನೆ ಮಾಡುತ್ತಾರೆ. ಅದು ನಮ್ಮಲ್ಲೂ ಆಗಬೇಕು ಎಂದರು. ಅಪರಾಧ ತನಿಖೆಯಲ್ಲಿ ಬಹಳಷ್ಟು ಬದಲಾವಣೆಯನ್ನು ತರಲಾಗುವುದು ಎಂದು ಹೇಳಿದರು. ವಿದ್ಯಾನಿಧಿ ಯೋಜನೆಯಡಿ 1000ದಿಂದ 40 ಸಾವಿರ ರೂ.ವರೆಗೂ ವಿದ್ಯಾರ್ಥಿ ವೇತನ ನೀಡಲಾಗುವುದು.

ಕಳೆದ 20 ವರ್ಷಗಳಿಂದ ಕುಂಟುತ್ತಾ ಸಾಗಿದ್ದ ಆರೋಗ್ಯ ಭಾಗ್ಯ ಯೋಜನೆಗಳಿಗೆ ಹೊಸ ಚೈತನ್ಯ ನೀಡಲಾಗಿದೆ. ಪೊಲೀಸ್ ಇಲಾಖೆಯಲ್ಲಿ ಮೂಲ ಸೌಕರ್ಯಕ್ಕೆ ಒತ್ತು ನೀಡಿದ್ದು, 50 ಬಸ್, ಮೊಬೈಲ್, ಮೋಟಾರ್‍ಸೈಕಲ್,ಜೀಪ್‍ಗಳನ್ನು ಖರೀದಿಸುವ ಮೂಲಕ ಇಲಾಖೆಯನ್ನು ಸಶಸ್ತಿಕರಣಗೊಳಿಸಿ ಸುಧಾರಣೆ ಮಾಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ನೂತನ ಪೊಲೀಸ್ ಬಸ್‍ಗಳಿಗೆ ಹಸಿರುನಿಶಾನೆ ತೋರಲಾಯಿತು. ಸೀನ್ ಅಫ್ ಕ್ರೈಮ್ ಆಫೀಸರ್ಸ್ ಹುದ್ದೆಯ ಆದೇಶದ ಪ್ರತಿಯನ್ನು ಪೊಲೀಸ್ ಮಹಾನಿರ್ದೇಶಕರಿಗೆ ಹಸ್ತಾಂತರಿಸಲಾಯಿತು. 50 ಪೊಲೀಸ್ ಹೊಸ ಬಸ್, 140 ಬೈಕ್, ಪೊಲೀಸರ ಆರೋಗ್ಯ ಭಾಗ್ಯ, ಶಿಕ್ಷಣದ ವಿದ್ಯಾನಿಧಿಗೂ ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಯಿತು.

ಶಾಸಕ ರಿಜ್ವಾನ್ ಹರ್ಷದ್, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ ಕಮಲ್‍ಪಂಥ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Facebook Comments